ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ

Last Updated 23 ಆಗಸ್ಟ್ 2012, 5:10 IST
ಅಕ್ಷರ ಗಾತ್ರ

ವಿಜಾಪುರ: `ಹೈದ್ರಾಬಾದ್ ಕರ್ನಾಟಕ ಪ್ರದೇಶದಂತೆ ಹಿಂದುಳಿದ ವಿಜಾಪುರ ಜಿಲ್ಲೆಗೆ ಸಂವಿಧಾನದ 371 ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಹೋರಾಟಕ್ಕೆ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಬೆಂಬಲಿಸುತ್ತಿಲ್ಲ. ಅವರಿಗೆ ಈ ಬಗ್ಗೆ ಕಾಳಜಿ ಇದ್ದಂತಿಲ್ಲ~ ಎಂದು ಮುದ್ದೇಬಿಹಾಳದ ಮಾಜಿ ಶಾಸಕ ಎಂ.ಎಂ. ಸಜ್ಜನ ವಿಷಾದಿಸಿದರು.

ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಪೂರ್ವದಲ್ಲಿ ಹಿಂದುಳಿದ ವಿಜಾಪುರ ಜಿಲ್ಲೆಯನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿಸಲು ಒತ್ತಾಯಿಸಿ ಬುಧವಾರ ಇಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

`ನಮ್ಮ ಈ ಅಚಲವಾದ ಬೇಡಿಕೆಗೆ ಸರ್ಕಾರ ಉತ್ತರ ನೀಡಬೇಕು. ಈ ವಿಷಯದಲ್ಲಿ ಮಾಜಿ ಸಚಿವ ವೈಜನಾಥ ಪಾಟೀಲ ಅವರ ಹೇಳಿಕೆ ಖಂಡನೀಯ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಈ ವಿಷಯ ಕುರಿತು ಮುತುವರ್ಜಿ ವಹಿಸಿರುವುದು ಸ್ವಾಗತಾರ್ಹ. ಸ್ವ-ಹಿತಾಸಕ್ತಿ ಬದಿಗೊತ್ತಿ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು~ ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಮಾತನಾಡಿ, ಹೈದ್ರಾಬಾದ್-ಕರ್ನಾಟಕದಲ್ಲಿ ಹಿಂದುಳಿದ ವಿಜಾಪುರ ಜಿಲ್ಲೆಯನ್ನು ಸೇರಿಸಿ ಈ ಜಿಲ್ಲೆಯನ್ನೂ ಅಭಿವೃದ್ಧಿ ಪಡಿಸಬೇಕು. ಈ ಕುರಿತು ಅಪಸ್ವರ ಎತ್ತಿದ ಮಾಜಿ ಸಚಿವ ವೈಜನಾಥ ಪಾಟೀಲ ಹಾಗೂ ರಾಜುಗೌಡರು ಕ್ಷಮೆ ಕೇಳಬೇಕು. ಈ ಸಂಬಂಧ ಪಕ್ಷಾತೀತ ಹೋರಾಟ ನಡೆಯಲಿ ಎಂದರು.

`ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಗೂ ಜೆಡಿಎಸ್ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಪಕ್ಷಾತೀತವಾದ ಈ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಬೇಕು. ಹಂತ ಹಂತವಾಗಿ ಈ ಹೋರಾಟ ತೀವ್ರ ಸ್ವರೂಪ ತಾಳಲಿ. ಇದಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ~ ಎಂದು ಹೇಳಿದರು.

ವಕೀಲ ಶ್ರೀಶೈಲ ಸಜ್ಜನ ಮಾತನಾಡಿ, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು ಎಂದರು. ನಿವೃತ್ತ ಶಿಕ್ಷಕ ಶಿರಕನಳ್ಳಿ ಮಾತನಾಡಿದರು. ಯಂಕಂಚಿಯ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಎಂ.ಬಿ. ನಾವದಗಿ, ಸಿದ್ದು ಕಾಮತ, ಮಲ್ಲು ಪೂಜಾರಿ, ಸಂತೋಷ ಬಗಲಿ, ದಾನಪ್ಪ ನಾಗಠಾಣ, ಜಿ.ಎಸ್. ಸಜ್ಜನ, ಎಂ.ಬಿ. ಸಜ್ಜನ, ಎಲ್.ಬಿ. ವಿರಕ್ತಮಠ, ಬಿ.ಎನ್. ಪಾಟೀಲ ಇತರರು ಉಪಸ್ಥಿತರಿದ್ದರು.


ಬ್ಯಾಂಕ್ ನೌಕರರ ಮುಷ್ಕರ
ವಿಜಾಪುರ:
ಅಖಿಲ ಭಾರತ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಬುಧವಾರ ಮುಷ್ಕರ ನಡೆಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆಯ ಎದುರು ಪ್ರತಿಭಟನೆ ನಡೆಸಿದರು. ಬ್ಯಾಂಕಿಂಗ್ ವಲಯದ ಹೊಸ ಪರಿಷ್ಕರಣೆ ನಿಲ್ಲಿಸಬೇಕು. ಉದ್ಯೋಗದಲ್ಲಿ ಹೊರ ಗುತ್ತಿಗೆ ಬೇಡ. ಗ್ರಾಮೀಣ ಶಾಖೆಗಳನ್ನು ಮುಚ್ಚುವುದು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಜಯ ಹೊಸೂರ, ಜಿ.ಎಸ್. ಕುಲಕರ್ಣಿ, ಡಿ.ಎಚ್. ಬಂಡಿವಡ್ಡರ, ಎಸ್.ಟಿ. ಆಸಂಗಿ, ಎ.ಕೆ. ಉಪಾಧ್ಯಾಯ, ಅಜಯ್ ಚವ್ಹಾಣ, ಓಂಕಾರ ಇತರರು ಪಾಲ್ಗೊಂಡಿದ್ದರು.

ಬಂಜಾರಾ ಸಮಾಜದಿಂದ ಪ್ರತಿಭಟನೆ ಇಂದು
ವಿಜಾಪುರ:
ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಬಂಜಾರಾ ಸಮಾಜದವರು ಇದೇ 23ರಂದು ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಇಲ್ಲಿಯ ಗೋದಾವರಿ ಹೋಟೆಲ್‌ದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಜಿಲ್ಲಾ ಬಂಜಾರಾ ಹೋರಾಟ ಸಮಿತಿಯಿಂದ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ರಾಜಪಾಲ ಚವ್ಹಾಣ ತಿಳಿಸಿದ್ದಾರೆ.

ಜಿಲ್ಲೆಯ 400ಕ್ಕೂ ಹೆಚ್ಚು ಲಂಬಾಣಿ ತಾಂಡಾಗಳಿಂದ ಸಮಾಜದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಎಲ್ಲ ಬಾಂಧವರು, ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕ, ಬಂಜಾರಾ ಸಮಾಜದ ಮುಖಂಡ ಮನೋಹರ ಐನಾಪುರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT