ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಮಿಸದ ವರುಣ, ಎಲ್ಲೆಡೆ ಮಳೆ: ಕೋಡಿ ಹರಿದ ಕೆರೆಗಳು

Last Updated 14 ಸೆಪ್ಟೆಂಬರ್ 2013, 6:25 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಳೆ ಕೆಲವೆಡೆ ಬಿಡುವು ನೀಡಿದೆ. ಆದರೆ ಈ ಹಿಂದೆ ಸುರಿದಿರುವ ಮಳೆಗೆ ನೆನದಿರುವ ಮನೆಗಳು ಈಗ ಕುಸಿಯಲು ಆರಂಭಿಸಿವೆ.

ತಾಲ್ಲೂಕಿನ ಮುದಿಗೆರೆಯಲ್ಲಿ ಮನೆಕುಸಿತದಿಂದ ಮಹಿಳೆ­ಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ನರಸಮ್ಮ ಎಂದು ಗುರುತಿಸಲಾಗಿದೆ. ತುಮಕೂರಿನ ವಿವಿಧೆಡೆ 15ಕ್ಕೂ ಹೆಚ್ಚು ಮನೆ­ಗಳು ಕುಸಿದಿವೆ. ಊರ್ಡಿಗೆರೆ, ಕಸಬಾ ಹೋಬಳಿಗಳಲ್ಲಿ ಕೆಲ ಮನೆಗಳು ಕುಸಿದಿವೆ. ಬೆಳ್ಳಾವಿ ಹೋಬಳಿಯಲ್ಲಿ 2.95 ಸೆಂ.ಮೀ ಮಳೆಯಾಗಿದೆ.

ತುಮಕೂರು ನಗರ 4.9, ಹೆಬ್ಬೂರು 6,8, ಬೆಳ್ಳಾವಿ 2.9 ಸೆಂ.ಮೀ,  ನೆಲಹಾಳ್‌ 9.7 ಸೆಂ.ಮೀ,   ಕಸಬಾ 4.6 ಸೆಂ.ಮೀ ಮಳೆಯಾಗಿದೆ.

ಪಾವಗಡ ಹಾಗೂ ಶಿರಾದಲ್ಲಿ ಗುರುವಾರ ರಾತ್ರಿಯೂ ಮಳೆ ಸುರಿದಿದೆ. ಶಿರಾ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಇನ್ನು ನಿಖರವಾದ ಮಾಹಿತಿ ಸಿಕ್ಕಿಲ್ಲ. ಶುಕ್ರವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತಾದ್ದರೂ ಸಂಜೆ ಹೊತ್ತಿಗೆ ಮತ್ತೆ ಜಿಟಿಜಿಟಿ ಹನಿಯುತ್ತಿತ್ತು. ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ–4.2, ಚಿಕ್ಕನಹಳ್ಳಿ ಐಎಂಬಿ–3.7, ಕಳ್ಳಂಬೆಳ್ಳ–4.1 ಬುಕ್ಕಾಪಟ್ಟಣ– 5.9, ಬರಗೂರು–2.3, ಹುಣಸೇಹಳ್ಳಿ 5.6,  ಕಸಬಾ ಹೋಬಳಿಯಲ್ಲಿ 4.9, ತಾವರೆಕೆರೆ 5.9ರಷ್ಟು ಮಳೆಯಾಗಿದೆ.

ಶಿರಾ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಲಕ್ಷೀ ಸಾಗರ ಕೆರೆ ಒಡೆದಿದ್ದು ಸರಿಪಡಿಸಲಾಗಿದೆ. ಉಳಿದಂತೆ ಸೂಲಿಕುಂಟೆ ಮತ್ತು ಚಿಕ್ಕಹುಲಿಕುಂಟೆ ಕೆರೆಗಳಲ್ಲಿ ಮೂಡಿದ್ದ ಬಿರುಕುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸರಿಪಡಿಸಲಾಗಿದೆ ಎಂದು ತಹಶೀಲ್ದಾರ್‌ ಚಂದ್ರಶೇಖರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಣಿಗಲ್‌ನಲ್ಲಿ ಇಲ್ಲಿತನಕ 12ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ತಾಲ್ಲೂಕು ಆಡಳಿತಕ್ಕೆ ಮಳೆ ಬಗ್ಗೆ ಮಾಹಿತಿ ಇಲ್ಲ.  ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ 10 ಸೆಂ.ಮೀ ಅತ್ಯಧಿಕ ಮಳೆಯಾಗಿದೆ. ಗುಬ್ಬಿಯಲ್ಲಿ 1.53 ಮಿ ಮೀ ಮಳೆಯಾಗಿದ್ದು,  ಉಳಿದಂತೆ ಸಿಎಸ್‌ಪುರ–6.4, ಹಾಗಲವಾಡಿ– 6, ಅಂಗಸಂದ್ರ– 5.7, ನಿಟ್ಟೂರು 2.3, ಕಡಬಾ 2.6. ಕಸಬಾ 3.1 ಮೀಟರ್‌ ಮಳೆಯಾಗಿದೆ.

ಚಿಕ್ಕನಾಯಕನಹಳ್ಳಿಯಲ್ಲಿ ಹದವಾದ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಹುಳಿಯಾರಿನಲ್ಲಿ ತುಂತುರು ಮಳೆ, ಗುಬ್ಬಿಯಲ್ಲಿ ಉತ್ತಮ ಮಳೆ, ತುರುವೇಕೆರೆಯಲ್ಲಿ 3.3 ಸೆಂ.ಮೀ ಮಳೆಯಾಗಿದೆ.

ಬಿಡುವು ಕೊಡದ ಮಳೆರಾಯ
ಪಾವಗಡ: ತಾಲ್ಲೂಕಿನಲ್ಲಿ ಗುರುವಾರ ಮಳೆರಾಯ ಬಿಡುವು ನೀಡಿದ್ದನಾದರೂ ಶುಕ್ರವಾರ ಮಧ್ಯಾಹ್ನದಿಂದ ಮತ್ತೆ ಗುಡುಗು ಮಿಂಚಿನೊಂದಿಗೆ ತನ್ನ ಆರ್ಭಟ ಮುಂದುವರೆಸಿದ್ದಾನೆ.

ಹಲ ವರ್ಷಗಳಿಂದ ತಾಲ್ಲೂಕಿನಾದ್ಯಂತ ಅನಾವೃಷ್ಟಿಯಿಂದ ಬೆಳೆ­ಯಾಗದೆ ನಷ್ಟ ಅನುಭವಿಸಿದ್ದ ರೈತರು. ಇದೀಗ ಅತಿವೃಷ್ಟಿ­ಯಿಂದಾಗಿ ನಷ್ಟ ಅನುಭವಿಸುವಂತಾಗಿದೆ. ಮನೆಗಳು ಧರೆಗುರುಳಿ. ಸಾಕಷ್ಟು ಕುಟುಂಬಗಳು ಸೂರಿಲ್ಲದೆ ಬೀದಿ ಪಾಲಾಗಿವೆ. ಶೇಂಗಾ, ಕಲ್ಲಂ­ಗಡಿ, ಬತ್ತ, ರಾಗಿ, ಟೊಮೊಟೋ, ಮೆಣಸಿನ ಕಾಯಿ ಬೆಳೆಗಳನ್ನೊಳಗೊಂಡಂತೆ ಹಲ ದಾಳಿಂಬೆ, ಅಡಿಕೆ ತೋಟಗಳು ಜಲಾವೃತಗೊಂಡಿವೆ.

ತಾಲ್ಲೂಕಿನಾದ್ಯಂತ 133 ಎಕರೆಯಲ್ಲಿನ  ಬೆಳೆಗೆ ಹಾನಿ­ಯಾಗಿದೆ. ಪಳವಳ್ಳಿ ಅಗ್ರಹಾರ ಮತ್ತು ಜಾಜೂರಾಯನಹಳ್ಳಿ ಕೆರೆಗಳಿಗೆ ಮಂಗೆ ಬಿದ್ದು ನೀರು ಪೋಲಾಗಿದೆ. ಕಡಮಲಕುಂಟೆ ಬಳಿ ಸಿದ್ದಪ್ಪನಕೆರೆ ಕಟ್ಟೆ ಒಡೆದು ರೂ 1.5 ಲಕ್ಷ ನಷ್ಟವಾಗಿದೆ. ಮಳೆಯಿಂದ ಸೇತುವೆಗಳು ಮುರಿದು ಸಂಚಾರ ಅಸ್ತವ್ಯಸ್ತ­ಗೊಂಡಿದೆ. ಬುಡಸನಹಳ್ಳಿಯಿಂದ ಹೊಸಹಳ್ಳಿಗೆ ಹೋಗುವ ರಸ್ತೆ ಕೊಚ್ಚಿ ಹೋಗಿದ್ದು, ಅಂದಾಜು ರೂ 2 ಲಕ್ಷ ನಷ್ಟ ಸಂಭವಿಸಿದೆ.

ಗುಜ್ಜನಡು ಪಂಚಾಯಿತಿಯ ಟಿ.ಎನ್.ಬೆಟ್ಟದಕುಂಟೆ,  ರಂಗ­ಸಮುದ್ರದ ಸಾಕಮ್ಮನ ಕುಂಟೆ ತುಂಬಿದೆ. ಕೋಟಗುಡ್ಡದ ರಂಗ­ಧಾಮನ­ಕೆರೆ, ಶೈಲಾಪುರ ಗುಂಡ್ಲಹಳ್ಳಿ ಕೆರೆ, ದಂಡಾಪಾಳ್ಯ ಕೆರೆಗಳಿಗೆ ಮೂರು ತಿಂಗಳಿಗಾಗುವಷ್ಟು ನೀರು ಬಂದಿದೆ. ವೈ.ಎನ್.ಹೊಸಕೋಟೆ ಉದ್ದಾರಪ್ಪನ ಕುಂಟೆ, ಮೇಗಳ ಪಾಳ್ಯದ ಕೆರೆ, ಜಾಲೋಡು, ತಿಪ್ಪಯ್ಯನ ದುರ್ಗ, ಕ್ಯಾತಗಾನ ಚೆರ್ಲು ಕೆರೆಗಳಿಗೆ 4 ತಿಂಗಳಿಗಾಗುವಷ್ಟು ನೀರು ಬಂದಿದೆ.

ಅನ್ನದಾನಪುರ ಕೆರೆ, ವೆಂಕಟಾಪುರ ಚಿಕ್ಕಕೆರೆ, ಮಾಧವ­ರಾಯನಪಾಳ್ಯ ಕೆರೆ ತುಂಬಿ ಕೋಡಿ ಬಿದ್ದಿದೆ. ರಾಯಚೆರ್ಲು, ಕಡಮಲಕುಂಟೆ, ಟಿ.ಎನ್.ಪೇಟೆ, ಬೋಡರಹಳ್ಳಿ, ಮಾಚರಾಯನ­ಹಳ್ಳಿ ಕೆರೆ ತುಂಬುವ ಹಂತದಲ್ಲಿವೆ. ರಾಜವಂತಿ, ಪಳವಳ್ಳಿ ಕೆರೆಗೆ ಮಾತ್ರ ನೀರು ಹರಿದಿಲ್ಲ. ಪಳವಳ್ಳಿ ಕೆರೆಯಲ್ಲಿರುವ ಭಾರೀ ಗಾತ್ರದ ಗುಣಿಗಳು ನೀರಿನಿಂದ ತುಂಬಿವೆ.

ಗುಮ್ಮಘಟ್ಟ, ವೆಂಕಟಾಪುರ, ಕನಕಾಪುರ ಕೆರೆ, ತಿರುಮಣಿ ಕೆರೆ, ವಳ್ಳೂರು ಕೆರೆ ತುಂಬಿದೆ. ದೊಮ್ಮತಮರಿ ಮುರಾರಾಯನ ಕೆರೆ ತುಂಬುವ ಹಂತದಲ್ಲಿದೆ.

ಉತ್ತರ ಪಿನಾಕಿನಿ 6 ವರ್ಷಗಳ ನಂತರ ಹರಿಯುತ್ತಿದೆ. ನದಿ ಹರಿಯುವುದನ್ನು ನೋಡಲು ಜನತೆ ಮುಗಿ ಬೀಳುತ್ತಿದ್ದಾರೆ. ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ನಿರ್ಮಿಸಿದ್ದ ಚೆಕ್ ಡ್ಯಾಂ ತುಂಬಿದೆ. ಹತ್ತು ದಿನಗಳೊಳಗಾಗಿ ಪಟ್ಟಣಕ್ಕೆ ನದಿಯಿಂದ ನೀರು ಸರಬರಾಜು ಆರಂಭವಾಗಲಿದೆ.

ಮಾಜಿ ಸಚಿವ ವೆಂಕಟರಮಣಪ್ಪ ಶುಕ್ರವಾರ ಉತ್ತರ ಪಿನಾಕಿನಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.

ಜಡಿ ಮಳೆ: ಕುಸಿದ 15 ಮನೆ
ಮಧುಗಿರಿ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಸುಮಾರು 15 ಮನೆಗಳು ಕುಸಿದಿವೆ. ಓರ್ವ ವೃದ್ಧೆಗೆ ಗಾಯವಾಗಿ ಹಿಂದೂಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ತುಂಬದ ಕೆರೆಗಳಿಗೆ ನೀರು ಬಂದಿದೆ. ಕೊಡಿಗೇನಹಳ್ಳಿ,ಐ.ಡಿ.ಹಳ್ಳಿ ಮತ್ತು ಮಧುಗಿರಿಕಸಭಾ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ. ಜಮೀನುಗಳಿಗೆ ನೀರು ನುಗ್ಗಿ ರಾಗಿ, ಜೋಳದ ಬೆಳೆಗೆ ಹಾನಿಯಾಗಿದೆ.

ಸಿದ್ದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 234ರ ಸೇತುವೆ ಕಾಮಗಾರಿ ನಡೆಯುವ ಸ್ಥಳದ ಬಳಿಗೆ ಮಣ್ಣು ನುಗ್ಗಿ ಶುಕ್ರವಾರ ಬೆಳಿಗ್ಗೆ 6ರಿಂದ 11 ರವರೆಗೆ ಶಿರಾ-– ಮಧುಗಿರಿ ರಸ್ತೆಯಲ್ಲಿ ವಾಹನಗಳು ಸಂಚರಿಸಲಿಲ್ಲ.

ಮಳೆಯಿಂದಾಗಿ ಮನೆ ಕುಸಿದು ಕಡಗತ್ತೂರು ಗ್ರಾಮದ ಸಾಕಮ್ಮ (68) ತೀವ್ರವಾಗಿ ಗಾಯಗೊಂಡು ಹಿಂದೂಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿದ್ಯಾರ್ಥಿಗಳ ಶವ ಪತ್ತೆ
ತೋವಿನಕೆರೆ:
ಈಜಲು ಹೋಗಿ ಮರಣ ಹೊಂದಿದ್ದಾರೆ ಎಂದು ಶಂಕಿಸಲಾದ ವಿದ್ಯಾರ್ಥಿಗಳ ಶವಗಳು ಶುಕ್ರವಾರ ಪತ್ತೆಯಾಗಿವೆ.
ತುಮಕೂರು ತಾಲ್ಲೂಕು ಶಂಭೋನಹಳ್ಳಿಯ ಪಿ.ಯೋಗೇಶ್ (18), ಮತ್ತು ರವಿಚಂದ್ರ (18) ಮೃತರು. ತುಮಕೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಬಟ್ಟೆಗಳು ಕೆರೆಯ ದಡದಲ್ಲಿ ಸಿಕ್ಕಿದ್ದವು. ಇದು ಅನುಮಾನಕ್ಕೆ ಆಸ್ಪದವಾಗಿತ್ತು.

ತುಮಕೂರಿನಿಂದ ಆಗಮಿಸಿದ ಅಗ್ನಿಶಾಮಕ ದಳದವರು ಶವಗಳನ್ನು ಹುಡುಕಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು. ಹುಡುಕಾಟ ಪ್ರಾರಂಭಿಸಿದ ಕೆಲವೇ ನಿಮಿಷದಲ್ಲಿ ಒಂದು ಶವ ಸಿಕ್ಕಿತು. ಮತ್ತೊಂದು ಶವಕ್ಕಾಗಿ ದೀರ್ಘಕಾಲ ಹುಡುಕಬೇಕಾಯಿತು.

ಕೆಸ್ತೂರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಶವ ಪರೀಕ್ಷೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಡಿ.ಪ್ರಸನ್ನ ಕುಮಾರ್, ತಾ.ಪಂ. ಸದಸ್ಯ ಬಿ.ಅರ್.ಲೋಕೇಶ್, ಗ್ರಾ.ಪಂ. ಅಧ್ಯಕ್ಷ ಮರಿಯಪ್ಪ, ಮಾಜಿ ಅಧ್ಯಕ್ಷ ಕುರಿಹಳ್ಳಿ ಶಿವಣ್ಣ, ತುಮಕೂರು ತಾ.ಪಂ. ಉಪಾಧ್ಯಕ್ಷ ಪ್ರಸನ್ನಕುಮಾರ್, ಸಬ್‌ಇನ್ಸಪೆಕ್ಟರ್ ಕೆ.ಅರ್.ಚಂದ್ರಶೇಖರ್, ಅಗ್ನಿಶಾಮಕ ದಳದ ಪುಟ್ಟಣ್ಣ, ಉಪ ತಹಶೀಲ್ದಾರ್ ಸಚ್ಚಿದಾನಂದ, ಕಂದಾಯ ತನಿಖಾಧಿಕಾರಿ ರಾಜು, ಕೆಸ್ತೂರು ಸುರೇಶ್, ತುಮಕೂರು ಜೂನಿಯರ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಸ್ಥಳದಲ್ಲಿದ್ದರು.

ಯೋಗೇಶನ ತಂದೆ ಪುಟ್ಟರಾಜು– ತಾಯಿ ಲಕ್ಷ್ಮಮ್ಮ, ರವಿಚಂದ್ರನ ತಂದೆ ಬಸಣ್ಣ– ತಾಯಿ ಕನಕಮ್ಮ ಅವರ ದುಃಖ ಜನರ ಕಣ್ಣಾಲಿಗಳನ್ನು ತೇವಗೊಳಿಸಿತ್ತು.

ಹೊನ್ನವಳ್ಳಿಯಲ್ಲಿ ದಾಖಲೆ ಮಳೆ
ತಿಪಟೂರು:
ತಾಲ್ಲೂಕಿನ ಹೊನ್ನವಳ್ಳಿ ಗುರುವಾರ 16.5 ಸೆಂ.ಮೀ ಮಳೆಯಾಗಿದೆ.

ನಿರಂತರ ಸುರಿದ ಮಳೆಯಿಂದ ಹೊನ್ನವಳ್ಳಿಯಲ್ಲಿ ಬಂದಮ್ಮ, ಪ್ರಕಾಶ್ ಸೇರಿದಂತೆ ನಾಲ್ವರ ಮನೆಗಳ ಗೋಡೆ ಕುಸಿದಿದೆ. ಗ್ಯಾರಘಟ್ಟ ಬಳಿ ಚೌಡೇನಹಳ್ಳಿಯಲ್ಲಿ ಒಂದು, ಚಿಕ್ಕಹೊನ್ನವಳ್ಳಿ­ಯಲ್ಲಿ ಒಂದು ಮನೆಗೆ ಧಕ್ಕೆಯಾಗಿದೆ. ಸುಮಾರು 15 ವರ್ಷಗಳ ನಂತರ ಹೊನ್ನವಳ್ಳಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ.

ಉಳಿದಂತೆ ಕಿಬ್ಬನಹಳ್ಳಿಯಲ್ಲಿ 10.4, ಹಾಲ್ಕುರಿಕೆಯಲ್ಲಿ 2.4, ತಿಪಟೂರಿನಲ್ಲಿ 4.8 ಮತ್ತು ನೊಣವಿನಕೆರೆಯಲ್ಲಿ 3.9 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT