ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಂಭ್ರಮದ ರಾಮನವಮಿ

ಮಲೇಬೆನ್ನೂರು, ಸಂತೇಬೆನ್ನೂರು, ಚನ್ನಗಿರಿಯಲ್ಲಿ ರಥೋತ್ಸವ
Last Updated 20 ಏಪ್ರಿಲ್ 2013, 12:47 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ರಾಮನವಮಿ ಉತ್ಸವವನ್ನು ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ಭಕ್ತಜನತೆ ಶುಕ್ರವಾರ ಆಚರಿಸಿದರು.

ಸಮೀಪದ ಸುಕ್ಷೇತ್ರ ಕೊಕ್ಕನೂರಿನಲ್ಲಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಾಂಪ್ರದಾಯಿಕವಾಗಿ ಜರುಗಿತು.

ಗಣಪತಿಪೂಜೆ, ಚಕ್ರಪೂಜೆ, ಬಲಿ ನಂತರ ಭಕ್ತರು ಉತ್ತುತ್ತಿ ಬಾಳೆಹಣ್ಣನ್ನು ರಥಕ್ಕೆ ಸಮರ್ಪಿಸಿ `ರಾಮರಾಮ ಗೋವಿಂದ' ಉದ್ಘೋಷದ ನಡುವೆ ರಥ ಎಳೆದರು.

ದೇವಾಲಯದ ಪ್ರಾಂಗಣದಲ್ಲಿ  ದೀಡು ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.

ಸಮೀಪದ ಕಡಾರನಾಯ್ಕನಹಳ್ಳಿ, ಹೊಳೆಸಿರಿಗೆರೆ, ಹಿರೆಹಾಲಿವಾಣ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಉಚ್ಛಾಯ (ಚಿಕ್ಕರಥೋತ್ಸವ)ವನ್ನು ಗ್ರಾಮಸ್ಥರು ಏರ್ಪಡಿಸಿದ್ದರು.

ದೇವಾಲಯ ಹಾಗೂ ರಥವನ್ನು ಧ್ವಜಪತಾಕೆಯಿಂದ ಅಲಂಕರಿಸಿದ್ದರು.

ಕೆಲವೆಡೆ ಬಿರು ಬಿಸಿಲಿನಿಂದ ಪಾರಾಗಲು ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಿದರು. ರಾಮೋತ್ಸವದ ಪ್ರಯುಕ್ತ ಸಂಗೀತ ಸೇವೆ ಮಾಡಿದರು.

ಇಲ್ಲಿನ ಜೋಡಿ ಆಂಜನೇಯ, ಹಳೆ ಊರಿನ ಬಾಲಾಂಜನೇಯ, ಕೊಮಾರನಹಳ್ಳಿ ಹನುಮಂತ ಹಾಗೂ ಹರಳಹಳ್ಳಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ರಾಮೋತ್ಸವ: ಸಮೀಪದ ಆಂಧ್ರ ಮೂಲದ ಜನತೆ ವಾಸಿಸುವ ವಿನಾಯಕನಗರ, ಭಾಸ್ಕರ್‌ರಾವ್, ನಿಟ್ಟೂರು, ಮಲ್ಲನಾಯ್ಕನಹಳ್ಳಿ, ರಂಗಾರಾವ್, ಗೋಲಿ ರಾಮರಾವ್, ನಂದೀಶ್ವರ, ಜಿಗಳಿ, ಕುಂಬಳೂರು, ಮಲ್ಲನಾಯ್ಕನಹಳ್ಳಿ ಕ್ಯಾಂಪ್ ರಾಮ ದೇವಾಲಯದಲ್ಲಿ `ರಾಮೋತ್ಸವ'ದ ವಿಶೇಷ ಪೂಜಾವಿಧಿಗಳು ಅದ್ದೂರಿಯಾಗಿ ಜರುಗಿದವು.

ಸೀತಾರಾಮ ಕಲ್ಯಾಣೋತ್ಸವದಲ್ಲಿ ಹೆಚ್ಚಿನ ಸಂಖ್ಯೆ ಭಕ್ತರು ಭಾಗವಹಿಸಿದ್ದರು. ದೇವಾಲಯಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಿದ್ದರು. 

ಶ್ರೀರಾಮ ದೇವರ ರಥೋತ್ಸವ
ಸಂತೇಬೆನ್ನೂರು: ಇಲ್ಲಿನ ಪುಷ್ಕರಣಿ ಬಳಿಯ ಐತಿಹಾಸಿಕ ಶ್ರೀರಾಮ ದೇವರ ರಥೋತ್ಸವ ಶುಕ್ರವಾರ `ರಾಮ ನವಮಿ'ಯಂದು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯ ಪ್ರದಕ್ಷಿಣೆ ನಂತರ ರಥದ ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು. ಬಾಳೆಹಣ್ಣು ಕಳಸಕ್ಕೆ ಎಸೆದು ಹಾಗೂ ತೆಂಗಿನ ಕಾಯಿ ರಥದ ಗಾಲಿಗಳಿಗೆ ಹೊಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥವನ್ನು ಬಣ್ಣದ ವಸ್ತ್ರ ಹಾಗೂ ಹೂಹಾರಗಳಿಂದ ಶೃಂಗರಿಸಲಾಗಿತ್ತು. ಪೂಜಾ ವಿಧಿ-ವಿಧಾನಗಳ ನಂತರ ನೆರೆದ ಭಕ್ತ ಸಮೂಹ ಚಿಕ್ಕ ರಥವನ್ನು ಉತ್ಸಾಹದಿಂದ ಎಳೆದರು.

ಒಡೆದು ಮೂಡಿದ ಏಕಶಿಲೆಯಲ್ಲಿ ಶ್ರೀರಾಮ ಹಾಗೂ ನರಸಿಂಹ ಅವತಾರದ ವಿಗ್ರಹ ಈ ದೇವಾಲಯದ ವಿಶೇಷ.
ಗ್ರಾಮದ ಸುಮತೀಂದ್ರ ನಾಡಿಗ್, ಆನಂದ ತೀರ್ಥಾಚಾರ್, ಅರ್ಚಕ ಅನಂದ ಮೂರ್ತಿ, ಮಧುಸೂದನ, ವೆಂಕಟೇಶ್ ನಾಡಿಗ್ ಮತ್ತಿತರರು ಉಪಸ್ಥಿತರಿದ್ದರು.

ಮೌದ್ಗಲ್ ಆಂಜನೇಯ ಸ್ವಾಮಿ ರಥೋತ್ಸವ
ಚನ್ನಗಿರಿ: ತಾಲ್ಲೂಕು ಮುದ್ದೇನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ಧ ಮೌದ್ಗಲ್ ಆಂಜನೇಯ ಸ್ವಾಮಿ ರಥೋತ್ಸವ ರಾಮನವಮಿ ದಿನವಾದ ಶುಕ್ರವಾರ ಅತ್ಯಂತ ಸಂಭ್ರಮ ಸಡಗರದಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.

ಮುದ್ದೇನಹಳ್ಳಿ ಗ್ರಾಮ ಚನ್ನಗಿರಿ ಪಟ್ಟಣಕ್ಕೆ ಹೊಂದಿಕೊಂಡಿದೆ. ಈ ರಥೋತ್ಸವಕ್ಕೆ ಗ್ರಾಮದ ಜನರಿಗಿಂತ ಹೆಚ್ಚಾಗಿ ಪಟ್ಟಣದ ಜನರು ಹೆಚ್ಚಾಗಿ ಸೇರುವುದು ವಿಶೇಷವಾಗಿದೆ. ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳ ಮೆರವಣಿಗೆಯ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ಕೂಡಲೇ ಪಾನಕ ತುಂಬಿದ ಸುಮಾರು 70ಕ್ಕಿಂತ ಹೆಚ್ಚು ಎತ್ತಿನಗಾಡಿಗಳು ರಥವನ್ನು ಪ್ರದಕ್ಷಿಣಿ ಹಾಕಿ ನಂತರ ರಭಸದಿಂದ ಸಾಗುವ ದೃಶ್ಯ ರೋಮಾಂಚನಕಾರಿಯಾಗಿರುತ್ತದೆ. ಮೆಣಸು, ಮಂಡಕ್ಕಿ ಹಾಗೂ ಬಾಳೆಹಣ್ಣುಗಳನ್ನು ರಥದ ಮೇಲೆ ಭಕ್ತರು ಎಸೆದು ಹರಕೆಯನ್ನು ತೀರಿಸಿದರು.

ನಂತರ ರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೂ ಕೋಸಂಬರಿ, ಪಾನಕ ವಿತರಣೆ ಕಾರ್ಯ ನಡೆಯಿತು.

ಮಾಜಿ ಶಾಸಕ, ಕೆಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ, ಜೆಡಿಎಸ್ ಅಭ್ಯರ್ಥಿ ಹೊದಿಗೆರೆ ರಮೇಶ್, ತಹಶೀಲ್ದಾರ್ ಪ್ರಸನ್ನಕುಮಾರ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT