ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ವಿವಿಧೆಡೆ ಗಣರಾಜ್ಯೋತ್ಸವ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

 ಇಸ್ಲಾಮಾಬಾದ್/ದುಬೈ (ಪಿಟಿಐ):  ವಿಶ್ವದ ವಿವಿಧೆಡೆ ನೆಲೆಸಿರುವ ಭಾರತೀಯರು ಗುರುವಾರ ದೇಶದ 63ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮಿಷನರ್  ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈ ಕಮಿಷನರ್ ಶರತ್ ಸಭರವಾಲ್ ತ್ರಿವರ್ಣ ಧ್ವಜ ಹಾರಿಸಿ ಚಾಲನೆ ನೀಡಿದರು. ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಬುಧವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಶರತ್ ವಾಚಿಸಿದರು.

ಇಸ್ಲಾಮಾಬಾದ್ ಕೇಂದ್ರ ಭಾಗದಲ್ಲಿರುವ ಈ ಕಚೇರಿಯಲ್ಲಿ ಬಿಗಿ ಭದ್ರತೆಯಲ್ಲಿಯೇ ಕಾರ್ಯಕ್ರಮ ನಡೆಯಿತು.  ಕಚೇರಿಯ ಸಿಬ್ಬಂದಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು.

ಇದರ ಜೊತೆಗೆ ಇಸ್ಲಾಮಾಬಾದ್‌ನಲ್ಲಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳೂ ಜರುಗಿದವು. ಲಾಹೋರ್‌ನಲ್ಲಿ ಜ.27 ಮತ್ತು ಕರಾಚಿಯಲ್ಲಿ ಜ. 29 ಭಾರತದ ಹೈ ಕಮಿಷನರ್  ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಪ್ರಸಿದ್ಧ ವಾಣಿಜ್ಯೋದ್ಯಮಿಗಳು, ರಾಜಕಾರಣಿಗಳು, ನಾಗರಿಕ ಸಂಘಟನೆಗಳ ಕಾರ್ಯಕರ್ತರು, ಪತ್ರಕರ್ತರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಳೆದ ವರ್ಷ ಹೈ ಕಮಿಷನರ್ ಅವರು 15 ವರ್ಷಗಳ ಬಳಿಕ ಮೊದಲ ಬಾರಿಗೆ ಕರಾಚಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದರು.

ಸಿಂಗಪುರದಲ್ಲಿ ಭಾರತದ ಹೈ ಕಮಿಷನರ್ ಟಿ.ಸಿ.ಎ. ರಾಘವನ್ ನೇತೃತ್ವದಲ್ಲಿ ಗಣರಾಜ್ಯೋತ್ಸವ ಜರುಗಿತು. ರಾಘವನ್ ಅವರಿಂದ ಜರುಗಿದ ಧ್ವಜಾರೋಹಣದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಭಾರತೀಯರು ಪಾಲ್ಗೊಂಡಿದ್ದರು. ಬೆಳಿಗ್ಗೆ ಜರುಗಿದ ಕಾರ್ಯಕ್ರಮದಲ್ಲಿ ಭಾರತೀಯ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಮತ್ತು ನೃತ್ಯ ಜರುಗಿತು.

ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಭಾರತೀಯರು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಗಣರಾಜ್ಯೊತ್ಸವವನ್ನು ಆಚರಿಸಿದರು.

ತಮಿಳುನಾಡು ತೌಹೀದ್ ಜಮಾತ್ (ಟಿಎನ್‌ಟಿಜೆ) ಎಂಬ ಸಾಮಾಜಿಕ ಸಂಘಟನೆಯಿಂದ ಈ ಶಿಬಿರ ಆಯೋಜಿಸಿತ್ತು. ದಾನಿಗಳಿಂದ ಸಂಗ್ರಹವಾದ 111 ಲೀಟರ್ ರಕ್ತವನ್ನು  ಕಿಂಗ್ ಫಹಾಡ್ ಮೆಡಿಕಲ್ ಸಿಟಿ (ಕೆಎಫ್‌ಎಂಸಿ) ಗೆ ನೀಡಲಾಯಿತು.  ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಫೇಸಲ್ ಮೊಹಮ್ಮದ್ ಈ ಸಂಘಟನೆಯ ಅಧ್ಯಕ್ಷರಾಗಿದ್ದು, ಈ ವರ್ಷ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ಈ ಶಿಬಿರ ಏರ್ಪಡಿಸಲಾಗಿತ್ತು ಎಂದು ಹೇಳಿದರು.

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಈಜಿಪ್ಟ್ ನಾಗರಿಕರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT