ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಕಾರ್ತಿಕ ಲಕ್ಷ ದೀಪೋತ್ಸವ

Last Updated 14 ಡಿಸೆಂಬರ್ 2012, 6:37 IST
ಅಕ್ಷರ ಗಾತ್ರ

ಅರಕಲಗೂಡು: ಇಲ್ಲಿನ ಶನಿದೇವರ ದೇವಾಲಯದಲ್ಲಿ ಗುರುವಾರ ಕಾರ್ತಿಕ ಲಕ್ಷ ದೀಪೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿದೇವರ ಉತ್ಸವ ನಡೆಸಲಾಯಿತು. ವೀರಭದ್ರ ನೃತ್ಯ, ತಮಟೆ ವಾದ್ಯ, ವೀರಗಾಸೆ ಮುಂತಾದ ಜಾನಪದ ಕಲಾ ಪ್ರಕಾರಗಳು ಉತ್ಸವಕ್ಕೆ ಮೆರುಗು ನೀಡಿದವು. ಬಳಿಕ ಚಿಲುಮೆ ಮಠದಿಂದ 108 ಕಳಶಗಳಲ್ಲಿ ಗಂಗೆಯನ್ನು ತಂದು ಮೂಲವಿಗ್ರಹಕ್ಕೆ ಅಭಿಷೇಕ ನಡೆಸಲಾಯಿತು. ಪಂಚಾಮೃತ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯ ನೆರವೇರಿದವು.

ವೇದ ವಿದ್ವಾನ್ ವಿ.ಎಸ್.  ಗಣಪತಿ ಭಟ್ ನೇತೃತ್ವದಲ್ಲಿ ಗಣಪತಿ, ನವಗ್ರಹ, ಶನಿದೇವರ ಹೋಮ, ಪೂರ್ಣಾಹುತಿ ಪ್ರಸಾದ ವಿನಿಯೋಗ ನಡೆದವು. ರಾತ್ರಿ ಲಕ್ಷ ದೀಪೋತ್ಸವ ಹರಿಕಥೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಅಮೃತೇಶ್ವರಸ್ವಾಮಿ ದೇವಾಲಯ: ಐತಿಹಾಸಿಕ ಅಮೃತೇಶ್ವರಸ್ವಾಮಿ ದೇವಾಲಯದಲ್ಲೂ ಕಾರ್ತಿಕ ದೀಪೋತ್ಸವ ನಡೆಯಿತು. ಅಮೃತೇಶ್ವರಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ದೀಪಗಳನ್ನು ಬೆಳಗಿಸಿ ಶ್ರದ್ದಾಭಕ್ತಿ ಮರೆದರು.

ಶಂಭುನಾಥೇಶ್ವರ: ಸಮೀಪದ ಶಂಭುನಾಥಪುರದ ಶಂಭುನಾಥೇಶ್ವರ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ರುದ್ರಾಭಿಷೇಕ, ಅರ್ಚನೆ ಮುಂತಾದ ಧಾರ್ಮಿಕ ಕಾರ್ಯ ಏರ್ಪಡಿಸಲಾಗಿತ್ತು. ಬಳಿಕ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ನಡೆಸಲಾಯಿತು.

ಕಾಲಭೈರವೇಶ್ವರನಿಗೆ ಗುಗ್ಗಳ ಸೇವೆ
ಬಾಣಾವರ: ಹೋಬಳಿಯ ಮನಕತ್ತೂರು ಕಾಲಭೈರವೇಶ್ವರಸ್ವಾಮಿಯ ಕಾರ್ತಿಕ ಮಾಸದ ಗುಗ್ಗುಳ ಸೇವೆ ಗುರುವಾರ ಅಪಾರ ಭಕ್ತರ ನಡುವೆ ಗುರುವಾರ ನೇರವೇರಿತು.

ಗುಗ್ಗುಳ ಸೇವೆ ಪ್ರಯುಕ್ತ ಸಿ.ಎಸ್. ಪುರದ ವಿನೋಧ ಮತ್ತು ಸಂಗಡಿಗರು ಹಾಗೂ ಸೋರಲಮಾವು ಇವರಿಂದ ವೀರಗಾಸೆ ಕುಣಿತ ಮತ್ತು ವಾದ್ಯಗೋಷ್ಠಿ ನಡೆದವು. ಗುಬ್ಬಿ ತಾಲ್ಲೂಕಿನ ಮಂಚನಹಳ್ಳಿ ಬೋರಣ್ಣ ಸಂಗಡಿಗರಿಂದ ಧ್ವಜ ಕುಣಿತ ಮತ್ತು ಕಾಲಭೈರವೇಶ್ವರಸ್ವಾಮಿ ಭಜನಾ ಮಂಡಳಿಯಿಂದ ಭಜನೆ, ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಉತ್ಸವದಲ್ಲಿ ಎಣ್ಣೆ ಸೀರೆ ಸುಡುವ ಸೇವೆ ಮತ್ತು ಮದ್ದು-ಗುಂಡು ಸಿಡಿಸಲಾಯಿತು.

ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ
ಕೊಣನೂರು: ಪಟ್ಟಣದ ಕೊತ್ತಲ ಗಣಪತಿ ದೇಗುಲದಲ್ಲಿ ಕಡೆ ಕಾರ್ತಿಕೋತ್ಸವದ ಅಂಗವಾಗಿ ಬುಧವಾರ ರಾತ್ರಿ ಲಕ್ಷ ದೀಪೋತ್ಸವ ವಿಜೃಂಭಣೆ ಯಿಂದ ನಡೆಯಿತು.

ದೇವಸ್ಥಾನದಲ್ಲಿ ಹಲವು ಪೂಜಾ ಕೈಂಕರ್ಯ ನಡೆದವು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸಹಸ್ರನಾಮ, ಕುಂಕುಮಾರ್ಚನೆ ಸಲ್ಲಿಸಲಾಯಿತು. ಸಂಜೆ ಕೊತ್ತಲ ಗಣಪತಿ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ಆವರಣದಲ್ಲಿ ಭಕ್ತರು ಸಾಲು ಸಾಲಾಗಿ ಇರಿಸಿದ್ದ ಬಟ್ಟಲಿಗೆ ಎಣ್ಣೆ ಸುರಿದು ದೀಪ ಬೆಳಗಿದರು.

ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸ ಲಾಗಿತ್ತು. ದೇವಸ್ಥಾನ ಸುತ್ತಲಿನ ರಸ್ತೆಗಳು ರಾತ್ರಿ ವೇಳೆ ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸಿದವು.

ವಿವಿಧೆಡೆ ಪೂಜೆ: ಕಡೆ ಕಾರ್ತಿಕೋತ್ಸವ ಪ್ರಯುಕ್ತ ಗಾಂಧಿ ಚೌಕದ ಬಳಿಯ ಅಂಜನೇಯಸ್ವಾಮಿ, ಮಾರಮ್ಮ ದೇಗುಲ, ಕುಂಬೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT