ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಣೆ ರಿಪೇರಿಯ ತಾಣ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು ದಕ್ಷಿಣದ ಬಸವನಗುಡಿಯ ಡಿ.ವಿ.ಜಿ. ರಸ್ತೆಯಲ್ಲಿ ನೆಟಕಲ್ಲಪ್ಪ ವೃತ್ತಕ್ಕೆ ಸಾಗುತ್ತಿದ್ದಂತೆ ಬಲ ತಿರುವಿನಲ್ಲಿ ಪುಟ್ಟದಾದ ವೀಣೆ ರಿಪೇರಿ ಮಾಡುವ ಅಂಗಡಿಯಿದೆ. ‘ವೀಣಾ ವರ್ಕ್ಸ್’ ಆ ಅಂಗಡಿ. ರಾಜು ಅವರೇ ಅದರ ಯಜಮಾನ.

ಈ ಅಂಗಡಿ ಅರವತ್ತು ವರ್ಷಗಳಷ್ಟು ಹಳೆಯದು. ರಾಜು ಅವರ ತಾತ, ಅಪ್ಪ ಇಲ್ಲೇ ಇದೇ ಕೆಲಸ ಮಾಡುತ್ತಿದ್ದರಂತೆ. ಅವರ ಅಪ್ಪ ವಿ.ಕೃಷ್ಣನ್ ಒಳ್ಳೆ ಹಾರ್ಮೋನಿಯಂ ವಾದಕರೂ ಆಗಿದ್ದರು. ಅವರಿಂದಲೇ ಈ ಕೆಲಸ ಕಲಿತ ರಾಜು ‘ಶ್ರುತಿ ಜ್ಞಾನವಿಲ್ಲದಿದ್ದರೆ ಯಾವುದೇ ಸಂಗೀತ ವಾದ್ಯದ ನಿರ್ಮಾಣ, ರಿಪೇರಿ ಸಾಧ್ಯವಿಲ್ಲ’ ಎನ್ನುತ್ತಾರೆ.

ಇಲ್ಲಿ ಪಿಟೀಲು, ಹಾರ್ಮೋನಿಯಂ, ಗಿಟಾರ್ ಸಹ ರಿಪೇರಿ ಮಾಡುತ್ತಾರೆ. ಹೊಸ ವೀಣೆ ಆರ್ಡರ್ ಕೊಟ್ಟ ಹತ್ತು ದಿನಗಳಲ್ಲಿ ಸಿದ್ಧವಾಗಿರುತ್ತದೆ. ಬೆಲೆ ಐದೂವರೆಯಿಂದ ಇಪ್ಪತ್ತು ಸಾವಿರ. ಹಳೆಯದಾದಷ್ಟೂ ವೀಣೆಗೆ ಹೆಚ್ಚು ಬೆಲೆ. ಏಕೆಂದರೆ, ಮರ ಒಣಗಿರುತ್ತೆ.

ವೀಣೆಯ ರಿಪೇರಿಯ ಸವಾಲುಗಳನ್ನು ಅವರು ವಿವರಿಸಿದ್ದು ಹೀಗೆ...

‘ಮೈಸೂರು ವೀಣೆ ಮೇಲುಗಡೆ ಕರಿಮರ ಉಳಿದ ಭಾಗ ಹಲಸು ಮತ್ತು ಬೀಟೆ. ತಂಜಾವೂರು ವೀಣೆಯ ವಿಶೇಷವೆಂದರೆ ಅದನ್ನು ಪೂರ್ತಿ ಹಲಸಿನ ಮರದಿಂದ ಮಾಡಿರುತ್ತಾರೆ. ಕೆಲಸ ಹೇಳಿಕೊಡಲು ನಾವೇನೊ ರೆಡಿ. ಆದರೆ ಕಲಿಯಲು ಮುಂದೆ ಬರುವವರು ಅತಿ ವಿರಳ. ವೀಣೆ ತಯಾರಿಕೆ, ಕಾಯಕಲ್ಪ ಬಲು ಸೂಕ್ಷ್ಮ ಹಾಗೂ ನಾಜೂಕಿನದು. ನೋಡಿ, ಈ ಇಪ್ಪತ್ತನಾಲ್ಕು ಮೆಟ್ಟಿಲುಗಳು ನಮ್ಮ ದೇಹದ ಇಪ್ಪತ್ತನಾಲ್ಕು ಬೆನ್ನುಮೂಳೆಗಳನ್ನು ಪ್ರತಿನಿಧಿಸುತ್ತವೆ. ಒಂದೊಂದು ಮೆಟ್ಟಲಿಗೂ ನಿರ್ದಿಷ್ಟವಾದ ಹದದಲ್ಲಿ ಜೇನುಮೇಣ ಕೂರಿಸಬೇಕು.

ಅಲ್ಪ ವ್ಯತ್ಯಯವಾದರೂ ಸಪ್ತ ಸ್ವರಗಳು ಅಪಸ್ವರವಾದಾವು! ನಮ್ಮಲ್ಲಿಗೆ ರಿಪೇರಿಗೆ ಬರುವ ವೀಣೆಗಳು ಬಹುತೇಕ ಬುರುಡೆ ಒಡೆದುಹೋಗಿರುವಂಥವು, ತಂತಿ ಹರಿದವು, ಮೇಣ ಕರಗಿರುವವು. ಹಾಗಾಗಿ ಕೆಲಸ ಹೆಚ್ಚು. ವೀಣೆಯ ವಿನ್ಯಾಸದಲ್ಲಿ ಕಾಲಾಂತರದಲ್ಲಿ ಮಹತ್ತರ ವಿಕಾಸವಾಗಿದೆ. ತಯಾರಿಕೆಯಲ್ಲಿ ಮರವಜ್ರದ ಬದಲಿಗೆ ಈಗ ಅರಾಲ್‌ಡೈಟ್ ಬಳಸಲಾಗುತ್ತದೆ. ಪ್ಲಾಸ್ಟಿಕ್, ಫೈಬರ್‌ನಲ್ಲೂ ವೀಣೆ ನಿರ್ಮಿಸುತ್ತಾರೆ. ಆದರೆ ಮರಕ್ಕೆ ಸಾಟಿಯಿಲ್ಲ’.

ವೀಣೆ ಭಾರತದ ರಾಷ್ಟ್ರೀಯ ವಾದ್ಯ. ಭಾರತೀಯ ಸಂಗೀತ ವಾದ್ಯಗಳಲ್ಲೇ ಅತ್ಯಂತ ಪ್ರಾಚೀನವಾದುದು. ವೇದಗಳಲ್ಲೇ ವೀಣೆಯ ಉಲ್ಲೇಖವಿದೆ. ವಿದ್ಯಾಧಿದೇವತೆ ಸರಸ್ವತಿ, ಮಹರ್ಷಿ ನಾರದ ವೀಣಾ ಪಾರಂಗತರೆ. ಯಾಜ್ಞವಲ್ಕ್ಯ ಮುನಿ ತಮ್ಮ ‘ಸ್ಮೃತಿ’ ಎಂಬ ಸಂಗೀತ ಗ್ರಂಥದಲ್ಲಿ ‘ವೀಣೆಯಲ್ಲಿ ನುರಿತವರು ಶ್ರುತಿ ಮತ್ತು ತಾಳದಲ್ಲಿ ಪರಿಶ್ರಮವುಳ್ಳವರು ನಿರಾಯಾಸವಾಗಿ ಮೋಕ್ಷ ಪಡೆಯುತ್ತಾರೆ’ ಎಂದು ರಾಜು  ಪುರಾಣದ ಉಲ್ಲೇಖ ನೀಡುತ್ತಾರೆ.

ಇವರು ವೀಣೆ, ಪಿಟೀಲು, ಹಾರ್ಮೋನಿಯಂ, ಮೃದಂಗ, ತಬಲ, ಕೊಳಲು, ಕೀಬೋರ್ಡ್  ಕಲಿಯಲು ಆಸಕ್ತಿಯುಳ್ಳವರಿಗೆ ಗುರುಗಳನ್ನೂ ಪರಿಚಯಿಸುತ್ತಾರೆ. ನೋವಿನ ಸಂಗತಿಯೆಂದರೆ ಹತ್ತು ಮಂದಿ ಪಾಠಕ್ಕೆ ಸೇರಿದರೆ ಕೆಲವೇ ದಿನಗಳಲ್ಲಿ ಏಳು ಮಂದಿ ಮುಂದುವರಿಸದೆ ಬಿಟ್ಟಿರುತ್ತಾರೆ. ಆದರೆ ಎಂದಿನ ಶಾಲೆಯ ಮಕ್ಕಳೂ ಹಾಗೆ ಮಾಡುತ್ತಾರಲ್ಲ! ಇದರಲ್ಲಿ ಅತಿಶಯೋಕ್ತಿಯೇನಿಲ್ಲ ಬಿಡಿ ಎನ್ನುತ್ತಾರೆ ರಾಜು.
‘ಯಾರಿಗಾದರೂ  ಸಂಗೀತ ಆಪ್ಯಾಯಮಾನವೆನ್ನಿಸದಿದ್ದರೆ ಅದೊಂದು ವ್ಯಾಧಿಯೇ ಹೌದು’ ಎಂಬ ಮಾರ್ಮಿಕ ಮಾತಿದೆ. ಒಲಿಸಿಕೊಂಡರೆ ತಾನೇ ವಿದ್ಯೆ ಒಲಿಯುವುದು. ಸಂಗೀತಗಾರನನ್ನು ಮೀರಿಸುವ ಮಾಯಕಾರ ಯಾರಿದ್ದಾರೆ ಅಲ್ಲವೆ?  ರಾಜು ಅವರ ಸಂಪರ್ಕ ವಿಳಾಸ: ವಿ. ರಾಜು, 32, ಮಲ್ಲಿಕಾರ್ಜುನ ಗುಡಿ ರಸ್ತೆ. ಬಸವನಗುಡಿ, ಬೆಂಗಳೂರು 560 004 ಮೊ: 98457 44693.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT