ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆಹಾರದಲ್ಲಿ ವಿಷ ಬೆರೆಸಿ  ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೇಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಕೊಡಿಗೇಹಳ್ಳಿ ನಿವಾಸಿ ನಾಗೇಶ್ (42), ಅವರ ಪತ್ನಿ ಗಿರಿಜಾ (35), ಮಕ್ಕಳಾದ ಪವಿತ್ರಾ (12), ದಿವ್ಯಾ (9) ಆತ್ಮಹತ್ಯೆ ಮಾಡಿಕೊಂಡವರು.

ಮೂಲತಃ ಮಂಡ್ಯ ಜಿಲ್ಲೆಯ ನಾಗೇಶ್, ಐಟಿಪಿಎಲ್ ಸಮೀಪ ತಳ್ಳು ಗಾಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಆಂಧ್ರಪ್ರದೇಶ ಮೂಲದ ಗಿರಿಜಾ ಅವರು ಗೃಹಿಣಿಯಾಗಿದ್ದರು. ಪವಿತ್ರಾ ಮತ್ತು ದಿವ್ಯಾ ಸ್ಥಳೀಯ ಶಾಲೆಯೊಂದರಲ್ಲಿ ಕ್ರಮವಾಗಿ 6 ಹಾಗೂ 4ನೇ ತರಗತಿ ಓದುತ್ತಿದ್ದರು.

ನಾಗೇಶ್, ವ್ಯಾಪಾರ ಮಾಡುತ್ತಿದ್ದ ಜಾಗದ ಅಕ್ಕಪಕ್ಕದಲ್ಲೇ ನಾಲ್ಕೈದು ಮಂದಿ ಆಟೊಗಳಲ್ಲಿ ಹೋಟೆಲ್ ಇಟ್ಟುಕೊಂಡಿದ್ದಾರೆ. ಅವರಿಗೂ ನಾಗೇಶ್‌ಗೂ ವ್ಯಾಪಾರದ ವಿಷಯವಾಗಿ ಆರು ತಿಂಗಳ ಹಿಂದೆ ಜಗಳವಾಗಿತ್ತು. ಈ ಸಂಬಂಧ ಮಹದೇವಪುರ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡು ನಾಗೇಶ್ ಅವರನ್ನು ಬಂಧಿಸಿದ್ದರು.

15 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ನಡುವೆ ಅವರು ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇವೆಲ್ಲವುಗಳಿಂದ ಮನನೊಂದಿದ್ದ ಗಿರಿಜಾ ದಂಪತಿ, ರಾತ್ರಿ ಊಟಕ್ಕೆ ವಿಷ ಬೆರೆಸಿ ಮಕ್ಕಳಿಗೆ ತಿನ್ನಿಸಿದ್ದಾರೆ. ಬಳಿಕ ಅವರೂ ತಿಂದಿದ್ದಾರೆ. ಸ್ವಲ್ಪ ಸಮಯದಲ್ಲೇ ಅಸ್ವಸ್ಥಗೊಂಡ ಆ ನಾಲ್ಕೂ ಮಂದಿ ಮನೆಯಲ್ಲೇ ಮೃತಪಟ್ಟಿದ್ದಾರೆ.

ದಂಪತಿ ಶುಕ್ರವಾರ ಬೆಳಿಗ್ಗೆ ಮನೆಯಿಂದ ಹೊರಗೆ ಬಾರದಿದ್ದರಿಂದ ಅನುಮಾನಗೊಂಡ ಮನೆಯ ಮಾಲೀಕ ರಣಧೀರ್, ಕಿಟಕಿ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ದಂಪತಿ ಅನ್ಯೋನ್ಯವಾಗಿದ್ದರು. ನಾಗೇಶ್‌ಅವರಿಗೆ ಅಕ್ಕಪಕ್ಕದ ಹೋಟೆಲ್‌ಗಳ ಮಾಲೀಕರು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ತಂಗಿ ಅಳಲು ತೋಡಿಕೊಂಡಿದ್ದಳು' ಎಂದು ಗಿರಿಜಾ ಅಕ್ಕ ಶ್ರೀದೇವಿ `ಪ್ರಜಾವಾಣಿ'ಗೆ ತಿಳಿಸಿದರು. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT