ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಶ್ರದ್ಧಾ ಭಕ್ತಿಯ ಬಕ್ರೀದ್ ಆಚರಣೆ

Last Updated 8 ನವೆಂಬರ್ 2011, 5:55 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ವಿವಿಧ ವಾರ್ಡ್‌ಗಳು ಪ್ರಾರ್ಥನಾ ಕೇಂದ್ರಗಳು ಸೇರಿದಂತೆ  ಪ್ರಮುಖ ಪ್ರಾರ್ಥನಾ ಕೇಂದ್ರವಾದ ಈದ್ಗಾ ಮೈದಾನದಲ್ಲಿ ಮುಸ್ಲೀಮರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆಯಿಂದಲೇ ಸ್ಥಳೀಯ ಬಸ್ ಡಿಪೋ ಹತ್ತಿರದ ಈದ್ಗಾ, ಐಎಸ್‌ಆರ್ ರಸ್ತೆಯ ಈದ್ಗಾ, ಚಿತ್ತವಾಡಗಿ ಈದ್ಗಾ ಮೈದಾನ  ಮತ್ತು ಹರಿಹರ ರಸ್ತೆಯ ಈದ್ಗಾ ಮೈದಾನಗಳು ಸೇರಿದಂತೆ ತಮ್ಮ ವ್ಯಾಪ್ತಿಯ ಪ್ರಾರ್ಥನಾ ಕೇಂದ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.  ನಂತರ ಈದ್ಗಾ ಮೈದಾನದ ಕಡೆ ಆಗಮಿಸಿದ ಮುಸ್ಲೀಮರುಪ್ರಮುಖ ಪ್ರಾರ್ಥನಾ ಕೇಂದ್ರವಾದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕೂಡ್ಲಿಗಿ
ಪಟ್ಟಣದಲ್ಲಿ ಸೋಮವಾರ ಮುಸ್ಲಿಂರುಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಹೊರಭಾಗದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲೀಮರುಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರುಗಳು, ಬಕ್ರೀದ್ ತ್ಯಾಗ ಬಲಿದಾನದ ಸಂಕೇತ.

ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ ಎಂದರು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ ಎಂದು ತಿಳಿಸಿದರು.

ಪ್ರತಿಯೊಬ್ಬ ಮುಸ್ಲೀಮರು ಪ್ರವಾದಿಯವರ ತ್ಯಾಗ, ಔದಾರ್ಯ, ಸ್ವಾಮಿನಿಷ್ಠೆಯ ಸವಿ ನೆನಪಿಗೆ ಬಕ್ರೀದ್ ಅನ್ನು ಆಚರಿಸಿಕೊಂಡು ಬರುತ್ತಾರೆ ಎಂದರು. ನಂತರ ಮುಸ್ಲೀಮರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಮಾರ್ಗದುದ್ದಕ್ಕೂ ಕುಳಿತಿದ್ದ ಬಡ ಜನತೆಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರು.

ಸಿರುಗುಪ್ಪ
ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಪಟ್ಟಣದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿದರು.

ಹಬ್ಬದ ಅಂಗವಾಗಿ ಇಲ್ಲಿನ ಕೆಂಚನಗುಡ್ಡ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು, ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಪ್ರಾರ್ಥನಾ ಸ್ಥಳದಲ್ಲಿ ಸೇರಿದ್ದರು.
 
ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಅಬುಲ್‌ಹಸನ್‌ಸಾಬ್ ಹಬ್ಬದ ಮಹತ್ವ, ಜನಾಂಗದವರು ಆಚರಣೆ ಮಾಡಬೇಕಾದ ವಿಧಾನ ಸೇರಿದಂತೆ ಅನೇಕ ಸಂಗತಿಗಳ ಕುರಿತು ಮಾತನಾಡಿದರು. ಪುರಸಭಾ ಸದಸ್ಯರಾದ ಎಂ. ರೆಹಮತ್‌ಉಲ್ಲಾ, ಹಂಡೀಹಾಸೀಂ, ಸಲ್ವಾದ್, ಅಬ್ದುಲ್, ಮುಲ್ಲಾಬಾಬು ಮತ್ತು ಹುಸೇನ್ ಬಾಷಾಸಾಬ್, ಎಸ್.ಎಂ.ಫಜಲ್‌ಸಾಬ್, ಅಬ್ದುಲ್‌ರಜಾಕ್‌ಖಾದ್ರಿ, ಎ.ಅಬ್ದುಲ್‌ನಬಿ, ಜಾಹೀರುದ್ದೀನ್‌ಸಾಬ್, ಪುರಸಭೆ ಅಧ್ಯಕ್ಷ ಬಿ.ಈರಣ್ಣ, ಗಣ್ಯರು ಭಾಗವಹಿಸಿದ್ದರು.

ಕುರುಗೋಡು
ಪಟ್ಟಣದಲ್ಲಿ ಸೋಮವಾರ ಮುಸ್ಲೀಮರು ಬಕ್ರೀದ್ ಹಬ್ಬ ಆಚರಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಕಬರಸ್ತಾನಗೆ ತೆರಳಿದ ಮುಸ್ಲೀಮರು ಮೃತರಾದ ತಮ್ಮ ಸಂಬಂಧಿಕರ ಸಮಾಧಿಗಳ ಬಳಿ ಪ್ರಾರ್ಥಿಸಿದರು. ನಂತರ ಸ್ನೇಹಿತರೊಂದೊಗೆ ಪರಸ್ಪರ ಶುಭಾಯಶ ವಿನಿಮಯ ಮಾಡಿಕೊಂಡರು. ಕೆಲವರು ಟಗರುಗಳನ್ನು ಕುರುಬಾನಿ ನೀಡಿದರೆ, ಮತ್ತೆ ಕೆಲವರು ಹಣ ಮತ್ತು ಬಟ್ಟೆ ಬಡವರಿಗೆ ದಾನ ಮಾಡಿದರು

ಹಗರಿಬೊಮ್ಮನಹಳ್ಳಿ
ಪಟ್ಟಣದ ಮುಸ್ಲೀಮರುಸೋಮವಾರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಆಚರಿಸಿದರು.

ಹಬ್ಬದ ಅಂಗವಾಗಿ ಪೇಶ್ ಇಮಾಮ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.  ಬಳಿಕ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಿದರು. ನಂತರ ಖಬರ ಸ್ಥಾನಕ್ಕೆ ತೆರಳಿ ಅಲ್ಲಿನ ಹಿರಿಯರ ಸಮಾಧಿಗೆ ನಮನ ಸಲ್ಲಿಸಿದರು.

ಹಾಜಿ ಯೂಸೂಫ್ ನೇತೃತ್ವದಲ್ಲಿ ಹಂಪಸಾಗರ ರಸ್ತೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜಿ.ಪಂ. ವಿಪಕ್ಷ ನಾಯಕ ಎಸ್.ಭೀಮಾನಾಯ್ಕ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯ ಬಾಲು ಉಪ್ಪಾರ, ಗ್ರಾ.ಪಂ. ಸದಸ್ಯ ಪವಾಡಿ ಹನಮಂತಪ್ಪ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಎಣ್ಣಿ ಇಬ್ರಾಹಿಂ, ಟಿ.ಕಾಶೀಂ ಸಾಹೇಬ್, ತೆಲಗಿ ಇಸ್ಮಾಯಿಲ್, ಮದರ್ ಸಾಬ್, ಜಂದೀಸಾಬ್ ಹಾಗು ಭಂಗೀ ದಾದಾಪೀರ್ ಇತರರಿದ್ದರು.

ಮರಿಯಮ್ಮನಹಳ್ಳಿ
ಮುಸ್ಲೀಮರು ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಪಟ್ಟಣದ ಅಯ್ಯನಹಳ್ಳಿ ರಸ್ತೆ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ 9 ಗಂಟೆಗೆ ಈದ್ಗಾ ಮೈದಾನದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಹೊಸ ಧಿರಿಸನ್ನು ಧರಿಸಿ ಆಗಮಿಸಿದ್ದ ಹಿರಿಯ ಕಿರಿಯರೆನ್ನದೆ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಮುಸ್ಲೀಮರುವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳು ಪ್ರವಚನ ನೀಡಿದರು. ಸಾಮೂಹಿಕ ಪ್ರಾರ್ಥನೆಯ ನಂತರ ಪ್ರತಿಯೊಬ್ಬರು ಒಬ್ಬರನ್ನು ಮತ್ತೊಬ್ಬರನ್ನು ತಬ್ಬಿಕೊಂಡು ಈದ್ ಮುಬಾರಖ್ ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಜನಪ್ರತಿನಿಧಿಗಳು, ಗಣ್ಯರು ಮುಸ್ಲಿಂರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT