ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸದಲ್ಲಿ ಇಂಡಿಯನ್ಸ್

ಕ್ರಿಕೆಟ್: ಮೊದಲ ಗೆಲುವಿನ ಸಿಹಿ ಸವಿಯುವ ಲೆಕ್ಕಾಚಾರದಲ್ಲಿ ಸೂಪರ್ ಕಿಂಗ್ಸ್
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಪುಟಿದೇಳುವ ವಿಶ್ವಾಸ ಮುಂಬೈ ಇಂಡಿಯನ್ಸ್ ತಂಡದ್ದಾದರೆ, ತನ್ನ ಮೊದಲ ಪಂದ್ಯದಲ್ಲಿಯೇ ಗೆಲುವು ಪಡೆಯಬೇಕು ಎನ್ನುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗುರಿ. ಈ ಎರಡೂ ತಂಡಗಳು ಐಪಿಎಲ್ ಆರನೇ ಆವೃತ್ತಿಯ ಶನಿವಾರದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಸಾರಥ್ಯದ ಇಂಡಿಯನ್ಸ್ ಕೂದಲೆಳೆ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲು ಕಂಡಿತ್ತು. 2010 ಹಾಗೂ 2011ರಲ್ಲಿ ಟ್ರೋಫಿ ಎತ್ತಿ ಹಿಡಿದ ಮಹೇಂದ್ರ ಸಿಂಗ್ ನೇತೃತ್ವದ ಸೂಪರ್ ಕಿಂಗ್ಸ್‌ಗೆ ಇದು ಮೊದಲ ಪಂದ್ಯ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರು ಇದ್ದಾರೆ. ಸಚಿನ್ ತೆಂಡೂಲ್ಕರ್, ಪಾಂಟಿಂಗ್ ಅವರಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಇಂಡಿಯನ್ಸ್ ತಂಡ ದೋನಿ ಬಳಗಕ್ಕೆ ಸೆಡ್ಡು ಹೊಡೆಯುವುದೇ ಎನ್ನುವ ಕುತೂಹಲ ಪಂದ್ಯದ ಕೌತುಕವನ್ನು ಹೆಚ್ಚಿಸಿದೆ.

ಸೂಪರ್ ಕಿಂಗ್ಸ್ ತಂಡದ ಅಲ್ಬೆ ಮರ್ಕೆಲ್ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಈ ಆಟಗಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ-20 ಚಾಲೆಂಜ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಸ್ಪೋಟಕ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಸಹ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶ್ರೀಲಂಕಾದ ಆಟಗಾರರು ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡಲು ಅವಕಾಶವಿಲ್ಲದ ಕಾರಣ ಶನಿವಾರದ ಪಂದ್ಯಕ್ಕೆ ನುವಾನ್ ಕುಲಶೇಖರ ಹಾಗೂ ಅಖಿಲಾ ಧನಂಜಯ ಅಲಭ್ಯರಾಗಿದ್ದಾರೆ.

ಸೂಪರ್ ಕಿಂಗ್ಸ್ ನಾಯಕ ದೋನಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿದ್ದ ಎಡಗೈ ಬ್ಯಾಟ್ಸ್‌ಮನ್ ಮುರಳಿ ವಿಜಯ್, ಆಸ್ಟ್ರೇಲಿಯಾದ ಮೈಕಲ್ ಹಸ್ಸಿ ಹಾಗೂ ಡ್ವೇನ್ ಬ್ರಾವೊ ತಂಡದ ಪ್ರಮುಖ ಬಲ ಎನಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ, ವೇಗಿಗಳಾದ     ಬೆನ್ ಹಿಲ್ಫೆನಾಸ್ ತಂಡದ ಶಕ್ತಿಯಾಗಿದ್ದಾರೆ.

ಇಂದಿನ ಪಂದ್ಯ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್

ಸ್ಥಳ:  ಚೆನ್ನೈ
ಆರಂಭ: ರಾತ್ರಿ 8 ಗಂಟೆಗೆ
ನೇರ ಪ್ರಸಾರ: ಸೆಟ್‌ಮ್ಯಾಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT