ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್ ‘ಕೈ’ ಹಿಡಿದ ನರಸಿಂಹರಾಜ ಕ್ಷೇತ್ರ

ಲೋಕಸಭಾ ಸಾರ್ವತ್ರಿಕ ಚುನಾವಣೆ–2009
Last Updated 3 ಏಪ್ರಿಲ್ 2014, 6:14 IST
ಅಕ್ಷರ ಗಾತ್ರ

ಮೈಸೂರು: ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಮಾಜಿ ಸಚಿವ ಅಡಗೂರು ಎಚ್‌. ವಿಶ್ವನಾಥ್‌ ಅವರ ರಾಜಕೀಯ ಜೀವನಕ್ಕೆ 2009ರ ಲೋಕಸಭಾ ಚುನಾವಣೆ ಹೊಸ ತಿರುವು ನೀಡಿತು. ಜಿಲ್ಲೆಯಲ್ಲಾದ ರಾಜಕೀಯ ಸ್ಥಿತ್ಯಂತರ ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ವಿರುದ್ಧ ಜಯಭೇರಿ ಬಾರಿಸಲು ನೆರವಾಯಿತು.

ಮೂರು ಲೋಕಸಭಾ ಚುನಾವಣೆಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದ್ದ ಸಿ.ಎಚ್‌. ವಿಜಯಶಂಕರ್‌ ನಾಲ್ಕನೇ ಬಾರಿಗೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಇವರಿಗೆ ಪ್ರತಿಸ್ಪರ್ಧಿಯಾಗಿ ಜಿಲ್ಲೆಯ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರಿಗೆ   ಕಾಂಗ್ರೆಸ್‌ ಟಿಕೆಟ್‌ ನೀಡಿತು. 2004ರ ಚುನಾವಣೆಯ ಸೋಲಿನಿಂದ ಬೇಸರಗೊಂಡಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅದಾಗಲೇ ಮೈಸೂರಿನಿಂದ ದೂರವಾಗಿದ್ದರು. ಕಾರ್ಯಕರ್ತರೊಂದಿಗೆ ಇದ್ದ ನಂಟು ಕಡಿದು ಹೋದ ಪರಿಣಾಮ ಅವರಿಗೆ ಟಿಕೆಟ್‌ ಕೈತಪ್ಪಿತು.

ಜೆಡಿಎಸ್‌ನಿಂದ ಮಾಜಿ ಸಚಿವ ಬಿ.ಎ. ಜೀವಿಜಯ ಅಖಾಡಕ್ಕೆ ಧುಮುಕಿದರು. ಮುಖ್ಯಮಂತ್ರಿ­ಯಾಗಿದ್ದ ಗುಂಡೂರಾವ್‌ ಅವರನ್ನು ಸೋಲಿಸಿದ ಖ್ಯಾತಿ ಅವರ ಬೆನ್ನಿಗಿತ್ತು. ಹೀಗಾಗಿ, ಮೂರು ರಾಜಕೀಯ ಪಕ್ಷಗಳ ನಡುವೇ ನೇರ ಹಣಾಹಣಿ ನಡೆಯಿತು.

ಕ್ಷೇತ್ರ ಪುನರ್‌ ವಿಂಗಡಣೆ
ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ 2009 ಹೊಸ ಮೈಲುಗಲ್ಲು. ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ನಡೆದ ಮೊದಲ ಚುನಾವಣೆಯಾಗಿದ್ದ ಕಾರಣಕ್ಕೆ ಮೈಸೂರು ವಿಶೇಷ ಕುತೂಹಲ ಕೆರಳಿಸಿತ್ತು. ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿಗೆ ಹರಿದು ಹಂಚಿಹೋದ ಜಿಲ್ಲೆಯಲ್ಲಿ ಮೈಸೂರು ಕೂಡ ಒಂದಾಯಿತು. 1962ರಿಂದ ಮೈಸೂರು ಕ್ಷೇತ್ರದಲ್ಲಿದ್ದ ಎಚ್‌.ಡಿ. ಕೋಟೆ ಪಕ್ಕದ ಚಾಮರಾಜನಗರಕ್ಕೆ, ಕೆ.ಆರ್‌. ನಗರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದವು. ಅವುಗಳ ಬದಲಿಗೆ ಮಡಿಕೇರಿ ಹಾಗೂ ವಿರಾಜಪೇಟೆ ಹೊಸದಾಗಿ ಸೇರ್ಪಡೆಗೊಂಡವು. ಇದು ಜೆಡಿಎಸ್ ಮೇಲೆ ನೇರ ಪರಿಣಾಮ ಬೀರಿತು. ಕೆ.ಆರ್‌.ನಗರದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿದರೂ, ಮೈಸೂರು ಲೋಕಸಭಾ ಚುನಾವಣೆಗೆ ಅದು ಉಪಯೋಗಕ್ಕೆ ಬರಲಿಲ್ಲ.

ಬದಲಾದ ರಾಜಕೀಯ:
15ನೇ ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯ ರಾಜಕೀಯ ಬದಲಾಗಿತ್ತು. ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ  ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಇದನ್ನೇ ಮುಂದಿಟ್ಟುಗೊಂಡು ಚುನಾವಣೆಗೆ ಹೋದ ಬಿಜೆಪಿಗೆ 2008ರಲ್ಲಿ ರಾಜ್ಯದ ಜನತೆ ಅಭೂತಪೂರ್ವ ಬೆಂಬಲ ನೀಡಿದರು. ಮೈಸೂರು ಕ್ಷೇತ್ರ ವ್ಯಾಪ್ತಿಯ ಚಾಮರಾಜ, ಕೃಷ್ಣರಾಜ, ವಿರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದರು. ಇದೇ ಹುಮ್ಮಸ್ಸಿನಲ್ಲಿ ಬಿಜೆಪಿ ಲೋಕಸಭಾ ಚುನಾವಣೆಗೂ ಇಳಿಯಿತು.

ಶಕ್ತಿಯಾದ ಸಿದ್ದರಾಮಯ್ಯ
ಆದರೆ, 2004ರಿಂದ 2009ರವರೆಗೆ ಜಿಲ್ಲೆಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ಗತಿಸಿದವು. ಜೆಡಿಎಸ್‌ನಿಂದ ಹೊರಬಂದು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಸಂಘಟಿಸಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಅವರನ್ನು ಕಾಂಗ್ರೆಸ್‌ಗೆ ಕರೆತರುವುದರ ಹಿಂದೆ ಎಚ್‌. ವಿಶ್ವನಾಥ್‌ ಶ್ರಮಿಸಿದ್ದರು. ಅಲ್ಲದೇ, ಸ್ವತಃ ಸಿದ್ದರಾಮಯ್ಯ ಅವರಿಗೆ ಮೈಸೂರು ಸ್ವಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಹೀಗಾಗಿ, ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಹೆಗಲಾದರು. ಚಾಮುಂಡೇಶ್ವರಿ, ನರಸಿಂಹರಾಜ, ಹುಣಸೂರು ಹಾಗೂ ಪಿರಿಯಾಪಟ್ಟಣದ ಶಾಸಕರು ವಿಶ್ವನಾಥ್‌ ಬೆನ್ನಿಗೆ ನಿಂತರು. ನರಸಿಂಹರಾಜ ಕ್ಷೇತ್ರ ಕಾಂಗ್ರೆಸ್‌ ಕೈ ಹಿಡಿದ ಪರಿಣಾಮ ವಿಶ್ವನಾಥ್‌ 7,691 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT