ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ನೇಮಕಾತಿ ತಡೆ: ಮುಖ್ಯಮಂತ್ರಿಗೆ ಮನವಿ

Last Updated 20 ಅಕ್ಟೋಬರ್ 2012, 4:10 IST
ಅಕ್ಷರ ಗಾತ್ರ

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಅನುಕೂಲ ಕಲ್ಪಿಸಲಿರುವ ಸಂವಿಧಾನದ 371ನೇ ಕಲಮ್‌ಗೆ ತಿದ್ದುಪಡಿ ತರುವವರೆಗೂ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಹಿತರಕ್ಷಣಾ ಸಮಿತಿ ಸಂಚಾಲಕ ಸಿರಿಗೇರಿ ಪನ್ನರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಭಾಗದ ಯುವಕರಿಗೆ ಅನುಕೂಲ ಕಲ್ಪಿಸಲಿರುವ ಸೌಲಭ್ಯಕ್ಕೆ ತಿದ್ದುಪಡಿ ತಂದ ಕೂಡಲೇ ವಿಧಾನಸಭೆಯ ಉಭಯ ಸದನಗಳಲ್ಲಿ ಅನುಮೋದನೆ ನೀಡುವ ಮೂಲಕ ಜನರ ನೆರವಿಗೆ ಬರಬೇಕು ಎಂದು ಕೋರಲಾಗಿದೆ ಎಂದರು.

ವಿವಿಯ 104 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಸಮಿತಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದೆ ಎಂದು ತಿಳಿಸಿರುವ ಕುಲಪತಿ ಡಾ.ಮಂಜಪ್ಪ ಹೊಸಮನೆ ಅವರು ಹೋರಾಟವನ್ನೇ ಹತ್ತಿಕ್ಕಲು ನೋಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನೇಮಕಾತಿಯ ಮೊದಲ ಭಾಗವಾಗಿ 48 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದ ಅನುಮೋದನೆ ನೀಡುವುದು ಬೇಡ ಎಂದು ಕೊರಿದರೂ, ಸಿಂಡಿಕೇಟ್ ಸದಸ್ಯರು ಅದನ್ನು ಪರಗಣಿಸದೆ ಈ ಭಾಗದ ಯುವಕರ ಉದ್ಯೋಗಕ್ಕೆ ಪೆಟ್ಟು ನೀಡಿ, ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಅವರೂ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದರು.

ಅಲ್ಲದೆ, ಸಿಂಡಿಕೇಟ್ ಸಭೆಗೆ ಆಗಮಿಸಿದ ಕಾಲೇಜು ನಿರ್ದೇಶನಾಲಯದ ನಿರ್ದೇಶಕರು, ಸಿಂಡಿಕೇಟ್ ಸದಸ್ಯರಾಗಿರುವ ಮೂವರು ಪ್ರಾಚಾರ್ಯರಿಗೆ  ಬೆದರಿಕೆ ಒಡ್ಡಿ ನೇಮಕತಿಗೆ ಒಪ್ಪಿಗೆ ನೀಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ ಎಂದು ದೂರಿದರು.

ಈ ಭಾಗದ ಕೆಲವು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ, ಅನರ್ಹತೆಯ ನೆಪವೊಡ್ಡಿ ಸಂದರ್ಶನ ಮಾಡದೆ ಮರಳಿ ಕಳುಹಿಸಲಾಗಿದೆ. ಅಲ್ಲದೆ, ಅರ್ಹರನ್ನೂ ಕಡೆಗಣಿಸಲಾಗಿದೆ ಎಂದ ಅವರು, ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದರು. ಸಮಿತಿಯ ಕೆ.ನಾಗಭೂಷಣ ರಾವ್, ಟಿ.ಜಿ. ವಿಠ್ಠಲ್ ಉಪಸ್ಥಿತರಿದ್ದರು.

`ಬಿಎಸ್‌ವೈ ನಮ್ಮ ನಾಯಕ~
ಕುರುಗೋಡು:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಪಕ್ಷದ ನಾಯಕ. ಯಾವುದೇ ಕಾರಣಕ್ಕೂ ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕುರುಗೋಡಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎ್ಲ್ಲಲ ಪಕ್ಷಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಮುಖಂಡರ ನಡುವೆ ಮನಸ್ತಾಪಗಳಿರುತ್ತವೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಲ್ಲಿನ ಗೊಂದಲ ಶಮನವಾಗಲಿದೆ ಎಂದರು.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಾಲ್ಲೂಕು ರಚನೆ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT