ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ವಿಲಾಸ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ವಿಷ್ಣು~ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಸುದ್ದಿಗಳು ಮತ್ತೊಮ್ಮೆ ಚಾಲ್ತಿಯಲ್ಲಿದೆ. ಅಂದಹಾಗೆ, ಇದು `ಆಪ್ತರಕ್ಷಕ~ ಚಿತ್ರದ ಅಭಿನಯಕ್ಕಾಗಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿದ್ದಕ್ಕೆ ಸಂಬಂಧಿಸಿದ ವಾದ - ವಿವಾದವಲ್ಲ! ಹೊಸ ಸಿನಿಮಾಕ್ಕೆ ಸಂಬಂಧಿಸಿದ ಸುದ್ದಿಗಳಿವು.

ನಟ ಅಭಿಜಿತ್ ಅವರ ಕನಸಿನ ಕೂಸು ಈ `ವಿಷ್ಣು~. ನಟ ಎಂದರಷ್ಟೇ ಸಾಲದು, ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೂಡ ಅವರೇನೇ. `ವಿಷ್ಣು~ ಮೂಲಕ ಅವರದ್ದು ತ್ರಿಪಾತ್ರ ನಿರ್ವಹಣೆ. ಸದ್ಯ ಸಿನಿಮಾದ ಮೊದಲ ಪ್ರತಿ ಬಗಲಲ್ಲಿಟ್ಟುಕೊಂಡಿರುವ ಅವರು ಕನ್ನಡ ಮಾಸ ನವೆಂಬರ್‌ನ ಮೂರನೇ ವಾರದಲ್ಲಿ ತಮ್ಮ ಕೂಸನ್ನು ಚಿತ್ರಮಂದಿರಗಳಿಗೆ ಒಪ್ಪಿಸಲು ಉದ್ದೇಶಿಸಿದ್ದಾರೆ.

ಕಳೆದ ವಾರ `ವಿಷ್ಣು~ ಚಿತ್ರದ ಗೀತೆಗಳ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಭಿಜಿತ್ ತಮ್ಮ ಕನಸು ಕನವರಿಕೆಗಳನ್ನು ಹಂಚಿಕೊಂಡರು. ತೆರೆಗೆ ಸಿದ್ಧವಾಗಿರುವ ಸಿನಿಮಾಗಳ ಉಬ್ಬರ ನವೆಂಬರ್ ಮಧ್ಯದ ವೇಳೆಗೆ ಒಂದು ಹದಕ್ಕೆ ಬರಬಹುದು. ಆಗ ತಮ್ಮ ಚಿತ್ರದ ಬಿಡುಗಡೆ ಸುರಳೀತವಾಗಬಹುದು ಎನ್ನುವ ಲೆಕ್ಕಾಚಾರ ಅವರದ್ದು.
 
ಈ ಚಿತ್ರ ಅವರ ಆತ್ಮವಿಶ್ವಾಸವನ್ನು ಇಮ್ಮಡಿ ಮುಮ್ಮಡಿಗೊಳಿಸಿದ್ದು, ಇನ್ನುಮುಂದೆ ವರ್ಷಕ್ಕೊಂದು ಚಿತ್ರ ನಿರ್ಮಿಸುವ ಸಂಕಲ್ಪಕ್ಕೆ ಕಾರಣವಾಗಿದೆಯಂತೆ. ಹಾಂ, ಅವರ ಮುಂದಿನ ಪ್ರಯತ್ನ `ಕಲಾತ್ಮಕ ಚಿತ್ರ~ವಂತೆ!

ಅತಿಥಿಯಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ಮಾಪಕ ಬಿ.ಎನ್. ಗಂಗಾಧರ್ `ವಿಷ್ಣು ಬಳಗ~ಕ್ಕೆ ಶುಭಕೋರಿದರು. ಕನ್ನಡ ಚಿತ್ರಗಳಿಗೆ ಮಾರಕವಾಗಿರುವ ಪರಭಾಷಾ ಚಿತ್ರಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು.

ಚಿತ್ರದ ನಾಯಕಿ ಕ್ಯಾಥರೀನ್ ಅವರಿಗೆ ಒಳ್ಳೆಯ ಚಿತ್ರ ಹಾಗೂ ಚಿತ್ರತಂಡದ ಜೊತೆಗೆ ಭಾಗಿಯಾದ ಖುಷಿ. `ವೃತ್ತಿಜೀವನದಲ್ಲಿ ಇದೊಂದು ಅವಿಸ್ಮರಣೀಯ ಅನುಭವ~ ಎಂದಾಕೆ ಭಾವುಕರಾದರು.

ಈ ಚಿತ್ರದಲ್ಲಿ ಹೊಸ ಗೀತರಚನೆಕಾರರು ಹಾಗೂ ಸ್ಥಳೀಯ ಗಾಯಕರಿಗೆ ಅವಕಾಶ ನೀಡಿರುವುದಾಗಿ ಸಂಗೀತ ನಿರ್ದೇಶಕ ಎಂ.ಎನ್. ಕೃಪಾಕರ್ ಹೇಳಿದರು. ತಮ್ಮ ಈ ಸಂಗೀತ ಪ್ರಯೋಗ ಕೇಳುಗರಿಗೆ ಇಷ್ಟವಾಗಬಹುದು ಎನ್ನುವುದು ಅವರ ನಂಬಿಕೆ.

ನಿರ್ಮಾಪಕ ಉಮೇಶ್ ಬಣಕಾರ್, ಅಕ್ಷಯ್ ಆಡಿಯೋದ ಟಿ.ಪಿ.ಸಿದ್ಧರಾಜು, ಛಾಯಾಗ್ರಾಹಕ ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. `ವಿಷ್ಣು ಗೆಲ್ಲಲಿ~ ಎನ್ನುವುದು ಎಲ್ಲರ ಹಾರೈಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT