ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನ: ಶೀಘ್ರವೇ ಸಂಪುಟದ ಮುಂದೆ - ಮೊಯಿಲಿ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಸದ್ಯದಲ್ಲೇ ಈ ವಿಷಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ ಎಂದು `ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪಮೊಯಿಲಿ ಹೇಳಿದರು.

ಸಂವಿಧಾನದ 371ನೇ ಕಲಮಿಗೆ ಅಗತ್ಯ ತಿದ್ದುಪಡಿ ಮಾಡುವ ಮೂಲಕ ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಒಂದೂವರೆ ವರ್ಷದಿಂದ ಅಗತ್ಯ ಸಿದ್ಧತೆ ನಡೆಸಿದೆ ಎಂದು ವೀರಪ್ಪ ಮೊಯಿಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಸಚಿವರು ಅನೌಪಚಾರಿಕ ವಾಗಿ ಮಾತನಾಡುತ್ತಿದ್ದರು.

ಹಿಂದುಳಿದಿರುವ ಹೈದರಾಬಾದ್- ಕರ್ನಾಟಕ ಭಾಗದ ಅಭಿವೃದ್ಧಿ ಜತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನದ 371ಕಲಮಿಗೆ ಅಗತ್ಯ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ. ಉದ್ದೇಶಿತ ತಿದ್ದುಪಡಿ ಮಸೂದೆಯನ್ನು ಸಂಪುಟ ಟಿಪ್ಪಣಿ ಜತೆ ವಿವಿಧ ಸಚಿವಾಲಯಗಳಿಗೆ ಕಳುಹಿಸಲಾಗಿದೆ. ಸಚಿವಾಲಯಗಳ ಅಭಿಪ್ರಾಯದ ಬಳಿಕ ಈ ವಿಷಯ ಸಂಪುಟದ ಮುಂದೆ ಚರ್ಚೆಗೆ ಬರಲಿದೆ ಎಂದು ಮೊಯಿಲಿ ವಿವರಿಸಿದರು.

`ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧದಲ್ಲಿ ಗೃಹ ಸಚಿವ ಪಿ.ಚಿದಂಬರಂ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಕ್ಯಾಬಿನೆಟ್ ಸಚಿವರ ಜತೆ ಚರ್ಚೆ ಮಾಡಿದ್ದಾರೆ. ನಾವು ನಮ್ಮ ಸಲಹೆಗಳನ್ನು ಕೊಟ್ಟಿದ್ದೇವೆ. ಈ ಸಲಹೆಗಳನ್ನು ಆಧಾರವಾಗಿಟ್ಟುಕೊಂಡು ತಿದ್ದುಪಡಿ ಮಸೂದೆ ರೂಪಿಸಲಾಗಿದೆ. ಈ ಪ್ರಕ್ರಿಯೆ ಹೆಚ್ಚು ದಿನ ಹಿಡಿಯುವುದಿಲ್ಲವೆಂಬ ವಿಶ್ವಾಸ ವ್ಯಕ್ತಪಡಿಸಿದರು.

`ಹೈದರಾಬಾದ್-ಕರ್ನಾಟಕ ಭಾಗದ ಜನರ ನಿರೀಕ್ಷೆ ನ್ಯಾಯಸಮ್ಮತವಾಗಿದೆ. ಒಂದೆಡೆ ತೆಲಂಗಾಣ, ಮತ್ತೊಂದು ಕಡೆ ವಿದರ್ಭಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಹೈದರಾಬಾದ್- ಕರ್ನಾಟಕ ಭಾಗ ಹಿಂದುಳಿದಿರು ವುದರಿಂದ ವಿಶೇಷ ಸ್ವಾಯತ್ತತೆ ನೀಡುವುದರಲ್ಲಿ ತಪ್ಪಿಲ್ಲ. ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವು ದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

`ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್‌ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಅಜಿತ್‌ಸಿಂಗ್ ಕೂಡಾ ಪ್ರಸ್ತಾವನೆಯನ್ನು ಒಪ್ಪಿದ್ದಾರೆ. ಕೆಂಪೇಗೌಡ ಹುಟ್ಟಿದ ಊರು ದೇವನಹಳ್ಳಿ. ಈ ಕಾರಣಕ್ಕೆ ಅವರ ಹೆಸರಿಡಬೇಕು ಎಂಬ ಒತ್ತಾಯ ಬಂದಿದೆ. ಈ ವಿಷಯವೂ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ~ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವರು ನುಡಿದರು.

`ಬರಗಾಲ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ವನ್ನು ಒತ್ತಾಯ ಮಾಡಲು ರಾಜ್ಯದ ಸರ್ವ ಪಕ್ಷಗಳ ನಿಯೋಗ ದೆಹಲಿಗೆ ಧಾವಿಸುತ್ತಿದೆ. ಈ ನಿಯೋಗದಲ್ಲಿ ಭಾಗಿಯಾಗುವಂತೆ ನಮಗೂ ಮನವಿ ಮಾಡಲಾಗಿದೆ. ನಾವು ನಿಯೋಗದಲ್ಲಿ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಅಗತ್ಯ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲಿದ್ದೇವೆ~ ಎಂದು ಮೊಯಿಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈಗಾಗಲೇ ರಾಜ್ಯ ಕಾಂಗ್ರೆಸ್ ಮುಖಂಡರ ನಿಯೋಗ ದೆಹಲಿಗೆ ಬಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾರ ನಾಲ್ಕು ತಿಂಗಳ ಹಿಂದೆ 123 ತಾಲೂಕುಗಳಲ್ಲಿ ಬರಗಾಲವಿದೆ ಎಂದು ಘೋಷಿಸಿದೆ. ಕೇಂದ್ರ ಸರ್ಕಾರವೂ ಪರಿಣಿತರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ವರದಿ ತರಿಸಿಕೊಂಡಿದೆ. ರಾಜ್ಯದಿಂದ ಅಧಿಕೃತ ಪ್ರಸ್ತಾವನೆ ಬಂದ ಬಳಿಕ ಹಣ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

ಬರಗಾಲ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಕೇಂದ್ರ ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಜನರ ದುಡ್ಡನ್ನು ದಾನ ಕೊಡಲು ಸಾಧ್ಯವಿಲ್ಲ. ಹಣ ಬಿಡುಗಡೆಗೆ ರೀತಿ- ನೀತಿಗಳಿರುತ್ತವೆ. ಅದನ್ನು ಪಾಲಿಸ ಬೇಕಾಗುತ್ತದೆ. ಬರಗಾಲ ತಾಲೂಕು ಗಳನ್ನು ಘೋಷಣೆ ಮಾಡಿ 4 ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸದೆ ಇದ್ದರೆ ಕೇಂದ್ರ ಏನು ಮಾಡಲು ಸಾಧ್ಯ ಎಂದು ಮೊಯಿಲಿ ಕೇಳಿದರು.

 `ಕರ್ನಾಟಕ ಮತ್ತು ಬಂಗಾಳದವರು ಇದುವರೆಗೆ ರಾಷ್ಟ್ರಪತಿ ಆಗಿಲ್ಲ~ ಎಂಬ ಶರದ್ ಪವಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕಾರ್ಪೊರೇಟ್ ವ್ಯವಹಾರ ಗಳ ಸಚಿವರು. ಇದು ಅವರ ಅಭಿಪ್ರಾಯ. ಅಭಿಪ್ರಾಯಗಳೇ ನಿರ್ಧಾರ ವಲ್ಲ. ಎಲ್ಲ ಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.

ರಾಷ್ಟ್ರಪತಿ ಅಭ್ಯರ್ಥಿ ಗಳ ಹೆಸರನ್ನು ತೇಲಿ ಬಿಡುತ್ತಿವೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕಾಲದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT