ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತ್ಯಂತ ಕಿರಿಯ `ಫಾರ್ಮುಲಾ ಒನ್' ವಿಶ್ವಚಾಂಪಿಯನ್ನರು

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

`ಫಾರ್ಮುಲಾ ಒನ್' ಜಗತ್ತಿನ ಅದ್ಭುತ ಹಾಗೂ ಸಾಹಸಮಯ ಕ್ರೀಡೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹದ್ದು. ಈ ಕ್ರೀಡೆಯಲ್ಲಿ ವಿಶ್ವಚಾಂಪಿಯನ್‌ಷಿಪ್ ಪಟ್ಟಕ್ಕೇರಿದ ಅತ್ಯಂತ ಕಿರಿಯರ ಕಿರು ಪರಿಚಯ ಇಲ್ಲಿದೆ.

ಸೆಬಾಸ್ಟಿಯನ್ ವೆಟಲ್
ಫಾರ್ಮೂಲಾ ಒನ್ ರೇಸಿಂಗ್‌ನ ಅತ್ಯದ್ಭುತ ಅತಿ ಕಿರಿಯ ಪ್ರತಿಭೆಗಳಲ್ಲಿ ಇವರು ಒಬ್ಬರು. 1987ರ ಜುಲೈ 3 ರಂದು ಪಶ್ಚಿಮ ಜರ್ಮನಿಯಲ್ಲಿ ಜನಿಸಿದ ಇವರಿಗೆ ಆರಂಭದಲ್ಲಿ ಮೈಕಲ್ ಜಾನ್ಸನ್ ತರಹ ಪಾಪ್ ಹಾಡುಗಾರನಾಗಬೇಕೆಂಬ ಆಸೆ ಇತ್ತಂತೆ. ಆದರೆ ತಮ್ಮ ಸ್ವರ, ಧ್ವನಿಗಳು ಇದಕ್ಕೆ ಸಹಕಾರಿ ಅಲ್ಲ ಎಂದು ಬಹುಬೇಗನೆ ಅರಿತು ತಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದರು. ಈ ಸಮಯದಲ್ಲಿ ಇವರ ಗಮನವನ್ನು ಸೆಳೆದವರೇ ಮೈಕಲ್ ಶೂಮಾಕರ್.

ಫಾರ್ಮುಲಾ ಒನ್ ಜಗತ್ತಿನ ಅನಭಿಷಕ್ತ ದೊರೆಯಾಗಿ ಕಂಗೊಳಿಸುತ್ತಿದ್ದ ಶೂಮಾಕರ್ ತರಹವೇ ತಾನೂ ಅತಿ ವೇಗದ ಚಾಲಕನಾಗಬೇಕೆಂಬ ಕನಸನ್ನು ಕಟ್ಟಿಕೊಂಡ ವೆಟಲ್ ತನ್ನ 8ನೇ ವಯಸ್ಸಿನ್ಲ್ಲಲೇ ಸಣ್ಣ ವಾಹನಗಳ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಯಾಗುತ್ತಿದ್ದರು.

2006ರಲ್ಲಿ ಅಂದರೆ ತಮ್ಮ 19ನೇ ವಯಸ್ಸಿನ್ಲ್ಲಲೇ ಬಿಎಂಡಬ್ಲೂ ಸಾಬರ್ ತಂಡದ 3ನೇ ಚಾಲಕರಾಗಿ ನಿಯುಕ್ತಿಗೊಂಡರು. ಈ ಸಮಯದಲ್ಲಿ ಇವರು ತೋರಿದ ಅಸಾಧಾರಣಾ ಸಾಧನೆಯನ್ನು ಗಮನಿಸಿದ ಸಾಬರ್ ತಂಡವು 2007ರ ಫಾರ್ಮುಲಾ ಒನ್ ಸ್ಪರ್ಧೆಗೆ ಟೆಸ್ಟ್ ಡ್ರೈವರ್ ಆಗಿ ನೇಮಿಸಿತು.

ಮೊದಲ ಸ್ಥಾನದಲ್ಲಿದ್ದ ಚಾಲಕರು ಅಪಘಾತಕ್ಕೀಡಾಗಿ ಗಾಯಗೊಂಡ ಪರಿಣಾಮ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದ ವೆಟಲ್ ತಮ್ಮ ಚೊಚ್ಚಲ ವಿಶ್ವ ಫಾರ್ಮುಲ ಒನ್ ರೇಸಿಂಗ್‌ನಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಈ ಸ್ಥಾನ ಪಡೆದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008ರಲ್ಲಿ ರೆಡ್‌ಬುಲ್ ತಂಡವನ್ನು ಸೇರಿದ ವೆಟಲ್‌ಗೆ ಅಪಘಾತಗಳ ಸರಮಾಲೆಯೆ ದಕ್ಕಲಾರಂಭಿಸಿತು. ಹಲವು ಬಾರಿ ಸಣ್ಣಪುಟ್ಟ ಗಾಯಗಳಾದರೂ ಕಂಗೆಡದ ಇವರು ರೇಸಿಂಗ್ ಬಿಡಲೇ ಇಲ್ಲ.ಪರಿಣಾಮ 2008ರ ಇಟಾಲಿಯನ್ ಗ್ರ್ಯಾನ್ ಪ್ರೀ ಟೂರ್ನಿಯಲ್ಲಿ ಮೊದಲ ಸ್ಥಾನ ಪಡೆದು ವಿಜೇತರಾಗುವ ಮೂಲಕ  ಈ ಸ್ಥಾನ ಪಡೆದ ಮೊದಲ ಕಿರಿಯ ವ್ಯಕ್ತಿ ಎಂಬ ಹೆಗ್ಗಳಕೆಗೆ ಪಾತ್ರರಾದರು. ಈ ಸಮಯದಲ್ಲಿ ಇವರ ವಯಸ್ಸು ಬರೆ 21 ವರ್ಷಗಳು !

ಇಷ್ಟೊತ್ತಿಗಾಗಲೇ ಇವರನ್ನು `ಬೇಬಿ ಶುಮಿ', `ಜೂನಿಯರ್ ಶೂಮಾಕರ್' ಎಂದೆಲ್ಲಾ ಬಣ್ಣಿಸಿದವು. 2009ರ ಫಾರ್ಮೂಲಾ ಒನ್ ರೇಸಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ಇವರು 2010, 2011 ಹಾಗೂ ಈ ವರ್ಷ  ಸತತ ಮೂರು ಬಾರಿ ಮೊದಲ ಸ್ಥಾನ ಪಡೆಯುವ ಮೂಲಕ ಜೂನಿಯರ್ ಶೂಮಾಕರ್ ಎಂಬ ತಮ್ಮ ಅನ್ವರ್ಥನಾಮವನ್ನು ದಿಟವಾಗಿಸುವ ಯತ್ನದಲ್ಲಿದ್ದಾರೆ. ಅಲ್ಲದೆ ಹ್ಯಾಟ್ರಿಕ್ ಸಾಧನೆ ತೋರಿದ ಅತ್ಯಂತ ಕಿರಿಯ ಎಂಬ ಕೀರ್ತಿಗೂ ಪಾತ್ರರಾದರು.

ಲಿವೀಸ್ ಹ್ಯಾಮಿಲ್ಟನ್
ಇವರು ಹುಟ್ಟಿದ್ದು 1985ರಲ್ಲಿ.  ಇಂಗ್ಲೆಂಡ್‌ನಲ್ಲಿ ಜನಿಸಿದ ಇವರ ತಂದೆ ಬಿಳಿ ವರ್ಣೀಯರಾದರೆ ತಾಯಿ ಕಪ್ಪು ವರ್ಣೀಯರು. ಹ್ಯಾಮಿಲ್ಟನ್ ಎರಡು ವರ್ಷದವರಿದ್ದಾಗಲೇ ತಂದೆ - ತಾಯಿ ಬೇರೆ ಬೇರೆಯಾದರು. ಹೀಗಾಗಿ ಬಾಲ್ಯ ಜೀವನ ಅಷ್ಟೇನೂ ಸುಖದಾಯಕವಾಗಿರಲಿಲ್ಲ.

1991ರಲ್ಲಿ ಅಂದರೆ ತಮ್ಮ 6ನೇ ವಯಸ್ಸಿನ್ಲ್ಲಲಿ ತಂದೆ ನೀಡಿದ  ರೇಡಿಯೊ ಕಂಟ್ರೋಲರ್ ಕಾರಿನಿಂದ ಸ್ಫೂರ್ತಿಗೊಂಡ ಹ್ಯಾಮಿಲ್ಟನ್ ತಾನು ರೇಸಿಂಗ್‌ನಲ್ಲಿ ಭಾಗವಹಿಸಬೇಕೆಂಬ ಕನಸನ್ನು ಕಾಣತೊಡಗಿದರು.ಶಾಲೆಯಲ್ಲಿ ರೇಸಿಂಗ್ ಮಾತ್ರವಲ್ಲ ಫುಟಬಾಲ್‌ನಲ್ಲೂ ಅಪ್ರತಿಮ ಪ್ರತಿಭೆ ತೋರಿದ ಹ್ಯಾಮಿಲ್ಟನ್ ಒಮ್ಮೆ ಸಂದರ್ಶನವೊಂದರಲ್ಲಿ ತಾವು ಫಾರ್ಮುಲ ಒನ್ ರೇಸಿಂಗ್‌ಗೆ ಬರದೇ ಹೋಗಿದ್ದರೆ ಒಬ್ಬ ಒಳ್ಳೆಯ ಫುಟ್‌ಬಾಲ್ ಆಟಗಾರನಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

2007ರಲ್ಲಿ ಮೆಕ್‌ಲಾರೆನ್ ತಂಡವನ್ನು ಸೇರಿದ ಇವರು ಫಾರ್ಮುಲ ಒನ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದರು. ಈ ಸಮಯದಲ್ಲಿ ಇವರ ವಯಸ್ಸು ಬರೇ 22.ನಂತರ ಮರುವರ್ಷವೇ ಅಂದರೆ 2008ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಈ ಸ್ಥಾನಕ್ಕೇರಿದ ಮೊದಲ ಕಪ್ಪು ವರ್ಣೀಯ ಎಂಬ ಶ್ರೇಯಕ್ಕೂ ಪಾತ್ರರಾದರು.

ಫರ್ನಾಂಡೋ ಅಲೊನ್ಸೊ
1981ರಲ್ಲಿ ಸ್ಪೇನ್‌ನಲ್ಲಿ ತೀರಾ ಬಡ ಕುಟುಂಬದಲ್ಲಿ ಜನಿಸಿದ ಫರ್ನಾಂಡೋ ಅಲೊನ್ಸೊ ತಂದೆ ಕಾರ್ಖಾನೆಯೊಂದರ್ಲ್ಲಲಿ ಮೆಕಾನಿಕ್ ಆಗಿದ್ದರು. ತಾಯಿ ದಿನಸಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.2001ರಲ್ಲಿ ಮಿನರಡಿ ಪರ ಆಡಿದ ಇವರು ಆ ಹೊತ್ತಿಗಾಗಲೆ ಮೂರನೇ ಅತಿ ಕಿರಿಯ ಚಾಲಕ ಎಂಬ ಹೆಸರಿಗೆ ಪಾತ್ರರಾಗಿದ್ದರು. ಆದರೆ ಈ ಸಾಲಿನಲ್ಲಿ ಯಾವುದೇ ಅಂಕ ಗಳಿಸದೇ ಸೋಲು ಕಂಡರು.

ಗೆಲುವಿನ ಮೊದಲ ಮೆಟ್ಟಿಲೇ ಸೋಲು ಎಂಬ ನಾಣ್ಣುಡಿಯಂತೆ ಇವರು ಎದೆಗುಂದದೆ ಮತ್ತೆ 2002ರಲ್ಲಿ ರೇಸಿಂಗ್ ಕಣಕ್ಕೆ ರೆನೋ ತಂಡದ ಪರವಾಗಿ ಧುಮುಕಿದರು. ಆದರೆ ಇವರಿಗೆ ತಂಡದಲ್ಲಿ ಸಿಕ್ಕ ಸ್ಥಾನ ಬರೇ ಟೆಸ್ಟ್ ಡ್ರೈವರ್.ಆದರೆ ಇದಕ್ಕೂ ಹಿಂಜರಿಯದ ಇವರು 2003ರಲ್ಲಿ ರೆನೋ ತಂಡದಲ್ಲೇ ಚಾಲಕರಾಗಿ 6ನೇ ಸ್ಥಾನ ಪಡೆದರು. ಅಲ್ಲಿಂದ ಈ ವರ್ಷದವರೆಗೂ ಒಮ್ಮೆಯೂ ಹಿಂದೆ ತಿರುಗಿ ನೋಡದ ಫರ್ನಾಂಡೋ  2005 ಹಾಗೂ 2006ರಲ್ಲಿ ಸತತ 2 ಬಾರಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರು. ಸದ್ಯ 2012ರಲ್ಲಿ ಫೆರಾರಿ ತಂಡದ ಪರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮೈಕಲ್ ಶೂಮಾಕರ್ 
ಇವರ ಹೆಸರನ್ನು ಕೇಳದವರೇ ಇಲ್ಲ. ಫಾರ್ಮುಲ ಒನ್ ಜಗತ್ತಿನ ಅನಭಿಷಕ್ತ ದೊರೆ. ದಾಖಲೆಗಳ ವೀರ. ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಹೇಗೋ ಹಾಗೆ ಫಾರ್ಮುಲ ಒನ್‌ಗೆ ಮೈಕಲ್ ಶೂಮಾಕರ್.ಜರ್ಮನಿಯಲ್ಲಿ 1969ರಲ್ಲಿ ಜನಿಸಿದ ಇವರಿಗೆ ರೇಸಿಂಗ್ ಸ್ಪರ್ಧೆಯ ಬಗೆಗೆ ಬಾಲದಲ್ಲೇ ಆಸಕ್ತಿ ಮೂಡಿತು.

ತಂದೆ ಸಣ್ಣ ವಾಹನವೊಂದನ್ನು ಇವರ 4ನೇ ವಯಸ್ಸಿಗೆ ಖರೀದಿಸಿ ಕೊಟ್ಟಿದ್ದರು. ಸ್ಥಳಿಯ ರೇಸಿಂಗ್ ಕ್ಲಬ್‌ಗೆ ಬಾಲ್ಯದಲ್ಲೇ ಇವರನ್ನು ಪರಿಚಯಿಸಿದ್ದರು. ಹೀಗಾಗಿ ರೇಸಿಂಗ್ ಎಂಬುದು ಇವರಿಗೆ ಕಷ್ಟದಾಯಕ ಎನಿಸಲೇ ಇಲ್ಲ.ಕೇವಲ ತಮ್ಮ 19ನೇ ವಯಸ್ಸಿನಲ್ಲೇ ಯೂರೋಪಿಯನ್ ಫಾರ್ಮುಲ ಫೋರ್ಡ್ ಚಾಂಪಿಯನಷಿಪ್‌ನಲ್ಲಿ 2ನೇ ಸ್ಥಾನ ಪಡೆದರಲ್ಲದೆ ಅದೇ ವರ್ಷ ನಡೆದ ಫಾರ್ಮುಲ ಕಾಂಗೊದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದರು. ಇದು ಇವರ ಫಾರ್ಮುಲ ಒನ್ ರೇಸಿಂಗ್‌ಗೆ ತಳಹದಿಯಾಯಿತು.

ಮೊದಲ ಬಾರಿ ಅಂದರೆ 1994ರಲ್ಲಿ ಚಾಂಪಿಯನ್ ಆದಾಗ ಇವರ ವಯಸ್ಸು ಬರೇ 25!. ಒಟ್ಟು ಇದುವರೆಗೂ ಇವರು ಫಾರ್ಮೂಲಾ ಒನ್‌ನಲ್ಲಿ 7 ಬಾರಿ ವಿಶ್ವಚಾಂಪಿಯನ್‌ಷಿಪ್ ಪಟ್ಟವನ್ನು ಪಡೆದುಕೊಂಡಿದ್ದು, ಇದುವರೆಗಿನ ದಾಖಲೆ ಎನಿಸಿದೆ. 2006ರಲ್ಲಿ ನಿವೃತ್ತಿ ಘೋಷಿಸಿದ ನಂತರವೂ ಫಾರ್ಮುಲ ಒನ್ ಇವರನ್ನು ಬಿಡಲಿಲ್ಲ. ಮತ್ತೆ 2010ರಲ್ಲಿ ಕಣಕ್ಕಿಳಿದರಾದರೂ ತಮ್ಮ ಪ್ರಥಮಾರ್ಧದಲ್ಲಿ ಕಂಡ ಯಶಸ್ಸನ್ನು ಕಾಣಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT