ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಹಲವೆಡೆ ಪ್ರತಿಭಟನೆ

Last Updated 2 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ದೊರೆಯದೇ ಇರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರೈತರು ಬರಗಾಲದಲ್ಲಿಯೂ ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ತರುವ ಬೆಳೆಗಳಿಗೆ ದಲ್ಲಾಳಿಗಳು ನಿರ್ಣಯ ಮಾಡುವ ಬೆಲೆಗೆ ಮಾರ ಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸಿ. ಮಹದೇವಪ್ರಸಾದ್ ಮಾತನಾಡಿ, ಅಧಿಕಾರಿ ವರ್ಗದವರು ರೈತರಿಗೆ ಸ್ಪಂದಿಸದೇ ಕೇವಲ ದಲ್ಲಾಳಿಗಳ ಪರವಾಗಿ ಮಾತನಾಡುತ್ತಾರೆ. ರೈತರಿಗೆ ತೂಕದಲ್ಲಿ ಮೋಸ, ಸರ್ಕಾರ ನಿಗದಿ ಪಡಿಸಿರುವ ಬಿಲ್‌ನ್ನು ನೀಡದೇ ಕೇವಲ ಬಿಳಿ ಚೀಟಿ ನೀಡಿ ರೈತರಿಗೆ ಪ್ರತಿ ಹಂತದಲ್ಲಿಯೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕೂಡಲೇ ದಲ್ಲಾಳಿಗಳು ಬಿಳಿ ಚೀಟಿಯನ್ನು ಕೊಡುವುದನ್ನು ನಿಲ್ಲಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕೃತ ಬಿಲ್‌ನ್ನು ನೀಡ ಬೇಕು ಎಂದರು.

ರೈತರುಗಳು ಬಿಳಿ ಚೀಟಿ ನೀಡಿದರೆ  ಒಗ್ಗಟ್ಟಾಗಿ ಅದನ್ನು ತಿರಸ್ಕರಿಸ ಬೇಕು ಮತ್ತು ದಲ್ಲಾಳಿಗಳು ಪಡೆಯುವ ಕಮಿಷನ್ ವಿಚಾರದಲ್ಲಿಯೂ ಸರಿಯಾಗ ಬೇಕೆಂದು ಒತ್ತಾಯಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ, ರೈತ ಮುಖಂಡ ಶಿವಪುರ ಮಹಾದೇವಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.

ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಧರಣಿ
ಗುಂಡ್ಲುಪೇಟೆ:
ಅಸಮರ್ಪಕ ವಿದ್ಯುತ್ ವಿತರಣೆಯಿಂದಾಗಿ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಲೋಕೇಶ್ ಹೇಳಿದರು.

ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದಲ್ಲಿ ಸೋಮವಾರ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯುತ್ ಅಸಮರ್ಪಕ ವಿತರಣೆಯಿಂದಾಗಿ ರೈತರು ಬೆಳೆದಿರುವ ಎಲ್ಲಾ ಬೆಳೆಗಳು ಒಣಗುತ್ತಿವೆ ಎಂದರು. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ ಮೇಲಿನ ಕಾಳಜಿಯನ್ನು ಮರೆತಿದೆ ಇನ್ನಾದರೂ ಸಮರ್ಪಕವಾಗಿ ವಿದ್ಯುತ್ ವಿತರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದಲಿಂಗಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಕಮರಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಮುಖಂಡರುಗಳಾದ ಮಂಚಹಳ್ಳಿ ಲೋಕೇಶ್, ರವಿ, ಚಿದಾನಂದ್, ಮಧು, ಮಂಜು, ಲೋಕೇಶ್, ಮಲ್ಲೇಶ್, ವೆಂಕಟೇಶ್, ಶಿವಮೂರ್ತಿ, ಚೇತನ್, ಯೋಗೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕುಡಿಯಲು ಕಾವೇರಿ ನೀರು ಪೂರೈಸಿ: ಮಹಿಳೆಯರ ಆಗ್ರಹ
ಕೊಳ್ಳೇಗಾಲ: ಹನೂರು ಪಟ್ಟಣಕ್ಕೆ ಸಮರ್ಪಕ ಕಾವೇರಿ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಜನಪ್ರತಿನಿಧಿಗಳು ತಕ್ಷಣ ಗಮನಹರಿಸದಿದ್ದರೆ ನಾಗರಿಕರು, ವರ್ತಕರು ಮಹಿಳೆಯರು ಸಂಬಂಧಪಟ್ಟ ಕಚೇರಿ ಮುತ್ತಿಗೆ ಹಾಕಿ ಉಗ್ರಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಸಿದರು.

ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಭಾನುವಾರ ಕಾವೇರಿ ನೀರು ಕುಡಿಯುವ ನೀರು ಪೂರೈಕೆಯಾಗದಿರುವುದರಿಂದ ಕೆರಳಿದ ಮಹಿಳೆಯರು ಕಾಲಿಕೊಡ ಪ್ರದರ್ಶನ ನಡೆಸಿ, ಜನಪ್ರತಿನಿದಿಗಳು ಮತ್ತು ಪಟ್ಟಣ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನದಿಯಿಂದ 13ಕೋಟಿ ಅಂದಾಜುವೆಚ್ಚದಲ್ಲಿ ಹನೂರು ಪಟ್ಟಣದ ಜನತೆಗೆ ಕುಡಿಯುವ ನೀರು ಯೋಜನೆ ಪೂರ್ಣಗೊಂಡಿದೆ. ಆದರೆ ಮಾರ್ಗಮಧ್ಯದ ಗ್ರಾಮಗಳ ಜನತೆಯೇ ನೀರು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಯೋಜನೆ ಪ್ರಯೋಜನೆ ಹನೂರು ಪಟ್ಟಣದ ಜನತೆಗೆ ಮರೀಚಿಕೆಯಾಗಿದೆ. ಅಂತರ್ಜಲ ಕುಸಿತದಿಂದಾಗಿ ಮಹಿಳೆಯರು ದೂರದ ತೋಟಗಳಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳಾಗಲೀ ಜನಪ್ರತಿನಿದಿಗಳಾಗಲೀ ಗಮನಹರಿಸಿಲ್ಲ ಎಂದು ಮುಖಂಡ ಸುಂದರ್‌ರಾಜ್, ಮಹೇಶ್, ಚಿನ್ನಪ್ಪ ದೂರಿದರು.

ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈ ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT