ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಕುಮಾರರ ವೀರ ಪಡೆ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚೆಲ್ಲಿದರು ಮಲ್ಲಿಗೆಯ- 3

ಬೆಂಗಳೂರು ಮಹಾನಗರ ಎಲ್ಲಾ ದಿಕ್ಕುಗಳಿಗೆ ವಿಸ್ತರಣೆಯಾಗುತ್ತಿದ್ದರೂ ಕರಗ ಉತ್ಸವ ನಡೆಯುವುದು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡ ವರ್ತುಲದಲ್ಲಿ ಮಾತ್ರ.

ಇಂದಿಗೂ ಪೇಟೆಗಳಿಗಷ್ಟೇ ಸೀಮಿತವಾಗಿರುವ ಬೆಂಗಳೂರು ಕರಗ ಕಾರ್ಯಕ್ರಮಗಳಲ್ಲಿ ಕೋಟೆಯೊಳಗಿನ ಅಷ್ಟ ದಿಕ್ಕುಗಳಿಗೆ ಪ್ರತಿದಿನ ಕರಗ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ನಿಗದಿತ ಸ್ಥಳಗಳಲ್ಲಿ ಸ್ನಾನ ಮುಗಿಸಿ, ಪೂಜಾ ಸಾಮಗ್ರಿಗಳನ್ನು ಶುದ್ಧ ಮಾಡಿಕೊಂಡು ದೇವಾಲಯಕ್ಕೆ ವಾಪಸ್ಸಾಗುವುದು ಪದ್ಧತಿ.

ಕರಗ ಉತ್ಸವಕ್ಕೆ ಯಾವುದೇ ಅಡ್ಡಿ ಆತಂಕಗಳೂ ಬರದಿರಲಿ ಎಂಬುದೇ ಈ ಶುದ್ಧೀಕರಣದ ಉದ್ದೇಶ. ಮೊದಲಾದರೆ ಎಲ್ಲಾ ದಿಕ್ಕುಗಳಲ್ಲೂ ಸ್ನಾನ ಘಟ್ಟಗಳಿದ್ದವು. ಈಗ ಕೆರೆಕಟ್ಟೆಗಳೆಲ್ಲಾ ಹೂಳು ತುಂಬಿಹೋಗಿವೆ ಅಥವಾ ಮುಚ್ಚಿಹೋಗಿವೆ. ಆದರೆ ಸಂಪ್ರದಾಯ ತಪ್ಪಿಸುವಂತಿಲ್ಲ. ಹೀಗಾಗಿ ಶುದ್ಧೀಕರಣ ಪ್ರಕ್ರಿಯೆ ಈಗಲೂ ಜಾರಿಯಲ್ಲಿದೆ. 

ಶಕ್ತ್ಯೋತ್ಸವದ ಎಂಟು ದಿನ ಎಂಟೂ ದಿಕ್ಕುಗಳಲ್ಲಿ ನಾದಸ್ವರ, ಘಂಟಾನಾದಗಳ ಸಮೇತ ನಡೆಯುವ ಮೆರವಣಿಗೆಯಲ್ಲಿ ಕರಗ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೀಕ್ಷೆ ಪಡೆದ ಎಲ್ಲರೂ ಭಾಗವಹಿಸುತ್ತಾರೆ. ಇವರೊಂದಿಗೆ ಉತ್ಸವದಲ್ಲಿ ಉಪಯೋಗಿಸುವ ಕಳಸ, ತ್ರಿಶೂಲ ಸೇರಿದಂತೆ ಎಲ್ಲಾ ಪೂಜಾ ಪರಿಕರಗಳನ್ನು ಹೊತ್ತು ಸಾಗುತ್ತಾರೆ. ಹಳೆಯ ಬೆಂಗಳೂರು ಕೋಟೆಯ ನಾಲ್ಕೂ ದ್ವಾರಗಳಿಗೆ ಹಾಗೂ ಉಳಿದ ನಾಲ್ಕೂ ದಿಕ್ಕುಗಳಿಗೆ ಇಡೀ ಕರಗ ತಂಡ ಉತ್ಸಾಹದಿಂದ ಪ್ರತಿದಿನ ಹೋಗಿ ಬರುವುದೇ ಒಂದು ಸೊಗಸು.

ಇಂದಿನಿಂದ (ಏ. 17) ಆರಂಭವಾಗುವ ನಿತ್ಯದ ಮೆರವಣಿಗೆ ಅಂತ್ಯಗೊಳ್ಳುವುದು ಏಪ್ರಿಲ್ 26ರಂದು. ಮೊದಲ ದಿನವಾದ ಇಂದು ಪೂಜಾರರು, ಗಣಾಚಾರಿ, ಗಂಟೆ ಪೂಜಾರಿ ಮೊದಲಾದವರ ಕರಗ ಪರಿವಾರ ಸಾಗುವುದು. ಹಸಿರು ತುಂಬಿದ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ಇಂದು ಪುಣ್ಯ ಸ್ನಾನ ಕಾರ್ಯಕ್ರಮ.

ಸಂಪಂಗಿ ಕರೆ ಅಂಗಳದ ಶಕ್ತಿಪೀಠ, ಲಾಲ್‌ಬಾಗ್ ರಸ್ತೆಯ ಹೂವಿನ ತೋಟಗಳಲ್ಲಿರುವ ಮುನೇಶ್ವರಸ್ವಾಮಿ ದೇವಾಲಯ, ಗವಿಪುರಂ ಗುಟ್ಟಹಳ್ಳಿಯ ಜಲಕಂಠೇಶ್ವರ ಗುಡಿ, ಕೆಂಪೇಗೌಡ ವೃತ್ತದ ಅಣ್ಣಮ್ಮನ ಆಲಯ, ಕಲಾಸಿಪಾಳ್ಯದ ಮರಿಸ್ವಾಮಿ ಮಠ ಮೊದಲಾದೆಡೆಗಳಲ್ಲಿ ಈ ಶುದ್ಧಿ ಕಾರ್ಯಗಳು ನಡೆಯಲಿದ್ದು, ಇದಾದ ಬಳಿಕ ನಡೆಯುವುದೇ ಗಾವು ಶಾಂತಿ ಅರ್ಪಣೆ.

ದ್ರೌಪದಿಯ ತೋಳುಗಳಿಂದ ಸೃಷ್ಟಿಯಾದವರೆಂದು ಹೇಳಲಾಗುವ ವೀರಕುಮಾರರು ಕರಗ ಉತ್ಸವದ ಸೈನಿಕ ಪಡೆಯಂತೆ ಕಾರ್ಯನಿರ್ವಹಿಸುತ್ತಾರೆ. ವ್ರತ ನಿಷ್ಠೆಯಲ್ಲೇ ಕರಗೋತ್ಸವ ದಿನಗಳಲ್ಲಿ ಕಳೆಯುವ ವೀರಕುಮಾರರು ಬಲಗೈಗೆ ಕಂಕಣ ಕಟ್ಟಿ, ಜನಿವಾರ ಧರಿಸಿದ ಮೇಲೆ ತಮ್ಮ ಮನೆಗಳಿಗೆ ಹೋಗುವುದಿಲ್ಲ. ದೀಕ್ಷೆ ಪಡೆಯುವ ವೀರಕುಮಾರರಿಗೆ ಪ್ರತ್ಯೇಕ ವಸ್ತ್ರ-ಅಲಂಕಾರ ಸಂಹಿತೆ ಇದೆ. ಕೊರಳಲ್ಲಿ ಹೂಮಾಲೆ, ಸರಿಗೆ ಪೇಟ, ಬಿಳಿ ಚಲ್ಲಣ, ನಡುವಿಗೆ ಕೆಂಪುವಸ್ತ್ರ, ಹಣೆಯ ಮೇಲೆ ನಾಮ (ತ್ರಿಪುಂಡ್ರಂ) ವೀರಕುಮಾರರ ದಿರಿಸು ವೇಷಗಳು.

ಪ್ರತಿದಿನ ಈ ದೇವಿ ಪರಿವಾರದ ವೀರಕುಮಾರರು ಸ್ನಾನ ಮಾಡಿ, ಮಡಿಯುಟ್ಟು, ಸಾತ್ವಿಕ ಆಹಾರ ಸೇವಿಸಿ ಕರಗದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ದೇವಿಯ ಸೇವೆಗೆ ಮುಡಿಪಾದ ವೀರಕುಮಾರರಲ್ಲಿ ಕೆಲವರು ಅಲಗು ಸೇವೆ ಮಾಡುವ ಅರ್ಹತೆ ಹೊಂದಿರುತ್ತಾರೆ.

ದೇವಿ ಎದುರು ನಿಂತು ಬಲಗೈ ಕತ್ತಿಯಿಂದ ಬಲ ಎದೆ ಮತ್ತು ಬಲ ಭುಜದ ಮೇಲೆ ಮೂರು ಬಾರಿ, ಎಡ ಎದೆ ಹಾಗೂ ಎಡ ಭುಜದ ಮೇಲೆ ಮೂರು ಬಾರಿ ಅಲಗು ಸೇವೆ ಮಾಡುವ ವೀರಕುಮಾರರು `ಢಿಕ್ ಢಿಕ್ ಢೀ' ಎಂದು ಕೂಗುತ್ತಾರೆ. ಶಕ್ತಿಯ ಆವೇಶ ಮೈಮೇಲೆ ಮೂಡಲಿ ಎಂಬುದೇ ಇದರ ಉದ್ದೇಶ.

ಧಾರ್ಮಿಕ ಕ್ರಿಯೆಯಾಗಿ ಬಹು ಹಿಂದಿನಿಂದಲೂ ವೀರಕುಮಾರರು ಕರಗ ಹಬ್ಬದ ಸಂದರ್ಭದಲ್ಲಿ ಅಲಗು ಹಿಡಿದು ಸಂಪ್ರದಾಯ ಬದ್ಧವಾಗಿ ಪೂಜಾವಿಧಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಮೇಲೆ ಆಗ ನಮ್ಮ ದೇಶವನ್ನಾಳುತ್ತಿದ್ದ ಬ್ರಿಟಿಷರ ಕಣ್ಣು ಒಮ್ಮೆ ಬಿದ್ದಿತ್ತು.

ಭಾರತೀಯರು ಯಾವುದೇ ಶಸ್ತ್ರಗಳನ್ನು ಹೊಂದುವಂತಿಲ್ಲವೆಂದು ಕಾನೂನನ್ನು ಜಾರಿಗೆ ತಂದ ಬ್ರಿಟಿಷರು ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುತ್ತಿದ್ದ ಕತ್ತಿ ಕಠಾರಿಗಳನ್ನು ಪ್ರಭುತ್ವಕ್ಕೆ ತಂದೊಪ್ಪಿಸುವಂತೆ ತಾಕೀತು ಮಾಡಿದರು.

ಬೆಂಗಳೂರು ಕರಗದ ವೇಳೆ ಕಂಡು ಬರುತ್ತಿದ್ದ ವೀರಕುಮಾರರ ಅಲಗುಗಳೂ ಬ್ರಿಟಿಷರ ಕಣ್ಣಿಗೆ ಬಿದ್ದವು. ಆಗ ಮೈಸೂರು ಸಂಸ್ಥಾನದ ಆಡಳಿತ ನಿರ್ವಹಿಸುತ್ತಿದ್ದ (1834-1861) ಸರ್ ಮಾರ್ಕ್ ಕಬ್ಬನ್ ಕರಗದ ವಿಚಾರದಲ್ಲಿ ಆಸಕ್ತಿ ತೋರಿದರು.

ವಹ್ನಿಕುಲ ಕ್ಷತ್ರಿಯರು ಕರಗದಲ್ಲಿ ಬಳಸುವ ಕತ್ತಿಗಳಿಗೆ ಪರವಾನಗಿ ಅಗತ್ಯವಿಲ್ಲವೆಂದು ಭಾರತೀಯ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯಿಂದ ದೇವಿ ಪರಿವಾರದ ವೀರಕುಮಾರರ ಕತ್ತಿಗಳಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದರು.

ಅಲಗು ಸೇವೆಗೆ ಮತ್ತು ನಂತರ ಆ ಕತ್ತಿಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವುದಕ್ಕೆ ಸರ್ಕಾರ ಅನುಮತಿ ನೀಡಿತಲ್ಲದೆ, ಸ್ವಾತಂತ್ರ್ಯಾ ನಂತರವೂ ಇದು ಮುಂದುವರಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT