ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ : ಪ್ರತಿಭಟನೆ

Last Updated 2 ಸೆಪ್ಟೆಂಬರ್ 2013, 8:53 IST
ಅಕ್ಷರ ಗಾತ್ರ

ಯಲಹಂಕ:  ಮೆ-ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ 400 ಕೆ.ವಿ ಸಾಮರ್ಥ್ಯದ ಹೈ ಟೆನ್ಷನ್ ವಿದ್ಯುತ್ ಮಾರ್ಗವನ್ನು ಅಳವಡಿಸುವ ಸಲುವಾಗಿ ವಶಪಡಿಸಿಕೊಂಡ ರೈತರ ಭೂಮಿಗೆ ಸೂಕ್ತ ಪರಿಹಾರ ನೀಡದೆ ಕಂಬ ಮತ್ತು ಲೈನ್ ಎಳೆಯುವ ಪ್ರಕ್ರಿಯೆ ಆರಂಭಿಸಿದ್ದನ್ನು ಪ್ರತಿಭಟಿಸಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹೆಸರಘಟ್ಟ ಹೋಬಳಿ ಚೊಕ್ಕನಹಳ್ಳಿ ಗ್ರಾಮದ ನಿವಾಸಿ ಚನ್ನಪ್ಪ ಎಂಬುವರ ಪತ್ನಿ ಅಕ್ಕಯಮ್ಮ  (60) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಸಂಸ್ಥೆಯವರು ಹನಿಯೂರು ಗ್ರಾಮದಿಂದ ಸಿಂಗನಾಯಕನಹಳ್ಳಿಯವರೆಗೆ ವಿದ್ಯುತ್ ಮಾರ್ಗವನ್ನು ಅಳವಡಿಸಲು ಮುಂದಾಗಿರುವುದರಿಂದ ಈ ಭಾಗದ 10 ಹಳ್ಳಿಗಳ 10.5 ಕಿ.ಮೀ. ವ್ಯಾಪ್ತಿಯಲ್ಲಿರುವ 150 ಕುಟುಂಬಗಳು ಸಂಕಷ್ಟಕ್ಕೀಡಾಗಲಿವೆ.

ಜಮೀನು ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಿದ ನಂತರ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಬೆಂಗಳೂರು ಉತ್ತರ ತಾಲ್ಲೂಕು ಘಟಕದ ಕಾರ್ಯಕರ್ತರು ಈಚೆಗೆ ದಿಬ್ಬೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.

ರೈತರ ಜಮೀನುಗಳಲ್ಲಿ ಅಳವಡಿಸಿರುವ ಕಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದ್ದು, ಲೈನ್ ಅಳವಡಿಸಲು ಮತ್ತು ಕಾಮಗಾರಿ ಕೈಗೊಂಡಾಗ ಹಾನಿಯಾಗುವ ಬೆಳೆಗಳಿಗೆ, ಮರ, ಕಟ್ಟಡಗಳಿಗೆ ಪರಿಹಾರ ನೀಡಿಲ್ಲ. ಈ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗದೆ ಬಾಕಿಯಿರುವ ಸಂದರ್ಭದಲ್ಲೇ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾಮಗಾರಿ ಆರಂಭಿಸಿದ್ದ ಕ್ರಮವನ್ನು ರೈತರು ತೀವ್ರವಾಗಿ ಖಂಡಿಸಿದ್ದರು.

  ಶನಿವಾರ ಮತ್ತೆ ಲೈನ್ ಎಳೆಯುವ ಕಾಮಗಾರಿ ಆರಂಭವಾಯಿತು. ಪರಿಹಾರ ದೊರಕದ ಬೇಸರದಲ್ಲಿ ಅಕ್ಕಯಮ್ಮ ಆತ್ಮಹತ್ಯೆಗೆ ಯತ್ನಿಸಿದರು. ಗ್ರಾಮಸ್ಥರು ತಕ್ಷಣ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, `ಲೈನ್‌ಗಳನ್ನು ಅಳವಡಿಸಲು 46 ಮೀಟರ್ ಜಾಗವನ್ನು ವಶಪಡಿಸಿಕೊಳ್ಳಲಾಗುತ್ತಿದೆ. 21 ಮೀಟರ್ ಜಾಗಕ್ಕೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಅನ್ಯಾಯದ ಪರಮಾವಧಿ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT