ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ ರಥ-ಯುವಶಕ್ತಿ ದರ್ಶನ

Last Updated 2 ಆಗಸ್ಟ್ 2013, 7:24 IST
ಅಕ್ಷರ ಗಾತ್ರ

ವಿಜಾಪುರ: ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಅಂಗವಾಗಿ ದೇಶಾದಾದ್ಯಂತ ಸಂಚರಿಸುತ್ತಿರುವ `ವಿವೇಕ ರಥ' ಗುರುವಾರ ನಗರಕ್ಕೆ ಆಗಮಿಸಿದ್ದು, ಅದ್ದೂರಿ ಸ್ವಾಗತ ಕೋರಲಾಯಿತು.

ಇಲ್ಲಿಯ ಬಿಎಲ್‌ಡಿಇ ಸಂಸ್ಥೆಯ ಆವರಣದಿಂದ ಕಂದಗಲ್ ಹನುಮಂತರಾಯ ರಂಗಮಂದಿರದ ವರೆಗೆ  ಶೋಭಾಯಾತ್ರೆ ನಡೆಸಲಾಯಿತು.

ಸಂಸದ ರಮೇಶ ಜಿಗಜಿಣಗಿ ಅವರು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸ್ವಾಮಿ ನಿರ್ಭಯಾನಂದ ಸರಸ್ವತಿ, ಬಿಎಲ್‌ಡಿಇ ಡೀಮ್ಡ ವಿ.ವಿ. ಕುಲಪತಿ ಡಾ.ಬಿ.ಜಿ. ಮೂಲಿಮನಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಬಸನಗೌಡ ಎಂ. ಪಾಟೀಲ ಪೂಜೆ ಸಲ್ಲಿಸಿದರು.

ನಗರದ ವಿವಿಧ ಶಾಲಾ-ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಶೋಭಾ ಯಾತ್ರೆ  `ಯುವ ಶಕ್ತಿಯ ಪ್ರದರ್ಶನ'ದಂತೆ ಗಮನ ಸೆಳೆಯಿತು. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾ ಮಾತೆ ಅವರ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು, ರಾಮಕೃಷ್ಣ ವಿವೇಕಾನಂದ ಆಶ್ರಮದ ಯತಿಗಳು ಮೆರವಣಿಗೆಯಲ್ಲಿ ಸಾಗಿದರು.

ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಧ್ಯಾಹ್ನ ನಡೆದ ಯುವ ಸಮಾವೇಶದಲ್ಲಿ ಮಾತನಾಡಿದ ಸಿದ್ಧೇಶ್ವರ ಸ್ವಾಮೀಜಿ, `ಭಾರತ ಭೂಮಿಯಲ್ಲಿ ವಾಸಿಸುವವರೆಲ್ಲರೂ ಭಾಗ್ಯಶಾಲಿಗಳು. ಜ್ಞಾನದ ಬೆಳಕನ್ನು ಚೆಲ್ಲಿದ ಭೂಮಿ ಇದು. ಇದೇ ಭೂಮಿಯಿಂದ ಬಂದ ಸ್ವಾಮಿ ವಿವೇಕಾನಂದರು ಇಡೀ ಜಗತ್ತಿನಲ್ಲಿಯೇ ಭಾರತದ ಜ್ಯೋತಿ ಬೆಳಗುವಂತೆ ಮಾಡಿದರು' ಎಂದರು.

`ಸ್ವಚ್ಛ ಗಾಳಿ, ಹರಿಯುವ ನದಿಗಳು, ಉತ್ತಮ ಪರಿಸರದಲ್ಲಿರುವ ನಾವು ಭಾಗ್ಯಶಾಲಿಗಳು ಎಂದು ಭಾವಿಸಿ ಶ್ರದ್ಧೆಯಿಂದ ಕಾರ್ಯಮಾಡುತ್ತ ಜೀವಿಸಬೇಕು. ಉತ್ತಮ ದುಡಿಮೆಯಿಂದ ಅತ್ಯುತ್ತಮ ದೇಶ ಕಟ್ಟಬಹುದು. ಯುವಶಕ್ತಿ ಕ್ರೀಯಾಶೀಲ ದುಡಿಮೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಜಿ.ಪಂ. ಸಿಇಒ ಶಿವಕುಮಾರ, ಎಎಸ್‌ಪಿ ಆರ್. ಚೇತನ ಇತರರು ಪಾಲ್ಗೊಂಡಿದ್ದರು.

ರಥಯಾತ್ರೆ: `ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳ ಪಾಲನೆಯಿಂದ ಯುವಜನತೆ ಉನ್ನತ ಗುರಿ ತಲುಪಲು ಸಾಧ್ಯ' ಎಂದು ಸ್ವಾಮಿ ಅರ್ಚನಾನಂದ ಹೇಳಿದರು.

ಸ್ವಾಮಿ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ರಥಯಾತ್ರೆ ಗುರುವಾರ ನಗರದಲ್ಲಿ ಸಂಚರಿಸಿದ ನಂತರ, ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

`ರಥಯಾತ್ರೆ ಅಂಗವಾಗಿ ಕರ್ನಾಟಕದಲ್ಲಿ 220 ಸಾರ್ವಜನಿಕ ಸಭೆಗಳನ್ನು ಆಯೋಜಿಸಿದ್ದು, 65ನೇ ಈ ಸಭೆ ಹೆಚ್ಚು ಯಶಸ್ವಿಯಾಗಿದೆ' ಎಂದು ತೃಪ್ತಿ ವ್ಯಕ್ತಪಡಿಸಿದರು.

`ಆಧುನಿಕ ಯುಗದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶವನ್ನು ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯ ನಾನಾ ಸಂಘಟನೆಗಳಿಂದ ನಡೆದಿದೆ. ವಿದೇಶಗಳಲ್ಲಿ ರಾಮಕೃಷ್ಣ ಮಿಷನ್ ಸೇರಿದಂತೆ ಅನೇಕ ಆಶ್ರಮಗಳ ಮೂಲಕ ಲಕ್ಷಾಂತರ ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಮಾರು ಹೋಗುತ್ತಿದ್ದಾರೆ. ಅನೇಕ ದೇಶಗಳು ವಿವೇಕಾನಂದರ ಪುತ್ಥಳಿ ಸ್ಥಾಪಿಸಿವೆ. ಸ್ವಾಮಿ ವಿವೇಕಾನಂದರ ಸಂದೇಶ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ' ಎಂದು ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಪುತ್ರ ಬಸನಗೌಡ ಎಂ. ಪಾಟೀಲ ಮಾತನಾಡಿ, `2020ಕ್ಕೆ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಲಿದೆ. ಯುವಕರ ಸಂಖ್ಯೆ ಹೆಚ್ಚುವುದಕ್ಕಿಂತ ಗುಣಾತ್ಮಕವಾಗಿ, ರಚನಾತ್ಮಕವಾಗಿ ಕಾರ್ಯಮಾಡುವ ಯುವಪಡೆ ನಿರ್ಮಾಣಗೊಳ್ಳಬೇಕಿದೆ. ಈ ದಿಸೆಯಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪಾಲಿಸಬೇಕು' ಎಂದರು.

ಬಿ.ಎಲ್.ಡಿ.ಇ. ಡೀಮ್ಡ ವಿ.ವಿ.ಕುಲಪತಿ ಡಾ.ಬಿ.ಜಿ. ಮೂಲಿಮನಿ, ಎಸ್.ಎಚ್. ಲಗಳಿ, ಕೆ.ಎಸ್. ಬಿರಾದಾರ, ಶ್ರಿಕೃಷ್ಣ ಸಂಪಗಾಂವಕರ ವೇದಿಕೆಯಲ್ಲಿದ್ದರು. ಸ್ವಾಗತ ಸಮಿತಿಯ ಸಂಗಮೇಶ ಬಬಲೇಶ್ವರ ಸ್ವಾಗತಿಸಿದರು. ಡಾ.ಮಹಾಂತೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT