ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನ ಅಗತ್ಯ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಒತ್ತಾಯಿಸಿ ಜನರು ದೀರ್ಘಕಾಲ ಪ್ರತಿಭಟನೆ, ಧರಣಿ, ಬಂದ್‌ನಂತಹ ಹೋರಾಟಗಳನ್ನು ಹಮ್ಮಿಕೊಳ್ಳುವುದು ಯಾವುದೇ ಸರ್ಕಾರಕ್ಕೆ ಗೌರವ ತರುವ ವಿಷಯ ಅಲ್ಲ.

ಸಂವಿಧಾನದ 371ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಆ ಭಾಗದ ಜನಪರ ಸಂಘಟನೆಗಳು ಕಳೆದ ಎರಡು ದಶಕಗಳಿಂದ ಚಳವಳಿ ಮಾರ್ಗ ಹಿಡಿದಿವೆ. ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ರಾಜ್ಯ ವಿಧಾನ ಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ರಾಜ್ಯ ಸರ್ಕಾರ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗ ದೆಹಲಿಗೆ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೂ ಕೇಂದ್ರ ಈ ಬೇಡಿಕೆಯನ್ನು ಪರಿಗಣಿಸಿಲ್ಲ. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಉಪೇಕ್ಷಿಸಿದರೆ ಜನರು ಹತಾಶರಾಗಿ ಹಿಂಸಾ ಮಾರ್ಗ ಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ತೆಲಂಗಾಣ ಚಳವಳಿಯೇ ಅದಕ್ಕೆ ಸಾಕ್ಷಿ. ಚಳವಳಿಗೆ ಮಣಿದ ಸರ್ಕಾರ ಸಂವಿಧಾನದ 371ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ತೆಲಂಗಾಣ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿತು.
 
ಆದರೂ ಆ ಪ್ರದೇಶದ ಅಭಿವೃದ್ಧಿ ಕಾಣಲಿಲ್ಲ. ಹತಾಶರಾದ ಜನರು ಪ್ರತ್ಯೇಕ ರಾಜ್ಯಕ್ಕೆ ಪಟ್ಟುಹಿಡಿದು ಹಿಂಸಾತ್ಮಕ ಚಳವಳಿ ನಡೆಸುತ್ತಿದ್ದಾರೆ. ಈ ಬೆಳವಣಿಗೆಯ ನಂತರವೂ ಕೇಂದ್ರ ಸರ್ಕಾರ ಪಾಠ ಕಲಿತಿಲ್ಲ. ಜನರ ನ್ಯಾಯ ಸಮ್ಮತ ಬೇಡಿಕೆಗಳನ್ನು ಪರಿಗಣಿಸದೇ ಇರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾಡುವ ಅವಮಾನ.

ಹೈದರಾಬಾದ್ ಕರ್ನಾಟಕ ಪ್ರದೇಶದ ಜನರ ಬೇಡಿಕೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ದೀರ್ಘಕಾಲ ಜನರು ಮನವಿ ಪತ್ರ ಸಲ್ಲಿಸುತ್ತಲೇ ಇರಬೇಕು ಎಂದು ಸರ್ಕಾರ ಬಯಸಬಾರದು. 

ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ. ಅದಕ್ಕೆ ಚಾರಿತ್ರಿಕ ಕಾರಣಗಳಿವೆ. ಹೈದರಾಬಾದ್ ಕರ್ನಾಟಕ ಮಾತ್ರವೇ ಅಲ್ಲ, ದೇಶದ ಹಿಂದುಳಿದ ಪ್ರದೇಶಗಳೆಲ್ಲವೂ ಅಭಿವೃದ್ಧಿಯಾಗಬೇಕು.

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿದ ಯೋಜನೆಗಳಿಂದ ಹೆಚ್ಚಿನದೇನೂ ಆಗಿಲ್ಲ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ರಚಿಸಿದ್ದ ಡಾ. ನಂಜುಂಡಪ್ಪ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವೂ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ.

ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ ಪಾಟೀಲರು ವಿದರ್ಭ ಮಾದರಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿಟ್ಟಿದ್ದರು.
 
ಯುಪಿಎ  ಮತ್ತು ಹಿಂದಿನ ಎನ್‌ಡಿಎ ಸರ್ಕಾರಗಳು ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂಬುದನ್ನು ತಾತ್ವಿಕವಾಗಿ ಒಪ್ಪಿಕೊಂಡಿವೆ. ಚುನಾವಣೆಯ ಸಂದರ್ಭಗಳಲ್ಲಿ ಅಭಿವೃದ್ಧಿಯ ಭರವಸೆ ನೀಡುತ್ತ ಆನಂತರ ನಕಾರಾತ್ಮಕ ಧೋರಣೆ ಅನುಸರಿಸುತ್ತಿರುವುದು  ಖಂಡನೀಯ.

ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸುವ ಪ್ರಯತ್ನಗಳು ರಾಜಕೀಯ ಪಕ್ಷಗಳ ಚೌಕಟ್ಟಿನಲ್ಲಿ ನಡೆಯಬಾರದು. ರಾಜಕೀಯವನ್ನು ಬದಿಗಿಟ್ಟು ರಾಜ್ಯ ಸರ್ಕಾರ ಮತ್ತು ಎಲ್ಲ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT