ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಶಿಕ್ಷಕರಿಗೆ ಭಕ್ತಿಯ ನಮನ

Last Updated 6 ಸೆಪ್ಟೆಂಬರ್ 2013, 6:19 IST
ಅಕ್ಷರ ಗಾತ್ರ

ಕೊಪ್ಪಳ: ಶಿಕ್ಷಕರು ಮತ್ತು ವೈದ್ಯರಿಗೆ ಸಮಾಜದಲ್ಲಿ ಗುರುತರವಾದ ಜವಾಬ್ದಾರಿಯಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.

ವೈದ್ಯರು ಜೀವ ಉಳಿಸುತ್ತಾರೆ. ಆದರೆ, ಶಿಕ್ಷಕರು ಜೀವನ ತಿದ್ದುತ್ತಾರೆ. ಶಿಕ್ಷಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಿಯಾರು ಎಂಬುದಕ್ಕೆ ರಾಧಾಕೃಷ್ಣನ್ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರಲು ಮುಂದಿನ ತಿಂಗಳು ಎಲ್ಲ ಮುಖ್ಯ ಶಿಕ್ಷಕರಿಗೆ ಜಿಲ್ಲಾಮಟ್ಟದಲ್ಲಿ ಒಂದು ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ ಹೇಳಿದರು.

ಹೆತ್ತವರ ಮಾತು ಕೇಳದ ಮಕ್ಕಳು ಗುರುಗಳ ಮಾತು ಕೇಳುತ್ತಾರೆ. ಶಿಕ್ಷಕರಿಗೆ ಸಮಾಜ ಕಟ್ಟುವ ಶಕ್ತಿಯಿದೆ ಎಂದು ಸಚಿವರು ಬಣ್ಣಿಸಿದರು.

ಶಿಕ್ಷಕರ ಮನಸ್ಸು ಮುಗ್ದವಾದದ್ದು. ತಾನು ಸಚಿವನಾದಾಗ ಗುರುಗಳೊಬ್ಬರು ದೂರವಾಣಿ ಕರೆ ಮಾಡಿ ವಿಧಾನಸೌಧದಲ್ಲಿರುವ ನನ್ನ ಕಚೇರಿ ನೋಡಬೇಕು ಎಂದು ಆಸೆಪಟ್ಟಿದ್ದರು. ಶಿಷ್ಯ ಸಾಧನೆ ಮಾಡಿದಾಗ ಗುರುವು ಹೆಚ್ಚು ಖುಷಿಪಡುತ್ತಾನೆ. ಆದರೆ, ಇಂದು ಕೆಲವು ಶಿಕ್ಷಕರು ಮದ್ಯಪಾನದ ದಾಸರಾಗಿರುವುದು ವಿಷಾದನೀಯ ಎಂದು ನುಡಿದರು.

ಹಿರೇಮ್ಯೋಗೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಗಂಗಾಧರ ಕುರಟ್ಟಿ ವಿಶೇಷ ಉಪನ್ಯಾಸ ನೀಡಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ. ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ಸಾಲುಮರದ ತಿಮ್ಮಕ್ಕ, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಜಿ.ಪಂ. ಸದಸ್ಯರಾದ ಅಮರೇಶ್ ಕುಳಗಿ, ಈರಪ್ಪ ಕುಡಗುಂಟಿ, ನಾಗನಗೌಡ ಪಾಟೀಲ, ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಕುರಿ ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಬಿ.ವೈ. ದಾಸರ ಪ್ರಾಸ್ತಾವಿಕ ಭಾಷಣ ಮಾಡಿದರು, ಶಿಕ್ಷಣ ಇಲಾಖೆಯ ಬಡದಾನಿ ಅವರು ಸ್ವಾಗತಿಸಿ, ವಂದಿಸಿದರು.

ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಿತು. ಸದಾಶಿವ ಪಾಟೀಲ್ ಮತ್ತು ವಿದ್ಯಾರ್ಥಿಗಳ ತಂಡದಿಂದ ನಾಡಗೀತೆ ಗಾಯನ ನಡೆಯಿತು.

ಕುಷ್ಟಗಿ ವರದಿ
ಶಿಕ್ಷಕ ವೃತ್ತಿ ಪವಿತ್ರವಾದುದು, ಸಮಾಜದ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಖಜ್ಜಿಡೋಣಿಯ ಕೃಷ್ಣಾನಂದಶಾಸ್ತ್ರಿ ಹೇಳಿದರು.

ಶಿಕ್ಷಣ ಇಲಾಖೆ ವತಿಯಿಂದ ಕ್ರೈಸ್ತ್ ದ ಕಿಂಗ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಮಾಜ ಮನ್ನಿಸುವಂಥ ವೈಚಾರಿಕ ಮನೋಭಾವ, ಮೌಲ್ಯಗಳನ್ನು ಸ್ವತಃ ಆಚರಣೆಗೆ ತರುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು. ವೃತ್ತಿಯಲ್ಲಿನ ಸ್ವಾನುಭವವನ್ನು ಸ್ವತಃ ಅನುಭವಿಸಿ ಆನಂದಿಸು ಮೂಲಕ ವೃತ್ತಿಗೆ ಗೌರವ ತರುವಂಥ ಕೆಲಸ ಶಿಕ್ಷಕರದ್ದಾಗಲಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ, ಶರಣು ತಳ್ಳಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ ಇತರರು ಮಾತನಾಡಿದರು. ನಿವೃತ್ತ ಹಾಗೂ ಉತ್ತಮ ಶಿಕ್ಷಕ ಶಿಕ್ಷಕಿ ಪ್ರಶಸ್ತಿ ಪಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರನ್ನು ಶಾಸಕ ಪಾಟೀಲ ಇಲಾಖೆ ಪರವಾಗಿ ಸನ್ಮಾನಿಸಿದರು.

ಕ್ರೈಸ್ತದ್ ಕಿಂಗ್ ಶಾಲೆ ಫಾದರ್ ಅನೀಲಕುಮಾರ, ಜಿಪಂ ಸದಸ್ಯರಾದ ಹನಮಕ್ಕ ಚೌಡ್ಕಿ, ವಿದ್ಯಾಶ್ರೀ ಗಜೇಂದ್ರಗಡ, ಲಕ್ಷಿದೇವಿ ಹಳ್ಳೂರು, ತಾ.ಪಂ ಅಧ್ಯಕ್ಷ ಶರಣು ತಳ್ಳಿಕೇರಿ, ಸದಸ್ಯರಾದ ಸುವರ್ಣಮ್ಮ ಚಕ್ರಸಾಲಿ, ಶಿವನಗೌಡ ಪಾಟೀಲ, ಪುರಸಭೆ ಸದಸ್ಯರಾದ ಮೈನುದ್ದೀನ ಮುಲ್ಲಾ, ಚನ್ನಪ್ಪ ನಾಲಗಾರ, ಸಿಪಿಐ ನೀಲಪ್ಪ ಓಲೇಕಾರ, ಗುರಪ್ಪ ಕುರಿ, ಸೋಮನಗೌಡ ಪಾಟೀಲ, ಅಮರೇಗೌಡ ಹೊಸಗೌಡ್ರ, ರಮೇಶಗೌಡ ಪಾಟೀಲ, ಈಶಪ್ಪ ತಳವಾರ, ಶಿವನಗೌಡ ಮಾಲಗಿತ್ತಿ, ವಿ.ಬಿ.ಉಪ್ಪಿನ, ಕಸಾಪ ಅಧ್ಯಕ್ಷ ಚಂದಪ್ಪ ಹಕ್ಕಿ ಮೊದಲಾದವರು ವೇದಿಕೆಯಲ್ಲಿದ್ದರು.

ಬಿಆರ್‌ಸಿ ಸಮನ್ವಯಾಧಿಕಾರಿ ಸುರೇಂದ್ರ ಕಾಂಬಳೆ ಸ್ವಾಗತಿಸಿದರು. ರಾಮಚಂದ್ರ ಬಡಿಗೇರ ನಿರೂಪಿಸಿದರು.
ಅದಕ್ಕೂ ಪೂರ್ವದಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ಶಾಸಕ ದೊಡ್ಡನಗೌಡ ಚಾಲನೆ ನೀಡಿದರು. ಹನಮಸಾಗರದ ಕಸ್ತೂರಬಾ ಶಾಲೆ ವಿದ್ಯಾರ್ಥಿನಿಯರ ಡೊಳ್ಳುಕುಣಿತ ಮತ್ತು ಇತರೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ಕಾರಟಗಿ ವರದಿ
ಶಿಕ್ಷಕರ ಕೈಯಲ್ಲಿ ವಿದ್ಯಾರ್ಥಿಗಳ ಜೀವನ ಪಥ ನಿರ್ಣಯಿಸುವ ಅಗಾಧ ಶಕ್ತಿ ಇದೆ ಎಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ. ಸುಬ್ಬಾರಾವ್ ಹೇಳಿದರು.

ಸಮೀಪದ ಮರ್ಲಾನಹಳ್ಳಿಯಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್‌ರ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತ ಮಂಡಳಿ ಪರವಾಗಿ ಮುಖ್ಯಗುರು ಕೆ. ಶ್ಯಾಮಸುಂದರ್, ಶಿಕ್ಷಕಿ ಲಕ್ಷ್ಮೀ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.
ಆರಂಭದಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಶ್ಯಾಮಸಿಂಗ್, ಆಡಳಿತ ಮಂಡಳಿಯ ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.

ಶರಣಬಸವೇಶ್ವರ ಶಾಲೆ: ಕಾರಟಗಿಯ ಶರಣಬಸವೇಶ್ವರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ಯ ವಿದ್ಯಾರ್ಥಿಗಳೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ನರಸಿಂಹಗೌಡ, ಜಗದೀಶ್ ಭಜಂತ್ರಿ, ಬಸವರಾಜ್ ರಡ್ಡಿ ಮಾತನಾಡಿದರು. ವಿದ್ಯಾರ್ಥಿಗಳಾದ ಹನುಮೇಶ್ ಮುಖ್ಯಗುರು ಆಗಿ, ಶಿವರಡ್ಡಿ, ಚನ್ನವೀರೇಶ್, ಶಾಲಾ ಸಂಸತ್ ಸದಸ್ಯರು ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಬಿ. ಜಿ. ಅರಳಿ, ಕಾರ್ಯದರ್ಶಿ ಸಿ. ಶಿವಪ್ಪ, ಪ್ರಭಾರಿ ಮುಖ್ಯಗುರು ಜಗದೀಶ್ ಹಳ್ಳೂರ, ಈಶಪ್ಪ ಕೆ. ಮೊದಲಾದವರು ಉಪಸ್ಥಿತರಿದ್ದರು.

ಇಂದಿರಾನಗರದಲ್ಲಿ: ಇಲ್ಲಿಯ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್‌ರ ಜಯಂತಿ ಪ್ರಯುಕ್ತ ಆವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕರಿಯಪ್ಪ, ಸದಸ್ಯರಾದ ಹನುಮೇಶ್, ವೃಷಬೇಂದ್ರಯ್ಯಸ್ವಾಮಿ, ಶಿಕ್ಷಕರಾದ ಅನುಸೂಯಾ, ಕೆ. ಪ್ರಭುದೇವ್, ಪ್ರಮೋದ ಕೆ. ಆರ್, ಶರಣಮ್ಮ ಮೊದಲಾದವರು ಇದ್ದರು.

ಕನಕಗಿರಿ ವರದಿ
ಇಲ್ಲಿನ ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು  `ಶಿಕ್ಷಕರ ದಿನಾಚರಣೆ'ಯನ್ನು ಆಚರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಕ್ತಮಸಾಬ ಸೂಳೇಕಲ್ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಎಸ್‌ಡಿಎಂಸಿ ಸದಸ್ಯರು ಶಾಲೆಯ ಶಿಕ್ಷಕರಿಗೆ ಸಿಹಿ ತಿನ್ನಿಸಿ, ಮಾಲಾರ್ಪಣೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವ ಸಲ್ಲಿಸಿದರು.
ಮುಖ್ಯ ಶಿಕ್ಷಕ ಯಮನೂರಪ್ಪ ಬೊಂದಾಡೆ, ಶಿಕ್ಷಕರಾದ ನಾಗರತ್ನ, ಶಂಶಾದಬೇಗಂ, ವಿದ್ಯಾರ್ಥಿಗಳಾದ ಹರ್ಷಿಯಾ, ಲೋಕೇಶ, ಭೀಮೇಶ ಸುಣಗಾರ, ,ಮೈಬೂಬಸಾಬ, ಹಸೀನ, ಕೆ. ಭೀಮೇಶ ನಿಂಗಪ್ಪ, ಶಾಹೀನ್, ಗೀತಾ, ಹುಲಿಗೆಮ್ಮ, ಮೈಬೂಬ ಇತರರು ಮಾತನಾಡಿದರು.

ಎಸ್‌ಡಿಎಸ್‌ಸಿ ಸದಸ್ಯರಾದ ಟಾಕಪ್ಪ ಬಡಿಗೇರ, ಖಾಜಾಸಾಬ ಬಿಳಿಕುದುರಿ, ಗಂಗಮ್ಮ ಆರೇರ್, ಜುಬೇದಾ ಗುರಿಕಾರ, ಶಿಕ್ಷಣ ಪ್ರೇಮಿಗಳಾದ ಶ್ರೀನಿವಾಸ ಆರೇರ್, ಶಿವಕುಮಾರ ಚೆಲುವಾದಿ, ಮೈಬೂಬಸಾಬ ಮುಂದಲಮನಿ, ಶಿಕ್ಷಕರಾದ ವಿಮಲಾಬಾಯಿ ಜೋಶಿ, ಹೇಮಾ ರಾಠೋಡ್, ಅಕ್ಕಮಹಾದೇವಿ ಜೆ. ಕಿತ್ತೂರು, ಸುಜಾತ ಎಸ್‌ಪಿ ಇತರರು ಇದ್ದರು. ವಿದ್ಯಾರ್ಥಿ ಅಕ್ಷತಾ ಸಂಗಡಿಗರು ಪ್ರಾರ್ಥಿಸಿದರು. ಭೀಮೇಶ ನಿರೂಪಿಸಿದರು.

ಪಿಯು ಕಾಲೇಜು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ಪ್ರಾಂಶುಪಾಲ ಬಿ. ಎಸ್. ಹಳ್ಳೂರು ಅವರು ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪ ಪ್ರಾಂಶುಪಾಲ ಎಚ್. ಕೆ. ಚಂದ್ರಪ್ಪ, ಹಿರಿಯ ಉಪನ್ಯಾಸಕ ಮೆಹಬೂಬ ಅಲಿ ಮಾತನಾಡಿದರು. ಹಿರಿಯ ಶಿಕ್ಷಕರಾದ ಪ್ರಭಾಕರ ಬಡಿಗೇರ, ಪರಸಪ್ಪ ಹೊರಪೇಟೆ, ಚಿದಾನಂದ ಮೇಟಿ ಕಾಲೇಜಿನ ಉಪನ್ಯಾಸಕರು ಮತ್ತು ಪ್ರೌಢಶಾಲೆಯ ಶಿಕ್ಷಕರು ಇದ್ದರು. ಗೀತಾ ಕನಕಪ್ಪ ನಿರೂಪಿಸಿದರು.

ಜಿಪಿಎಸ್ ಶಾಲೆ: ಸ್ಥಳೀಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶ್ರೀಶೈಲ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ದೊಡ್ಡಪ್ಪ ಕವಿತಾಳ, ಶಿಕ್ಷಕರಾದ ಸುರೇಶ ಬಲಕುಂದಿ, ತುಕರಾಂ ಪೂಜಾರ, ದೀಪಾ ಗಡಗಿ ಅವರು ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.

ಎಸ್‌ಡಿಎಂಸಿ ಸದಸ್ಯರಾದ ಧರ್ಮಸಿಂಗ್, ಶಂಕ್ರಪ್ಪ, ಹುಸೇನಬೀ, ಲಕ್ಷ್ಮೀ, ಶಿಕ್ಷಕರಾದ ಚೆನ್ನಮ್ಮ ಕುಕನೂರು, ಗೌರಮ್ಮ ಬಳಿಗೇರ, ಗೀತಾ ಪಾಟೀಲ, ಶಿವಕುಮಾರ ಬಿಳಿಗುಡ್ಡ, ಎಂ. ತುಳಸಿ,  ಗೀತಾ ಲೋಕೇಶ ಇತರರು ಇದ್ದರು.

ಗೊಲಗೇರಪ್ಪ ಕಾಲೊನಿ ಶಾಲೆ: ಗೊಲಗೇರಪ್ಪ ಕಾಲೊನಿ ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವಿ. ಮಧುಸೂದನ್ ಅವರು ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಹಿರಿಯ ಶಿಕ್ಷಕರಾದ ಪ್ರೇಮ ಪದಕಿ, ಸಾವಿತ್ರಿ ಹಾಗೂ ರವಿ ಸಜ್ಜನ್ ಇದ್ದರು.

ಹನುಮಸಾಗರ ವರದಿ
ಹನುಮಸಾಗರ:
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಗುರುವಾರ ಡಾ.ಎಸ್.ರಾಧಾಕೃಷ್ಣನ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಶಿಕ್ಷಕಿ ಲೀಲಾ ಶೆಟ್ಟರ್ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.

ಸುಮಂಗಲಾ ಹಿರೇಮಠ, ರಾಜಾಭಕ್ಷಾರ ಪೆಂಡಾರಿ ಇದ್ದರು. ರಾಜಶೇಖರ ಕೊಪ್ಪಳ ಪ್ರಾರ್ಥಿಸಿದರು. ಸನೀಲ ಸ್ವಾಗತಿಸಿದರು. ದೀಪಕ್ ತಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಪ್ರಧಾನ ಮಂತ್ರಿ ಸಂಗಮೇಶ ಬಂಡಿವಡ್ಡರ್ ವಂದಿಸಿದರು.

ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಂ.ಡಿ.ಮಕಾನದಾರ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಹಿರಿಯ ಶಿಕ್ಷಕರಾದ ಅಮರೇಶ ತಮ್ಮಣ್ಣವರ, ಅಬ್ದುಲ್‌ಕರೀಂ ವಂಟೆಳಿ, ಶಿವಾನಂದ ಹಂಪಿಹೊಳಿ ಇದ್ದರು.

ಸಮಯಪಾಲನೆಗೆ ಶಿಕ್ಷಕರ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಕೊಪ್ಪಳ:
ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿಯೂ ಸಮಯ ಪಾಲನೆಗೆ ಸಂಘಟಕರು, ಪಾಲ್ಗೊಳ್ಳಬೇಕಾದ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷಿಸಿದರು.

ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 12.15ಕ್ಕೆ ಆರಂಭವಾಯಿತು. ಬೆಳಿಗ್ಗೆ 8ಕ್ಕೆ ಆರಂಭವಾಗಬೇಕಿದ್ದ ರಾಧಾಕೃಷ್ಣನ್ ಭಾವಚಿತ್ರ ಮೆರವಣಿಗೆಯೂ ಸಾಕಷ್ಟು ತಡವಾಯಿತು.

ಶಿಕ್ಷಕರಿಗೆ ಮಹತ್ವ ಕೊಡಬೇಕಾದ ಸಮಾರಂಭದಲ್ಲಿ ಇದ್ದಬದ್ದವರನ್ನೆಲ್ಲಾ ವೇದಿಕೆಯಲ್ಲಿ `ಅಲಂಕರಿ'ಸಲಾಯಿತು. ಶಿಕ್ಷಕರಿಗೇ ಮಹತ್ವ ಇಲ್ಲವಾಯಿತು.

ಇಲ್ಲಿ `ಓಲೈಕೆ', ವ್ಯಕ್ತಿಪೂಜೆಗೆ ಮಹತ್ವ ಸಿಕ್ಕಿತು. ಮೊದಲೇ ಸಾಕಷ್ಟು ತಡವಾದ ಕಾರ್ಯಕ್ರಮದಲ್ಲಿ ನಿರೂಪಕರು, ಸ್ವಾಗತಕಾರರಿಂದ ಗಣ್ಯರ `ಹಾಜರಾತಿ' ವಾಚನ, ಪ್ರಾಸ್ತಾವಿಕದ ರೂಪದಲ್ಲಿ ಕಾಲಹರಣ ನಡೆದದ್ದಕ್ಕೆ ಸಾಕಷ್ಟು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿ, ಸಭಾಂಗಣದ ಹೊರಗೆ ಹರಟೆಯಲ್ಲಿ ನಿರತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT