ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ತೊಗರಿಗೆ ಬೂದಿ ಮೂತಿ ಹುಳು ಬಾಧೆ

Last Updated 6 ಜುಲೈ 2013, 5:50 IST
ಅಕ್ಷರ ಗಾತ್ರ

ಜನವಾಡ: ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಲ್ಲಿ ಬೂದಿ ಮೂತಿ ಹುಳುವಿನ ಬಾಧೆ ಕಂಡು ಬಂದಿದೆ. ತಾಲ್ಲೂಕಿನ ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರದ ತಂಡ ಜಿಲ್ಲೆಯಲ್ಲಿ ಕೈಗೊಂಡ ಬೆಳೆ ವೀಕ್ಷಣೆ ವೇಳೆ ಹುಳುವಿನ ಬಾಧೆ ಇರುವುದು ಪತ್ತೆಯಾಗಿದೆ.

ಜಿವಿವಿಧೆಡೆ ಇರುವ 10-15 ದಿನಗಳ ತೊಗರಿ, ಸೋಯಾ ಅವರೆ, ಉದ್ದು, ಹೆಸರು ಹಾಗೂ ಜೋಳದ ಬೆಳೆಗಳಲ್ಲಿ ಹುಳುವಿನ ಕಾಟ ಕಂಡು ಬಂದಿದೆ.  ಬಾಧೆ ಜಾಸ್ತಿ ಆಗಿದ್ದಲ್ಲಿ ಸಸಿಗಳು ಸಾಯುವ ಸಾಧ್ಯತೆಯೂ ಇದ್ದು, ರೈತರು ಮರು ಬಿತ್ತನೆ ಮಾಡಬೇಕಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಹುಳುವನ್ನು ವೈಜ್ಞಾನಿಕವಾಗಿ `ಮೈಲೋಸರಸ್ ಅನ್ಡಿಸಿಂಪುಸ್ಟುಲೇಟಸ್ ಅಂಡಾಟಸ್' ಎಂದು ಹೇಳಲಿದ್ದು, ತಿಳಿ ಬಿಳಿ ಅಥವಾ ಬೂದಿ ಬಣ್ಣದ ಈ ಕೀಟ  4 ರಿಂದ 5 ಮಿ.ಮೀ ಉದ್ದ ಇರುತ್ತದೆ. ಬಾಯಿಯ ಮೇಲ್ಭಾಗ ತಿಳಿ ಹಳದಿ ಬಣ್ಣ ಹೊಂದಿದ್ದು, ಕಾಲುಗಳ ಭಾಗದಲ್ಲಿ 2-3 ಗರಗಸದಂಥ ಬೆಳವಣಿಗೆ ಕಾಣಬಹುದು ಎಂದು ವಿವರಿಸಿದ್ದಾರೆ.

ಪ್ರೌಢ ಹುಳು ಸುಮಾರು 250 ರಿಂದ 360 ಮೊಟ್ಟೆಗಳನ್ನು  ಮಣ್ಣಿನಲ್ಲಿನ ಸಾವಯವ ಪದಾರ್ಥಗಳಲ್ಲಿ ಚುಚ್ಚಿ ಇಡುತ್ತದೆ. ಮೊಟ್ಟೆಯಿಂದ 3 ರಿಂದ 5 ದಿನಗಳಲ್ಲಿ ಹೊರ ಬರುವ ಮರಿ ಹುಳು ಬೆಳೆ, ಕಳೆಗಳ ಬೇರು ತಿನ್ನುತ್ತದೆ. ಪ್ರೌಢ ಕೀಟ 8-11 ದಿನಗಳಿಂದ ಕೆಲ ತಿಂಗಳು ಬದುಕುವ ಸಾಮರ್ಥ್ಯ ಇದ್ದು, ಸಾಮಾನ್ಯವಾಗಿ 42 ರಿಂದ 65 ದಿನಗಳಲ್ಲಿ ತನ್ನ ಜೀವನ ಚಕ್ರ ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಮರಿ ದುಂಬಿಗಳು ಭೂಮಿ ಒಳಗಿದ್ದು ಇದ್ದು ಬೆಳೆಗಳ ಮೊಳಕೆ ತಿನ್ನುತ್ತವೆ. ಮರಿ ದುಂಬಿ ಸುಮಾರು 10 ಮೊಳಕೆಗಳಿಗೆ ಬಾಧಿಸಿ ಸಾಯಿಸಬಲ್ಲದು.

ಪ್ರೌಢ ಕೀಟ ಎಲೆಗಳ ಅಂಚು ತಿನ್ನುತ್ತ ಕೆಲವೊಮ್ಮೆ ಮಧ್ಯಭಾಗಕ್ಕೂ ಬಾಧಿಸುತ್ತದೆ. 

ನಿರ್ವಹಣೆ: ಬೂದಿ ಮೂತಿ ಹುಳುಗಳನ್ನು ನಿಯಂತ್ರಿಸಲು ಬೆಳೆಗಳನ್ನು ಆಳವಾಗಿ ಉಳುಮೆ ಮಾಡಬೇಕು. ಉದುರಿದ ಹಾಗೂ ಕೊಳೆತ  ಭಾಗಗಳನ್ನು ಸುಟ್ಟು ನಾಶಪಡಿಸಬೇಕು. ಮೊನೊಕ್ರೋಟೊಫಾಸ್ 1 ಮಿ.ಲೀ. ಅಥವಾ ಕ್ಲೋರೊಪೈರಿಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರವಿ ದೇಶಮುಖ್, ವಿಜ್ಞಾನಿಗಳಾದ ಡಾ. ಸುನೀಲಕುಮಾರ್ ಎನ್.ಎಂ., ಡಾ. ಆರ್.ಎಲ್. ಜಾಧವ್, ಡಾ. ರವಿ ಎಸ್. ಮತ್ತು ಡಾ. ಸತೀಶ್ ಫತ್ತೇಪುರ ಬೆಳೆ ವೀಕ್ಷಣೆ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT