ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್: ಫೈನಲ್‌ಗೆ ವಿಕಾಸಗೌಡ ಅರ್ಹತೆ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಡೇಗು, (ದಕ್ಷಿಣ ಕೊರಿಯಾ): ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿರುವ ಕರ್ನಾಟಕದ ಅಥ್ಲೀಟ್ ವಿಕಾಸ ಗೌಡ ಇಲ್ಲಿ ನಡೆಯುತ್ತಿರುವ 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡರು.

ಇಲ್ಲಿನ ಡೇಗು ಕ್ರೀಡಾಂಗಣದಲ್ಲಿ ಭಾರತದ ಭರವಸೆ ಎನಿಸಿರುವ ವಿಕಾಸ್ ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ 63.99ಮೀ. ದೂರ ಎಸೆಯುವ ಮೂಲಕ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಎರಡನೇ ಯತ್ನದಲ್ಲಿ ಅವರು ಈ ದೂರ ಎಸೆದರು.

ವಿಕಾಸಗೌಡ 13ನೇ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಭಾರತದ ಎರಡನೇ ಅಥ್ಲೀಟ್ ಎನಿಸಿದರು. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಕೇರಳದ ಮಯೂಖಾ ಜಾನಿ ಮೊದಲು ಅರ್ಹತೆ ಗಳಿಸಿದ್ದರು. ಆದರೆ ಅವರು ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು.

ಫೈನಲ್‌ನಲ್ಲಿ ಸ್ಥಾನ ಪಡೆದಿರುವ ಒಟ್ಟು 12 ಡಿಸ್ಕಸ್ ಥ್ರೋ ಸ್ಪರ್ಧಿಗಳಲ್ಲಿ ಕರ್ನಾಟಕದ ಆಟಗಾರನಿಗೆ ಎಂಟನೇ ಸ್ಥಾನ. 2005 ಹಾಗೂ 2007ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅರ್ಹತಾ ಸುತ್ತಿನಲ್ಲಿಯೇ ವಿಕಾಸ್ ವಿಫಲರಾಗಿದ್ದರು. ಈ ಸಲ ಅವರು ಫೈನಲ್ ಪ್ರವೇಶಿಸುವಲ್ಲಿ ಯಶಸ್ಸು ಕಂಡಿದ್ದಾರೆ. 2007ರಲ್ಲಿ 64.96ಮೀ. ದೂರ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಏಷ್ಯನ್ ಕ್ರೀಡಾಕೂಟ ದಲ್ಲಿಯು ವಿಕಾಸ್ ಕಂಚು ಜಯಿಸಿದ್ದರು.  2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಕಾಸ್ ಸ್ಪರ್ಧಿಸಿದ್ದರು. ಆದರೆ ಅರ್ಹತಾ ಸುತ್ತಿನಲ್ಲಿಯೇ ಕಳಪೆ ಪ್ರದರ್ಶನ ನೀಡಿ 11ನೇ ಸ್ಥಾನವನ್ನು ಪಡೆದಿದ್ದರು. 

ಲಾಂಗ್ ಜಂಪ್‌ನ ಫೈನಲ್‌ನಲ್ಲಿ ನಿರಾಸೆ ಮೂಡಿಸಿದ ಮಯೂಖಾ ಇಂದು ನಡೆಯುವ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

200 ಮೀ ಓಟದ ಮೇಲೆ ಬೋಲ್ಟ್ ಕಣ್ಣು (ಪಿಟಿಐ): ಆರಂಭದಲ್ಲಾದ ತಪ್ಪಿನಿಂದ 100ಮೀ. ಓಟದ ಸ್ಪರ್ಧೆಯಲ್ಲಿ ಅನರ್ಹಗೊಂಡ ಜಮೈಕಾದ ಉಸೇನ್ ಬೋಲ್ಟ್ ಮಂಗಳವಾರ ನಡೆಯುವ 200 ಮೀ. ಹಾಗೂ 4ಗಿ100ಮೀ ಓಟದ ಮೇಲೆ ಕಣ್ಣಿಟ್ಟಿದ್ದಾರೆ.

100ಮೀ. ಓಟದಲ್ಲಾದ ನಿರಾಸೆಯನ್ನು ಮರೆಯಬೇಕಾದರೆ, ಇಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಿದೆ. 2009ರಲ್ಲಿ ಇದೇ ಚಾಂಪಿಯನ್‌ಷಿಪ್‌ನಲ್ಲಿ ಬೋಲ್ಟ್ ಚಿನ್ನದ ಪದಕ ಜಯಿಸಿದ್ದರು. `ಪದಕ ಗೆಲ್ಲಲೇಬೇಕು ಎನ್ನುವ ಆಸೆಯೊಂದಿಗೆ ಓಡಲು ಮುಂದಾದೆ. ಆದರೆ ನಾನೇ ಮಾಡಿದ ತಪ್ಪಿನಿಂದ ಅಮೂಲ್ಯ ಅವಕಾಶದಿಂದ ವಂಚಿತನಾದೆ. ಇರುವ ಅಲ್ಪ ಅವಧಿಯಲ್ಲಿಯೇ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. 200ಮೀ. ಓಟದಲ್ಲಿ ಪದಕ ಜಯಿಸುತ್ತೇನೆ ಎಂದು ಬೋಲ್ಟ್ ವಿಶ್ವಾಸ ವ್ಯಕ್ತಪಡಿಸಿದರು.

ತೀರಾ ಅಸಮಾಧಾನಗೊಂಡಿರುವ ಬೋಲ್ಟ್ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.
2009ರಲ್ಲಿ ಬರ್ಲಿನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೋಲ್ಟ್ ವಿಶ್ವ ದಾಖಲೆ ಮಾಡಿದ್ದರು. ಭಾನುವಾರ ತಪ್ಪು ಆರಂಭ ಪಡೆಯುವುದರ ಮೂಲಕ ಅಭಿಮಾನಿಗಲ್ಲಿ ನಿರಾಸೆ ಮೂಡಿಸಿದರು.
ಪದಕ ಗೆಲ್ಲುವ ಬಗ್ಗೆ ಬೋಲ್ಟ್ ಭಾರಿ ಆಸೆ ಹೊಂದಿದ್ದರು. ಆದರೆ ತಾವೇ ಮಾಡಿದ ತಪ್ಪಿನಿಂದ ಮಹತ್ವದ ಆ ಅವಕಾಶವನ್ನು ಕಳೆದುಕೊಂಡು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT