ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಸಮುದಾಯ ಸಂಘಟನೆಗೆ ಸಲಹೆ

Last Updated 7 ಮೇ 2012, 5:20 IST
ಅಕ್ಷರ ಗಾತ್ರ

ಆನೇಕಲ್: ವಿಶ್ವಕರ್ಮ ಸಮುದಾಯ ಸಂಘಟಿತವಾಗುವ ಮೂಲಕ ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ನಂಜುಂಡಿ ನುಡಿದರು.

 ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾಸಭಾವು ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಜನಾಂಗಕ್ಕೆ ಸವಲತ್ತುಗಳನ್ನು ನೀಡುವಲ್ಲಿ ಹಾಗೂ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ವಿಶ್ವಕರ್ಮ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡುವ ಸಂಬಂಧ ಮಹಾ ಸಭಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸುವ ಮೂಲಕ ಜನಾಂಗವನ್ನು ಕಡೆಗಣಿಸಿದೆ. ವಿಶ್ವಕರ್ಮ ಜನಾಂಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.07 ರಂದು ಚಾಮುಂಡಿ ಬೆಟ್ಟದಿಂದ ರಾಜಭವನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು.

ಸೆ.17ರಂದು ರಾಜಭವನಕ್ಕೆ ಪಾದಯಾತ್ರೆ ತಲುಪಲಿದೆ. ಈ ಪಾದಯಾತ್ರೆಯಲ್ಲಿ 25ಸಾವಿರ ಜನರು ಪಾಲ್ಗೊಳ್ಳುವ ಅಂದಾಜಿದೆ. ಇದಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದ್ದು ಎಲ್ಲೆಡೆ ಪೂರ್ವಭಾವಿ ಸಭೆಗಳು ಮತ್ತು ಜಾಗೃತಿ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದರು.

ವಿಶ್ವಕರ್ಮರು ಅನುಸರಿಸುತ್ತಿರುವ ಪಂಚ ಕಸಬುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ ಕುಶಲ ಕಲೆಗಳ ಬೆಳವಣಿಗೆಗೆ ತರಬೇತಿ ನೀಡಬೇಕು. ಜನಾಂಗದ ಅಭಿವೃದ್ಧಿಗೆ ವಿಶ್ವಕರ್ಮ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ನಿಟ್ಟರಹಳ್ಳಿ ಪೀಠದ ನೀಲಕಂಠಾಚಾರ್ ಸ್ವಾಮೀಜಿ ಮಾತನಾಡಿ, ಹೋರಾಟದ ಮೂಲಕ ಜನಾಂಗವು ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತವಾಗಬೇಕು. ವಿಶ್ವಕರ್ಮ ಎಂಬುದು  ಜಾತಿಯಲ್ಲ, ಸಂಸ್ಕೃತಿ ತಲಾತಲಾಂತರಗಳಿಂದ ಕುಶಲಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವಲ್ಲಿ ವಿಶ್ವಕರ್ಮ ಸಮಾಜದ ಸಾಧನೆ ಶ್ಲಾಘನೀಯವಾದುದು ಎಂದರು. ಭಾರತೀಯ ಶಿಲ್ಪಕಲೆಯನ್ನು ಶ್ರೆಮಂತಗೊಳಿಸಿ ವಿಶ್ವ ಮಾನ್ಯ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಪ್ರಮುಖವಾದುದು ಎಂದರು.

ಮಹಾಸಭಾದ ತಾಲ್ಲೂಕು ಅಧ್ಯಕ್ಷ ಆರ್.ಶ್ರೀನಿವಾಸ್ ವಿಶ್ವಕರ್ಮ, ಸೆ.17ರಂದು ನಡೆಯುವ ವಿಶ್ವಕರ್ಮ ಜಯಂತಿಗೆ ಸರ್ಕಾರ ಸಾರ್ವತ್ರಿಕ ರಜಾ ಘೋಷಿಸಬೇಕು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶೇ.3 ರಷ್ಟುನ್ನು ಒಳ ಮೀಸಲಾತಿ ಮೂಲಕ  ನೀಡಬೇಕು ಎಂದು ಒತ್ತಾಯಿಸಿದರು.

ಅಫಜಲ್‌ಪುರ ಮಠದ ಮೌನೇಶ್ವರ ಸ್ವಾಮೀಜಿ, ಚಿಂಚೋಳಿಯ ದೊಡ್ಡೇಂದ್ರ ಸ್ವಾಮೀಜಿ, ಮಂಡ್ಯ ಜಿಲ್ಲಾ ಅಧ್ಯಕ್ಷ ಸತೀಶ್, ಮದ್ದೂರು ಅಧ್ಯಕ್ಷ ಬಸವರಾಜು, ತಾಲ್ಲೂಕಿನ ಮುಖಂಡರಾದ ಸುಬ್ರಮಣ್ಯಚಾರ್, ವೆಂಕಟಾಚಲಾಚಾರ್, ನವೀನ್, ಪ್ರಕಾಶ್, ಲಿಂಗಮೂರ್ತಿ, ಅತ್ತಿಬೆಲೆ ಮಾಣಿಕ್ಯ, ದೊಮ್ಮಸಂದ್ರ ಶಂಕರಾಚಾರ್, ಅಶ್ವತ್ಥಾಸಲಚಾರ್, ನಾಗರಾಜ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT