ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಪರಂಪರೆ ಪಟ್ಟಿಗೆ ಪಶ್ಚಿಮಘಟ್ಟ ಸೇರ್ಪಡೆ: ರಾಜ್ಯದ ವಿರೋಧ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟ ವ್ಯಾಪ್ತಿಯ 10 ಪ್ರಮುಖ ಸ್ಥಳಗಳನ್ನು `ಯುನೆಸ್ಕೊ~ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

`ಯುನೆಸ್ಕೊ ಪಟ್ಟಿಗೆ ಸೇರಿಸುವುದರಿಂದ ಪಶ್ಚಿಮಘಟ್ಟ ಉಳಿಸಲು ವಿಶೇಷ ಅನುದಾನ ಬರುವುದಿಲ್ಲ. ಅಲ್ಲದೆ, ಈ ಭಾಗದಲ್ಲಿ ಏನೇ ಅಭಿವೃದ್ಧಿ ಮಾಡಬೇಕೆಂದರೂ ಅದಕ್ಕೆ ಪ್ರತಿ ಹಂತದಲ್ಲೂ ಯುನೆಸ್ಕೊ ಅನುಮತಿ ಪಡೆಯಬೇಕು. ನಮ್ಮ ಆಸ್ತಿ, ನಮ್ಮ ಜಾಗ, ಬೇರೆಯವರ ಕೈಗೆ ಏಕೆ ಜುಟ್ಟು ಕೊಡುವುದು...~  ಹೀಗೆ ಪ್ರಶ್ನೆ ಮಾಡಿದ್ದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್.

ಪಶ್ಚಿಮಘಟ್ಟ ಭಾಗದ ಜನಪ್ರತಿನಿಧಿಗಳ ಸಭೆ ನಂತರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಿಶ್ವ ಪರಂಪರೆ ಪಟ್ಟಿಯಿಂದ ಹಿಂದೆ ಸರಿಯಲು ತೀರ್ಮಾನಿಸಲಾಗಿದೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ~ ಎಂದರು.

ವಿಶ್ವ ಪರಂಪರೆ ಪಟ್ಟಿಗೆ ಪಶ್ಚಿಮಘಟ್ಟದ 40 ಸ್ಥಳಗಳನ್ನು ಸೇರಿಸುವ ಸಂಬಂಧ ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ತಂಡವೊಂದನ್ನು ಕಳುಹಿಸಿತ್ತು. ಈ ತಂಡ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಗೋವಾ ರಾಜ್ಯಗಳಿಗೆ ಭೇಟಿ ನೀಡಿ, ಯಾವ ಜಾಗಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಬಹುದು ಎನ್ನುವುದನ್ನು ಪತ್ತೆಹಚ್ಚಿತ್ತು. ಅದರಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಭಾಗದ 10 ಜಾಗಗಳನ್ನು ಗುರುತಿಸಿ, ಅವುಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಯುನೆಸ್ಕೊಗೆ ಶಿಫಾರಸು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವರು, ಪಶ್ಚಿಮಘಟ್ಟ ಪ್ರದೇಶಕ್ಕೆ ಜಾಗತಿಕ ಮಾನ್ಯತೆ ನೀಡುವುದರಿಂದ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಅನುಕೂಲವೇ ವಿನಾ ಬೇರೆ ಯಾರಿಗೂ ಇಲ್ಲ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

`ಪಶ್ಚಿಮಘಟ್ಟದ ಅರಣ್ಯ ಸಂಪತ್ತು ಉಳಿಸಲು ನಮ್ಮದೇ ಕಾನೂನುಗಳಿವೆ. ಹೀಗಾಗಿ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿ, ಅದನ್ನು ಸಂರಕ್ಷಿಸುವ ಅಗತ್ಯ ಇಲ್ಲ~ ಎಂದರು.

ಯುನೆಸ್ಕೊ ಪಟ್ಟಿಗೆ ಸೇರಿಸುವುದರಿಂದ ಆಗುವ ನಷ್ಟವಾದರೂ ಏನು ಎಂದು ಕೇಳಿದ ಪ್ರಶ್ನೆಗೆ, `ನಮ್ಮ ಜುಟ್ಟು ಬೇರೆಯವರಿಗೆ ಏಕೆ ಕೊಡಬೇಕು. ನಮ್ಮ ಅಧಿಕಾರ ನಮ್ಮ ಕೈಯಲ್ಲಿರಬೇಕು. ಈ ಕಾರಣಕ್ಕೇ ಈ 10 ಜಾಗಗಳನ್ನೂ ಯುನೆಸ್ಕೊ ಪಟ್ಟಿಗೆ ಸೇರಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದೆ~ ಎಂದು ಉತ್ತರಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ, ಕಾನೂನು ಸಚಿವ ಸುರೇಶ್‌ಕುಮಾರ್, ಚಿಕ್ಕಮಗಳೂರು-ಉಡುಪಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕರಾದ ಸಿ.ಟಿ.ರವಿ, ಅಪ್ಪಚ್ಚು ರಂಜನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತಹೆಗಡೆ ಆಶೀಸರ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದು, ಸರ್ಕಾರದ ತೀರ್ಮಾನಕ್ಕೆ  ಬೆಂಬಲ ನೀಡಿದ್ದಾರೆ. ಈ ಕುರಿತು ಒಂದೆರಡು ದಿನಗಳಲ್ಲಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವರು ವಿವರಿಸಿದರು.

ಟಿಂಬರ್ ಲಾಬಿಗೆ ಮಣಿದು ಈ ತೀರ್ಮಾನ ತೆಗೆದುಕೊಂಡಿಲ್ಲ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ ಪಶ್ಚಿಮ ಘಟ್ಟದ ಹತ್ತು ಪ್ರದೇಶಗಳಿಗೆ ಯುನೆಸ್ಕೊ ಮಾನ್ಯತೆ ದೊರಕಿದ್ದರೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರಕುತ್ತಿತ್ತು. ಈ ಕಾಡಿಗೆ ಹಾನಿಯಾಗಿದ್ದರೆ ಮಾನ್ಯತೆ ತಾನೇ ತಾನಾಗಿ ರದ್ದಾಗುತ್ತಿತ್ತು. ಇದರಿಂದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಮಾಡಬಹುದಾದ ಅಭಿವೃದ್ಧಿಗೆ ಯುನೆಸ್ಕೊ ಅಡ್ಡಿ ಮಾಡುತ್ತಿರಲಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಾಲ್ಕು ನರ್ಸರಿ: ಬೆಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿ- ಒಟ್ಟು ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು  ನರ್ಸರಿಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಂದೂ 50ರಿಂದ 100 ಎಕರೆ ಪ್ರದೇಶದಲ್ಲಿ ಇರುತ್ತದೆ. ಜಾಗ ಗುರುತಿಸುವ ಕೆಲಸ ನಡೆದಿದ್ದು ಈ ವರ್ಷದಿಂದಲೇ ಇವು ಕಾರ್ಯಾರಂಭ ಮಾಡಲಿವೆ ಎಂದರು.

ಔಷಧಿ ವನ: ಗದಗ ಜಿಲ್ಲೆಯ ಕಪ್ಪದಗುಡ್ಡ ಮತ್ತು ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟವನ್ನು ಔಷಧಿ ವನ ಎಂದು ಘೋಷಿಸಲು ನಿರ್ಧರಿಸಿದ್ದು, ಈ ಕುರಿತು 15 ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಕಾಡಂಚಿನಲ್ಲಿ ಸುಮಾರು 200 ಕಿ.ಮೀ. ಕಂದಕ ನಿರ್ಮಿಸಲಾಗುವುದು. ಇದರ ಜತೆಗೆ ಸೋಲಾರ್ ತಂತಿ ಬೇಲಿ ಹಾಕಿಸಲಾಗುವುದು ಎಂದರು.

ಯುನೆಸ್ಕೊ ಪಟ್ಟಿಗೆಂದು ಗುರುತಿಸಿದ ಸ್ಥಳಗಳು
ಪುಷ್ಪಗಿರಿ ವನ್ಯಜೀವಿ ಸಂರಕ್ಷಣಾ ಪ್ರದೇಶ
ಬ್ರಹ್ಮಗಿರಿ ವನ್ಯಜೀವಿ ಸಂರಕ್ಷಣಾ ಪ್ರದೇಶ
ತಲಕಾವೇರಿ ವನ್ಯಜೀವಿ ಸಂರಕ್ಷಣಾ ಪ್ರದೇಶ
ಪದಿನಾಲ್ಕಾಡು ಮೀಸಲು ಅರಣ್ಯ
ಕೆರ್ತಿ ಮೀಸಲು ಅರಣ್ಯ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಸೋಮೇಶ್ವರ ವನ್ಯಜೀವಿ ಸಂರಕ್ಷಣಾ ಪ್ರದೇಶ
ಸೋಮೇಶ್ವರ ಮೀಸಲು ಅರಣ್ಯ
ಆಗುಂಬೆ ಮೀಸಲು ಅರಣ್ಯ
ಬಲಹಳ್ಳಿ ಮೀಸಲು ಅರಣ್ಯ

ವರದಿ ಅಮಾನತು
ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ನೀಡಿರುವ ವರದಿಗೆ ಸಚಿವ ವಿಜಯಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ, ಸರ್ಕಾರ ವರದಿಯನ್ನು ಅಮಾನತಿನಲ್ಲಿ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT