ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಜೀವನ ಬೋಧನೆಗೆ ಸಮಿತಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿವೇಕಾನಂದರ ಜೀವನ ಬೋಧನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ಅಭಿಯಾನ ರೂಪಿಸಲಾಗುವುದು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ನಗರದ ಮಲ್ಲೇಶ್ವರಂನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿವೇಕಾನಂದರ 150 ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು,`ಭಾರತೀಯ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಸಾರಿ ಹೇಳಿದ ಮಹಾನ್ ವ್ಯಕ್ತಿ ವಿವೇಕಾನಂದರು. ಅವರ ಜನ್ಮದಿನವನ್ನು ರಾಜ್ಯದಲ್ಲಿ ಈ ವರ್ಷವಿಡೀ ಆಚರಿಸಲಾಗುವುದು ಎಂದು ತಿಳಿಸಿದರು.

`ಜ್ಞಾನಾರ್ಜನೆಯ ಮಾರ್ಗವಾಗಬೇಕಿದ್ದ ಶಿಕ್ಷಣ ಇಂದು ಕೇವಲ ಉದ್ಯೋಗದ ರಹದಾರಿಯಾಗಿ ಮಾರ್ಪಟ್ಟಿದೆ~ ಎನ್ನುತ್ತಾ, `ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಯನ್ನೇ ನಾವು ಅನುರಿಸುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಜ್ಞಾನದ ದಾಹ ನೀಗಿಸುವ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಕೇವಲ ಉದ್ಯೋಗ ಪಡೆಯುವ ಮಾಹಿತಿ ಹಾಗೂ ತರಬೇತಿಯನ್ನಷ್ಟೇ ಶಿಕ್ಷಣದ ಹೆಸರಿನಲ್ಲಿ ಕಲಿಸಲಾಗುತ್ತಿದೆ. ಪ್ರಸ್ತುತ ಶಿಕ್ಷಣ ಪದ್ಧತಿಯನ್ನು ಸುಧಾರಿಸದೇ ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ~ ಎಂದು ಅಭಿಪ್ರಾಯ ಪಟ್ಟರು.

`ಭಾರತೀಯ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪಿಸಿದವರು ವಿವೇಕಾನಂದರು. ಬದುಕಿದ್ದ ಅಲ್ಪಾವಧಿಯಲ್ಲಿಯೇ ಅತ್ಯುನ್ನತ ಜ್ಞಾನವನ್ನು ಪಡೆದ, ಅವರ ಜೀವನ, ಆದರ್ಶಗಳು ಯುವಕರ ಬಾಳಿಗೆ ದಾರಿದೀಪವಾಗಬೇಕು. ಅವರ ತತ್ವ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಕರೆನೀಡಿದರು.

`ಭಾರತೀಯರಲ್ಲಿನ ಮಾನಸಿಕ ಗುಲಾಮಿತನವನ್ನು ಹೊಡೆದೋಡಿಸಲು ಪ್ರಯತ್ನಿಸಿದ ವಿವೇಕಾನಂದರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣಾ ಶಕ್ತಿಯಾದವರು. ಅಂದಿನಿಂದ ಇಂದಿನವರೆಗೂ ಭಾರತದ ಪ್ರೇರಣಾ ಶಕ್ತಿಯ ಸಂಕೇತವಾಗಿ ವಿವೇಕಾನಂದರ ವ್ಯಕ್ತಿತ್ವ ಉಳಿದುಕೊಂಡಿದೆ. ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ದೇಶದ ಓಣಿ ಓಣಿಗಳಲ್ಲಿ ಅವರ ತತ್ವಗಳನ್ನು ಪ್ರಚಾರ ಪಡಿಸುವ ಹೊಣೆ ಇಂದಿನ ವಿದ್ಯಾರ್ಥಿಗಳ ಮೇಲಿದೆ~ ಎಂದರು.

ವಿವೇಕಾನಂದರ ವಿಚಾರಗಳ ಪ್ರಚಾರಕ ಗೋಪಿನಾಥ ರೆಡ್ಡಿ, `ಶಂಕರಾಚಾರ್ಯರ ಜ್ಞಾನ, ಬುದ್ಧನ ತಾತ್ವಿಕತೆ ಮತ್ತು ಹನುಮಂತನ ಶಕ್ತಿಗಳ ಸಂಗಮ ವಿವೇಕಾನಂದರು. ಹಸಿದ ಹೊಟ್ಟೆಗೆ ವೇದಾಂತವಲ್ಲ ಎಂಬುದನ್ನು ಅರಿತಿದ್ದ ಅವರು ಭಾರತದ ದಾರಿದ್ರ್ಯವನ್ನು ತೊಡೆಯಲು ಪ್ರಯತ್ನಿಸಿದರು. ದರಿದ್ರರು, ದೀನರಲ್ಲಿ ದೇವರನ್ನು ಕಂಡವರು ಅವರು. ಗುರುವನ್ನೂ ಪರೀಕ್ಷಿಸದೇ ಒಪ್ಪಿಕೊಳ್ಳಬಾರದೆಂದು ತೋರಿಸಿದ ಅವರು ವೈಜ್ಞಾನಿಕ ದೃಷ್ಟಿಕೋನವಿಲ್ಲದ ಯಾವುದನ್ನೂ ಒಪ್ಪಿಕೊಳ್ಳಬಾರದೆಂದು ಕಲಿಸಿದವರು~ ಎಂದರು.

ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತೆ ವಿ.ರಶ್ಮಿ, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT