ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಂಗಳ ಹೋಮ: ಧಾನ್ಯ ಸಮರ್ಪಣೆ

Last Updated 19 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವೇಕ ಜಾಗೃತ ಬಳಗದ ವತಿಯಿಂದ ಭಾನುವಾರ ಮುಂಜಾನೆ ನಗರದ ಆದರ್ಶನಗರ ಸಂತೆ ಮೈದಾನದಲ್ಲಿ ವಿಶ್ವಮಂಗಳ ಹೋಮ ನಡೆಯಿತು. ಸಾವಿರಾರು ಅನುಯಾಯಿಗಳು ಪಾಲ್ಗೊಂಡು ಅಗ್ನಿಗೆ ಆಹುತಿ ಸಮರ್ಪಿಸಿದರು.

ಬೆಳಿಗ್ಗೆ ನಾಲ್ಕರ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ರಾಮರಕ್ಷಾ ಸ್ತೋತ್ರದೊಂದಿಗೆ ಹೋಮಕ್ಕೆ ಚಾಲನೆ ದೊರೆಯಿತು. ಮೊದಲಿಗೆ ಶಿವನಿಗೆ ಆಹುತಿ ಸಮರ್ಪಿಸಲಾಯಿತು. ನಂತರ ವಾಸುಕಿ, ವಿಘ್ನೇಶ್ವರ, ಸುಬ್ರಹ್ಮಣ್ಯ, ಸಕಲ ದೇವಾನುದೇವತೆಗಳಿಗೆ ಆಹುತಿ ಅರ್ಪಿಸಲಾಯಿತು.

ಹೋಮದ ಅಂಗವಾಗಿ ಬೃಹತ್ ಆಕಾರದ ಅಗ್ನಿಕುಂಡವನ್ನು ನಿರ್ಮಿಸಲಾಗಿತ್ತು. ಭಕ್ತರು ತಮ್ಮ ಇಚ್ಛಾನುಸಾರ ಏಲಕ್ಕಿ, ಅವಲಕ್ಕಿ, ಎಳ್ಳು ಮೊದಲಾದ ಧಾನ್ಯಗಳನ್ನು ಅಗ್ನಿಗೆ ಅರ್ಪಿಸಿದರು. ಹೆಂಗಸರು, ಮಕ್ಕಳು, ಯುವಕರೂ ಈ ಹೋಮದಲ್ಲಿ ಪಾಲ್ಗೊಂಡರು.

ಡಿವೈನ್ ಪಾರ್ಕ್ ಟ್ರಸ್ಟ್‌ನ ಆಡಳಿತ ಮಂಡಳಿ ನಿರ್ದೇಶಕ ಹಾಗೂ ವಿವೇಕ ಸಂಪದದ ನಿರ್ವಾಹಕ ಸಂಪಾದಕ ಡಾ. ಚಂದ್ರಶೇಖರ ಉಡುಪ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ವಿವೇಕಾನಂದರ ವಿಚಾರಧಾರೆಗಳ ಪುಸ್ತಕ ಹಾಗೂ ಸಿಡಿಗಳ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಬಡಾವಣೆಗಳಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
`ವಿಶ್ವ ಕಲ್ಯಾಣದ ಉದ್ದೇಶ ಹೊತ್ತು, ವಿವೇಕಾನಂದರ ವಿಚಾರಧಾರ‌್ಳೆ ಅಡಿ ಈ ಮಂಗಳ ಹೋಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 6500ಕ್ಕೂ ಹೆಚ್ಚು ಜನರು ಪಾಲ್ಗೊಂಡರು. ಹುಬ್ಬಳ್ಳಿಯಲ್ಲಿ ಈ ಹೋಮ ನಡೆದದ್ದು ಎರಡನೇ ಬಾರಿ. ನಾಲ್ಕು ವರ್ಷಗಳ ಹಿಂದೆ ಸವಾಯಿ ಗಂಧರ್ವ ಸಭಾಂಗಣ ಸಮೀಪದ ಮೈದಾನದಲ್ಲಿ ಹೋಮ ನಡೆದಿತ್ತು~ ಎಂದು ವಿವೇಕ ಜಾಗೃತ ಬಳಗದ ಕಾರ್ಯಾಧ್ಯಕ್ಷ ಡಾ. ಮಹೇಶ ಎಸ್. ಬ್ಯಾಕೋಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT