ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲು ಆಗ್ರಹ

Last Updated 5 ಫೆಬ್ರುವರಿ 2013, 6:50 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್ ಹಾಗೂ ಹೇಮಾವತಿ ನಾಲೆಗಳ ಅಚ್ಚುಕಟ್ಟಿನಲ್ಲಿ ಬೆಳೆದಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಬೇಕು ಎಂದು ಸೋಮವಾರ ಜಿಲ್ಲೆಯ ರಾಗಿಮುದ್ದನಹಳ್ಳಿಯಲ್ಲಿ ನಡೆದ ಚಿನಕುರಳಿ ಜಿಲ್ಲಾ ಪಂಚಾಯಿತಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಸರ್ವಾನುಮತದಿಂದ ಒತ್ತಾಯಿಸಲಾಯಿತು.

ಜಾನುವಾರುಗಳಿಗೂ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಕೆರೆ ಕಟ್ಟೆಗಳನ್ನು ತುಂಬಿಸಲು ಮುಂದಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.

ರೈತರ ಅನುಕೂಲ ದೃಷ್ಟಿಯಿಂದ ಕೂಡಲೇ ವಿಸಿ ನಾಲೆ ಆಧುನೀಕರಣ ಕಾಮಗಾರಿಯನ್ನು ಆರಂಭಿಸಬೇಕು.
ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮರಣ ಶಾಸನವಾಗಲಿರುವ ಕಾವೇರಿ ನದಿ ನೀರಿನ ಐತೀರ್ಪನ್ನು ಅಧಿಸೂಚನೆಯಾಗಿ ಹೊರಡಿಸಬಾರದು ಒತ್ತಾಯಿಸಲಾಯಿತು.

ಈ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಅಧಿಸೂಚನೆ ಹೊರಡಿಸಿದರೆ, ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಸಭೆ ಎಚ್ಚರಿಸಿತು.
ನಷ್ಟವಾಗಿರುವ ರೈತರ ಬೆಳೆಗೆ ಬಜೆಟ್‌ನಲ್ಲಿ ಪರಿಹಾರ ಘೋಷಿಸಬೇಕು. ಪಾಂಡವಪುರ ಹಾಗೂ ಮೈಷುಗರ್ ಕಾರ್ಖಾನೆಗಳು ರೈತರ 54 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಅದನ್ನು ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಈ ನಿರ್ಣಯಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮಕೈಗೊಳ್ಳದಿದ್ದರೆ ಪಾಂಡವಪುರ ಹಾಗೂ ಮಂಡ್ಯದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದ ಮಾಜಿ ಶಾಸಕ ಜಿ.ಬಿ. ಶಿವಕುಮಾರ್ ಮಾತನಾಡಿ, ಅಭಿವೃದ್ಧಿಯಾಗಬೇಕು ಎನ್ನುವುದಾದರೆ ಶಾಸಕ ಸಿ.ಎಸ್. ಪುಟ್ಟರಾಜು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಆರೋಪ: ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಬೇಬಿ ಬೆಟ್ಟದ ಸುತ್ತ-ಮುತ್ತ  ಸಣ್ಣ ಪ್ರಮಾಣದಲ್ಲಿ ರೈತರು ಉಪಕಸುಬಾಗಿ ಕಲ್ಲು ಬಂಡೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸುವ ಮೂಲಕ ಅವರ ಕೆಲಸಕ್ಕೆ ಕುತ್ತು ತರುವ ಕೆಲಸವನ್ನು ಕೆ.ಎಸ್. ಪುಟ್ಟಣ್ಣಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕರಾದ ಎಚ್.ಬಿ. ರಾಮು, ಡಾ.ಅನ್ನದಾನಿ ಮಾತನಾಡಿದರು. ದುದ್ದ ಹೋಬಳಿಯಲ್ಲಿ ಈಗಲೂ ಜೆಡಿಎಸ್‌ಗೆ ಬೆಂಬಲವಿದೆ. ಯಾವುದೇ ಬದಲಾವಣೆಯಾಗಿಲ್ಲ. ಶಾಸಕರಾಗಿದ್ದಾಗ ಯಾವುದೇ ಗುರುತರ ಕೆಲಸ ಮಾಡಿದ್ದಾರೆ ಎಂಬುದನ್ನು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್, ಎಚ್.ಎಲ್. ಶಿವಣ್ಣ, ಜಿ.ಪಂ. ಉಪಾಧ್ಯಕ್ಷ ಶಂಕರೇಗೌಡ, ಸದಸ್ಯರಾದ ಸಿ. ಮಾದಪ್ಪ, ಮಂಜೇಗೌಡ, ಎಂ.ಬಿ. ಶ್ರೀನಿವಾಸ್, ಎಸ್. ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ಒಣಗುತ್ತಿರುವ ಬೆಳೆ: ಆಕ್ರೋಶ
ಶ್ರೀರಂಗಪಟ್ಟಣ:
ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬು ಬೆಳೆ ನೀರಿಲ್ಲದ ಒಣಗುತ್ತಿದ್ದು, ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ 15 ನಿಮಿಷಗಳ ಕಾಲ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ದಿನಗಳಿಂದ ನೀರಿಲ್ಲದ ಕಾರಣ ಕಬ್ಬು ಬೆಳೆ ಒಣಗುತ್ತಿದೆ. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಎಚ್ಚರಿಸಿದರು.
ಮೇಳಾಪುರದ ಸ್ವಾಮಿಗೌಡ, ಮರಳಾಗಾಲ ಕೃಷ್ಣೇಗೌಡ, ದಲಿತ ಮುಖಂಡ ಕುಬೇರಪ್ಪ ಮಾತನಾಡಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ, ಪಾಂಡು, ಯುವ ಅಧ್ಯಕ್ಷ ಕಡತನಾಳು ಬಾಬು, ಬಿ.ಸಿ.ಕೃಷ್ಣೇಗೌಡ ಪ್ರತಿಭಟನೆಯಲ್ಲಿ ಭಾಗವಹಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ
ಪಾಂಡವಪುರ: ಕ
ಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ತಕ್ಷಣ ಕನಿಷ್ಠ ಒಂದು ವಾರ ಕಾಲ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಸೋಮವಾರ ರೈತ ಸಂಘದ ಕಾರ್ಯಕರ್ತರು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಐದು ದೀಪ ವೃತ್ತದ ಮೆರವಣಿಗೆ ಹೊರಟು ಡಾ.ರಾಜ್‌ಕುಮಾರ್ ವೃತ್ತಕ್ಕೆ ಬಂದು ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು.

ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಈ ಹಿಂದೆ ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 74 ಅಡಿ ನೀರು ಸಂಗ್ರಹವಿದ್ದಾಗ ರೈತರ ಹೋರಾಟಕ್ಕೆ ಮನ್ನಣೆ ನೀಡಿ ನಾಲೆಗಳಿಗೆ ನೀರು ಹರಿಸಿ ಬೆಳೆಗಳ ರಕ್ಷಣೆ ಮಾಡಲಾಗಿತ್ತು. ಈಗ ಕೆಆರ್‌ಎಸ್‌ನಲ್ಲಿ 84 ಅಡಿ ನೀರು ಸಂಗ್ರಹವಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ನಾಲೆಗಳಿಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪುಟ್ಟಣ್ಣಯ್ಯ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ.ಗೌಡೇಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹರವು ಪ್ರಕಾಶ್, ಕಾರ್ಯದರ್ಶಿ ಅಮೃತಿ ರಾಜಶೇಖರ್, ಸಂಘಟನಾ ಕಾರ್ಯದರ್ಶಿ ಬಿ.ಟಿ.ಮಂಜುನಾಥ್, ಖಜಾಂಚಿ ಹೊಸಕೋಟೆ ರಾಮೇಗೌಡ ಭಾಗವಹಿಸಿದ್ದರು.

ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಮದ್ದೂರು:
ಕೆಆರ್‌ಎಸ್ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲು ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಇಲ್ಲಿಗೆ ಸಮೀಪದ ಗೆಜ್ಜಲಗೆರೆ ಬಳಿ ಸೋಮವಾರ ಹೆದ್ದಾರಿ ತಡೆದು ಪ್ರತಿಭಟಿಸಿದರು.  ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ  ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ರೈತಸಂಘದ ಉಪಾಧ್ಯಕ್ಷ ಜಿ.ಎ.ಶಂಕರ್ ಮಾತನಾಡಿ, ನೀರು ಹರಿಸದಿದ್ದರೆ ಫೆ.6ರಿಂದ ಜನ ಜಾನುವಾರುಗಳೊಂದಿಗೆ ಹೆದ್ದಾರಿ ಬಂದ್‌ಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಚಂದ್ರು, ರೈತ ಮುಖಂಡರಾದ ಲಿಂಗಪ್ಪಾಜಿ, ಸುನಿಲ್, ಮಹೇಂದ್ರ, ಸಿದ್ದೇಗೌಡ, ಶೇಖರ್, ಚನ್ನಪ್ಪ, ಬೋರೇಗೌಡ, ಶಿವಲಿಂಗೇಗೌಡ, ರಾಮಕೃಷ್ಣ, ಮಹೇಂದ್ರ ಸೇರಿದಂತೆ ಸಾದೊಳಲು, ಕುದುರುಗುಂಡಿ, ಗೆಜ್ಜಲಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.

ಅಧಿಕಾರಿಗಳ ವಿರುದ್ಧ ಧಿಕ್ಕಾರ
ಭಾರತೀನಗರ
: ಕನ್ನಂಬಾಡಿಯಿಂದ ವಿಸಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ನಗರದ ಹಲಗೂರು ವೃತ್ತದಲ್ಲಿ ಜಮಾಯಿಸಿದ ನೂರಾರು ರೈತ ಸಂಘದ ಕಾರ್ಯಕರ್ತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ರೈತ ಸಂಘದ ಮುಖಂಡ ಬೋರಾಪುರ ಶಂಕರೇಗೌಡ ಮಾತನಾಡಿ, ತಕ್ಷಣವೇ ನಾಲೆಗಳಲ್ಲಿ ನೀರು ಹರಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ರೈತ ಸಂಘದ ಮುಖಂಡರಾದ ರಾಮಲಿಂಗೇಗೌಡ, ಅಣ್ಣೂರು ಮಹೇಂದ್ರ, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT