ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ: ವಿಕಸನ ಕಥನ

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

‘ವಿಶ್ವ’. ಅದು ಕರ್ತಾರನ ಸೃಷ್ಟಿ ಸರ್ವಸ್ವದ ನೆಲೆ. ಜ್ಞಾನ - ಅಜ್ಞಾತ ಸರ್ವ ದ್ರವ್ಯ, ಸಕಲ ಆಕಾಶ ಕಾಯಗಳು, ಎಲ್ಲ ಚರಾಚರ ಸೃಷ್ಟಿಗಳು, ಜೊತೆಗೆ ಕಾಲ, ಚೈತನ್ಯ, ಆಕಾಶಗಳೂ ವಿಶ್ವದ ಅಂಶಗಳೇ ಹೌದಲ್ಲ? ಈಗಿನ ಅನಂತ ಆಕಾಶದಲ್ಲಿ ಹರಡಿರುವ, ಗೆಲಾಕ್ಸಿಗಳಲ್ಲಿ ಗುಂಪಾಗಿರುವ ಎಲ್ಲ ನಕ್ಷತ್ರಗಳ ಮತ್ತು ನಕ್ಷತ್ರೇತರ ದ್ರವ್ಯದ ಮೊತ್ತ ಸೂರ್ಯನ ದ್ರವ್ಯರಾಶಿಯ ಒಂದು ನೂರು ಕೋಟಿ ಕೋಟಿ ಕೋಟಿ ಕೋಟಿ ಮಡಿಗಿಂತ ಅಧಿಕ. (ಸೂರ್ಯನ ದ್ರವ್ಯರಾಶಿ ಎರಡು ದಶಲಕ್ಷ ಕೋಟಿ ಕೋಟಿ ಕೋಟಿ ಟನ್).

ಅಷ್ಟೇ ಅಲ್ಲ. ಇಷ್ಟೂ ದ್ರವ್ಯದ ಹತ್ತೊಂಬತ್ತು ಪಟ್ಟು ದ್ರವ್ಯ ಅಗೋಚರ ರೂಪದಲ್ಲಿ (ಅದೇ ‘ಡಾರ್ಕ್ ಮ್ಯಾಟರ್’) ಹರಡಿದೆ. ವಿಶ್ವ ಉದಿಸಿ ಸಾವಿರದೈನೂರು ಕೋಟಿ ವರ್ಷ ಸಂದಿದೆ. ಹೀಗೆಂದೊಡನೆ ಕೆಲ ಪ್ರಶ್ನೆಗಳು ಸಹಜ: ‘ವಿಶ್ವ ಹುಟ್ಟಿದ್ದು ಹೇಗೆ? ಈಗಿನ ಇಡೀ ವಿಶ್ವದ ದ್ರವ್ಯ ಒದಗಿದ್ದು ಎಲ್ಲಿಂದ? ಉದಿಸಿದಾಗಿನಿಂದ ಈವರೆಗಿನ ವಿಶ್ವ ವಿಕಸನದ ಪ್ರಮುಖ ಹಂತಗಳು ಯಾವುವು?’

ವಾಸ್ತವ ಏನೆಂದರೆ ವಿಶ್ವದ ಹುಟ್ಟಿಗೆ ಕಾರಣವಾದ ಮೂಲ ಘಟನೆ ಏನೆಂಬುದು ಯಾರಿಗೂ ಇನ್ನೂ ತಿಳಿದಿಲ್ಲ. ಆದರೆ ವಿಶ್ವದ ಉಗಮಕ್ಕೆ ಮೂಲವಾದದ್ದು ಹಿಡಿಗಾತ್ರವೂ ಇರದಿದ್ದ - ಅಷ್ಟರಲ್ಲೇ ಈಗಿನ ಇಡೀ ದ್ರವ್ಯ ಅಡಗಿದ್ದ - ಒಂದು ತುಣುಕು ವಿಶಿಷ್ಟ ದ್ರವ್ಯ ಎಂಬುದು ಸ್ಪಷ್ಟ. ಒಂದು ಅಡಿಯ ಒಂದು ದಶಲಕ್ಷದ ಒಂದಂಶದಷ್ಟೇ ಇತ್ತು ಆ ದ್ರವ್ಯ ತುಣುಕಿನ ವ್ಯಾಸ.

ಆ ಮೂಲದ್ರವ್ಯದ ಸ್ಥಿತಿ, ಸಾಂದ್ರತೆ, ಸಂಯೋಜನೆ ಇತ್ಯಾದಿ ಎಲ್ಲ ಅಜ್ಞಾತ. ಶಕ್ತಿ, ಕಾಲ, ಆಕಾಶ ಎಲ್ಲವೂ ಅದರಲ್ಲೇ ಬೆರೆತು ಹೋಗಿದ್ದ ಸರ್ವಸಂಗ್ರಾಹಿತ ಏಕಮೇವ ಸೃಷ್ಟಿ ಅದಾಗಿತ್ತು. ಹಾಗಿದ್ದಾಗ ಈಗ್ಗೆ ಒಂದು ಸಾವಿರದ ಐನೂರು ಕೋಟಿ ವರ್ಷ ಹಿಂದೆ ಏಕೋ ಹೇಗೋ ಇದ್ದಕ್ಕಿದ್ದಂತೆ ಆ ಮೂಲದ್ರವ್ಯ ಚದರ ತೊಡಗಿತು. ಯಾರ ಕಲ್ಪನೆಗೂ ಎಟುಕದ ವೇಗದಲ್ಲಿ ಆರಂಭಗೊಂಡ ಆ ಕ್ರಿಯೆಯೇ ‘ಬಿಗ್ ಬ್ಯಾಂಗ್’ (ಮಹಾಸ್ಫೋಟ) ಎಂದು ಪ್ರಸಿದ್ಧ.
 
ಸಿಡಿತ, ಸ್ಫೋಟ ಏನೂ ಇರದಿದ್ದ, ಪ್ರಶಾಂತವಾಗಿಯೇ ಆರಂಭಗೊಂಡು ಮುನ್ನಡೆದ ಕ್ರಿಯೆ ಅದು. ‘ಬಿಗ್ ಬ್ಯಾಂಗ್’ ಹೆಸರಲ್ಲಿ ‘ಸ್ಫೋಟ’ ಬೆಸೆದಿರುವುದು ಒಂದು ವಿಪರ್ಯಾಸ. ಅಲ್ಲಿಂದ ಮುಂದೆ ಮುಂದೆ ಕಲ್ಪನಾತೀತ ಹ್ರಸ್ವಾತಿಹ್ರಸ್ವ ಮತ್ತು ದೀರ್ಘಾತಿದೀರ್ಘ ಕಾಲಮಾನಗಳಲ್ಲಿ ಅನಾವರಣಗೊಂಡ ವಿಶ್ವವಿಕಸನದ ಹಂತಗಳು ತುಂಬ ಸೋಜಿಗಮಯ, ನಂಬಲಸದಳ ಕೂಡ (ಚಿತ್ರ - 1).

‘ಬಿಗ್ ಬ್ಯಾಂಗ್’ ಸಂಭವಿಸಿದ ನಂತರದ ಒಂದು ಸಕೆಂಡ್‌ನ ಹತ್ತು ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿಯ ಒಂದೇ ಅಂಶದಷ್ಟು ಸಮಯದಲ್ಲಿ (10-43 ಸಕೆಂಡ್) ವಿಶ್ವದ ಮೂಲದ್ರವ್ಯದಲ್ಲಿ ಅಡಗಿದ್ದ ಚತುರ್ವಿದ ಮೂಲಬಲಗಳ ಗುಂಪಿನಿಂದ (ಗುರುತ್ವಬಲ, ವಿದ್ಯುದಯಸ್ಕಾಂತೀಯ ಬಲ, ದಿ ಸ್ಟ್ರಾಂಗ್ ಫೋರ್ಸ್ ಮತ್ತು ದಿ ವೀಕ್ ಫೋರ್ಸ್) ಗುರುತ್ವ ಬಲ ಬೇರ್ಪಟ್ಟು ಸ್ವತಂತ್ರವಾಯಿತು.

ಅಲ್ಲಿಂದ ಮುಂದೆ ಬಿಗ್ ಬ್ಯಾಂಗ್ ನಂತರದ ಒಂದು ಸಕೆಂಡ್‌ನ ಹತ್ತು ಕೋಟಿ ಕೋಟಿ ಕೋಟಿ ಕೋಟಿ ಕೋಟಿಯ ಒಂದಂಶ ಕಾಲದಲ್ಲಿ ಪರಮಾಣು ಬೀಜದ ಕಣಗಳನ್ನು ಹಿಡಿದಿಡುವ ‘ಸ್ಟ್ರಾಂಗ್ ಫೋರ್ಸ್’ ಬೇರ್ಪಟ್ಟಿತು. ಹಾಗಾದೊಡನೆ 10-36ರಿಂದ 10-32 ಸಕೆಂಡ್‌ನ ಅವಧಿಯಲ್ಲಿ ಕಣಗಾತ್ರದಲ್ಲಿ ಅಡಗಿದ್ದ ವಿಶ್ವಮೂಲ ದ್ರವ್ಯ ಮಹಾನ್ ಗಾತ್ರಕ್ಕೆ ಉಬ್ಬಿಹೋಯಿತು. ಸದ್ಯದ ಇಡೀ ಗಾತ್ರದ ಬಹುಪಾಲನ್ನು ವಿಶ್ವಗಳಿಸಿದ್ದು ಈ ಹಂತದಲ್ಲೇ.

ಬಿಗ್ ಬ್ಯಾಂಗ್ ಘಟಿಸಿದ ನಂತರದ ಒಂದು ಸಕೆಂಡ್‌ನ ಒಂದು ಲಕ್ಷದಲ್ಲೊಂದಂಶ ಕಾಲದಲ್ಲಿ ಉಳಿದೆರಡು ಮೂಲಭೂತ ಬಲಗಳೂ ಪ್ರತ್ಯೇಕಗೊಂಡು ದ್ರವ್ಯದ ಅತ್ಯಂತ ಸೂಕ್ಷ್ಮ ತುಣುಕುಗಳಾದ ‘ಕ್ವಾರ್ಕ್’ಗಳು ಮತ್ತು ‘ಎಲೆಕ್ಟ್ರಾನ್’ಗಳು ವಿಶ್ವದ ಎಲ್ಲೆಡೆ ಕಿಕ್ಕಿರಿದುವು (ಚಿತ್ರ 4, 5) ಆಗಿನ ವಿಶ್ವದ ಉಷ್ಣತೆ ಒಂದು ಲಕ್ಷ ಕೋಟಿ ಡಿಗ್ರಿ ಕೆಲ್ವಿನ್‌ನಷ್ಟಿತ್ತು. ಮಹಾಸ್ಫೋಟ ಸಂಭವಿಸಿದ ಒಂದು ಸಕೆಂಡ್‌ನಿಂದ ಮೂರು ಸಕೆಂಡ್ ನಡುವಿನಲ್ಲಿ ಈ ತಾಪ ಒಂದು ಸಾವಿರ ಕೋಟಿ ಡಿಗ್ರಿಗೆ ಇಳಿದು ವಿಶ್ವದ ತುಂಬ ಸಕಲ ಬಗೆಯ ಪರಮಾಣು ಕಣಗಳು ಪ್ಲಾಸ್ಮಾ ರೂಪದಲ್ಲಿ ಹರಡಿ ಒಂದಕ್ಕೊಂದು ಬಡಿದು ಬೆಸೆಗೊಂಡು ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ಮೈದಳೆದವು.

ಆರಂಭದಿಂದ ಮೂರು ನಿಮಿಷ ದಾಟುವುದರೊಳಗೆ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ಒಟ್ಟೊಟ್ಟುಗೊಂಡು ಪರಮಾಣು ಬೀಜಗಳು ರೂಪುಗೊಂಡುವು. ವಿಶ್ವದ ಉಗಮದ ಮೂಲ ಘಟನೆಯಾದ ‘ಬಿಗ್ ಬ್ಯಾಂಗ್’ ಸಂಭವಿಸಿ ಮೂವತ್ತು ಸಾವಿರ ವರ್ಷಗಳು ಕಳೆದ ವೇಳೆಗೆ ಪರಮಾಣು ಬೀಜಗಳು ಎಲೆಕ್ಟ್ರಾನ್‌ಗಳನ್ನು ಸೆಳೆದು ಹಿಡಿದು ಹಗುರ ಧಾತುಗಳಾದ ಹೈಡ್ರೋಜನ್, ಹೀಲಿಯಂ ಮತ್ತು ಲೀಥಿಯಂಗಳ ಪರಿಪೂರ್ಣ ಪರಮಾಣುಗಳನ್ನು ರೂಪಿಸಿದುವು.

ಎರಡು ನೂರು ದಶಲಕ್ಷ ವರ್ಷಗಳ ಸುಮಾರಿಗೆ ವಿಶ್ವದೆಲ್ಲೆಡೆ ಚದರಿ ಹಗುರ ಧಾತುಗಳು ಬೆರೆತಿದ್ದ ದ್ರವ್ಯ ಅಲ್ಲಲ್ಲಿ ಒಟ್ಟುಗೂಡಿ ಗ್ಯಾಲಕ್ಸಿಯ ಕಾಯಗಳು, ಮೈದಳೆಯತೊಡಗಿ, ನಾಲ್ಕು ನೂರು ದಶಲಕ್ಷ ವರ್ಷಗಳ ಸುಮಾರಿಗೆ ಮೊದಲ ನಕ್ಷತ್ರಗಳು ಅವತರಿಸಿದುವು (ಚಿತ್ರ 2, 5, 6). ತಾರೆಗಳೊಳಗಿನ ಉಷ್ಣ ಬೈಜಿಕ ಕ್ರಿಯೆಯಿಂದಾಗಿ ಅವು ಸ್ವಯಂದೀಪ್ತಗೊಂಡು ವಿಶ್ವದಲ್ಲಿ ಬೆಳಕು ಕಾಣತೊಡಗಿತು.

ಆರಂಭಿಕ ಗ್ಯಾಲಕ್ಸಿಗಳು ಸಣ್ಣ - ಪುಟ್ಟವಾಗಿದ್ದು ಅಂಥ ಗ್ಯಾಲಕ್ಸಿಗಳು ಕ್ರಮೇಣ ಢಿಕ್ಕಿ ಇಟ್ಟು, ಬೆರೆತು ಭಾರೀ ಗ್ಯಾಲಕ್ಸಿಗಳು (ಚಿತ್ರ 7, 8) ಅವತರಿಸಿದುವು. ನಮ್ಮ ಗ್ಯಾಲಕ್ಸಿ ಕ್ಷೀರಪಥ (ಚಿತ್ರ - 9) ಹುಟ್ಟಿದ್ದೂ ಹೀಗೆಯೇ. ಜನಿಸಿದಾಗಿನಿಂದ ಈವರೆಗೆ ಒಂದು ಸಾವಿರದ ಐದುನೂರು ಕೋಟಿ ವರ್ಷ ದಾಟಿರುವ ವಿಶ್ವದಲ್ಲಿ ಕ್ಷೀರಪಥದಲ್ಲಿ ನಮ್ಮ ಸೂರ್ಯ - ಸೌರವ್ಯೆಹ (ಚಿತ್ರ - 10), ನಮ್ಮ ಭೂಮಿ ಕೂಡ (ಚಿತ್ರ - 11) ರೂಪುಗೊಂಡು ಸಮೀಪ ನಾಲ್ಕು ನೂರ ಐವತ್ತು ಕೋಟಿ ವರ್ಷ ಕಳೆದಿದೆ.
 
ಸೌರವ್ಯೆಹದಂತಹ ಗ್ರಹವ್ಯೆಹಗಳು ಅವುಗಳಲ್ಲೂ ಭೂಮಿಯಂತಹ ಗ್ರಹಗಳು, ಅದರಲ್ಲೂ ಪೃಥ್ವಿಯಲ್ಲಿರುವಂತಹ ದ್ರವ್ಯ ಸಂಯೋಜನೆ ಜೀವ ವಿಹಿತ ಪರಿಸರ ಮತ್ತು ಜೀವಜಾಲದ ವಿಕಸನ - ಅವೆಲ್ಲ ಆಕಸ್ಮಿಕ ಕಾಕತಾಳೀಯಗಳ ವಿಸ್ಮಯದ ಯೋಗಾಯೋಗಗಳ ಬೇರೊಂದು ಸೋಜಿಗದ ಕಥೆ. - ಎನ್. ವಾಸುದೇವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT