ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ರಾಜಕಾರಣಿ

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹೂವಿನ ಹಡಗಲಿಯಲ್ಲಿ ವಕೀಲಿ ಮಾಡುತ್ತ ಸಾಹಿತ್ಯ, ನಾಟಕ, ಬಯಲಾಟ ಇತ್ಯಾದಿಗಳನ್ನು ಸಂಘಟಿಸುತ್ತ ಜನರ ಪ್ರೀತಿ, ವಿಶ್ವಾಸಗಳಿಸಿದ್ದರು. ಅವರು ಯಶಸ್ವಿ ವಕೀಲರೇನಲ್ಲ. ಅವರು  ಮೊದಲ (1978ರಲ್ಲಿ) ಸಲ ವಿಧಾನ ಸಭೆಗೆ ಸ್ಪರ್ಧಿಸಿದಾಗ ಅವರ ಗೆಳೆಯರು, ಅಭಿಮಾನಿಗಳು ಹಣ ಸಂಗ್ರಹಿಸಿ ಅವರ ಚುನಾವಣಾ ವೆಚ್ಚಗಳನ್ನು ತೂಗಿಸಿದ್ದರು. ಮೊದಲ ಸಲ ಸೋತ ಪ್ರಕಾಶ್ 1983ರ ಚುನಾವಣೆಯಲ್ಲಿ ಜನತಾರಂಗದ ಅಭ್ಯರ್ಥಿಯಾಗಿ ಗೆದ್ದು ಮಂತ್ರಿಯಾದರು. ಆನಂತರ ಹಡಗಲಿ ಕ್ಷೇತ್ರದ ಜನರು ಅವರಿಗೆ ಸೋಲು,ಗೆಲುವುಗಳ ರುಚಿ ತೋರಿಸಿದ್ದಾರೆ. 1983ರಿಂದ (ಸೋತ ಅವಧಿ ಹೊರತುಪಡಿಸಿ) 2008ರವರೆಗೆ ಅವರು ಸಾರಿಗೆ, ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ, ಗ್ರಾಮೀಣ ಅಭಿವೃದ್ಧಿ, ಕೃಷಿ, ಗೃಹ, ಕಂದಾಯ ಇತ್ಯಾದಿ ಹಲವು ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗಿದೆ ಎಂಬಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಆಗ ಆದ ಕಹಿ ಅನುಭವ ಅವರು ಜನತಾ ಪರಿವಾರ ತೊರೆಯುವಂತೆ ಮಾಡಿತು. ವಿವಿಧ ಖಾತೆಗಳ ಮಂತ್ರಿಗಳಾಗಿ ರಾಜ್ಯದ ಉದ್ದಗಲದಲ್ಲಿ ಹಲವಾರು ಅಭಿವೃದಿ ಕೆಲಸಗಳನ್ನು ಮಾಡಲು ಅವರಿಗೆ ಸಾಧ್ಯವಾಯಿತು. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಮತ್ತು ಸಿಂಗಟಾಲೂರು ನೀರಾವರಿ ಯೋಜನೆ ಅವರ ದೂರದೃಷ್ಟಿಯ ಫಲ. ಕನ್ನಡ ವಿ.ವಿ ಸಾಕಾರವಾಯಿತು. ಆದರೆ ಸಿಂಗಟಾಲೂರು ಯೋಜನೆ ಇನ್ನೂ ಮುಗಿದಿಲ್ಲ. ‘ಮೂವತ್ತು ವರ್ಷಗಳ ರಾಜಕಾರಣ ನಿಮಗೆ ತೃಪ್ತಿ ನೀಡಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸಲು ಈಗ ಪ್ರಕಾಶ್ ಇಲ್ಲ.

ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ವರದಿಗಾರನಾಗಿ ನಾನು ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಸುಮಾರು ಹನ್ನೆರಡು ವರ್ಷಗಳಲ್ಲಿ ಅವರನ್ನು ಅನೇಕ ಸಲ ಭೇಟಿಯಾಗಿದ್ದೇನೆ. ಹತ್ತಿರದಿಂದ ಹಾಗೂ ಒಂದು ನಿರ್ದಿಷ್ಟ ಅಂತರದಲ್ಲಿ ನಿಂತು ಅವರ ನಡೆ, ನುಡಿ, ರಾಜಕೀಯವನ್ನು ಗಮನಿಸಿದ್ದೇನೆ. ನನ್ನ ತಿಳುವಳಿಗೆ ಸ್ವಲ್ಪ ಮಟ್ಟಿಗೆ ವಿಸ್ತಾರವಾಗಿದ್ದು ಅವರೊಂದಿಗೆ ನಡೆಸಿದ ಮಾತುಕತೆಗಳಿಂದ.

ಅವರ ಜತೆಯಲ್ಲಿ ಕಳೆದ ಅನೇಕ ಸಂದರ್ಭಗಳ ನೆನಪುಗಳು ನನ್ನಲ್ಲಿ ಹಸಿರಾಗಿವೆ. ಒಂದೆರಡನ್ನು ಇಲ್ಲಿ ಸ್ಮರಿಸುತ್ತೇನೆ. ಮೊದಲ ಸಲ ಮಂತ್ರಿಯಾದ ಸಂದರ್ಭ. ಒಮ್ಮೆ ಹಡಗಲಿಗೆ ಬಂದರು. ಯಾವುದೋ ಕಾರ್ಯಕ್ರಮ. ಸರ್ಕಾರಿ ಕಾರನ್ನು ಪ್ರವಾಸಿ ಮಂದಿರದ ಬಳಿ ನಿಲ್ಲಿಸಿ ಪಕ್ಷದ ಕಾರ್ಯಕರ್ತರ ಜತೆಯಲ್ಲಿ ನಡೆದುಕೊಂಡು ತಮ್ಮ ಮನೆಯತ್ತ ಹೊರಟಿದ್ದರು. ‘ನಮ್ಮನ್ನು’ ನೋಡುತ್ತಿದ್ದಂತೆ ಮನೆಗೆ ಚಹಾಕ್ಕೆ ಕರೆದರು. ನಾವೂ ಅವರ ಜತೆಯಲ್ಲಿ ಹೋಗುತ್ತಿರುವಾಗ ರಸ್ತೆಯ ಒಂದು ಬದಿಯಲ್ಲಿ ನಿಂತಿದ್ದ ಅಂಧ ವ್ಯಕ್ತಿಯೊಬ್ಬನ ಬಳಿಗೆ ಹೋಗಿ ‘ಏನಪಾ ನಾಗ? ಹೆಂಗಿದಿಯೊ?’ ಎಂದು ಆಪ್ತವಾಗಿ ವಿಚಾರಿಸಿದರು. ಆ ವ್ಯಕ್ತಿ ಪ್ರಕಾಶರ ಧ್ವನಿ ಗುರುತಿಸಿ ನಮಸ್ಕಾರ ಹೇಳುತ್ತ ‘ಮಂತ್ರಿಯಾದರೂ ನೀವು ನನ್ನ ಮರೆತಿಲ್ಲ’ ಎಂದ. ಹೀಗೆ ದಾರಿಯುದ್ದಕ್ಕೂ ಕಂಡವರನ್ನೆಲ್ಲ ಹೆಸರು ಹಿಡಿದು ಮಾತನಾಡಿಸುತ್ತ ಪ್ರಕಾಶ್ ನಡೆದರು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳು ಸಾವಿರಾರು ಜನರ ಹೆಸರು,ಪರಿಚಯ ಅವರಿಗಿತ್ತು.

ಮಂತ್ರಿಯಾಗಿ ಅವರ ಕಾರ್ಯಕ್ಷಮತೆಯನ್ನೂ ಗಮನಿಸಿದ್ದೇನೆ. ಆರಂಭದ ವರ್ಷಗಳಲ್ಲಿ ಅವರಲ್ಲಿ ಅವರ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಅಧಿಕಾರದಲ್ಲಿ ಹೆಚ್ಚು ಕಾಲ ಉಳಿಯುತ್ತ ಹೋದಂತೆ ಅವರು ಅದೇ ಕಾಳಜಿಯನ್ನು ಉಳಿಸಿಕೊಂಡಿದ್ದರೇ? ಹೇಳುವುದು ಕಷ್ಟ. ಹೆಚ್ಚು ಕಾಲ ಅಧಿಕಾರದಲ್ಲಿ ಉಳಿದವರ ಬಗ್ಗೆ ಜನರಲ್ಲಿ ಒಂದು ಬಗೆಯ ಅಸಮಾಧಾನ ಬೆಳೆಯುತ್ತ ಹೋಗುತ್ತದೆ. ಅವರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದ ಅವರ ಆಪ್ತರೆಂದು ನಾನು ಭಾವಿಸಿದ್ದ ಕೆಲವರು ‘ನಮ್ಮ ‘ಸ್ವಾಮಿ’ಗಳಿಗೆ ಒಮ್ಮೆ ಸೋಲಿನ  ರುಚಿ ತೋರಿಸುತ್ತೇವೆ’ ಎಂಬ ಮಾತು ಆಡಿದ್ದನ್ನು ಹಲವು ಸಲ ಕೇಳಿದ್ದೇನೆ. ಹಡಗಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದ ಅವರು ಒಮ್ಮೆ  ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರೊಬ್ಬರ ಎದುರು ಸೋತರು. ಪರಿಶಿಷ್ಟ ಪಂಗಡವೊಂದರ ಬಗ್ಗೆ ಪ್ರಕಾಶ್ ಲಘುವಾಗಿ ಮಾತನಾಡಿದರು ಎಂದು ಅಪಪ್ರಚಾರ ಮಾಡಿ ಅವರನ್ನು ಸೋಲಿಸಲಾಯಿತು.

ರಾಜಕೀಯ ಏಳುಬೀಳುಗಳ ನಡುವೆಯೇ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಹೂವಿನ ಹಡಗಲಿಯಲ್ಲಿ ‘ರಂಗಭಾರತಿ’ ಎಂಬ ಸಂಘಟನೆ ಹುಟ್ಟು ಹಾಕಿದರು. ಪ್ರತಿ ವರ್ಷ ಅಲ್ಲಿ ನಾಟಕೋತ್ಸವ ನಡೆಸುತ್ತಿದ್ದರು. ಈಗಲೂ ‘ರಂಗಭಾರತಿ’ ಸಕ್ರಿಯವಾಗಿದೆ. ಅವರ ಮಗ ಅದರ ಕಾರ್ಯಾಧ್ಯಕ್ಷ. ಅಲ್ಲಿ ಒಂದು ರಂಗಮಂದಿರ ನಿರ್ಮಾಣವಾಗುತ್ತಿದೆ. ರಾಜಕಾರಣಕ್ಕೆ ಬರುವ ಮೊದಲು ಅನೇಕ ನಾಟಕ, ಬಯಲಾಟ ಇತ್ಯಾದಿಗಳನ್ನು ಹಮ್ಮಿಕೊಂಡು ಜನರ ಸಾಂಸ್ಕೃತಿಕ ಅಗತ್ಯಗಳಿಗೆ ನೀರೆರೆದರು. ಹದಿಮೂರಕ್ಕೂ ಹೆಚ್ಚು ನಾಟಕಗಳನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ. ಕೆಲ ನಾಟಕಗಳಲ್ಲಿ ನಟಿಸಿದ್ದಾರೆ. ಮೂರ್ನಾಲ್ಕು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಅವರಿಗೆ ಇಷ್ಟವಾದ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉತ್ಪಲ ದತ್ತರ ಬಂಗಾಳಿ ನಾಟಕವನ್ನು ‘ಸೂರ್ಯ ಶಿಕಾರಿ’ ಹೆಸರಿನಲ್ಲಿ ಅನುವಾದಿಸಿದ್ದಾರೆ. ರಾಜಕಾರಣದ ನಡುವೆ ಬಿಡುವು ಮಾಡಿಕೊಂಡು ಸಾವಿರಾರು ಪುಸ್ತಕಗಳನ್ನು ಓದಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಅವರಷ್ಟು ಓದಿನ ಅಭಿರುಚಿ ಬೆಳೆಸಿಕೊಂಡ ರಾಜಕಾರಣಿಗಳು ಅತಿ ವಿರಳ. ಈ ಕಾರಣಕ್ಕಾಗಿ ಪ್ರಕಾಶ್ ನಮ್ಮ ಸಮಕಾಲೀನ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುತ್ತಾರೆ.

ಪ್ರಕಾಶ್ ಅವರನ್ನು ಮೆಚ್ಚಿಕೊಳ್ಳುತ್ತಲೇ ಅವರನ್ನು ಟೀಕಿಸುತ್ತಿದ್ದ ಲಂಕೇಶ್ ಒಮ್ಮೆ ತಮ್ಮ ಪತ್ರಿಕೆಯಲ್ಲಿ ‘ಸಾಹಿತಿಗಳ ನಡುವೆ ಇದ್ದಾಗ ರಾಜಕಾರಣದ ಬಗ್ಗೆ, ರಾಜಕಾರಣಿಗಳ ನಡುವೆ ಇದ್ದಾಗ ಸಾಹಿತ್ಯದ ಬಗ್ಗೆ’ ಪ್ರಕಾಶ್ ಮಾತನಾಡುತ್ತಾರೆ ಎಂದು ಬರೆದಿದ್ದರು. ಅದು ನಿಜ. ಪ್ರಕಾಶ್ ವಿಶಿಷ್ಟ ಅನ್ನಿಸುವುದು ಇಂತಹ ಕಾರಣಗಳಿಗಾಗಿ. ಅವರು ಸಾಹಿತಿಗಳ ನಡುವೆ ಸಾಹಿತ್ಯವನ್ನೂ, ರಾಜಕಾರಣಿಗಳ ನಡುವೆ ರಾಜಕಾರಣವನ್ನೂ ಮಾತನಾಡಿದ್ದಾರೆ. ಹೀಗಾಗಿ ಅನೇಕ ರಾಜಕಾರಣಿಗಳು ಪ್ರಕಾಶ್ ಅವರ ಓದಿನ ವಿಸ್ತಾರ, ಸಾಹಿತ್ಯಾಸಕ್ತಿ, ಸಾಂಸ್ಕೃತಿಕ ಕಾಳಜಿಗಳ ಕಾರಣದಿಂದಾಗಿ ಅವರನ್ನು ‘ದೊಡ್ಡವರು’ ಎಂದು ಸುಮ್ಮನೆ ಒಪ್ಪಿಕೊಂಡು ಬಿಡುತ್ತಿದ್ದರು.

ಪ್ರಕಾಶರದು ಸರಳ ವ್ಯಕ್ತಿತ್ವ. ನಾನು ಧಾರವಾಡದಲ್ಲಿ ವರದಿಗಾರನಾಗಿದ್ದಾಗ ಒಮ್ಮೆ ಅವರು ಮಂತ್ರಿಯಾಗಿ  ಕಾರ್ಯಕ್ರಮವೊಂದಕ್ಕೆ ಬಂದರು. ನನಗೆ ಫೋನ್ ಮಾಡಿ ‘ಬೇಗ ನಿಮ್ಮ ಕೆಲಸ ಮುಗಿಸಿ... ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರಕ್ಕೆ ಹೋಗೋಣ, ಅಲ್ಲಿ ಸಂಗೀತೋತ್ಸವ ನಡೆಯುತ್ತಿದೆ’ ಎಂದರು. ಸಂಗೀತೋತ್ಸವಕ್ಕೆ ಹೋದೆವು. ಪ್ರಸಿದ್ಧ ಗಾಯಕಿಯೊಬ್ಬರ ಹಾಡುಗಾರಿಕೆ ನಡೆಯುತ್ತಿತ್ತು. ಸಭಾ ಮರ್ಯಾದೆಗೆ ಭಂಗ ಬಾರದಂತೆ ಹಿಂದಿನ ಸಾಲಿನಲ್ಲಿ ಕುಳಿತು ಸಂಗೀತ ಕೇಳಿದೆವು. ಎರಡು ತಾಸುಗಳ ನಂತರ ಹೊರಬಂದು ಅಲ್ಲಿನ ಸಣ್ಣ ಹೋಟೆಲ್‌ನಲ್ಲಿ ಚಹಾ ಕುಡಿದೆವು. ಕ್ಯಾಬಿನೆಟ್ ಸಚಿವರೊಬ್ಬರು ಹೀಗೆ ಕಾಣಿಸಿಕೊಳ್ಳುವುದನ್ನು ನಾನು ಕಂಡಿಲ್ಲ.

ಪ್ರಕಾಶ್ ಅವರಲ್ಲಿ ಅಸಹಜ ಎನ್ನಿಸುವಂತಹ ಗುಣಗಳು ಇರಲಿಲ್ಲವೇ? ಇಲ್ಲ ಎಂದು ಹೇಳಲಾರೆ. ಒಂದು ಪ್ರಸಂಗ ನೆನಪಾಗುತ್ತದೆ. ಜನತಾದಳ ಇಬ್ಭಾಗವಾಗುವ ಸಂದರ್ಭ ಅದು. ಪ್ರಕಾಶ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ರಾಮಕೃಷ್ಣ ಹೆಗಡೆಯವರ ಜತೆ ಗುರುತಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಎರಡೂ ಬಣಗಳ ಶಾಸಕರ ಬಲ ಎಷ್ಟು ಎಂಬ ಅಂದಾಜು ನಡೆಯುತ್ತಿತ್ತು. ಆ ದಿನಗಳಲ್ಲಿ ಒಂದು ಸಂಜೆ ಪ್ರಕಾಶ್ ಬಳ್ಳಾರಿಗೆ ಬಂದರು. ವಿಧಾನ ಪರಿಷತ್ತಿನ ಸದಸ್ಯರೊಬ್ಬರ 60ನೇ ಹುಟ್ಟುಹಬ್ಬದ ಸಂದರ್ಭ. ನನ್ನ ಸಹ ಸಂಪಾದಕರು ಪ್ರಕಾಶರ ಜತೆಯಲ್ಲಿ ಮಾತನಾಡಿ ಹೆಗಡೆಯವರ ಬಣದಲ್ಲಿ ಎಷ್ಟು ಮಂದಿ ಶಾಸಕರು ಇದ್ದಾರೆ ಎಂಬ ಮಾಹಿತಿ ಪಡೆದು ಅದನ್ನು ಫೋನ್ ಮೂಲಕ ಬೆಂಗಳೂರು ಕಚೇರಿಗೆ ತಿಳಿಸಿ ನಂತರ ಸಭೆಗೆ ಹೋಗಿ ಎಂದರು.

 ಅವರನ್ನು ಬಳ್ಳಾರಿ ವಿಮಾನ ನಿಲ್ದಾಣದಲ್ಲಿಯೇ ಭೇಟಿಯಾದೆ. ನನ್ನ ಪ್ರಶ್ನೆ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಕೆಂಡದಂತಹ ಕೋಪ ಪ್ರದರ್ಶನ ಮಾಡುತ್ತ ಕಾರಣವಿಲ್ಲದೆ ರೇಗಿದರು. ಪತ್ರಕರ್ತರೊಬ್ಬರ ಹೆಸರನ್ನು ಪ್ರಸ್ತಾಪಿಸಿ   ಹಂಗಿಸಿದರು. ಅವರ ಮಾತುಗಳಲ್ಲಿ ಕೋಪ, ಅಸಹನೆ ತುಂಬಿದ್ದವು. ನನಗೆ ಅಚ್ಚರಿಯಾಯಿತು. ಸ್ವಲ್ಪ ಅವಮಾನವೂ ಆಯಿತು. ನಾನು ತಣ್ಣನೆಯ ಧ್ವನಿಯಲ್ಲಿ ‘ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಬೇಕು ಎಂದು ಒತ್ತಾಯಿಸುವುದಿಲ್ಲ.... ನೀವು ಪಕ್ಷದ ರಾಜ್ಯಾಧ್ಯಕ್ಷರು ಎನ್ನುವ ಕಾರಣಕ್ಕೆ ಕೇಳುತ್ತಿದ್ದೇನೆ. ಅದರಲ್ಲಿ ನನಗೆ  ವೈಯಕ್ತಿಕ ಆಸಕ್ತಿ ಇಲ್ಲ. ನೀವು ಉತ್ತರ ಹೇಳದಿದ್ದರೆ ಬೇಡ’ ಎನ್ನುತ್ತ ಅಲ್ಲಿಂದ ಹೊರಡಲು ಮುಂದಾದೆ. ತಕ್ಷಣ ಅವರು ಎಚ್ಚೆತ್ತುಕೊಂಡರು.... ‘ಸಾರಿ ನಿಮ್ಮನ್ನು ಕುರಿತು ಹೇಳಿದ್ದಲ್ಲ’.... ಎನ್ನುತ್ತ ವಿಷಯಾಂತರ ಮಾಡಿದರು. ನಂತರ ಗೊತ್ತಾಯಿತು, ಪತ್ರಕರ್ತರೊಬ್ಬರು ಸ್ಥಳೀಯ ಪತ್ರಿಕೆಯೊಂದರಲ್ಲಿ ಅವರನ್ನು ಕೆಟ್ಟದಾಗಿ ಟೀಕಿಸಿದ್ದರು. ಅದೇ ದಿನ ರಾತ್ರಿ ಹತ್ತರ ಸುಮಾರಿಗೆ ಪ್ರಕಾಶ್ ಫೋನ್ ಮಾಡಿ ಸಂಜೆ ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಅದೇನೇ ಇರಲಿ ಪ್ರಕಾಶ್ ನನಗೆ ಹಾಗೂ ನನ್ನಂತಹ ಅನೇಕರಿಗೆ ಇಷ್ಟವಾಗುವುದು ಅವರ ಇಂತಹ ವರ್ತನೆಗೆ. ಸುಮಾರು ಮೂವತ್ತು ವರ್ಷಗಳ ಅವಧಿಯಲ್ಲಿ ಅನೇಕ ಸಲ ಅವರನ್ನು ಭೇಟಿಯಾಗಿದ್ದೇನೆ. ಮೇಲಿನ ಪ್ರಸಂಗ ಹೊರತುಪಡಿಸಿ ಉಳಿದ ಎಲ್ಲಾ ಸಂದರ್ಭಗಳಲ್ಲೂ ಅವರು ನನ್ನೊಂದಿಗೆ ಅದೇ ಸಜ್ಜನಿಕೆಯ ನಡವಳಿಕೆಯನ್ನೇ ತೋರಿದ್ದಾರೆ. ಇದು ನನ್ನೊಬ್ಬನ ಅನುಭವ ಅಲ್ಲ. ನನ್ನಂತಹ ಅನೇಕರದು. ನನಗೆ, ನನ್ನಂಥವರಿಗೆ ಪ್ರಕಾಶ್ ಇಷ್ಟವಾಗುವುದು ಈ ಕಾರಣಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT