ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಪರಂಪರೆ ಬೇಡ, ದುಷ್ಟ ಪರಂಪರೆ ಬೇಕು!

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ವಿಶ್ವ ಸಂಸ್ಥೆಯ ಅಂಗವಾಗಿರುವ ಯುನೆಸ್ಕೊ (್ಠ್ಞಜಿಠಿಛಿ ಘೆಠಿಜಿಟ್ಞ ಉಛ್ಠ್ಚಠಿಜಿಟ್ಞ, ಖಟ್ಚಜಿಚ್ಝ ಚ್ಞ ್ಚ್ಠ್ಝಠ್ಠ್ಟಿಚ್ಝ ಟ್ಟಜಚ್ಞಜಿಠಿಜಿಟ್ಞ)  ಜಾಗತಿಕ ಮಟ್ಟದಲ್ಲಿ ಕೆಲವು ವಿಶಿಷ್ಟವಾದ ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ ಅದರ ಮಹತ್ವ ಕಾಪಾಡಲು `ವಿಶ್ವಪರಂಪರೆಯ ತಾಣ~ಗಳನ್ನು ಘೋಷಿಸುತ್ತಾ ಬಂದಿರುವುದು ಒಂದು ಸಂಪ್ರದಾಯ. ಭಾರತದಲ್ಲಿ ಇಂತಹ 28 ತಾಣಗಳಿವೆ. ಇವುಗಳಲ್ಲಿ ಹೆಚ್ಚಿನವು ಸ್ಮಾರಕಗಳಾಗಿವೆ. ಅಸ್ಸಾಂ ದ ಕಾಜಿರಂಗ, ನಂದಾದೇವಿ, ಮಾನಸ ಹಾಗೂ ಬಂಗಾಲದ ಸುಂದರಬನದಂತಹ ನೈಸರ್ಗಿಕ ಪ್ರದೇಶಗಳನ್ನು ಸಹ ಈ ತಾಣಗಳಲ್ಲಿ ಸೇರಿಸಲಾಗಿದ್ದು ಒಂದು ವಿಶೇಷ.

ಜಾಗತಿಕ ಮಟ್ಟದಲ್ಲಿ ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶದಲ್ಲಿರುವ ಅಪರೂಪದ ಗಿಡಮರ, ಪ್ರಾಣಿ ಹಾಗೂ ಸೂಕ್ಷ್ಮ ಜೀವಜಾಲವನ್ನು `ಜೀವ ವಿವಿಧತೆಯ ತಾಣ~ ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳಿಂದ ಈ ಪ್ರದೇಶದ ವಿಶಿಷ್ಟತೆಯನ್ನು ಗಣನೆಗೆ ತೆಗೆದುಕೊಂಡು ಇವನ್ನು ವಿಶ್ವ ಪರಂಪರಾ ಸ್ಥಾನಗಳೆಂದು ಗುರುತಿಸಬೇಕೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದಿದೆ.

ಈ ಪ್ರಯತ್ನದ ಫಲವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿರುವ 34 ಸ್ಥಳಗಳನ್ನು `ಪರಂಪರಾಗತ ತಾಣ~ ಎಂದು ಘೋಷಣೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕೇವಲ 10 ತಾಣಗಳು ಕರ್ನಾಟಕದಲ್ಲಿ, ಕೇರಳದಲ್ಲಿ 19, ತಮಿಳನಾಡಿನಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ 6 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಕ್ರಿಯೆ ಕೊನೆಗೊಳ್ಳುತ್ತಿದ್ದಂತೆಯೆ ರಾಜ್ಯ ಸರ್ಕಾರ ಉನ್ನತ ಸಮಿತಿ ರಚಿಸಿ ಇದನ್ನು ವಿರೋಧಿಸುವ ನಿರ್ಣಯವನ್ನು ಕೈಗೊಂಡಿದ್ದಲ್ಲದೆ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಕ್ರಮವನ್ನು ಕೈ ಬಿಡಬೇಕೆಂದು ಆಗ್ರಹಿಸಿರುವುದು ಖೇದಕರ.

ರಾಜ್ಯ ಸರ್ಕಾರವು ನೀಡಿರುವ ಪ್ರಮುಖ ಕಾರಣವೆಂದರೆ ಈ ಹಣೆಪಟ್ಟಿಯಿಂದಾಗಿ ಆಯಾ ಪ್ರದೇಶದಲ್ಲಿ `ಅಭಿವೃದ್ಧಿ~ ನಿಂತು ಹೋಗುವುದಲ್ಲದೆ, `ಅಲ್ಲಿನ ಮೂಲನಿವಾಸಿಗಳ ಹಕ್ಕಿನ ಉಲ್ಲಂಘನೆಯಾಗಲಿದೆ~ ಹಾಗೂ `ಇದರಿಂದಾಗಿ ವಿಶೇಷ ಯೋಜನೆಯ ರೂಪದಲ್ಲಿ ಹಣ ಹರಿದು ಬರುವುದಿಲ್ಲ~ ಎಂಬುದಾಗಿದೆ.

ಈ ಹೇಳಿಕೆಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಘೋಷಣೆ ಆಗಲಿರುವ 10 ತಾಣಗಳಲ್ಲಿ 5 ತಾಣಗಳು ಈಗಾಗಲೇ ವನ್ಯಜೀವಿ ಧಾಮ ಹಾಗೂ ರಾಷ್ಟ್ರೀಯ ಉದ್ಯಾನವನಗಳಾಗಿ ಘೋಷಿತವಾಗಿದ್ದು ವಿಶೇಷ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಣ ಹರಿದು ಬಂದದ್ದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ವಿನಿಯೋಗಿಸಿಲ್ಲ. ಇನ್ನುಳಿದ 5 ತಾಣಗಳು ರಕ್ಷಿತ ಅರಣ್ಯ ಪ್ರದೇಶಗಳಾಗಿದ್ದು, ಮಹತ್ವದ ಗಿಡಮೂಲಿಕೆಗಳ ತವರಾಗಿವೆ. ಜೊತೆಯಲ್ಲಿ ಇವು ರಾಜ್ಯಕ್ಕೆ ನೀರನ್ನು ಒದಗಿಸುವ ನದಿಗಳ ಜಲಾನಯನ ಪ್ರದೇಶಗಳಾಗಿವೆ.

ಈ ಮಹತ್ವದ ಹಾಗೂ ಸೂಕ್ಷ್ಮಪ್ರದೇಶದ ರಕ್ಷಣೆಯನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ವಿಶ್ವ ಪರಂಪರೆಯ ತಾಣಗಳನ್ನಾಗಿ ಮಾಡಿದಲ್ಲಿ ಇವುಗಳಿಗೆ ಇನ್ನು ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಅನುಕೂಲವಾಗುತ್ತದೆ. ಇದರ ರಕ್ಷಣೆಗೆ ಹಣಕ್ಕಿಂತ ಹೆಚ್ಚಿಗೆ ಪ್ರಕೃತಿ ನಾಶದ ಯೋಜನೆ ಬಾರದಂತೆ ತಡೆಯುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅರಣ್ಯ ನಿವಾಸಿಗಳ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂಬುದು ರಾಜ್ಯ ಸರ್ಕಾರದ ಆರೋಪ. ವಿಪರ್ಯಾಸವೆಂದರೆ ಅರಣ್ಯ ಹಕ್ಕುಗಳ ಕಾಯಿದೆ ಅಡಿಯಲ್ಲಿ ಮೂಲನಿವಾಸಿಗಳಿಗೆ ನೀಡಬೇಕಾಗಿರುವ ಹಕ್ಕನ್ನು ನೀಡದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದೆ. ಇಷ್ಟಕ್ಕೂ ವಿಶ್ವಸಂಸ್ಥೆಯ `ಪರಂಪರಾಗತ ತಾಣ~ಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರದ ಕಾಯಿದೆಯನ್ನು ಉಲ್ಲಂಘಿಸುವ ಪ್ರಶ್ನೆಯೇ ಬಾರದು.

ಇನ್ನು ದೇಶದ ಸರ್ವೋಚ್ಚ ನ್ಯಾಯಾಲಯ, ಕೇಂದ್ರೀಯ ಸಮಿತಿ, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಲೋಕಾಯುಕ್ತ ಸಂಸ್ಥೆಗಳು ಸಫಲವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಅರಣ್ಯ ಒತ್ತುವರಿ, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ ನಿಯಂತ್ರಣದಲ್ಲಿದೆ. ಆದುದರಿಂದ ಈ ವಿಶ್ವ ತಾಣದ ಹಣೆಪಟ್ಟಿ ಬೇಡ ಎಂಬುದು ಸರ್ಕಾರದ ವಾದ.

ಈ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಬಳ್ಳಾರಿ ಗಣಿ ಹಗರಣ ತೋರಿಸಿಕೊಟ್ಟಿದೆ. ಈ ಎಲ್ಲ ಸಂಸ್ಥೆಗಳ ಆದೇಶವನ್ನು ಕಡೆಗಣಿಸಿ ಗಣಿ ಮಾಫಿಯಾ ಬೆಳೆದು ನಿಂತಿದ್ದು ರಾಜ್ಯ ಸರ್ಕಾರದ ಹಾಗೂ ಕನ್ನಡಿಗರ ಸಂಸ್ಕೃತಿಗೆ ಮಾರಕವಾಗಿದ್ದನ್ನು ನಾವಿಂದು ಅನುಭವಿಸುತ್ತಿದ್ದೆೀವೆ. ಬಳ್ಳಾರಿಯ ದುಷ್ಟ ಪರಂಪರೆ ರಾಜ್ಯಕ್ಕೆ ಕಂಟಕ ಪ್ರಾಯವಾಗಿದೆ. ಈ ಪರಂಪರೆಯನ್ನು ಪಶ್ಚಿಮ ಘಟ್ಟ ಪ್ರದೇಶಕ್ಕೂ ಹಬ್ಬಿಸಲು ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಟೊಂಕ ಕಟ್ಟಿ ನಿಂತ ಹಾಗಿದೆ.

ಇಂತಹ ಸ್ಥಿತಿ ಪಶ್ಚಿಮ ಘಟ್ಟದಲ್ಲಿ ಮರುಕಳಿಸದಂತೆ ತಡೆಯಲು ಈ ವಿಶ್ವ ಪರಂಪರಾ ತಾಣ ಸಹಾಯಕವಾಗಲಿದೆ, ಇದನ್ನು ಕಡೆಗಣಿಸಿ ಪಶ್ಚಿಮ ಘಟ್ಟದಲ್ಲಿ ಅತಿಕ್ರಮಣ, ಗಣಿಗಾರಿಕೆ, ರೆಸಾರ್ಟ್ ಸಂಸ್ಕೃತಿ ಹಾಗೂ ಕಾಡು ನಾಶಮಾಡುವ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಂತಿದೆ.

ರಾಜ್ಯ ಸರ್ಕಾರವು ಮೂರು ವರ್ಷಗಳ ಹಿಂದೆ ಇದೇ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ವಿಶೇಷ `ಕಾರ್ಯ ಪಡೆ~ಯನ್ನು ರಚಿಸಿತ್ತು. ದುರಂತವೆಂದರೆ ಇದೇ ಕಾರ್ಯಪಡೆಯು ತನ್ನ ಉದ್ದೇಶವನ್ನೇ ಮರೆತು, ಸರ್ಕಾರದ ಉನ್ನತ ಸಮಿತಿಯಲ್ಲಿ ಹಾಜರಿದ್ದು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕ್ರಮಕ್ಕೆ ಅನುಮೋದನೆ ನೀಡಿದೆ! ಇದೊಂದು ಐತಿಹಾಸಿಕ ದುರಂತ! ಈ ಕಾರ್ಯಪಡೆಗೆ ಕಿಮ್ಮತ್ತು ನೀಡದ ಸರ್ಕಾರ ಪಶ್ಚಿಮ ಘಟ್ಟದ ರಕ್ಷಣೆ ಮಾಡೀತೆ? ಕೇವಲ ಪ್ರಚಾರಕ್ಕಾಗಿ ಇಂತಹ `ನಿಷ್ಕ್ರಿಯ~ ಪಡೆ ರಚಿಸುವುದನ್ನು ಸರ್ಕಾರ ನಿಲ್ಲಿಸಿದರೆ ಒಳಿತು.

ಪಶ್ಚಿಮಘಟ್ಟದ ಐದು ರಾಜ್ಯಗಳಲ್ಲಿ ಕರ್ನಾಟಕವೊಂದೇ ಈ ಕುರಿತು ಅಪಸ್ವರ ಎತ್ತಿದೆ. ಹೀಗೆ ಮಾಡುವ ಮುನ್ನ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದಲ್ಲಿರುವ  ಪರಂಪರೆಯ ತಾಣಗಳಲ್ಲಿನ ಸ್ಥಿತಿಗತಿಯ ಬಗ್ಗೆ ಅರಿತುಕೊಳ್ಳಬಹುದಿತ್ತು. ಮಲೆನಾಡಿನ ಜನರ ಜೊತೆ ಬಿಚ್ಚು ಮನಸ್ಸಿನಿಂದ ಚರ್ಚಿಸಿ ನಿರ್ಣಯಕ್ಕೆ ಬರಬಹುದಿತ್ತು.

ಇಡೀ ಪಶ್ಚಿಮ ಘಟ್ಟಗಳನ್ನೇ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಅನುವು ಮಾಡಿಕೊಡಬೇಕಾದ ರಾಜ್ಯ ಸರ್ಕಾರ ಕೇವಲ 10 ಸ್ಥಳಗಳನ್ನು ಘೋಷಿಸಲು ವಿರೋಧ ವ್ಯಕ್ತಪಡಿಸುತ್ತಿರುವುದು ಸಂಕುಚಿತ ಮನೋಭಾವದ ನಿದರ್ಶನವಾಗಿದೆ.

ರಾಜ್ಯ ಸರ್ಕಾರವು ಉದ್ದಿಮೆ, ಗಣಿಗಾರಿಕೆ ಹಾಗೂ ರೆಸಾರ್ಟ್ ಲಾಬಿಗಳಿಗೆ ಮಣಿದು ಈ ಯೋಜನೆಯನ್ನು ವಿರೋಧಿಸುತ್ತಿರುವುದು ದುಷ್ಟ ಪರಂಪರೆಯ ಜೀವಂತ ನಿದರ್ಶನವಾಗಿದೆ.

ಈ ದುಷ್ಟ ಶಕ್ತಿಗಳು ಮಲೆನಾಡಿನ ಹಸಿರನ್ನು, ಸ್ವಚ್ಛಂದವಾಗಿ ಹರಿಯುವ ನದಿಗಳನ್ನು, ಕಾಡಿನ ವನ್ಯ ಜೀವಿಗಳನ್ನು ನಾಶಪಡಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಂತಿದೆ. ಜಾಗತಿಕ ಮಟ್ಟದಲ್ಲಿ ಮಲೆನಾಡಿನ ರಕ್ಷಣೆಯ ಪ್ರಯತ್ನಕ್ಕೆ ಕಲ್ಲು ಹಾಕುವ ಈ ದುಷ್ಟ ಪರಂಪರೆಗೆ ಜನರು ಜಾಗೃತರಾಗಿ ತಡೆ ಹಾಕುವ ಸಮಯ ಕೂಡಿ ಬಂದಿದೆ.
 (ಲೇಖಕರು ಪರಿಸರ ಹೋರಾಟಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT