ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಇಲಾಖೆಗಳೊಂದಿಗೆ ಸಭೆ: ಮೇಯರ್‌

ಬೇಕಾಬಿಟ್ಟಿ ರಸ್ತೆ ಅಗೆತ: ಜಲಮಂಡಳಿ ವಿರುದ್ಧ ಸಚಿವರ ಆಕ್ರೋಶ
Last Updated 15 ಡಿಸೆಂಬರ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳಲ್ಲಿ ಕಾಮಗಾರಿ­ಗಳನ್ನು ನಡೆಸುವಾಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಉಳಿದ ಇಲಾಖೆ­ಗಳ ನಡುವೆ ಸಮನ್ವಯ ಇರುವುದಿಲ್ಲ ಎನ್ನುವುದಕ್ಕೆ ನಗರದಲ್ಲಿ ಮೇಲಿಂದ ಮೇಲೆ ಸಂಭವಿಸುವ ಅಪಘಾತಗಳೇ ಸಾಕ್ಷ್ಯ ಒದಗಿಸಿವೆ.

ನಗರದ ವಿವಿಧ ಬಡಾವಣೆಗಳಲ್ಲಿ ಜಲಮಂಡಳಿ, ಬೆಸ್ಕಾಂ ಹಾಗೂ ದೂರ ಸಂಪರ್ಕ ಇಲಾಖೆಗಳು ನಿತ್ಯವೂ ರಸ್ತೆಯನ್ನು ಅಗೆಯುತ್ತಲೇ ಇರುತ್ತವೆ. ಇದರಿಂದ ವಾಹನ ಸವಾರರ ಜೀವಕ್ಕೆ ಸಂಚಕಾರ ಎದುರಾಗುತ್ತಿದೆ. ರಸ್ತೆಯನ್ನು ಅಗೆದು, ದುರಸ್ತಿ ಕಾರ್ಯ ಕೈಗೊಳ್ಳು­ವಾಗ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳದೇ ಇರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎನ್ನುವ ಆಕ್ರೋಶ ಸಾಮಾನ್ಯವಾಗಿದೆ.
ಜನಸಾಮಾನ್ಯರ ಆಕ್ರೋಶಕ್ಕೆ ಉಸ್ತುವಾರಿ ಸಚಿವ ಆರ್‌.ರಾಮಲಿಂಗಾ­ರೆಡ್ಡಿ ಸಹ ದನಿಗೂಡಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಅಮಾಯಕರ ಜೀವದೊಂದಿಗೆ ಚಲ್ಲಾಟವಾಡುವ ಪ್ರವೃತ್ತಿ ಸಲ್ಲ’ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಹಲವು ಇಲಾಖೆಗಳ ಸೇವೆಗೆ ಸಂಪರ್ಕ ಸಾಧನವಾಗಿ ರಸ್ತೆಗಳೇ ಬಳಕೆಯಾಗು­ತ್ತಿವೆ. ಜಲಮಂಡಳಿ ನೀರು ಪೂರೈಕೆ ಜಾಲ, ಖಾಸಗಿ ಹಾಗೂ ಬಿಎಸ್‌ಎನ್‌ಎಲ್‌ ದೂರ ಸಂಪರ್ಕ ಜಾಲ, ಬೆಸ್ಕಾಂ ವಿದ್ಯುತ್‌ ಪೂರೈಕೆ ಜಾಲ ಎಲ್ಲವುಗಳಿಗೂ ರಸ್ತೆಗಳೇ ಆಶ್ರಯದಾತವಾಗಿವೆ. ದುರಸ್ತಿ ಕಾರ್ಯ ಇದ್ದಾಗಲೆಲ್ಲ ಈ ಇಲಾಖೆಗಳು ಬೇಕಾಬಿಟ್ಟಿಯಾಗಿ ರಸ್ತೆ ಆಗೆಯುವುದ­ರಿಂದ ಅನಾಹುತಗಳು ಆಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಮಗಾರಿ ನಡೆದ ಸ್ಥಳದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕಿತ್ತು. ಸೂಚನಾ ಫಲಕಗಳನ್ನೂ ಹಾಕಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಬಿಬಿಎಂಪಿ ಜತೆ ಸಮನ್ವಯ ಸಾಧಿಸದೆ ಈ ಇಲಾಖೆಗಳು ಕಾರ್ಯ ನಿರ್ವಹಣೆಗೆ ಮುಂದಾಗುವ ಕಾರಣ ತಪ್ಪು ಇಲ್ಲದಿದ್ದ­ರೂ ಬಿಬಿಎಂಪಿ ಕೂಡ ಕೆಟ್ಟು ಹೆಸರು ಗಳಿಸುವಂತಾಗಿದೆ’ ಎಂದು ಹೇಳಿದರು. ‘ನಗರದ ಎಲ್ಲ ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದ್ದು, ಕೆಲವೆಡೆ ಈಗಾಗಲೇ ಕಾಮಗಾರಿ ಆರಂಭವಾಗಿದೆ’ ಎಂದು ತಿಳಿಸಿದರು.

‘ಜಲ ಮಂಡಳಿಯಿಂದ ರಸ್ತೆಯನ್ನು ಅಗೆದು ದುರಸ್ತಿ ಕಾರ್ಯ ಪೂರೈಸಿದ ಮೇಲೆ ರಸ್ತೆಯನ್ನು ಹಾಗೇ ಬಿಡಲಾಗು­ತ್ತದೆ. ಬಿದ್ದ ಮಣ್ಣನ್ನೂ ಸಹ ಎತ್ತಿ ಹಾಕುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅಪಘಾತ ಸಂಭವಿಸದೆ ಇನ್ನೇನಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ರಸ್ತೆಯನ್ನು ಬಳಕೆ ಮಾಡುವ ಎಲ್ಲ ಇಲಾಖೆಗಳಿಗೆ ಈಗಾಗಲೇ ಹಲವು ಬಾರಿ ಸೂಚನೆ ನೀಡಿದ್ದರೂ ಯಾವುದೇ ಪ್ರಯೋ­ಜನ ಆಗಿಲ್ಲ. ಅಪಘಾತಗಳು ಸಂಭವಿಸಿದರೂ ಈ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಕರೆಯುತ್ತೇವೆ: ‘ನಗರದಲ್ಲಿ ಏನೇ ದುರ್ಘಟನೆಗಳು ಸಂಭವಿಸಿದರೂ ಪಾಲಿಕೆ­ಗೇ ಕೆಟ್ಟ ಹೆಸರು ಬರುತ್ತಿದೆ. ಎಲ್ಲದಕ್ಕೂ ಪಾಲಿಕೆಯನ್ನೇ ಹೊಣೆ ಮಾಡಲಾಗುತ್ತಿದೆ. ಎಲ್ಲ ಮುಂಜಾಗ್ರತೆ ತೆಗೆದುಕೊಂಡರೂ ದುರ್ಘಟನೆಗಳು ನಡೆ­ಯದಂತೆ ತಪ್ಪಿಸಲು ಆಗುತ್ತಿಲ್ಲ’ ಎಂದು ಮೇಯರ್‌ ಬಿ.ಎಸ್‌. ಸತ್ಯ­ನಾರಾಯಣ ಅಸಹಾಯಕತೆ ವ್ಯಕ್ತಪಡಿಸಿದರು.

‘ಘಟನೆ ನಡೆದ ಸ್ಥಳದಲ್ಲಿ ಬಿಬಿಎಂಪಿ ಮತ್ತು ಜಲಮಂಡಳಿ ಕಾಮಗಾರಿಗಳು ಎರಡೂ ಒಟ್ಟಾಗಿ ನಡೆಯುತ್ತಿದ್ದವು’ ಎಂದು ಸ್ಪಷ್ಟಪಡಿಸಿದರು. ‘ಮರ­ಣೋತ್ತರ ಪರೀಕ್ಷೆ ನಂತರ ಘಟನೆ ಕುರಿತಂತೆ ಇನ್ನಷ್ಟು ಮಾಹಿತಿ ಲಭ್ಯವಾಗ­ಲಿದೆ. ಬಳಿಕ ಬಿಬಿಎಂಪಿಯಿಂದ ಕೈಗೊಳ್ಳ­ಬೇಕಾದ ಕುರಿತು ನಿರ್ಧರಿಸಲಾಗು­ವುದು’ ಎಂದು ಅವರು ಹೇಳಿದರು.

‘ತಮ್ಮ ಸೇವೆಗಳಿಗಾಗಿ ರಸ್ತೆಯನ್ನು ಬಳಸುವ ಎಲ್ಲ ಇಲಾಖೆಗಳ ಸಭೆಯನ್ನು 2–3 ದಿನದಲ್ಲಿ ಕರೆಯುತ್ತೇವೆ. ರಸ್ತೆ ಅಗೆಯುವ ಮುನ್ನ ಪಾಲಿಸಬೇಕಾದ ಮಾರ್ಗಸೂಚಿ ಕುರಿತಂತೆ ಸ್ಪಷ್ಟವಾಗಿ ತಿಳಿಸುತ್ತೇವೆ. ಬಿಬಿಎಂಪಿ ಅನುಮತಿ ಇಲ್ಲದೆ ರಸ್ತೆ ಅಗೆಯಲು ಅವಕಾಶ ನೀಡುವುದಿಲ್ಲ. ಬಿಬಿಎಂಪಿ ಗಮನಕ್ಕೆ ತಾರದೆ ರಸ್ತೆ ಅಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT