ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥನ ‘ಕೃಷಿ ಎಂಜಿನಿಯರಿಂಗ್‌’ ಪದವಿ!

Last Updated 10 ಡಿಸೆಂಬರ್ 2013, 9:45 IST
ಅಕ್ಷರ ಗಾತ್ರ

ಕವಿತಾಳ:  ಪಾಮನಕಲ್ಲೂರು ಗ್ರಾಮದ ವಿಶ್ವನಾಥ ಚೀಕಲಪರ್ವಿ ಓದಿದ್ದು ಬಿ.ಇ ಮೆಕಾನಿಕಲ್‌. ಇಷ್ಟಪಟ್ಟಿದ್ದು ಕೃಷಿ. ವಿಶ್ವನಾಥ್‌ ತಾನು ಓದಿದ ಮೆಕಾನಿಕಲ್ ಎಂಜಿನಿಯರಿಂಗ್‌ ಅನುಭವವನ್ನು ಕೃಷಿಕ್ಷೇತ್ರದಲ್ಲಿ ಬಳಸಿಕೊಂಡು ನಿವ್ವಳ ಲಾಭ ಪಡೆಯುತ್ತಿದ್ದಾರೆ. ಇವರಿಗೆ ತಮ್ಮ ಹೊಲವೇ ಕರ್ಮಶಾಲೆಯಾಗಿದೆ.

ಪಪ್ಪಾಯ ಮತ್ತು ದಾಳಿಂಬೆ ಬೆಳೆ ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎನ್ನುವುದನ್ನು ಯುವ, ಉತ್ಸಾಹಿ ರೈತ ವಿಶ್ವನಾಥ ಚೀಕಲಪರ್ವಿ ಇದೀಗ ಮಾಡಿ ತೋರಿಸಿದ್ದಾರೆ.

ಪಪ್ಪಾಯ ಬೆಳೆಯಿಂದ ಕಳೆದ ಸಾಲಿನಲ್ಲಿ ₨ 12 ಲಕ್ಷ ನಿವ್ವಳ ಲಾಭ ಗಳಿಸಿದ್ದು ಇದೀಗ ದಾಳಿಂಬೆ ಮತ್ತು , ಪಪ್ಪಾಯ ಬೆಳೆಯಿಂದ ಅಂದಾಜು ₨40 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿ.ಟಿ.ಡಿ.­ಎಂ ಕೋರ್ಸ್ ಪೂರ್ಣ­ಗೊಳಿ­ಸಿದ ನಂತರ ಎಚ್.ಕೆ.ಇ. ಸೊಸೈಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಕೃಷಿಯನ್ನು ಆಯ್ದುಕೊಂಡ ವಿಭಿನ್ನ ವ್ಯಕ್ತಿತ್ವ ಇವರದು.

‘ನಮ್ಮದು ಕೃಷಿಕ ಕುಟುಂಬ. ಕಾಲೇಜು ದಿನಗಳಿಂದಲೂ ಬಿಡುವಾ­ದಾಗೆಲ್ಲ ಹೊಲಗಳಿಗೆ ಭೇಟಿ ನೀಡು­ವುದು ಹವ್ಯಾಸವಾಗಿತ್ತು. ಹೀಗಾಗಿ ಮೊದಲಿನಿಂದಲೂ ಕೃಷಿ ಎಂದರೆ ನನಗೆ ತುಂಬಾ ಇಷ್ಟವಾಗಿತ್ತು’ ಎನ್ನುತ್ತಾರೆ ವಿಶ್ವನಾಥ. 7 ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಪಪ್ಪಾಯವನ್ನು ಕ್ರಮವಾಗಿ 2400 ಮತ್ತು 6200 ಸಸಿಗಳನ್ನು ನಾಟಿ ಮಾಡಿದ್ದರು. ಅಂದಾಜು ₨18 ಲಕ್ಷ ಮೊತ್ತದ 280 ಟನ್ ಪಪ್ಪಾಯ ಬೆಳೆ ತೆಗದುಕೊಂಡು ಪಪ್ಪಾಯವನ್ನು ಕಿತ್ತುಹಾಕಿ ಇದೀಗ ದಾಳಿಂಬೆ ಆರೈಕೆ­ಯಲ್ಲಿ ತೊಡಗಿದ್ದಾರೆ.  ಪ್ರತಿ ಎಕರೆಗೆ ₨1ಲಕ್ಷ ಖರ್ಚು ತೆಗೆದು ₨12 ಲಕ್ಷ ನಿವ್ವಳ ಲಾಭವನ್ನು ಪಪ್ಪಾಯ ಬೆಳೆಯಿಂದ ಪಡೆದಿರುವುದಾಗಿ ಹೇಳು­ತ್ತಾರೆ. ಇದೀಗ 14 ತಿಂಗಳಷ್ಟು ಬೆಳೆದ ದಾಳಿಂಬೆ ಗಿಡ ಹುಲುಸಾಗಿದೆ. ಸಾಧ್ಯ­ವಾದಷ್ಟು ಸಾವಯವ ಮತ್ತು ಕಡಿಮೆ ಪ್ರಮಾಣದ ರಾಸಾಯನಿಕ ಬಳಸಿ ಹೆಚ್ಚಿನ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ವರ್ಷಕ್ಕೆ ₨40 ಸಾವಿರದಂತೆ ಲೀಸ್ ಆಧಾರದಲ್ಲಿ 6 ಎಕರೆ ಜಮೀನು ಪಡೆದು ಅದರಲ್ಲಿ 6400 ಪಪ್ಪಾಯ ಗಿಡಗಳನ್ನು ನಾಟಿ ಮಾಡಿದ್ದಾರೆ. ಸಾಲಿ­ನಿಂದ ಸಾಲು 7ಅಡಿ ಮತ್ತು ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಜಮೀನು ಗುಡ್ಡಕ್ಕೆ ಹೊಂದಿಕೊಂಡಿ­ರುವುದ­ರಿಂದ ಕಾಫಿ ತೊಟದಂತೆ ಭಾಸ­ವಾಗುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು ಎರಡೂ ಹೊಲ­ಗಳಲ್ಲಿ ತಲಾ ಎರಡು ಕೊಳವೆಬಾವಿ ಅವಲಂಬಿಸಿ ವ್ಯವಸಾಯ ಮಾಡುತ್ತಿ­ದ್ದಾರೆ. ಎರೆಹುಳು ಘಟಕ, ಜೀವಸಾರ ಘಟಕ ಹೊಂದಿದ್ದು, ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತ ಬಳಕೆ ಮಾಡುತ್ತಿ­ದ್ದಾರೆ.

ಪ್ರಯೋಗ: ಗೋಮೂತ್ರ, ಜೀವಾಮೃತ ಮತ್ತು ಹುಳಿ ಮಜ್ಜಿಗೆ ಸಿಂಪರಣೆ ಮಾಡುವ ಮೂಲಕ ಪಪ್ಪಾಯಗೆ ಬರುವ ವೈರಸ್ ನಿಯಂತ್ರಿಸಬಹುದು ಮತ್ತು ಗಿಡಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎನ್ನುವುದು ಇವರ ಅನುಭವದ ಮಾತು.
ಬೇವಿನ ಹಿಂಡಿ ಹಾಗೂ ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಮಣ್ಣಿನ ಫಲ­ವತ್ತತೆ ಕಾಪಾಡಬಹುದು. ಹನಿ ನೀರಾ­ವರಿ ಪದ್ಧತಿ ಅಳವಡಿಕೆಯಿಂದ ನೀರಿನ ಅಪವ್ಯಯ ತಪ್ಪಿಸಬಹುದು ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ. ತೋಟಗಾರಿಕೆ ಬೆಳೆಗಳ ಜೊತೆಗೆ ಸಾಂಪ್ರಾದಾಯಿಕ ಬೆಳೆಗಳಾದ ತೊಗರಿ, ಸಜ್ಜೆ, ಈರುಳ್ಳಿ ಮತ್ತು ಭತ್ತ ಬೆಳೆಯುತ್ತಿದ್ದು, ಅಂದಾಜು 2.5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲು ಭೂಮಿಯನ್ನು ಹದಗೊಳಿಸಿದ್ದಾರೆ.

ತೋಟಗಾರಿಕೆಯಲ್ಲಿ ಇವರ ಸಾಧನೆ ಗುರುತಿಸಿ ಇತ್ತೀಚೆಗೆ ಬಾಗಲಕೋಟೆ­ಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮತ್ತು ಅವಲಂಬನೆ ಹೆಚ್ಚುತ್ತಿದ್ದು, ಸಂಪೂರ್ಣ ಮೆಕಾನಿಕಲ್ ಆಗಿದೆ. ಹನಿ ನೀರಾವರಿ ಪದ್ಧತಿ ಮೂಲಕ ಪ್ರತಿ ಗಿಡಕ್ಕೂ ನಿಗದಿತ ನೀರು ಹರಿಸಲು ಸಾಧ್ಯವಾಗಿದೆ. ಅದೇ ರೀತಿ ರಾಸಾ­ಯನಿಕ­­ವನ್ನು ಡ್ರಿಪ್ ಮೂಲಕ ಪೂರೈಸಿ ಸಮಯ, ಕೂಲಿ ಹಣ ಉಳಿಸಬಹುದು.

ಆಧುನಿಕ ಯಂತ್ರಗಳ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶಕ್ಕೆ ಔಷಧ ಸಿಂಪರಣೆ ಸಾಧ್ಯವಾಗಿದೆ.  ಕೂಲಿ ಕಾರ್ಮಿಕರ ಕೊರತೆಯಿಂದ ವ್ಯವಸಾ­ಯಕ್ಕೆ ತೊಂದರೆಯಾಗುತ್ತಿದೆ ಎನ್ನುವ ರೈತರ ಮಾತನ್ನು ವಿಶ್ವನಾಥ ಒಪ್ಪುವುದಿಲ್ಲ. ‘ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳ­ಬೇಕು ಮತ್ತು  ತಾಳ್ಮೆ ವಹಿಸಿ ದುಡಿದರೆ ಕೃಷಿಯಲ್ಲಿ ಹೆಚ್ಚಿನ ಸಾಧನೆಗೆ ಅವಕಾಶ ಇದೆ’ ಎಂದು ಹೊಸಬರಿಗೆ ಕಿವಿ ಮಾತು ಹೇಳುವ ವಿಶ್ವನಾಥ್‌, ‘ತೋಟಗಾರಿಕೆ ಬೆಳೆಯಲ್ಲಿ ಯಶಸ್ವಿಯಾಗಲು ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ ಮತ್ತು ಸಹಾಯಕ ಅಧಿಕಾರಿ ಸುರೇಂದ್ರಬಾಬು ಮತ್ತು ಕೃಷಿ ವಿಸ್ತರಣೆ ಘಟಕದ ಎಸ್.ಎಂ.ಉಪ್ಪೇರಿ ಅವರ ಮಾರ್ಗದರ್ಶನ ಕಾರಣ’ ಎಂದು ನೆನಪಿಸಿಕೊಳ್ಳು ತ್ತಾರೆ.  (ಮೊ: 998007­3831 /­8762542343)
– ಮಂಜುನಾಥ ಎನ್ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT