ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ: ಗೊಂದಲ ನಿವಾರಣೆಗೆ ಸಮಿತಿ ರಚನೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಸೀತಾರಾಮ್ ಜಿಂದಾಲ್ ಅರ್ಥಶಾಸ್ತ್ರ ಶಾಲೆ ಸ್ಥಾಪನೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಗೊಂದಲಗಳನ್ನು ಪರಿಹರಿಸಲು ಸಮಿತಿಯೊಂದನ್ನು ರಚಿಸಲು ಶುಕ್ರವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪರಿಷತ್ ಸಭೆ ಆರಂಭವಾಗುತ್ತಿದ್ದಂತೆ ಅರ್ಥಶಾಸ್ತ್ರ ಶಾಲೆ ಸ್ಥಾಪನೆಯ ವಿಷಯವನ್ನು ಮಂಡಿಸಲಾಯಿತು. ಅರ್ಥಶಾಸ್ತ್ರ ಶಾಲೆಗೆ ವಿ.ವಿಯ ಐವತ್ತು ಎಕರೆ ಜಮೀನು ಪರಭಾರೆ ಮಾಡುವುದು ಸರಿಯಲ್ಲ ಎಂದು ಕೆಲ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಶಾಲೆಯ ಮೇಲೆ ವಿ.ವಿಗೆ ಹಿಡಿತ ಇರುವುದಿಲ್ಲ. ಆದ್ದರಿಂದ ಶಾಲೆ ಸ್ಥಾಪಿಸುವುದು ಬೇಡ ಎಂದು ಅವರು ವಾದಿಸಿದರು.

ಇದಕ್ಕೆ ಉತ್ತರಿಸಿದ ಕುಲಪತಿ ಡಾ.ಎನ್.ಪ್ರಭುದೇವ್, `ಭೂಮಿ ಪರಭಾರೆ ಮಾಡುವುದಿಲ್ಲ~ ಎಂದು ಸ್ಪಷ್ಟನೆ ನೀಡಿದರು. `ಅರ್ಥಶಾಸ್ತ್ರ ಶಾಲೆ ಸ್ಥಾಪನೆಗೆ ಸಂಬಂಧಿಸಿದಂತೆ ಅಧ್ಯಯನ ವರದಿಯ ಎಂಟನೇ ಅಧ್ಯಾಯದಲ್ಲಿ ಭೂಮಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಒಟ್ಟು ದರ ಸುಮಾರು ಐದು ಕೋಟಿ ರೂಪಾಯಿ~ ಎಂದು ಹೇಳಲಾಗಿದೆ. ವರದಿ ಮತ್ತು ಕುಲಪತಿಗಳ ಹೇಳಿಕೆಯಲ್ಲಿ ಗೊಂದಲ ಇದೆ~ ಎಂದು ಪ್ರೊ. ಎನ್.ರಾಮಚಂದ್ರಸ್ವಾಮಿ ಆಕ್ಷೇಪಿಸಿದರು.

ಭೂಮಿ ಪರಬಾರೆ, ಸ್ಕೂಲ್ ಆಫ್ ಎಕನಾಮಿಕ್ಸ್ ಮೇಲಿನ ವಿ.ವಿ ಹಿಡಿತ, ವಿದ್ಯಾರ್ಥಿಗಳ ಮೀಸಲಾತಿ ಮುಂತಾದ ವಿಷಯಗಳಲ್ಲಿ ಗೊಂದಲ ಇದೆ ಎಂಬ ಅಭಿಪ್ರಾಯ ಕೇಳಿ ಬಂತು. ಅರ್ಥಶಾಸ್ತ್ರ ಶಾಲೆಯ ಸ್ಥಾಪನೆಯನ್ನು ಇನ್ನೂ ಕೆಲವರು ಸಮರ್ಥಿಸಿಕೊಂಡರು.

ಪ್ರಸ್ತಾವವನ್ನು ಮತಕ್ಕೆ ಹಾಕಲು ಪ್ರಭುದೇವ್ ಮುಂದಾದಾಗ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಯಿತು. ಸಿಂಡಿಕೇಟ್ ಸದಸ್ಯರು, ಪರಿಷತ್ ಸದಸ್ಯರು, ಡೀನ್‌ಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುತ್ತದೆ. ಈ ಸಮಿತಿ ವರದಿ ನೀಡಿದ ನಂತರ ಮತ್ತೊಮ್ಮೆ ಚರ್ಚೆ ನಡೆಸಲಾಗುತ್ತದೆ ಎಂದು ಪ್ರಭುದೇವ್ ಪ್ರಕಟಿಸಿದರು.

ಕೆಲ ಪತ್ರಿಕೆಗಳಲ್ಲಿ ಈ ವಿಷಯವನ್ನು ಸತತವಾಗಿ ಬರೆಯಲಾಗುತ್ತಿದೆ. ನಮಗಿಂತಲೂ ಮೊದಲು ಮಾಧ್ಯಮದವರಿಗೆ ಅಧ್ಯಯನ ಸಮಿತಿಯ ವರದಿ ಸಿಕ್ಕಿದ್ದು ಹೇಗೆ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು. ಸಭೆಗೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ.ಪುಟ್ಟರಾಜು ಅವರು ಅರ್ಥಶಾಸ್ತ್ರ ಶಾಲೆ ಸ್ಥಾಪನೆಯನ್ನು ಬೆಂಬಲಿಸುವ ರೀತಿಯಲ್ಲಿ ಮಾತನಾಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ವಿಭಾಗದ ಕುಲ ಸಚಿವ ಪ್ರೊ.ಬಿ.ಸಿ.ಮೈಲಾರಪ್ಪ `ಯಾರದ್ದೋ ಮೇಲೆ ಗೂಬೆ ಕೂರಿಸಲು ಯತ್ನಿಸಬೇಡಿ ಮತ್ತು ಒಂದು ಗುಂಪಿನ ಪರವಾಗಿರುವ ಧಾಟಿಯಲ್ಲಿ ಮಾತನಾಡಬೇಡಿ~ ಎಂದು ತಾಕೀತು ಮಾಡಿದರು. ಎಲ್ಲ ಸದಸ್ಯರು ವಿ.ವಿಯ ಹಿತದೃಷ್ಟಿಯಿಂದ ಮಾತನಾಡಬೇಕೇ ಹೊರತು ಯಾವುದೋ ಗುಂಪಿನ ಪರವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಗಣಿಧಣಿಗಳಿಂದ ನೂರು ಕೋಟಿ?: ಜಿಂದಾಲ್ ಸಂಸ್ಥೆಗೆ ಅರ್ಥಶಾಸ್ತ್ರ ಶಾಲೆ ಸ್ಥಾಪಿಸಲು ಏಕೆ ಅವಕಾಶ ಕೊಟ್ಟಿರಿ. ದೇಶದಲ್ಲಿ ಇಂತಹ ನೂರಾರು ಸಂಸ್ಥೆಗಳಿವೆ. ಅವರಿಗೇಕೆ ಅವಕಾಶ ಇಲ್ಲ ಎಂದು ಪರಿಷತ್ ಸದಸ್ಯೆ ಜ್ಯೋತಿರೆಡ್ಡಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಲಪತಿಗಳು, ಅವರು ಪ್ರಸ್ತಾವ ಸಲ್ಲಿಸಿದ್ದರಿಂದ ಪರಿಗಣಿಸಲಾಯಿತು. ಬೇರೆಯವರು ಮುಂದೆ ಬಂದರೆ ಅವರಿಗೂ ಅವಕಾಶ ನೀಡಲಾಗುತ್ತದೆ ಎಂದರು.

ಯಾರೇ ಬಂದರೂ ಅವಕಾಶ ನೀಡುತ್ತೀರ? ನಾನು ಗಣಿಧಣಿಗಳಿಂದ ನೂರು ಕೋಟಿ ರೂಪಾಯಿ ಕೊಡಿಸುತ್ತೇನೆ, ಅವರಿಗೂ ಅವಕಾಶ ನೀಡುತ್ತೀರ ಎಂದು ಇನ್ನೊಬ್ಬ ಸದಸ್ಯ ಮಂಜುನಾಥ್ ಕೇಳಿದರು. ವಿ.ವಿಗೆ ಒಳ್ಳೆಯದಾಗುವುದಿದ್ದರೆ ಅವಕಾಶ ನೀಡಲಾಗುತ್ತದೆ ಎಂದು ಪ್ರಭುದೇವ್ ಸಣ್ಣಗೆ ಉತ್ತರಿಸಿದರು.

ಪ್ರವೇಶ: ಏಳೂ ವಿಷಯಗಳಲ್ಲೂ ಅನುತ್ತೀರ್ಣರಾದ ಕಾನೂನು ಪದವಿ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು.

ಈ ಪ್ರಸ್ತಾವಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಶುಕ್ರವಾರ ಒಪ್ಪಿಗೆ ನೀಡಿದೆ. ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ವಿ.ವಿಯ ಎಲ್ಲ ಕಾನೂನು ಕಾಲೇಜುಗಳನ್ನು ಹೊಸ ವಿ.ವಿಗೆ ಸೇರಿಸಲಾಗಿದೆ. ಹೊಸ ವಿ.ವಿಯ ಪಠ್ಯಕ್ರಮ ಭಿನ್ನವಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ಆದ್ದರಿಂದ ಐದು ವರ್ಷದ ಕೋರ್ಸ್‌ಗೆ ಈಗಾಗಲೇ ಸೇರಿರುವ ಮತ್ತು ಏಳು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತರಗತಿ ನಡೆಸಲು ಸಾಧ್ಯವಾಗುವುದಿಲ್ಲ.

ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಐದು, ಏಳು ಮತ್ತು ಒಂಬತ್ತನೇ ಸೆಮಿಸ್ಟರ್‌ಗೆ ಪ್ರವೇಶ ನಿರಾಕರಿಸುವುದರಿಂದ ಅನಾನುಕೂಲವಾಗಲಿದೆ. ಆದ್ದರಿಂದ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಪ್ರಕಟಿಸಲಾಯಿತು.

ಸ್ಮಾರ್ಟ್ ಕಾರ್ಡ್: ವಿ.ವಿ ಎಲ್ಲ 2.25 ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲು ಪರಿಷತ್‌ನಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ವಿದ್ಯಾರ್ಥಿಯ ಪ್ರವೇಶ, ಹಾಜರಾತಿ, ಪರೀಕ್ಷೆಯಲ್ಲಿ ಆತ ಪಡೆದ ಅಂಕ ಎಲ್ಲ ವಿವರಗಳನ್ನೂ ಸ್ಮಾರ್ಟ್ ಕಾರ್ಡ್ ಹೊಂದಿರಲಿದೆ. ಮೂರು ವರ್ಷದ ಕೋರ್ಸ್ ವಿದ್ಯಾರ್ಥಿಗಳಿಗೆ ನೀಡುವ ಸ್ಮಾರ್ಟ್ ಕಾರ್ಡ್ ಆರು ವರ್ಷಗಳ ಗಡುವು ಹೊಂದಿರಲಿದೆ. ಅದೇ ರೀತಿ ಐದು ವರ್ಷದ ಕೋರ್ಸ್ ಇದ್ದರೆ ಹತ್ತು ವರ್ಷದ ಗಡುವು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT