ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಬನ್ನಿ ಮುಡಿಯುವ ಸಂಭ್ರಮ

Last Updated 7 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಕುಷ್ಟಗಿ: ಪರಸ್ಪರ ಬನ್ನಿ ವಿನಿಯಮ ಮಾಡಿಕೊಳ್ಳುವುದರೊಂದಿಗೆ ಕಳೆದ ಹತ್ತು ದಿನಗಳಿಂದ ತಾಲ್ಲೂಕಿನಲ್ಲಿ ನಡೆದ ದಸರಾ ಸಂಭ್ರಮಕ್ಕೆ ಗುರುವಾರ ತೆರೆ ಬಿದ್ದಿತು.

ಎರಡು ತಿಂಗಳಿನಿಂದಲೂ ಅಕ್ಷರಶಃ ಮಳೆ ಇಲ್ಲದೇ ಬೆಳೆಗಳೆಲ್ಲ ಒಣಗಿ ಹಾಳಾಗಿದ್ದು ನಿರುತ್ಸಾಹದ ನಡುವೆಯೂ ರೈತರು ದಸರಾ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟಿದ್ದು ಸರಳ ರೀತಿಯಲ್ಲಿ ಹಬ್ಬ ಆಚರಿಸುವಂತಾಯಿತು.

ನವರಾತ್ರಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀದೇವಿ ಪುರಾಣ, ಪುಣ್ಯಕಥೆಗಳನ್ನು ಏರ್ಪಡಿಸಲಾಗಿತ್ತು. `ದುಷ್ಟ ಸಂಹಾರಿ ಶಿಷ್ಟ ರಕ್ಷಕಿ~ ಶ್ರೀದೇವಿಯ ವಿವಿಧ ಅವತಾರಗಳ ಕಥೆಗಳನ್ನು ಭಕ್ತರು ಒಂಭತ್ತು ದಿನಗಳವರೆಗೆ ಆಲಿಸಿದರು.

ಬುಧವಾರ ಆಯುಧಪೂಜೆ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು, ದ್ವಿಚಕ್ರ, ತ್ರಿಚಕ್ರ, ಲಾರಿ, ಬಸ್ ಸೇರಿದಂತೆ ಎಲ್ಲ ರೀತಿಯ ವಾಹನಗಳನ್ನು ಅಲಂಕರಿಸಲಾಗಿತ್ತು. ಆಯುಧಗಳಿಗೆ ಪೂಜೆ ನೆರವೇರಿತು. ಅಲ್ಲದೇ ರೈತರು ಕೃಷಿ ಚಟುವಟಿಕೆಗಳಲ್ಲಿ ಬಳಸುವ ಪರಿಕರಗಳಿಗೂ ಆಯುಧಪೂಜೆ ನೆರವೇರಿಸಿದರು.

ಗುರುವಾರ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು, ಗ್ರಾಮಗಳ ಜನರು ಪ್ರತಿವರ್ಷದ ಸಂಪ್ರದಾಯದಂತೆ ಮೆರವಣಿಗೆಯಲ್ಲಿ ತೆರಳಿ ಶಮಿವೃಕ್ಷಕ್ಕೆ (ಬನ್ನಿಮರ) ಪೂಜೆ ಸಲ್ಲಿಸಿದರು. ನಂತರ  ಬನ್ನಿ ವಿನಿಯಮಯ ಮಾಡಿಕೊಳ್ಳುವ ಮೂಲಕ ಬಾಳು ಬಂಗಾರವಾಗಲಿ ಎಂದು ಪರಸ್ಪರ ಶುಭ ಹಾರೈಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಕುಷ್ಟಗಿಯಲ್ಲಿ: ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ಪ್ರತಿವರ್ಷದಂತೆ ಬುಧವಾರ ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬನ್ನಿಮಹಾಕಾಳಿ ದೇವಸ್ಥಾನದ  ನೂತನ ಕಳಸದ ಮೆರವಣಿಗೆ ಬುತ್ತಿಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕಳಸ ಹಿಡಿದ ನೂರಾರು ಮಹಿಳೆಯರು ಮೆರವಣಿಯಲ್ಲಿ ಸಾಗಿದ್ದು ವಿಶೇಷವಾಗಿತ್ತು. ನಂತರ ಕಳಸಾರೋಹಣ ನಡೆಸಲಾಯಿತು.

ಪ್ರಮುಖರಾದ ಹನಮಂತಪ ಚೌಡ್ಕಿ, ವೀರೇಶ ಬಂಗಾರಶೆಟ್ಟರ್, ಬಸವರಾಜ ಕುದರಿಮೋತಿ, ಚಿದಾನಂದಪ್ಪ ಬ್ಯಾಳಿ, ರಮೇಶ ಕಾಪ್ಸೆ, ಯಲ್ಲಪ್ಪ ಬಳೂಟಗಿ, ನಂದಪ್ಪ ಬಿಂಜವಾಡಗಿ, ಮುತ್ತಣ್ಣ ಬಾಚಲಾಪೂರ, ಬಸವರಾಜ ಕೌದಿ, ಅಂದಾನಯ್ಯ ಮೊದಲಾದವರು ಉಪಸ್ಥಿತರಿದ್ದರು.

ವೆಂಕಟೇಶ್ವರ ದೇವಸ್ಥಾನ: ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ನವರಾತ್ರಿ ಅಂಗವಾಗಿ ಹತ್ತು ದಿನಗಳಿಂದಲೂ ವೆಂಕಟೇಶ್ವರನಿಗೆ ವಿಶೇಷ ಪೂಜೆ ನಡೆಸಲಾಯಿತು. ವೆಂಕಟೇಶ್ವರ ಮೂರ್ತಿ ಮತ್ತು ದೇವಸ್ಥಾನ ಹೂವು ಮತ್ತು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದುದು ಕಂಡುಬಂದಿತು.

ಸಾರಿಗೆ ಇಲಾಖೆ: ಇಲ್ಲಿಯ ಸಾರಿಗೆ ಇಲಾಖೆ ಸಿಬ್ಬಂದಿ ವತಿಯಿಂದ ವಿಜಯದಶಮಿ ಹಬ್ಬದ ದಿನ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಐತಿಹಾಸಿಕ ಹೇಮಗಿರಿಯ ವೈಭವದ ದಸರಾಕ್ಕೆ ತೆರೆ
ಗಂಗಾವತಿ: ಐತಿಹಾಸಿಕ ಹಿನ್ನೆಲೆಯ ತಾಲ್ಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ ಒಂಭತ್ತು ದಿನದಿಂದ ನಡೆದ ದೇವಿ ಪುರಾಣ ಮತ್ತು ವೈಭವದ ದಸರಾ ಉತ್ಸವಕ್ಕೆ ಬುಧವಾರ ತೆರೆಬಿತ್ತು.

ಪ್ರತಿವರ್ಷ ಇಲ್ಲಿ ನಡೆಯುವ ಅಂಬಾರಿ ಮೆರವಣಿಗೆ ಹೈದರಾಬಾದ್-ಕರ್ನಾಟಕ ಜನತೆಯ ಪಾಲಿಗೆ ನಾಡಹಬ್ಬ ಮೈಸೂರು ದಸರಾವನ್ನು ನೆನಪಿಸುತ್ತದೆ. ವಿವಿಧ ಜಿಲ್ಲೆಯಿಂದ ಆಗಮಿಸಿದ ಸಂಗೀತ ಮೇಳ, ವಾದ್ಯ ವೃಂದವು ಮೆರವಣಿಗೆಯೂದ್ದಕ್ಕೂ ಜನಮನ ಆಕರ್ಷಿಸಿದವು.

ಇದಕ್ಕೂ ಮೊದಲು ನಡೆದ ಸಾಮೂಹಿಕ ವಿವಾಹದಲ್ಲಿ 75 ಜೋಡಿ ವಧು-ವರರು ನವ ದಾಂಪತ್ಯಕ್ಕೆ ಕಾಲಿಟ್ಟರು. ಉತ್ಸವದ ಉಸ್ತುವಾರಿ ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಧರ್ಮಕರ್ತ ಮಾಜಿ ಎಂ.ಎಲ್.ಸಿ ಎಚ್.ಆರ್ ಶ್ರೀನಾಥ್ ಕುಟುಂಬವು ವಧುವರರಿಗೆ ಉಚಿತ ಮಾಂಗಲ್ಯ, ವಸ್ತ್ರ ವಿತರಿಸಿತು.

ಸುಮಾರು 10 ಸಾವಿರಕ್ಕೂ ಅಧಿಕ ಜನ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು. ಸಂಜೆ ಮೈಸೂರು ಮಾದರಿಯಲ್ಲಿ ಆನೆಯ ಅಂಬಾರಿಯಲ್ಲಿ ದುರ್ಗಾ ಪರಮೇಶ್ವರಿಯ ದೇವಿಯ ಮೆರವಣಿಗೆ ನಡೆಯಿತು. ಎಚ್.ಜಿ. ರಾಮುಲು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ್ ನೇತೃತ್ವ ವಹಿಸಿದ್ದರು. ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಆಂಜನೆಯ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ದೇವಸ್ಥಾನಕ್ಕೆ ತೆರಳಿತು. ಜಿಲ್ಲೆಯ ವಿವಿಧ ಕ್ಷೇತ್ರದ ಚುನಾಯಿತರು, ಪಕ್ಷಗಳ ಮುಖಂಡರು ಹಾಜರಿದ್ದರು.

ನೆರೆಹೊರೆಯ ಜಿಲ್ಲೆಗಳಿಂದ ಆಗಮಿಸಿದ್ದ ಜನ `ಮಿನಿ ನಾಡಹಬ್ಬ~ ವೀಕ್ಷಿಸಿ ಧನ್ಯತೆ ಮೆರೆದರು. ಗುರುವಾರ ದುರ್ಗಾ ಪರಮೇಶ್ವರಿಯ ರಥೋತ್ಸವ, ಮತ್ತು ಶಮಿ (ಬನ್ನಿ) ಮುಡಿಯುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆಬಿತ್ತು.

ಹನುಮಸಾರ: ವಿಜೃಂಭಣೆಯ ರಥೋತ್ಸವ
ಹನುಮಸಾಗರ: ಅಭಿನವ ತಿರುಪತಿ ಎಂದೇ ಪ್ರಶಿದ್ಧಿಯಾಗಿರುವ ಇಲ್ಲಿನ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 19ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಉತ್ಸವದ  ಮಹಾನವಮಿಯಂದು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

ಕಳೆದ ಒಂಭತ್ತು ದಿನಗಳಿಂದ ಬೆಟ್ಟದ ಶ್ರೀವೆಂಕಟನಾಥನಿಗೆ ನಂದಾದೀಪ ಸೇರಿದಂತೆ ಸುಪ್ರಭಾತ, ಪಂಜಾಮೃತ ಅಭಿಷೇಕ, ಪ್ರವಚನ, ಕನಕಾಭಿಷೇಕ, ಪುಷ್ಪಾರ್ಚನೆ, ರಥಾಂಗ ಹೋಮ, ಪಲ್ಲಕ್ಕಿ ಉತ್ಸವದಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.

ರಥೋತ್ಸವದಲ್ಲಿ ವಿವಿಧ ಭಜನಾ ಮಂಡಳಿಗಳು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ದೇವರ ನಾಮಸಂಕೀರ್ತನೆ ಹಾಡಿದರು.

ದೇವಸ್ಥಾನದ ವಿಶ್ವಸ್ಥ ಮಂಡಳಿಯ ಸದಸ್ಯರು, ಗ್ರಾಮದ ಗುರು ಹಿರಿಯರು, ಮುಖಂಡರ, ಹನುಮಸಾಗರ ಸೇರಿದಂತೆ ಕುಷ್ಟಗಿ, ಹಿರೆಗೊಣ್ಣಾಗರ, ಚಳಗೇರಿ, ಇಳಕಲ್, ನಿಡಶೇಸಿ, ಕುಂಬಳಾವತಿ, ಗಡಚಿಂತಿ, ಚಳಗೇರಿಯಂತಹ ಹಲವಾರು ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕನಕಗಿರಿಯಲ್ಲಿ ಸಂಭ್ರಮದ ವಿಜಯದಶಮಿ

ಕನಕಗಿರಿ: ದಸರಾ ಹಬ್ಬವನ್ನು ಸಡಗರ, ಸಂಭ್ರಮದಿಂದ ಗುರುವಾರ ಇಲ್ಲಿನ ಜನತೆ ಆಚರಿಸಿದರು.
ದಸರಾ ನಿಮಿತ್ತ ಐತಿಹಾಸಿಕ ಪ್ರಸಿದ್ಧಿ ಇಲ್ಲಿನ ಕನಕಾಚಲಪತಿ ದೇವಸ್ಥಾನದ ಅಶ್ವರೋಹಣ ಉತ್ಸವ ಹಾಗೂ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ದಸರಾ ಹಬ್ಬದಂಗವಾಗಿ ಗುರುವಾರ ಸಂಜೆ ವಿಜೃಂಭಣೆಯಿಂದ ನಡೆದವು.

ಪ್ರತಿ ವರ್ಷದಂತೆ ಅಶ್ವರೋಹಣ ಉತ್ಸವವು ಭಾಜಾ ಭಜಂತ್ರಿಯೊಂದಿಗೆ ಕನಕಾಚಲಪತಿ ದೇವಸ್ಥಾನದಿಂದ ಹೊರಟು ಎಪಿಎಂಸಿ ರಸ್ತೆ, ವಾಲ್ಮೀಕಿ ವೃತ್ತ ಹಾಯ್ದು ಬಾಬುಸಾಬ ಕಲ್ಲಗೋಡೆ ಅವರ ಹೊಲದಲ್ಲಿರುವ ಬನ್ನಿಮರಕ್ಕೆ ತಲುಪಿತು.

ಅರ್ಚಕ ವೆಂಕಟ ಸತ್ಯಪ್ಪ ಮತ್ತು ಸಂದೀಪ ರಾಜಪುರೋಹಿತ ಕುಟುಂಬ ವರ್ಗದವರು ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಭಕ್ತರು ಅಶ್ವರೋಹಣ ಉತ್ಸವದೊಂದಿಗೆ ಬನ್ನಿಮರಕ್ಕೆ ಐದು ಸಲ ಪ್ರದಕ್ಷಿಣೆ ಹಾಕಿದರು. ನಂತರ ರಾಜಬೀದಿ ಮೂಲಕ ಉತ್ಸವ ಎದುರು ಹನಮಪ್ಪ ದೇವಸ್ಥಾನಕ್ಕೆ ತಲುಪಿ, ಮತ್ತೆ ಕನಕಾಚಲಪತಿ ದೇವಸ್ಥಾನಕ್ಕೆ ಬಂದಾಗ ಬನ್ನಿ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಛಲವಾದಿ, ವೀರಶೈವ ಸಮಾಜದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು ಗಣ್ಯರು. ಜನಪ್ರತಿನಿಧಿಗಳು ಭಾಗವಹಿಸಿದ್ದರು.  ಪಲ್ಲಕ್ಕಿ ಸೇವೆ, ಅಶ್ವರೋಹಣ ಉತ್ಸವ ಮುಗಿದ ನಂತರ ಗ್ರಾಮಸ್ಥರು ಪರಸ್ಪರ ಬನ್ನಿ ಪತ್ರಿ ಕೊಡುವ, ತೆಗೆದುಕೊಳ್ಳುವ ದೃಶ್ಯಗಳು ಕಂಡು ಬಂದವು.
ಚಿಕ್ಕ ಮಕ್ಕಳು, ಮಹಿಳೆಯರು ಹೊಸ ಸೀರೆ ಧರಿಸಿ ಬನ್ನಿ ಕೊಡಲು ವಿವಿಧ ದೇವಸ್ಥಾನಗಳಿಗೆ ತೆರಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT