ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗೆ ಜಮೀನು: ಶೀಘ್ರ ಇತ್ಯರ್ಥ

Last Updated 1 ಆಗಸ್ಟ್ 2013, 9:44 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದ್ದು, ಶೀಘ್ರದಲ್ಲಿ ಅದನ್ನು ಇತ್ಯರ್ಥಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಬುಧವಾರ ವಿಧಾನಸಭೆಗೆ ತಿಳಿಸಿದರು.

ಬಿಜೆಪಿಯ ಬಿ.ಸುರೇಶ್‌ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, `2004ರಲ್ಲಿ ತುಮಕೂರು ವಿ.ವಿ ಸ್ಥಾಪನೆಯಾಗಿದೆ. ಆದರೆ, ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ನಿಗದಿಪಡಿಸಿದ್ದ ಜಮೀನು ಅರಣ್ಯ ಭೂಮಿಯಾಗಿತ್ತು. ಅದನ್ನು ನೇರವಾಗಿ ಹಸ್ತಾಂತರಿಸಲು ಅವಕಾಶ ಇಲ್ಲ. ಬದಲಿ ಜಮೀನನ್ನು ಅರಣ್ಯ ಇಲಾಖೆಗೆ ನೀಡಿ, ವಿ.ವಿ ಕ್ಯಾಂಪಸ್‌ಗೆ ಜಮೀನು ಪಡೆಯಬೇಕಿದೆ. ಈ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಕೋರಲಾಗಿದೆ' ಎಂದರು.

ಸುರೇಶ್‌ಗೌಡ ಮತ್ತು ಸಚಿವರ ನಡುವೆ ಈ ವಿಷಯದಲ್ಲಿ ಕೆಲಕಾಲ ವಾಕ್ಸಮರ ನಡೆಯಿತು. ಅರಣ್ಯ ಇಲಾಖೆಯ ಜಮೀನನ್ನು ತ್ವರಿತವಾಗಿ ಹಸ್ತಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕರು ದೂರಿದರು. ವಿ.ವಿ ಸ್ಥಾಪನೆಯಾಗಿ ಒಂಬತ್ತು ವರ್ಷಗಳಾದರೂ ಕಾಲೇಜಿಗಿಂತಲೂ ಚಿಕ್ಕ ಕ್ಯಾಂಪಸ್‌ನಲ್ಲಿ ತರಗತಿಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರವೇ ಕಾರಣ. ಅರಣ್ಯ ಜಮೀನನ್ನು ಬಿಡಿಸಿಕೊಳ್ಳಲು ಪ್ರಯತ್ನ ನಡೆಸಿಲ್ಲ. ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಒಂಬತ್ತು ವರ್ಷಗಳಾದರೂ ವಿ.ವಿಗೆ ಜಮೀನು ಮಂಜೂರು ಮಾಡದ ವಿಳಂಬ ಧೋರಣೆ ಕುರಿತು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದರು. `ಸುಮ್ಮನೆ ವಿಶ್ವವಿದ್ಯಾಲಯ ಸ್ಥಾಪಿಸದರೆ ಮುಗಿಯಿತೇ? ಜಮೀನು ಕೊಡುವುದಕ್ಕೆ ಒಂಬತ್ತು ವರ್ಷ ಬೇಕೇ?' ಎಂದು ಸರ್ಕಾರವನ್ನು ಪ್ರಶ್ನಿಸಿದರು. ಜಮೀನು ಮಂಜೂರಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ಖಚಿತವಾಗಿ ತಿಳಿಸುವಂತೆ ದೇಶಪಾಂಡೆ ಅವರಿಗೆ ತಾಕೀತು ಮಾಡಿದರು.

ನಂತರ ಪ್ರತಿಕ್ರಿಯೆ ನೀಡಿದ ಸಚಿವರು, `ತುಮಕೂರು ತಾಲ್ಲೂಕಿನ ಬಿದರಕಟ್ಟೆ ಗ್ರಾಮದಲ್ಲಿ 240 ಎಕರೆ ಜಮೀನನ್ನು ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಆದರೆ, ಅದು ಅರಣ್ಯ ಜಮೀನು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಚಿಕ್ಕನಾಯಕನಹಳ್ಳಿಯ ದಸೂಡಿ ಗ್ರಾಮದಲ್ಲಿ 54 ಎಕರೆ ಜಮೀನು ಗುರುತಿಸಲಾಗಿದೆ. ಆದರೆ, ಬಿದರಕಟ್ಟೆ ಗ್ರಾಮದಲ್ಲೇ ಜಮೀನು ಒದಗಿಸಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಅನುಮತಿ ನೀಡುವಂತೆ 2008ರ ಸೆಪ್ಟೆಂಬರ್ 30ರಂದು ರಾಜ್ಯ ಸರ್ಕಾರವು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ' ಎಂದರು.

ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ ತ್ವರಿತವಾಗಿ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುವುದು. ಆದಷ್ಟು ಬೇಗ ತುಮಕೂರು ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಜಮೀನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಿದ್ದರಬೆಟ್ಟದಲ್ಲಿ ಟ್ರಕ್ಕಿಂಗ್
ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ ಮತ್ತು ಚನ್ನರಾಯನದುರ್ಗದ ಪ್ರದೇಶಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೆಟ್ಟ ಹತ್ತುವುದು, ಟ್ರೆಕ್ಕಿಂಗ್ ಇತ್ಯಾದಿ ಸಾಹಸಿ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಆಸಕ್ತಿ ವಹಿಸಿದೆ. ಖಾಸಗಿಯವರು ಮುಂದೆ ಬಂದರೆ ಅದಕ್ಕೆ ಅನುಮತಿ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು.

ಜೆಡಿಎಸ್‌ನ ಸುಧಾಕರ್ ಲಾಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು `ಸರ್ಕಾರದ ಹಣದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಕಷ್ಟ. ಹೀಗಾಗಿ ಅನುಭವ ಇರುವ ಖಾಸಗಿ ಸಂಸ್ಥೆಗಳು ಮುಂದೆ ಬಂದರೆ ಅವುಗಳಿಗೆ ಅನುಮತಿ ನೀಡಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT