ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಾಕಿ ಸರಣಿಗೆ ಮಾನ್ಯತೆ ಇಲ್ಲ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಹಾಗೂ ನಿಂಬಸ್ ಕಮ್ಯೂನಿಕೇಷನ್ ಜಂಟಿಯಾಗಿ ಆಯೋಜಿಸುವ ವಿಶ್ವ ಹಾಕಿ ಸರಣಿಗೆ ಮಾನ್ಯತೆ ಇಲ್ಲ~ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಚಾಟಿ ಏಟು ಬೀಸಿದೆ.

`ಆಟಗಾರರು ಹಾಕಿ ಸರಣಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಇದು ಅಂತರರಾಷ್ಟ್ರೀಯ ಟೂರ್ನಿಯ ವೇಳಾಪಟ್ಟಿಗೆ ಧಕ್ಕೆ ಉಂಟು ಮಾಡಲಿದೆ~ ಎಂದು ಎಫ್‌ಐಎಚ್ ಸ್ಪಷ್ಟವಾಗಿ ಹೇಳಿದೆ. ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಮಾಜಿ ಆಟಗಾರರು ಇತ್ತೀಚಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.

`ಆಟಗಾರರು ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಬಹುದು ಎಂದು ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟಗಾರರಿಗೆ ನಿರಾಳವಾಗಿತ್ತು. ಆದರೆ, ಈಗ ಎಫ್‌ಐಎಚ್ ನೀಡಿರುವ ಈ ಹೇಳಿಕೆಯಿಂದ ಆಟಗಾರರು ಮತ್ತೆ ಗೊಂದಲಕ್ಕೊಳಗಾಗಿದ್ದಾರೆ.

`ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ಸ್ಪಷ್ಟವಾಗಿದೆ. ಆಟಗಾರರಿಗೆ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಲು ಅನುಮತಿಯೂ ನೀಡಿದೆ. ಇದರ ಜೊತೆಗೆ  ಅಂತರರಾಷ್ಟ್ರೀಯ ಟೂರ್ನಿಗೆ ಅಡ್ಡಿಯಾಗಬಾರದು ಎನ್ನುವ ವಿಷಯ ತೀರ್ಪಿನಲ್ಲಿದೆ. ಇದನ್ನು ಮರೆಯಬಾರದು~ ಎಂದು ಎಫ್‌ಐಎಚ್ ಹೇಳಿದೆ.

`ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿ ಸೇರಿದಂತೆ ಮುಂದಿನ ಏಳೆಂಟು ತಿಂಗಳ ಕಾಲ ನಿರಂತರ ಟೂರ್ನಿಗಳು ನಡೆಯಲಿವೆ. ಒಂದು ವೇಳೆ ಆಟಗಾರರು ಈ ಸರಣಿಯಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ~ ಎನ್ನುವ ಎಚ್ಚರಿಕೆಯನ್ನು ಸಹ ಅದು ನೀಡಿದೆ.

`ಹಾಕಿ ಇಂಡಿಯಾದ ಜೊತೆಗೂಡಿ ಟೂರ್ನಿಯೊಂದನ್ನು ಆಯೋಜಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ. ಅಗ್ರ ಆಟಗಾರರು ಇದರಲ್ಲಿ ಪಾಲ್ಗೊಳ್ಳಬೇಕು~ ಎನ್ನುವುದು ನಮ್ಮ ಅಭಿಲಾಷೆ ಎಂದು ಎಫ್‌ಐಎಚ್ ಹೇಳಿದೆ.

ಫೆಬ್ರುವರಿ 18ರಿಂದ 26ರ ವರೆಗೆ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳು ನವದೆಹಲಿಯಲ್ಲಿ ನಡೆಯಲಿವೆ. ಫೆ. 29ರಂದು ಹಾಕಿ ಸರಣಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT