ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಜೀವನ ಅಧ್ಯಯನ ಅವಶ್ಯ

Last Updated 7 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಯಾದಗಿರಿ:  ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ಏಳು ಸಾಗರದಾಚೆಗೆ ತಲುಪಿಸಿದ ಮಹನೀಯರು. ಅಂಥವರ ಬಗ್ಗೆ ವಿದೇಶಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಆದರೆ ನಮ್ಮ ದೇಶದವರೇ ಆದ ಸ್ವಾಮಿ ವಿವೇಕಾನಂದರನ್ನು ಅರ್ಥಮಾಡಿಕೊಳ್ಳಲು ನಾವು ಇನ್ನೂ ಪ್ರಯತ್ನಿಸುತ್ತಿಲ್ಲ ಎಂದು ಗದಗ-ವಿಜಾಪುರ ಸ್ವಾಮಿ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ವಿಷಾದ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿಯ ಹಿಂದಿ ಪ್ರಚಾರ ಸಭಾದಲ್ಲಿ ಜರುಗಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ರಾಷ್ಟ್ರಕ್ಕಾಗಿ ಕೊಡುಗೆ ನೀಡಬೇಕೆಂಬ ಇಂಗಿತ ಇರುವ ಯಾವುದೇ ವ್ಯಕ್ತಿ, ಸ್ವಾಮಿ ವಿವೇಕಾನಂದರ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಕೇವಲ 9 ನೇ ವಯಸ್ಸಿನ ಬಾಲಕ ಅಮೆರಿಕದ ಪ್ರಖ್ಯಾತ ಲೇಖಕ ಹರ್ಬಟ್ ಸ್ಪಿನ್ನರ್‌ನ ಪುಸ್ತಕ ಓದಿ, ಅದರಲ್ಲಿನ ಲೋಪದೋಷಗಳನ್ನು ಹುಡುಕಿ ಅವರಿಗೆ ಪತ್ರ ಬರೆಯುತ್ತಾನೆ. ಅದನ್ನು ಓದಿ ಪುಸ್ತಕದಲ್ಲಿ ತಪ್ಪಾಗಿದೆ. ಮುಂದಿನ ಪ್ರಕಟಣೆಯಲ್ಲಿ ಸರಿಪಡಿಸಿಕೊಳ್ಳುತ್ತೇನೆ ಎನ್ನುವ ಮಾತುಗಳನ್ನು ಹರ್ಬಟ್ ಸ್ಪಿನ್ನರ್ ಅವರೇ ಹೇಳಿದ್ದಾರೆ. ಇದರಿಂದ ವಿವೇಕಾನಂದರ ಬುದ್ಧಿಮಟ್ಟ ಎಂಥದ್ದು ಎಂಬುದನ್ನು ನಾವು ಊಹಿಸಿಕೊಳ್ಳಬಹುದು ಎಂದರು.

ಇಡಿ ಅಮೆರಿಕದ ಎಲ್ಲ ತತ್ವಜ್ಙಾನಿಗಳು ಒಬ್ಬ ಸ್ವಾಮಿ ವಿವೇಕಾನಂದರಿಗೆ ಸಮ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅಂದು ಅಮೆರಿಕನ್ನರು ವಿವೇಕಾನಂದರನ್ನು ಕೇವಲ 15 ದಿನಗಳಲ್ಲಿಯೇ ಸಂಪೂರ್ಣವಾಗಿ ಅರ್ಥ ಮಾಡಿಕೊಂಡರು. ಯಾವುದೇ ಪರಿಚಯ ಪತ್ರ ಇಲ್ಲದೇ ಚಿಕಾಗೋದಲ್ಲಿ ನಡೆಯುವ ಸರ್ವ ಧರ್ಮ ಸಮ್ಮೇಳನದಲ್ಲಿ ನಿಮ್ಮ ವಿಚಾರಧಾರೆಗಳು ಉಣ ಬಡಿಸಬೇಕು ಎಂದು ಆಹ್ವಾನಿಸಿದರು. ದುರದೃಷ್ಟವಶಾತ್ ಇಂದಿಗೂ ನಾವೇ ಅವರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.
 
ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಗುರುನೀತ ತೇಜ್ ಮೆನನ್, ನಾನೂ ರಾಮಕೃಷ್ಣ ಆಶ್ರಮದ ಸದಸ್ಯಳಾಗಿದ್ದು, ದೇಶದಲ್ಲಿ ಆಶ್ರಮ ಮಾಡುತ್ತಿರುವ ಸಾಮಾಜಿಕ ಕಾರ್ಯ ಶ್ಲಾಘನೀಯ. ನೂತನ ಜಿಲ್ಲೆಯಾದ ನಂತರ ಯಾದಗಿರಿಯಲ್ಲಿಯೂ ಆಶ್ರಮ ಆರಂಭವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಮುಂಬರುವ ದಿನಗಳಲ್ಲಿ ಆಶ್ರಮ ಮತ್ತು ಜಿಲ್ಲಾಡಳಿತದ ಆಶ್ರಯಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶ್ರಮದ ಆಡಳಿತ ಮಂಡಳಿ ಒಪ್ಪಿಗೆ ನೀಡಿದರೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಎಸ್ಪಿ ಡಿ. ರೂಪಾ ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಒಬ್ಬ ಮಾದರಿ ಪುರುಷ. ಅವರ ವಿಚಾರಧಾರೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಇಂದಿನ ದಿನಗಳಲ್ಲಿ ಅಧ್ಯಾತ್ಮಿಕತೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಆಶ್ರಮ ಶ್ರಮಿಸುತ್ತಿದೆ ಎಂದರು.

ಪತ್ರಕರ್ತ ವಾದಿರಾಜ ವ್ಯಾಸಮುದ್ರ, ವೀರೇಶಾನಂದಜಿ, ಶಾಂತಾನಂದಜಿ, ಮಹೇಶ್ವರಾನಂದಜಿ, ಪ್ರಕಾಶಾನಂದಜೀ, ಬ್ರಹ್ಮನಿಷ್ಠಾನಂದಜಿ, ಶಾರದಾನಂದಜಿ, ಸೋಮೇಶ್ವರಾನಂದಜಿ, ಗದಾಧರಾನಂದಜಿ, ಸ.ದಾ. ಜೋಶಿ, ರಾಘವೇಂದ್ರ, ವೇಣುಗೋಪಾಲ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.

ಜಯಕರ್ನಾಟಕ ಸಂಘಟನೆಯ ಕೃಷ್ಣಮೂರ್ತಿ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಅಯ್ಯಣ್ಣಾ ಹುಂಡೇಕಾರ, ವಿಶ್ವನಾಥರೆಡ್ಡಿ ದರ್ಶನಾಪೂರ, ವಿಶ್ವನಾಥ ಸಿರವಾರ, ಜಯಭಟ್ ಜೋಶಿ, ಅನಿಲ ಗುರೂಜಿ, ವಿ.ಸಿ. ರಡ್ಡಿ, ನಾಗರಾಜ ಬೀರನೂರ, ಜೈಕರವೇ ಕಾರ್ಯಾಧ್ಯಕ್ಷ ಶ್ರೀಕಾಂತ್ ಭೀಮನಳ್ಳಿ, ಚನ್ನಯ್ಯೊ ಸ್ವಾಮಿ, ವಿಜಯಕುಮಾರ ಹೊರಟೂರು, ದೇವು ವರ್ಕನಳ್ಳಿ ಮುಂತಾದವರು ಭಾಗವಹಿಸಿದ್ದರು.

ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣವನ್ನು ಮಕ್ಕಳಿಗೆ ತೋರಿಸಲೆಂದು ವಿಜಾಪುರದಿಂದ ಆಗಮಿಸಿದ್ದ ಬ್ರಹ್ಮಚಾರಿ ಕೃಷ್ಣ, ವಿವೇಕಾನಂದರ ವೇಷದಲ್ಲಿ ವಿಶೇಷ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT