ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪಾರಂಪರಿಕ ತಾಣ: ಕೊಡಗು ಸೇರ್ಪಡೆಗೆ ಕಾಂಗ್ರೆಸ್ ವಿರೋಧ

Last Updated 10 ಜುಲೈ 2012, 7:40 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಅರಣ್ಯ ಭೂಮಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವುದನ್ನು ತಮ್ಮ ಪಕ್ಷ ವಿರೋಧಿಸುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೋ ಪ್ರದೇಶದಲ್ಲಿ ಕುಳಿತು ಪರಿಸರವಾದಿಗಳು ಇಲ್ಲಿನ ಸ್ಥಳೀಯ ನಿವಾಸಿಗಳ ಜೀವಾನವಶ್ಯಕ ಅಂಶಗಳ ಬಗ್ಗೆ ಅರಿವಿಲ್ಲದೆ ವಿಶ್ವಪಾರಂಪರಿಕ ತಾಣವಾಗಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಅರಣ್ಯ ಭೂಮಿಯನ್ನು ವಿಶ್ವಪಾರಂಪರಿಕ ತಾಣವಾಗಿಸಿದ್ದರೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯು ವಂತಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಜಿಲ್ಲೆಯ ಅರಣ್ಯಭೂಮಿಯನ್ನು ಯುನೆಸ್ಕೋಗೆ ಬಿಟ್ಟು ಕೊಡುವುದಿಲ್ಲ. ಜನತೆಯ ಪರವಾಗಿ ಪಕ್ಷ ಹೊರಾಟ ನಡೆಸುವುದಾಗಿ ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಜುಲೈ 12 ರಂದು ಬಿಜೆಪಿ ಪಕ್ಷವು ಕೊಡಗು ಬಂದ್‌ಗೆ ಕರೆ ನೀಡಿದೆ. ಈ ಸಂಬಂಧ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನಿಸಿಲ್ಲ, ಇದು ಕೇವಲ ರಾಜಕೀಯ ಮೇಲಾಟವಾಗಿದೆ ಎಂದು ಆರೋಪಿಸಿದರು.

ಕೊಡಗು ಬಂದ್‌ಗೆ ಪಕ್ಷವು ಜನತೆಯ ನಿರ್ಧಾರಕ್ಕೆ ಬದ್ಧವಿರುವುದಾಗಿ ಅವರು ತಿಳಿಸಿದರು.
ಮಾಜಿ ಶಾಸಕ ಎಂ.ಎಂ. ನಾಣಯ್ಯ ಅವರು ಮಾತನಾಡಿ, ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಜಿಲ್ಲೆಯನ್ನು ಸೇರಿಸಿದರೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದ ಜಿಲ್ಲೆಯ ಶಾಸಕರು ಈಗ ತಮ್ಮ ಮಾತಿನಂತೆ ನಡೆದು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ಮಾಜಿ ಸಚಿವೆ ಸುಮಾ ವಸಂತ್ ಅವರು ಮಾತನಾಡಿ, ಜಿಲ್ಲೆಯ ಅರಣ್ಯ ಭೂಮಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದರೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನಾಂಗದವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು, ಇದನ್ನು ಪಕ್ಷವು ವಿರೋಧಿಸುವುದಾಗಿ ಅವರು ತಿಳಿಸಿದರು.

ಬಂದ್ ಬೆಂಬಲಿಸಲು ಕರೆ
ಮಡಿಕೇರಿ: ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜನತೆಯ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕೊಡಗಿನ ಅರಣ್ಯ ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುತ್ತಿರುವು ದನ್ನು ಕೊಡಗು ಕಾಫಿ  ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಖಂಡಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳ ವಿರೋಧದ ನಡುವೆ ಏಕ ಪಕ್ಷೀಯವಾಗಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಜಿಲ್ಲೆಯ ಅರಣ್ಯ ಭೂಮಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಬಿಡುವುದಿಲ್ಲ ಎಂದರು.

ಜಿಲ್ಲೆಯ ಅರಣ್ಯ ಭೂಮಿಯನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವ ಕುರಿತು ರಚಿಸಿರುವ ಆಯೋಗದ ವರದಿಯು ಜಿಲ್ಲೆಯಲ್ಲಿಯ ಕಾಫಿ ಸೇರಿದಂತೆ ವಾಣಿಜ್ಯ ಬೆಳೆಯ ವಿರುದ್ಧವಾಗಿದ್ದು, ಇದರ ಅನ್ವಯ ಜಿಲ್ಲೆಯ ಸಾವಿರಾರು ಕೃಷಿಕರು ಹಾಗೂ ಕಾರ್ಮಿಕ ವರ್ಗದವರು ಸಂಕಷ್ಟ ಎದುರಿಸುವಂತಾಗುವುದು ಎಂದರು.

ಜಿಲ್ಲೆಯ ಅರಣ್ಯ ಭೂಮಿಯನ್ನು ಯುನೆಸ್ಕೋಗೆ ನೀಡುವ ಮೂಲಕ ಜಿಲ್ಲೆಯ ಜನತೆಯನ್ನು ನಿರಾಶ್ರಿತರಾಗಿ ಮಾಡುವ ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಹೋರಾಟ ನಡೆಸಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಜುಲೈ 12 ರಂದು ಕೊಡಗು ಬಂದ್‌ಗೆ ಬಿಜೆಪಿ ಪಕ್ಷವು ಕರೆ ನೀಡಿದ್ದು, ಎಲ್ಲರೂ ಈ ಬಂದ್‌ಗೆ ಬೆಂಬಲ ನೀಡಬೇಕೆಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಡಗು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಕೆ.ಕೆ. ಗಣೇಶ್, ಎನ್.ಕೆ. ಐಯಣ್ಣ, ಬಿ.ಸಿ. ಕಾವೇರಪ್ಪ, ಲೀಲಾ ಮೇದಪ್ಪ ಉಪಸ್ಥಿತರಿದ್ದರು.

ಪಾರಂಪರಿಕ ತಾಣಕ್ಕೆ ವಿರೋಧ
ವಿರಾಜಪೇಟೆ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣಕ್ಕೆ ಪಶ್ಚಿಮ ಘಟ್ಟವನ್ನು ಸೇರ್ಪಡೆಗೊಳಿಸುವ ನಿರ್ಧಾರಕ್ಕೆ ಜಯ ಕರ್ನಾಟಕ ಸಂಘಟನೆ ವಿರೋಧಿಸುವುದಾಗಿ ನಗರ ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ತಿಳಿಸಿದ್ದಾರೆ.

ರಾಜ್ಯ ಸರ್ಕಾರ, ಜನ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಇದನ್ನು ಒಮ್ಮತವಾಗಿ  ವಿರೋಧಿಸಬೇಕು. ಪಶ್ಚಿಮ ಘಟ್ಟ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಗುರುವಾರ(ತಾ.12) ವಿವಿಧ ಸಂಘಟನೆಗಳು ಕೈಗೊಂಡಿರುವ ಕೊಡಗು ಬಂದ್‌ಗೆ ಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದ್ದಾರೆ.

ಬಂದ್: ಚೇಂಬರ್ ಆಫ್ ಕಾಮರ್ಸ್ ಬೆಂಬಲ 
ವಿರಾಜಪೇಟೆ: ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸುವುದನ್ನು ವಿರೋಧಿಸಿ ಜಿಲ್ಲೆಯ ಸಂಘಟನೆಗಳು ನಿರ್ಧರಿಸಿರುವ ಗುರುವಾರದ (12) ಕೊಡಗು ಬಂದ್‌ಗೆ ವಿರಾಜಪೇಟೆಯ ಚೇಂಬರ್ ಆಫ್ ಕಾಮರ್ಸ್‌ನ ಸ್ಥಾನೀಯ ಸಮಿತಿ ಬೆಂಬಲ ಸೂಚಿಸಿರುವುದಾಗಿ ಅಧ್ಯಕ್ಷ ಎಂ.ಪಿ.ಕಾಶಿ ಕಾವೇರಪ್ಪ
ತಿಳಿಸಿದ್ದಾರೆ. ವಿರಾಜಪೇಟೆಯ ಪಟ್ಟಣದ ವರ್ತಕರು ಅಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕರಿಸುವಂತೆ ವಿನಂತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT