ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸಿಐನಿಂದ ಸಿಗದ ಮಾನ್ಯತೆ: ಹಾಸನ ಪಶುವೈದ್ಯ ವಿದ್ಯಾರ್ಥಿಗಳ ಆತಂಕ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಹಾಸನ: ಬರುವ ಜುಲೈ ಆಗಸ್ಟ್ ವೇಳೆಗೆ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಹೊರಬರಲಿದ್ದಾರೆ. ಆದರೆ ವಿದ್ಯಾರ್ಥಿಗಳಲ್ಲಿ ಸಂತೋಷದ ಬದಲು ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಈ ವಿದ್ಯಾಲಯಕ್ಕೆ ಇನ್ನೂ ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಲಭಿಸಿಲ್ಲ.

ಸರ್ಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ ಐದು ವರ್ಷ ಅಧ್ಯಯನ ಮಾಡಿ ಈಗ ಹೊರಗೆ ಬರುತ್ತಿರುವ 23 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರವೇ ಲಭಿಸುವುದಿಲ್ಲ. ಮಹಾವಿದ್ಯಾಲಯಕ್ಕೆ ಮಾನ್ಯತೆ ಲಭಿಸುವವರೆಗೆ ಇವರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಾಗುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಇರುವ ಆತಂಕ.

2007ರಲ್ಲಿ ಆತುರಾತುರದಲ್ಲೇ ಹಾಸನದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸಲಾಯಿತು. ಕಾಲೇಜಿಗೆ ಕಟ್ಟಡವೇ ಇರಲಿಲ್ಲ. ಅರಸೀಕೆರೆ ರಸ್ತೆಯಯಲ್ಲಿ ಪಾಳುಬಿದ್ದಿದ್ದ ರೇಷ್ಮೆ ತರಬೇತಿ ಕೇಂದ್ರಕ್ಕೆ ಸುಣ್ಣ ಬಣ್ಣಬಳಿದು, ಕಾಲೇಜು ಆರಂಭಿಸಲಾಯಿತು.
 
ಹಸುಗಳನ್ನು ಕಟ್ಟುತ್ತಿದ್ದ ಕಟ್ಟಡ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಪರಿವರ್ತನೆಯಾಗಿತ್ತು. ಶೀಘ್ರದಲ್ಲೇ ಮೂಲಸೌಲಭ್ಯ ಒದಗಿಸುವ ಭರವಸೆಯನ್ನು ಸರ್ಕಾರ ಕೊಟ್ಟಿದ್ದರಿಂದ ವೆಟರ್ನರಿ ಕೌನ್ಸಿಲ್‌ನವರು ಪ್ರವೇಶಾತಿಗೆ ಅನುಮತಿ ನೀಡಿದ್ದರು. ಐದು ವರ್ಷವಾದರೂ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಸನದ ಅವ್ಯವಸ್ಥೆಯನ್ನು ನೋಡಿದ ಕೌನ್ಸಿಲ್ ರಾಜ್ಯದಲ್ಲಿ ಆರಂಭಿಸಲು ಉದ್ದೇಶಿಸಿರುವ ಇನ್ನೆರಡು ಕಾಲೇಜುಗಳಿಗೆ ಪ್ರವೇಶಾತಿ ನೀಡದಂತೆ ತಡೆದಿದೆ.

ಮೊದಲ ವರ್ಷದಲ್ಲಿ 30 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಯಾವುದೇ ಅನುಕೂಲ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಎರಡನೇ ವರ್ಷ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಎಚ್ಚೆತ್ತುಕೊಂಡ ಸರ್ಕಾರ ನಗರದ ಹೊರವಲಯದ ಚಿಕ್ಕಹೊನ್ನೇನಹಳ್ಳಿಯಲ್ಲಿ 70ಎಕರೆ ಭೂಮಿ ಮಂಜೂರು ಮಾಡಿ, ಕಟ್ಟಡ ಕಾಮಗಾರಿ ಆರಂಭಿಸಿತು. ಮೂರನೇ ವರ್ಷದಿಂದ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಈಗ ಮಹಾವಿದ್ಯಾಲಯದಲ್ಲಿ ಒಟ್ಟು 158 ವಿದ್ಯಾರ್ಥಿಗಳಿದ್ದಾರೆ.

ಕಾಲೇಜಿನಲ್ಲಿ ಸೌಲಭ್ಯಗಳಿಲ್ಲದ ಕಾರಣಕ್ಕೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ತರಬೇತಿಗಾಗಿ ಕೆಲವು ತಿಂಗಳ ಕಾಲ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು.

ಮಹಾವಿದ್ಯಾಲಯಕ್ಕೆ 77 ಕೋಟಿ ರೂಪಾಯಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಈ ವರೆಗೆ ಬಂದಿರುವುದು 35 ಕೋಟಿ ರೂಪಾಯಿ ಮಾತ್ರ. ಅದರಲ್ಲಿ 17.5 ಕೋಟಿ ರೂಪಾಯಿಯನ್ನು ಭೂಸ್ವಾಧೀನಕ್ಕೆ ವ್ಯಯಿಸಲಾಗಿದೆ. ಕಾಲೇಜಿನ ಮುಖ್ಯ ಕಟ್ಟಡಕ್ಕೆ 40ಕೋಟಿ ಹಾಗೂ ಚಿಕಿತ್ಸಾ ಸಂಕೀರ್ಣ ನಿರ್ಮಾಣಕ್ಕೆ 13 ಕೋಟಿ ರೂಪಾಯಿಯ ಟೆಂಡರ್ ನೀಡಲಾಗಿದೆ. ಕಟ್ಟಡದ ಕಾಮಗಾರಿ ನಡೆಯುತ್ತಿದೆ.
 
ಆದರೆ ಹಣ ನೀಡದೆ ಗುತ್ತಿಗೆದಾರರು ಕಟ್ಟಡ ಹಸ್ತಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಡೀನ್ ಡಾ. ವಸಂತ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವ ರೇವುನಾಯಕ ಬೆಳಮಗಿ ಅವರಿಂದ ಆರಂಭಿಸಿ ವಿಧಾನ ಸೌಧದ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಬಂದಿದ್ದಾರೆ. ಭರವಸೆ ಬಿಟ್ಟರೆ ಹಣ ಬಿಡುಗಡೆಯಾಗಿಲ್ಲ.

2008-09ನೇ ಸಾಲಿನಲ್ಲಿ ಸರ್ಕಾರ ನೀಡಿದ್ದ ಪೂರ್ತಿ ಅನುದಾನ ಬಳಸಿಲ್ಲ ಎಂಬ ಕಾರಣಕ್ಕೆ 2009-10ನೇ ಸಾಲಿನಲ್ಲಿ ಅನುದಾನ ಕಡಿಮೆ ಮಾಡಲಾಗಿತ್ತು. ಅಲ್ಲಿಂದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. 2010-11ರಲ್ಲಿ ಹತ್ತು ಕೋಟಿ ಬಿಡುಗಡೆಯಾಗಿ ಅಷ್ಟೂ ಖರ್ಚಾಗಿದೆ. 2012-13ನೇ ಸಾಲಿನಲ್ಲಿ 20 ಕೋಟಿ ರೂಪಾಯಿಯನ್ನಾದರೂ ಬಿಡುಗಡೆ ಮಾಡಬೇಕು ಎಂದು ಡೀನ್ ವಸಂತ ಶೆಟ್ಟಿ ಅವರು ಸಚಿವರಿಗೆ ಮನವಿ ನೀಡಿದ್ದಾರೆ.

`20 ಕೋಟಿ ರೂಪಾಯಿ ಕೂಡಲೇ ನೀಡಿದರೆ ಮಾರ್ಚ್ ವೇಳೆಗೆ ಕಟ್ಟಡದ ಕೆಲವು ಭಾಗಗಳನ್ನು ಪೂರ್ಣಗೊಳಿಸಿ ಕೊಡುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಅಷ್ಟಾದರೆ ಇಲ್ಲಿಯೇ ಮೂಲ ಸೌಲಭ್ಯಗಳನ್ನು ಒದಗಿಸಿ ಈ ವಿದ್ಯಾರ್ಥಿಗಳು ಹೊರಗೆ ಹೋಗುವುದರೊಳಗೆ ಮಾನ್ಯತೆ ಪಡೆಯಬಹುದು~ ಎಂದು ಡೀನ್ ನುಡಿಯುತ್ತಾರೆ. ಮಾನ್ಯತೆ ಲಭಿಸದಿದ್ದರೆ? ಎಂಬ ಪ್ರಶ್ನೆಗೆ ಅವರಲ್ಲೂ ಉತ್ತರವಿಲ್ಲ.

`ಈಗ ಇಲ್ಲದಿದ್ದರೂ ಮುಂದೆ ಕಾಲೇಜಿಗೆ ಮಾನ್ಯತೆ ಲಭಿಸುವಾಗ ಹಿಂದಿನಿಂದಲೇ ಅನ್ವಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದು~ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT