ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ವಿವಿ ಸ್ಥಾಪಿಸಿ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು:  `ವಿಶ್ವಕರ್ಮ ಸಮಾಜದವರಿಗೆ ರಕ್ತಗತವಾಗಿ ಬಂದಿರುವ ಕೆತ್ತನೆ ಕಲೆಗಳು ನಾಶವಾಗುವ ಹಂತದಲ್ಲಿವೆ. ಅವುಗಳನ್ನು ಉಳಿಸಿ, ಬೆಳೆಸಲು ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು~ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಶ್ರಯದಲ್ಲಿ ನಡೆದ 3ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
`ಅವರ ಈ ಅಭೂತಪೂರ್ವ ಕಲೆ, ಸಂಸ್ಕೃತಿ ಮತ್ತು ಕೌಶಲ್ಯ ಉಳಿಯಬೇಕಾದರೆ ವಿಶ್ವವಿದ್ಯಾಲಯ, ಅಕಾಡೆಮಿಗಳು ಸ್ಥಾಪನೆಯಾಗಬೇಕು. ಅದಕ್ಕಾಗಿ ಸಂಸದರ ನಿಧಿಯಿಂದ ಧನಸಹಾಯ ನೀಡಲು ನಾವು ಸಿದ್ಧ~ ಎಂದರು.

ವೆಬ್‌ಸೈಟ್‌ಗೆ ಚಾಲನೆ:
ವಿಶ್ವಕರ್ಮ ಸಮುದಾಯದ ವೆಬ್‌ಸೈಟ್‌ಗೆ ಚಾಲನೆ ನೀಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಮಧುಸೂದನ ಮಿಸ್ತ್ರಿ ಮಾತನಾಡಿ, `ಭಾರತವು ಐದು ಸಾವಿರ  ವರ್ಷಗಳಷ್ಟು ಪುರಾತನ ಇತಿಹಾಸವುಳ್ಳದ್ದು ಎಂದು ನಿಖರವಾಗಿ ಹೇಳುವಂತಹ ಸಾಕ್ಷಿಗಳನ್ನು ಸೃಷ್ಟಿಸಿದವರು ವಿಶ್ವಕರ್ಮರು. ನಿರ್ಮಾಣ ಶಕ್ತಿಯು ಇವರಿಗೆ ಕರಗತ. ಕಲ್ಲು, ಮಣ್ಣು, ಲೋಹ, ಕಟ್ಟಿಗೆಗಳಿಗೆ ಮೂರ್ತ ರೂಪ ಕೊಡುವ ಈ ಜನಾಂಗವು ಮತ ಬ್ಯಾಂಕ್ ಆಗಿ ಬೆಳೆಯಬೇಕು~ ಎಂದು ಹೇಳಿದರು. 

ಮುಖ್ಯ ಅತಿಥಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್, `ರಾಜ್ಯದಲ್ಲಿ ನೂರಾರು ಎಂಜಿನಿಯರಿಂಗ್ ಕಾಲೇಜುಗಳಿವೆ. ವಿಶ್ವಕರ್ಮ  ತಾಂತ್ರಿಕ ಸಂಸ್ಥೆಯನ್ನು ಆರಂಭಿಸಿ ಈ ಸಮುದಾಯದ ಕಲೆಗಳನ್ನು ಸಂರಕ್ಷಿಸಬೇಕು~ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಹಿಸಿದ್ದರು. ಸಂಸದರಾದ ಎಚ್. ವಿಶ್ವನಾಥ್, ಆರ್.ಧ್ರುವನಾರಾಯಣ, ಮಾಜಿ ಸಚಿವ ಡಿ.ಕೆ. ಶಿವಕುಮಾರ, ಶಾಸಕರಾದ ವಿ.ಶ್ರೀನಿವಾಸ ಪ್ರಸಾದ, ಎಚ್.ಎಸ್. ಶಂಕರಲಿಂಗೇಗೌಡ, ಸಿದ್ಧರಾಜು, ಮೇಯರ್ ಪುಷ್ಪಲತಾ ಚಿಕ್ಕಣ್ಣ, ಬ್ಲಾಸಂ  ಫರ್ನಾಂಡಿಸ್ ಮತ್ತಿತರರು ಹಾಜರಿದ್ದರು.  ವಿಶ್ವಕರ್ಮ ಸಮಾಜದ ಅರವತ್ತೇಳು ಪೀಠಾಧಿಪತಿಗಳು ಈ ಕಾರ್ಯಕ್ರಮದ ಸಾನ್ನಿಧ್ಯತೆಯನ್ನು ವಹಿಸಿದ್ದರು.

ವಿಶ್ವಕರ್ಮ ಜಯಂತಿ ದಿನ ರಜೆ ಘೋಷಣೆಗೆ ಆಗ್ರಹ

ಮೈಸೂರು: ವಿಶ್ವಕರ್ಮ ಜಯಂತಿಯನ್ನು ಸರ್ಕಾರವೇ ಆಚರಿಸುವಂತಾಗಬೇಕು ಮತ್ತು ಸೆಪ್ಟೆಂಬರ್ 17ರಂದು ಸರ್ಕಾರ ರಜೆ ಘೋಷಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ಆಗ್ರಹಿಸಿದರು.

ಶನಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ 3ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು,  `ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸದಾನಂದಗೌಡರು ಮಾಡಬೇಕಿತ್ತು.

ಆದರೆ ಬರುತ್ತೇನೆ ಎಂದು ಒಪ್ಪಿಕೊಂಡ ಮೇಲೂ ಬರದೇ ನಮಗೆ ಅವಮಾನ ಮಾಡಿದ್ದಾರೆ. ಅಲ್ಲದೇ ನಮ್ಮ ಸಮಾಜ ಒಂಬತ್ತು ವರ್ಷಗಳಿಂದ ಇಟ್ಟಿರುವ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ~ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT