ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಶ್ರೇಯ ಪಡೆಯಲಿರುವ ದೋನಿ

Last Updated 26 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹೇಂದ್ರ ಸಿಂಗ್ ದೋನಿ ಅವರು ಭಾನುವಾರ ವಿಶಿಷ್ಟವಾದ ಸಾಧನೆಯ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ನಾಯಕತ್ವದ ಹೊಣೆಯೊಂದಿಗೆ ಪಂದ್ಯದಲ್ಲಿ ಆಡಿದರೆ ಅದೊಂದು ಈ ಕ್ರೀಡಾಂಗಣದಲ್ಲಿನ ದಾಖಲೆಯಾಗಲಿದೆ. ‘ಮಹಿ’ ನೇತೃತ್ವದಲ್ಲಿ ಭಾರತ ಪಂದ್ಯ ಗೆದ್ದರೆ ಅದೂ ಒಂದು ವಿಶೇಷ. ಆಗ ಕಪಿಲ್ ದೇವ್ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿ ನಿಲ್ಲುತ್ತಾರೆ ದೋನಿ.

ಕಪಿಲ್ ಹಾಗೂ ಸಚಿನ್ ಈ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಯಶಸ್ವಿ ನಾಯಕರೆನಿಸಿದ್ದಾರೆ. ಅವರ ಮುಂದಾಳತ್ವದಲ್ಲಿ ಆಡಿದ್ದ ಭಾರತ ತಂಡಕ್ಕೆ ತಲಾ ಎರಡು ಪಂದ್ಯಗಳಲ್ಲಿ ಯಶ ಸಿಕ್ಕಿತ್ತು. ಆದ್ದರಿಂದ ಇವರಿಬ್ಬರೂ ಈ ಅಂಗಳದ ಮಟ್ಟಿಗೆ ಭಾರತದ ಪರ ನೂರಕ್ಕೆ ನೂರರಷ್ಟು ಯಶಸ್ವಿಯಾದ ನಾಯಕರು. ಆದರೆ ದೋನಿ ನೇತೃತ್ವದಲ್ಲಿ ಒಂದರಲ್ಲಿ ಜಯ ಸಿಕ್ಕಿತ್ತು. ಒಂದು ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮಿರಲಿಲ್ಲ. ಇಂಗ್ಲೆಂಡ್ ಎದುರು ಜಯ ಸಿಕ್ಕರೆ ಗೆದ್ದ ಪಂದ್ಯಗಳ ಲೆಕ್ಕಾಚಾರದಲ್ಲಿ ‘ಕಪಿಲ್ ಪಾಜಿ’ ಹಾಗೂ ‘ಮಾಸ್ಟರ್ ಬ್ಲಾಸ್ಟರ್’ಗೆ ‘ಮಹಿ’ ಅವರು ಸಮನಾಗಿ ನಿಲ್ಲುತ್ತಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡದ ನಾಯಕತ್ವದೊಂದಿಗೆ ಹೆಚ್ಚು ಏಕದಿನ ಪಂದ್ಯ ಆಡಿದ ಶ್ರೇಯವನ್ನು ಭಾನುವಾರ ದೋನಿ ಅವರು ಪಡೆಯಲಿದ್ದಾರೆ. ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಅಜಯ್ ಜಡೇಜಾ, ಕಪಿಲ್ ಹಾಗೂ ಸಚಿನ್ ಅವರು ಇದೇ ಅಂಗಳದಲ್ಲಿ ನಾಯಕರಾಗಿ ತಲಾ ಎರಡು ಬಾರಿ ಆಡಿದ್ದಾರೆ. ದೋನಿ ಕೂಡ ಅಷ್ಟೇ ಪಂದ್ಯ ಆಡಿದ್ದು, ಇಂಗ್ಲೆಂಡ್ ಎದುರು ವಿಶ್ವಕಪ್ ಲೀಗ್ ಪಂದ್ಯವು ಅವರಿಗೆ ಈ ಎಲ್ಲ ಆಟಗಾರರನ್ನು ಹಿಂದೆ ಹಾಕುವ ಅವಕಾಶ ನೀಡಿದೆ.

ಹನ್ನೆರಡನೇ ಗೆಲುವು ಸಾಧ್ಯವೆ?: ಭಾರತ ತಂಡವು ಭಾನುವಾರ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೆರಡನೇ ಗೆಲುವಿನ ಸಂಭ್ರಮ ಪಡೆಯಲು ಉದ್ದೇಶಿಸಿದೆ. ಭಾರತಕ್ಕೆ ಈ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯಗಳಲ್ಲಿ ಕಹಿ ಅನುಭವವಾಗಿದ್ದು ಕಡಿಮೆ. ಆಡಿದ ಹದಿನಾರು ಪಂದ್ಯಗಳಲ್ಲಿ ನಿರಾಸೆ ಹೊಂದಿದ್ದು ಕೇವಲ ನಾಲ್ಕರಲ್ಲಿ. ಹನ್ನೊಂದು ಪಂದ್ಯಗಳಲ್ಲಿ ವಿಜಯ ಸಾಧ್ಯವಾಗಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮಿರಲಿಲ್ಲ.

ಗಮನ ಸೆಳೆಯುವ ಅಂಶವೆಂದರೆ ಇಲ್ಲಿ ಕೊನೆಯ ಬಾರಿ ಆಡಿದ ಎರಡು ಪಂದ್ಯಗಳಲ್ಲಿ ಭಾರತದವರು ಎದುರಾಳಿಗಳಿಗೆ ಮಣಿದಿಲ್ಲ. ದೋನಿ ನಾಯಕತ್ವದಲ್ಲಿ ಇಂಗ್ಲೆಂಡ್ (2008) ತಂಡವನ್ನು ಹಾಗೂ ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ನ್ಯೂಜಿಲೆಂಡ್ (2010) ಪಡೆಯನ್ನು ಕ್ರಮವಾಗಿ 19 ರನ್ ಹಾಗೂ ಐದು ವಿಕೆಟ್‌ಗಳ ಅಂತರದಿಂದ ಸೋಲಿಸಿದೆ.

ರನ್‌ಗಳ ಹೊಳೆ: ಉದ್ಯಾನನಗರಿಯಲ್ಲಿನ ಅಂಗಳವೆಂದ ತಕ್ಷಣ ಇನ್ನೂರಕ್ಕಿಂತ ಕಡಿಮೆ ಮೊತ್ತಕ್ಕೆ ತಂಡಗಳು ಕುಸಿಯುವುದೇ ಇಲ್ಲವೆನ್ನುವ ಅಭಿಪ್ರಾಯ ಬಲವಾಗಿದೆ. ಏಕೆಂದರೆ ಇಪ್ಪತ್ತೇಳು ಬಾರಿ ವಿವಿಧ ತಂಡಗಳು ಇನ್ನೂರು ರನ್‌ಗಳ ಗಡಿಯನ್ನು ದಾಟಿವೆ. ನೂರೈವತ್ತರ ಒಳಗೆ ಯಾವುದೇ ತಂಡ ಕುಸಿದಿಲ್ಲ ಎನ್ನುವುದೂ ಗಮನ ಸೆಳೆಯುವ ಅಂಶ. ಮುನ್ನೂರರ ಆಸುಪಾಸಿನಲ್ಲಿ ತಂಡಗಳು ನಿಂತ ಅಂಕಿ-ಸಂಖ್ಯೆಯೂ ಸಾಕಷ್ಟು ಎದ್ದು ಕಾಣಿಸುತ್ತವೆ. ಆದರೆ ಮುನ್ನೂರರ ಗಡಿಯನ್ನು ದಾಟಿ ತಂಡಗಳ ರನ್ ಮೊತ್ತ ಬೆಳೆದಿದ್ದು ಆರು ಬಾರಿ ಮಾತ್ರ. ಭಾರತದವರು ಎರಡು ಸಾರಿ ಇಂಥ ಸಾಧನೆ ಮಾಡಿದ್ದಾರೆ. 2010ರ ಡಿಸೆಂಬರ್ 7ರಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಐದು ವಿಕೆಟ್ ನಷ್ಟಕ್ಕೆ 321 ರನ್ ಕಲೆಹಾಕಿತ್ತು. ಅದಕ್ಕೂ ಮುನ್ನ 2001ರ ಮಾರ್ಚ್ 25ರಂದು ಆಸ್ಟ್ರೇಲಿಯಾ ಎದುರು 315 ರನ್‌ಗೆ ಆಲ್‌ಔಟ್ ಆಗಿತ್ತು. ಈ ಎರಡೂ ಪಂದ್ಯಗಳಲ್ಲಿ ಆತಿಥೇಯರೇ ಗೆಲುವಿನ ಶ್ರೇಯ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT