ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಬೃಹತ್ ಟೆಲಿಸ್ಕೋಪ್

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಹೊನೊಲುಲು, ಹವಾಯಿ (ಎಪಿ): ಭಾರತ ಮತ್ತು ಚೀನಾ ಜಂಟಿ ಪಾಲುದಾರಿಕೆಯಲ್ಲಿ ವಿಶ್ವದ ಬೃಹತ್ `ಹವಾಯಿ ದೂರದರ್ಶಕ~ (ಟೆಲಿಸ್ಕೋಪ್) ತಯಾರಿಸಲು ನಿರ್ಧರಿಸುವುದರೊಂದಿಗೆ ಖಗೋಳ ವಿಜ್ಞಾನ ಸಂಶೋಧನೆಯ ಪ್ರಮುಖ ಕಾರ್ಯಕ್ಕೆ ಅಡಿಯಿಟ್ಟಿವೆ.

ಒಂದು ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಈ ದೂರದರ್ಶಕ ಯಂತ್ರ ತಯಾರಿಸಲು ತಗಲುವ ವೆಚ್ಚವನ್ನು ಎರಡೂ ದೇಶಗಳು ಜಂಟಿಯಾಗಿ ಭರಿಸಲು ಮಾವುನಾ ಕಿಯಾ ವಾಲ್ಕನೊ ಶೃಂಗಸಭೆಯಲ್ಲಿ ತೀರ್ಮಾನಿಸಿವೆ.

ಈ ಹೊಸ ದೂರದರ್ಶಕವು 30 ಮೀಟರ್ ಅಥವಾ 100 ಅಡಿ ವಿಸ್ತಾರದ ಮಸೂರ ಹೊಂದಿರಲಿದ್ದು, ಪ್ರಸ್ತುತ ವಿಶ್ವದಲ್ಲಿ ಬಳಕೆಯಾಗುತ್ತಿರುವುದಕ್ಕಿಂತ ಒಂಬತ್ತು ಪಟ್ಟು ದೊಡ್ಡ ಗಾತ್ರದ್ದಾಗಲಿದೆ. ಅದರ ಪ್ರತಿಬಿಂಬವು ಮೂರು ಪಟ್ಟು ತೀಕ್ಷ್ಣವಾಗಿರಲಿದೆ. ಆದರೆ ಈ ದೂರದರ್ಶಕವನ್ನೂ ಮೀರಿಸುವ 42 ಮೀಟರ್ ಅಥವಾ 138 ಅಡಿಗಳ ಮಸೂರದ ದೂರದರ್ಶಕವನ್ನು ಐರೋಪ್ಯ ರಾಷ್ಟ್ರಗಳು ಜಂಟಿ ಪಾಲುದಾರಿಕೆಯಲ್ಲಿ ತಯಾರಿಸಲು ಯೋಜಿಸಿದ್ದು, ನಂತರದ ವರ್ಷಗಳಲ್ಲಿ ಇದೇ ಬೃಹದಾಕಾರದ ದೂರದರ್ಶಕ ಎನಿಸಿಕೊಳ್ಳಲಿದೆ.

ಭಾರತದಲ್ಲಿ ಈಗಿರುವ ದೂರದರ್ಶಕ ಮಸೂರದ ಗಾತ್ರವು 2 ಮೀಟರ್ (6.5 ಅಡಿ) ಇದ್ದು, ನೂತನವಾಗಿ 4 ಮೀಟರ್‌ಗಳ (13 ಅಡಿ) ಮಸೂರವನ್ನು ತಯಾರಿಸಲಾಗುತ್ತಿದೆ. ಆದರೂ ಭಾರತ- ಚೀನಾ ಜಂಟಿ ಸಹಭಾಗಿತ್ವದ ಬೃಹತ್ ದೂರದರ್ಶಕ ಮಸೂರದಿಂದ ಹೆಚ್ಚು ಅನುಕೂಲವಾಗಲಿದೆ. ಗ್ರಹಗಳು, ನಕ್ಷತ್ರಗಳು, ಸೂರ್ಯ, ಚಂದ್ರ ಮತ್ತಿತರ ಬಾಹ್ಯಾಕಾಶ ಕೌತುಕಗಳನ್ನು ವೀಕ್ಷಿಸಲು ಇದು ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಯಿಂದ ಖಗೋಳವಿಜ್ಞಾನದಲ್ಲಿ ಎರಡೂ ದೇಶಗಳು ಉನ್ನತ ಮಟ್ಟವನ್ನು ತಲುಪಲಿವೆ ಎಂದು ಹವಾಯಿ ದೂರದರ್ಶಕ ವಿಜ್ಞಾನ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಜಿ.ಸಿ. ಅನುಪಮಾ ಮತ್ತು ಚೀನಾ ರಾಷ್ಟ್ರೀಯ ಖಭೌತವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಶುಡೆ ಮಾವೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT