ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷವಾದ ಮಧ್ಯಾಹ್ನದ ಬಿಸಿಯೂಟ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

Last Updated 17 ಜುಲೈ 2013, 7:50 IST
ಅಕ್ಷರ ಗಾತ್ರ

ಛಪ್ರಾ/ ಪಟ್ನಾ (ಪಿಟಿಐ): ಬಿಹಾರದ ಸರನ್ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಉಂಡ ಬಳಿಕ ವಿಷಾಹಾರದ ಪರಿಣಾಮವಾಗಿ ಬುಧವಾರ ಇನ್ನೂ 8 ಮಂದಿ ವಿದ್ಯಾರ್ಥಿಗಳು ಅಸು ನೀಗಿದ್ದು ಮೃತರ ಸಂಖ್ಯೆ 20ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಡುಗೆ ಮಾಡುವ ಮಹಿಳೆ ಸೇರಿದಂತೆ ಇತರ 27 ಮಂದಿ ಅಸ್ವಸ್ಥರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ಸ್ಥಳಾಂತರಿಸಲಾಗಿದೆ ಎಂದು ಶಿಕ್ಷಣ ಇಲಾಖಾ ಮುಖ್ಯ ಕಾರ್ಯದರ್ಶಿ ಅಮರಜಿತ್ ಸಿನ್ಹ ಪಿಟಿಐಗೆ ತಿಳಿಸಿದ್ದಾರೆ.

ಒಂದನೇ ತರಗತಿಯಿಂದ 5ನೇ ತರಗತಿವರೆಗಿನ ಹತ್ತು ವರ್ಷಗಳಿಗಿಂತ ಕೆಳಗಿನ 16 ಮಕ್ಕಳು ಛಪ್ರಾದಲ್ಲೇ ಮೃತರಾಗಿದ್ದು, ಇತರ ನಾಲ್ವರನ್ನು  ಕಳೆದ ರಾತ್ರಿ ಆಸ್ಪತ್ರೆ ತಲುಪಿದ ಬಳಿಕ ಮೃತರಾಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಸಿನ್ಹ ಹೇಳಿದರು.

ಅಸ್ವಸ್ಥರನ್ನು ಮಕ್ಕಳ ವಿಭಾಗದ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದ್ದು, ವೈದ್ಯರು ನಿರಂತರ ನಿಗಾ ಇಟ್ಟಿದ್ದಾರೆ ಎಂದು ಪಿಎಂಸಿಎಚ್ ಸೂಪರಿಂಟೆಂಡೆಂಟ್ ಅಮರಕಾಂತ್ ಆಜಾದ್ ಹೇಳಿದರು.

ಛಪ್ರಾದಿಂದ 25 ಕಿ.ಮೀ ಹಾಗೂ ರಾಜ್ಯ ರಾಜಧಾನಿಯಿಂದ 60 ಕಿ.ಮೀ.ದೂರದ ಮಶ್ರಕ್ ಬ್ಲಾಕಿನ ದಹ್ರಾಮಸತಿ ಗಂದ್ವಾನ್ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದುರಂತ ಸಂಭವಿಸಿತ್ತು.

ಈ ಮಧ್ಯೆ ಮಧ್ಯಾಹ್ನದ ಬಿಸಿಯೂಟ ಸಾವುಗಳ ಹಿನ್ನೆಲೆಯಲ್ಲಿ ನಿತೀಶ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಸರನ್ ಬಂದ್ ಆಚರಿಸಲು ವಿರೋಧಿ ಬಿಜೆಪಿ ಈದಿನ ಕರೆ ನೀಡಿದೆ. ಘಟನೆಯನ್ನು ಪ್ರತಿಭಟಿಸಿ ಆರ್ ಜೆಡಿ ಕೂಡಾ ಸರನ್ ಬಂದ್ ಆಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT