ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆ ಮೇಲೆ ಕಣ್ಣು

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಲ್ಲಿನ ರೋಲರ್‌ಗಳ ಸಂಗ್ರಹ

ಹವ್ಯಾಸಗಳು ಮನುಷ್ಯನ ಆಯಾಸ ನೀಗಿಸಿ ಮನಸ್ಸಿಗೆ ಮುದ ನೀಡುತ್ತವೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.
ಒಬ್ಬರಿಗೆ ಒಂದೊಂದು ಹವ್ಯಾಸ. ಓದು, ಕ್ರೀಡೆ, ಅಂಚೆ ಚೀಟಿ ಸಂಗ್ರಹ, ಕಸೂತಿ ಹಾಕುವುದು, ಚಿತ್ತಾರ ಬಿಡಿಸುವುದು ಹೀಗೆ ತರಹೇವಾರಿ ಹವ್ಯಾಸಗಳು ಇರುತ್ತವೆ. ಕೆಲವರು ಹವ್ಯಾಸಗಳನ್ನು ವೃತ್ತಿಯಾಗಿಯೂ ಇನ್ನು ಕೆಲವರು ಪ್ರವೃತ್ತಿಯಾಗಿಯೂ ಅಳವಡಿಸಿಕೊಂಡಿರುತ್ತಾರೆ. 
ಆದರೆ ಚೀನಾ ದೇಶದ ಯುವಕನೊಬ್ಬ ರೋಲರ್‌ಗಳ ಸಂಗ್ರಹವನ್ನು ವೃತ್ತಿಯಾಗಿಸಿಕೊಂಡು ಸಾಕಷ್ಟು ಸಂಪಾದನೆ ಮಾಡುತ್ತಿದ್ದಾನೆ. ಈತನ ರೋಲರ್‌ಗಳ ಸಂಗ್ರಹವು ವಿಶ್ವದಾಖಲೆಗೆ ಸೇರಿದೆ.

ಚೀನಾದ ವೂಜಿ ಪ್ರಾಂತ್ಯದ ಫೆಂಗ್ ಜಿಯಾಫ್ನ ಎಂಬ ಯುವಕ ಕಳೆದ ಎಂಟು ವರ್ಷಗಳಿಂದ ಕಲ್ಲಿನ ರೋಲರ್‌ಗಳ ಸಂಹಗ್ರದಲ್ಲಿ ತೊಡಗಿದ್ದಾನೆ.

ಈವರೆಗೂ ವಿವಿಧ ಬಗೆಯ 1700ಕ್ಕೂ ಹೆಚ್ಚು ಕಲ್ಲಿನ ರೋಲರ್‌ಗಳನ್ನು ಸಂಗ್ರಹಿಸಿದ್ದಾನೆ. ಇವುಗಳನ್ನು ನೋಡಲು ಪ್ರತಿ ನಿತ್ಯ ಸಾವಿರಾರು ಜನರು ಬರುತ್ತಾರೆ. ಇದರಿಂದ ಸಂಪಾದನೆಯೂ ಆಗುತ್ತದೆ ಎಂದು ಫೆಂಗ್ ಹೇಳುತ್ತಾನೆ. ಈ ಸಂಗ್ರಹದಲ್ಲಿ 12ನೇ ಮತ್ತು 14ನೇ ಶತಮಾನದ ರೋಲರ್‌ಗಳಿವೆ. 15 ರಿಂದ 20 ಸೆ. ಮೀ. ಅಳತೆಯ ಪುಟ್ಟ ರೋಲರ್‌ಗಳಿಂದ ಹಿಡಿದು 20 ಅಡಿ ಎತ್ತರದ ರೋಲರ್‌ಗಳು ಇಲ್ಲಿವೆ. ವಿಶ್ವದಲ್ಲೇ ಇದು ಅಪರೂಪದ ಸಂಗ್ರಹಾಲಯವಾಗಿದೆ.

ಮಹಿಳಾ ಬೈಕ್ ರೈಡರ್ಸ್‌

ಬೈಕ್ ರೈಡಿಂಗ್ ತುಂಬಾ ಖುಷಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ತರಹೇವಾರಿ ಸಾಹಸಗಳನ್ನು ಮಾಡಿದ ಹಲವರು ವಿಶ್ವದಾಖಲೆ ಪಟ್ಟಿಗೆ ಸೇರಿದ್ದಾರೆ.

ಡೆಲಿಯಾನಾ ಮಹಿಳಾ ಮೋಟಾರ್‌ಸೈಕಲ್ ತಂಡ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ವಿಶ್ವದಾಖಲೆಗೆ ಪಾತ್ರವಾಗಿದೆ.
ಈ ತಂಡದಲ್ಲಿ 50ಕ್ಕೂ ಹೆಚ್ಚು ಸದಸ್ಯರಿದ್ದಾರೆ. 1996ರಿಂದ ಅಸ್ತಿತ್ವದಲ್ಲಿರುವ ಈ ತಂಡ 2011ರವರೆಗೂ ಸತತವಾಗಿ ವಿಶ್ವದಾಖಲೆ ಮಾಡಿದ ಅಗ್ಗಳಿಕೆಗೆ ಪಾತ್ರವಾಗಿದೆ.

ಮೋಟರ್‌ಸೈಕಲ್ ರೈಡ್ ಮಾಡುತ್ತಲೇ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವುದು ಈ ತಂಡದ ಮುಖ್ಯ ಉದ್ದೇಶ.  ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶಗಳಲ್ಲಿ ಮೋಟಾರ್‌ಸೈಕಲ್ ರೈಡ್ ಮಾಡುವ ಮೂಲಕ ಈ ತಂಡ ಚಾಕಚಕ್ಯತೆ ಮೆರೆದಿದೆ.

`ಇಮೇಜ್ ಆಫ್ ಅಂಬಾಸಿಡರ್' ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವದ ಎಲ್ಲಾ ದೇಶಗಳನ್ನು ಒಂದುಗೂಡಿಸಬೇಕೆಂಬ ಗುರಿಯನ್ನು ಹೊಂದಿ ಈ ತಂಡ ಮೋಟಾರ್‌ಸೈಕಲ್‌ನಲ್ಲಿ ಎಲ್ಲಾ ದೇಶಗಳಿಗೂ ಭೇಟಿ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಈ ತಂಡ ಒಂಬತ್ತು ಭಾರಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಈಜಿನ ದಾಖಲೆ
 

ಹಳ್ಳಿಯ ತುಂಡೈಕಳು ಕೂಡ ಈಜುತ್ತಾರೆ, ಇದರಲ್ಲೇನು ಮಹಾ ದಾಖಲೆ ಎಂದು ಮೂಗು ಮುರಿಯುವವರು ಇದ್ದಾರೆ. ಆದರೆ ಚೀನಾದ ಹಳ್ಳಿಹೈದನೊಬ್ಬ ನದಿಯಲ್ಲಿ 14,300 ಮೀಟರ್ ದೂರ (ಉದ್ದ) ಈಜುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದ್ದಾನೆ.
ಜಿಯಾಂಗ್ಸಿ ಪ್ರಾಂತ್ಯದ ಯೂ ಜೆನ್‌ರಾಂಗ್ ಎಂಬ ಹಳ್ಳಿ ಹುಡುಗನೇ ಈ  ಸಾಧನೆಗೆ ಪಾತ್ರನಾಗಿರುವವನು.

ಚಾಂಗ್‌ಜಿಯಾಂಗ್ ಎಂಬ ನದಿಯಲ್ಲಿ 14300 ದೂರ ಈಜಿದ್ದಾನೆ. ನದಿಯಲ್ಲಿ ಇಷ್ಟು ದೂರ ಈಜಿರುವುದು ವಿಶ್ವದಾಖಲೆಯಾಗಿದೆ. ಈ ಹಿಂದೆ  ಹತ್ತು ಸಾವಿರ ಮೀಟರ್ ಈಜಿದ್ದು ದಾಖಲೆಯಾಗಿತ್ತು. ಇದನ್ನು ಜೆನ್ ರಾಂಗ್ ಅಳಸಿಹಾಕಿದ್ದಾನೆ.

ನದಿಯಲ್ಲಿ 14 ಸಾವಿರ ಮೀಟರ್ ದೂರವನ್ನು ಈಜುವುದು ಕಷ್ಟಸಾಧ್ಯ. ಯಾಕೆಂದರೆ ನೀರಿನ ಸೆಳೆತ ಹೆಚ್ಚಾದಾಗ ಅಪಾಯ ಕಟ್ಟಿಟ್ಟಬುತ್ತಿ. ಇಂತಹ ಸಂದರ್ಭಗಳಲ್ಲಿ ನಾವು ನಿಯಂತ್ರಣ ಸಾಧಿಸುವುದು ಕಷ್ಟ ಎನ್ನುತ್ತಾರೆ ಜೆನ್ ರಾಂಗ್.

ನನ್ನ ದಾಖಲೆಯನ್ನು ನಾನೇ ಮುರಿದು ಸುಮಾರು ಒಂದು ಲಕ್ಷ ಮೀಟರ್ ದೂರದವರೆಗೂ ಈಜುವ ಗುರಿ ಹೊಂದಿದ್ದೇನೆ ಎಂದು ಜೆನ್ ರಾಂಗ್ ವಿಶ್ವಾಸದಿಂದ ನುಡಿಯುತ್ತಾರೆ.

ಬೆರಳ ಮೇಲೆ 50 ಕಾರು
 

ಸಾಧಿಸಬೇಕೆಂಬ ಛಲ ಇರುವವರಿಗೆ ಸಾಧಿಸುವ ಗುರಿಯ ಸುಳಿವು ಇದ್ದೇ ಇರುತ್ತದೆ. ಆ ಸುಳಿವಿನ ಜಾಡು ಹಿಡಿದು ಸಾಗಿದರೆ ಗುರಿ ತಲುಪುವುದು ಕಷ್ಟವಲ್ಲ. ಇದಕ್ಕೆ ಕಠಿಣ ಪರಿಶ್ರಮ, ಸತತ ಅಭ್ಯಾಸ ಇರಲೇಬೇಕು.

ಆಂಧ್ರಪ್ರದೇಶದ ಯುವಕ ಕೆ. ತಿರುಪತಿರಾವ್ ಎಂಬುವರು ನೂತನ ವಿಶ್ವದಾಖಲೆಯನ್ನು ಮಾಡಿದ್ದಾರೆ. ತಮ್ಮ ಕೈಬೆರಳುಗಳ ಮೇಲೆ 50 ಕಾರುಗಳನ್ನು ಹಾದು ಹೋಗುವಂತೆ ಮಾಡಿರುವುದು ದಾಖಲೆಯ ವೈಶಿಷ್ಟ್ಯ.

ಈ ದಾಖಲೆಗೆ ಅಂಬಾಸಿಡರ್, ಜಾಗ್ವಾರ್‌ನಂತಹ ಭಾರೀ ಗಾತ್ರದ ಕಾರುಗಳನ್ನು ಬಳಸಿದ್ದು ವಿಶೇಷ. ಇಪ್ಪತ್ತನಾಲ್ಕು ನಿಮಿಷಗಳ ಅವಧಿಯಲ್ಲಿ ತಿರುಪತಿ ರಾವ್ ಅವರ ಕೈಬೆರಳುಗಳ ಮೇಲೆ 50 ಕಾರುಗಳು ಹಾದು ಹೋದವು. ಆದರೂ ಅವರ ಕೈಬೆರಳುಗಳಿಗೆ ಗಾಯವಾಗದಿರುವುದೇ ಅಚ್ಚರಿ. ಒಂದೆರಡು ವರ್ಷಗಳಿಂದ ನಡೆಸಿದ ತಾಲೀಮಿನಿಂದ ಈ ವಿಶ್ವದಾಖಲೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ತಿರುಪತಿ ರಾವ್.

ಈ ದಾಖಲೆಗಳನ್ನು ಮಾಡುವುದರಿಂದ ಯಾವುದೇ ರೀತಿಯ ಹಣ ಬರುವುದಿಲ್ಲ. ಇದು ಅಪಾಯಕಾರಿ ಸಾಹಸ ಅಲ್ಲವೇ ಎಂಬ ಪ್ರಶ್ನೆಗೆ, ಹಣ ಮುಖ್ಯವಲ್ಲ ದಾಖಲೆ ಮುಖ್ಯ ಎನ್ನುತ್ತಾರೆ ತಿರುಪತಿ ರಾವ್. ನಮ್ಮ ಮನಸ್ಸು ಸದಾ ಕ್ರಿಯಾಶೀಲವಾಗಿರಬೇಕಾದರೆ ಈ ತರಹದ ಪ್ರಯೋಗಗಳನ್ನು ಮಾಡುತ್ತಿರಬೇಕು ಎನ್ನುವುದು ಅವರ ಅಭಿಪ್ರಾಯ.

ಅತಿ ಉದ್ದದ ಮದುವೆ ಗೌನ್
 

`ಯವ್ವನದ ಸಂಭ್ರಮವೇ ಮದುವೆ'-ಇದು ಚೀನಾ ಗಾದೆ. ಅದರಂತೆ ಮದುವೆಯ ಸಂಭ್ರಮದ ನೆನಪು ಚಿರಸ್ಥಾಯಿಯಾಗಿರಬೇಕೆಂದು  ವಧುವರರು ಬಯಸುವುದು ಸಹಜ. ಅದಕ್ಕಾಗಿಯೇ ಚೀನಾದ ಕುಟುಂಬವೊಂದು `ವಿಶ್ವ ದಾಖಲೆ' ಯ  ಮದುವೆ ಮಾಡಿದೆ.

ಚೀನಾದ ಸಿಚೂನ್ ಪ್ರಾಂತ್ಯದಲ್ಲಿ   2011 ಅಕ್ಟೋಬರ್ 30ರಂದು ಈ ಮದುವೆ ನಡೆಯಿತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ವಿವಿಧ ದೇಶಗಳ ಗಣ್ಯವ್ಯಕ್ತಿಗಳು ಬಂದಿದ್ದರೂ ಈ ಮದುವೆ ಸುದ್ದಿಯಾಗುತ್ತಿತ್ತೇ ವಿನಾ  ವಿಶ್ವದಾಖಲೆಯ ಮದುವೆ ಯಾಗುತ್ತಿರಲಿಲ್ಲವೇನೋ?

ಈ ಮದುವೆಯಲ್ಲಿ ವಧು 4086 ಮೀಟರ್ ಉದ್ದದ ಗೌನ್ ಧರಿಸಿದ್ದೇ ಗೌನ್ ದಾಖಲೆಯಾಗಲು ಕಾರಣವಾಯಿತು.  ಹಾಗಾಗಿ ವಿಶ್ವದ ಅತಿ ಉದ್ದನೆಯ ಗೌನ್ ಎಂಬ ಹೆಗ್ಗಳಿಕೆಗೆ ಈ ಗೌನ್ ಪಾತ್ರವಾಯಿತು.
ಸುಮಾರು 250ಕ್ಕೂ ಹೆಚ್ಚು ಟೈಲರ್‌ಗಳು ಹಾಗೂ ನೂರಕ್ಕೂ ಹೆಚ್ಚು ಕಸೂತಿ ಕಲಾವಿದರು ಈ ಗೌನ್ ಸಿದ್ಧಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT