ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸರ ದೋಚಿದ ದುಷ್ಕರ್ಮಿಗಳು

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಡಿವಾಳ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ಮೂರು ಮಂದಿ ಮಹಿಳೆಯರ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಜ್ಞಾನಭಾರತಿಯ ಅಂಬೇಡ್ಕರ್ ಕಾಲೇಜಿನ ಸಮೀಪ ನಡೆದು ಹೋಗುತ್ತಿದ್ದ ಶಶಿಕಲಾ ಎಂಬುವರನ್ನು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದು ಅವರ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಹಾಡಹಗಲೇ ನಡೆದಿದೆ. ದುಷ್ಕರ್ಮಿಗಳು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ೃತ್ಯ ಎಸಗಿದ್ದಾರೆ. ಸರ 40 ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣನಗರದಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ವನಜಾ ಎಂಬುವರ ಸರವನ್ನು ದೋಚಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರ ಕಿತ್ತುಕೊಂಡು ಹೋಗಿದ್ದಾರೆ. ಸರ 90 ಗ್ರಾಂ ತೂಕದ್ದು ಎಂದು ಪೊಲೀಸರು ಹೇಳಿದ್ದಾರೆ.

ಎರಡೂ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜ್ಞಾನಭಾರತಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣ: ವೃದ್ಧೆಯ ಗಮನ ಬೇರೆಡೆ ಸೆಳೆದು 72 ಗ್ರಾಂ ತೂಕದ ಚಿನ್ನದ ಸರ ದೋಚಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಏಳನೇ ಸೆಕ್ಟರ್‌ನಲ್ಲಿ ನಡೆದಿದೆ.ಎಚ್‌ಎಸ್‌ಆರ್ ಲೇಔಟ್ ನಿವಾಸಿ ಮೋಹನ ಸುಂದರಿ ಸರ ಕಳೆದುಕೊಂಡವರು.
 
ಅವರು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಪೊಲೀಸರೆಂದು ಪರಿಚಯಿಸಿಕೊಂಡು `ಸರಗಳ್ಳರ ಹಾವಳಿ ಹೆಚ್ಚಾಗಿದೆ ಸರ ಬಿಚ್ಚಿಟ್ಟುಕೊಳ್ಳಿ~ ಎಂದಿದ್ದಾರೆ. ಅವರು ಸರ ಬಿಚ್ಚಿದಾಗ  ಕಿಡಿಗೇಡಿಗಳು ಅದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕಳವು: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ, ನಗದು ಮತ್ತು ಲ್ಯಾಪ್‌ಟಾಪ್ ಕಳವು ಮಾಡಿರುವ ಘಟನೆ ಬಸವನಗುಡಿಯ ಚರ್ಚ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.ಮನೆಯ ಮಾಲೀಕ ಸುಹೇಲ್ ಸಮೀವುಲ್ಲಾ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರನ್ನು ನೋಡಿಕೊಂಡು ಬರಲು ಅವರು ಆಸ್ಪತ್ರೆಗೆ ಹೋಗಿದ್ದಾಗ ದುಷ್ಕರ್ಮಿಗಳು ಬಾಗಿಲು ಒಡೆದು ಒಳ ನುಗ್ಗಿದ ಅಲ್ಮೇರಾದಲ್ಲಿದ್ದ ಆಭರಣ, 1,500 ರೂಪಾಯಿ ಹಣ ಮತ್ತು ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ.

ಸುಹೇಲ್ ಅವರು ರಾತ್ರಿ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಭರಣಗಳ ಮೌಲ್ಯ ಸುಮಾರು 24 ಸಾವಿರ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಬಸನವಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ- ಸಾವು:  ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಹೆಸರುಘಟ್ಟ ರಸ್ತೆಯ ಬೋನ್‌ಮಿಲ್ ಸಮೀಪ ಮಂಗಳವಾರ ರಾತ್ರಿ ನಡೆದಿದೆ.ಚಂದ್ರಪ್ಪ (52) ಮೃತಪಟ್ಟವರು. ತಳ್ಳು ಗಾಡಿಯಲ್ಲಿ ಚಹಾ ಮಾಡುತ್ತಿದ್ದ ಅವರು ಬೋನ್‌ಮಿಲ್ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ರಾತ್ರಿ ವ್ಯಾಪಾರ ಮುಗಿಸಿ ಗಾಡಿ ತಳ್ಳಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಚಾಲಕ ಹಿಂದಿನಿಂದ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಸವಾರನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪೀಣ್ಯ ಸಂಚಾರ ಠಾಣೆ ಪೊಲೀಸರು ದೂರುದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT