ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಸಮಾಜ ಒಡೆಯುವ ಹುನ್ನಾರ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ವೀರಶೈವ ಸಮಾಜವನ್ನು ಒಡೆಯುವ ಹುನ್ನಾರ ನಮ್ಮ ಪಕ್ಷದವರಿಂದಲೇ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

`ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಿರುವ ವೀರಶೈವ ಸಮುದಾಯದ ಒಗ್ಗಟ್ಟು ಮುರಿಯಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ಇದರಲ್ಲಿ ಅವರು ಯಶಸ್ಸು ಕಾಣಲಾರರು~ ಎಂದು ಅವರು ಭವಿಷ್ಯ ನುಡಿದರು.

ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಹೀಗೆ ಗುಡುಗಿದರು.

ಗೋಕಾಕದಲ್ಲಿ ನಡೆದ ಪಂಚಮಸಾಲಿ ವೀರಶೈವರ ಸಮಾವೇಶ ಹಾಗೂ ತುಮಕೂರಿನಲ್ಲಿ ನಡೆದ ಬೃಹತ್ ಶಿವಲಿಂಗ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿರಲಿಲ್ಲ. ತಮ್ಮನ್ನು ಸಮಾಜದಿಂದ ದೂರ ಸರಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಅವರು ಸಿಟ್ಟಾಗಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, `ನನ್ನ ಪ್ರಕಾರ ಅವರು ಹಾಗೆ ಹೇಳಿರಲಾರರು. ಮುಂದೆ ಕೂಡ ಹೇಳುವುದಿಲ್ಲ ಅಂತ ಭಾವಿಸಿದ್ದೇನೆ~ ಎಂದರು.

ಅದೃಷ್ಟದಾಟ: ಇದರ ಮಧ್ಯೆ ಅದೃಷ್ಟ ಬಲದ ಬಗ್ಗೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ `ಒಳಗುದ್ದು~ಗಳ ವಿನಿಮಯ ಮುಂದುವರಿದಿದೆ. ಅದೃಷ್ಟ ಬಲದಿಂದ ಮುಖ್ಯಮಂತ್ರಿಯಾಗಿದ್ದಾಗಿ ಒಂದೆಡೆ ಡಿ.ವಿ.ಸದಾನಂದ ಗೌಡ ಹೇಳಿಕೊಂಡಿದ್ದಾರೆ. ಅದನ್ನು ಅಣಕಿಸುವ ಹಾಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಸದಾನಂದ ಗೌಡರು ಅದೃಷ್ಟಬಲ ಕುರಿತು ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, `ಹೌದು, ಅವರು ಅದೃಷ್ಟ ಬಲದಿಂದಲೇ ಮುಖ್ಯಮಂತ್ರಿಯಾದರು. ಅದರಲ್ಲಿ ನನ್ನದೇನೂ ಪ್ರಯತ್ನ ಇಲ್ಲ. ದೇವೇಗೌಡರು ಪ್ರಧಾನಿ ಆಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಕೂಡ ಅದೃಷ್ಟ ಬಲದಿಂದಲೇ~ ಎಂದು ಚುಚ್ಚಿದರು.

ಬಜೆಟ್‌ಪೂರ್ವ ಸಭೆ ನಂತರ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಯವರು, `ಅದೃಷ್ಟದಿಂದ ನಾನು ಸಿಎಂ ಆಗಿದ್ದು ಜಗತ್ತಿಗೇ ಗೊತ್ತಿರುವ ವಿಚಾರ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಯಡಿಯೂರಪ್ಪ ಯಾವ ಅರ್ಥದಲ್ಲಿ ಅದನ್ನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆ ಬಗ್ಗೆ ನೀವು ಅವರನ್ನೇ ಕೇಳಿ~ ಎಂದು ತೀಕ್ಷ್ಣವಾಗಿಯೇ ಉತ್ತರಿಸಿದರು.

ಯಡಿಯೂರಪ್ಪ ಅವರು ಸದ್ಯದಲ್ಲೇ ತಮ್ಮ ಆಪ್ತ ಸಚಿವರು ಮತ್ತು ಶಾಸಕರ ಸಭೆ ನಡೆಸಲಿದ್ದಾರೆ ಎಂಬುದರ ಕುರಿತು ಕೇಳಿದಕ್ಕೆ, `ಒಬ್ಬ ಮಾಜಿ ಮುಖ್ಯಮಂತ್ರಿ ಶಾಸಕರ ಜತೆ ಮಾತುಕತೆ ನಡೆಸಿದರೆ ತಪ್ಪು ಹೇಗಾಗುತ್ತದೆ. ಸಹಜವಾಗಿಯೇ ಶಾಸಕರು ಸಭೆ ಸೇರಿ ಚರ್ಚೆ ನಡೆಸಬಹುದು. ಅದನ್ನು ತಪ್ಪಾಗಿ ಅರ್ಥೈಸುವುದು ಸರಿಯಲ್ಲ~ ಎಂದು ಅವರು ಹೇಳಿದರು.

ಜೆಡಿಎಸ್ ಶಾಸಕರು ಮಾತ್ರ ತಮ್ಮ ಬಳಿ ಬಂದು ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆಂಬ ಆರೋಪ ಕುರಿತು ಕೇಳಿದ್ದಕ್ಕೆ `ನಾನು ಎಲ್ಲ ಜನರ ಮತ್ತು ಎಲ್ಲ ಶಾಸಕರ ಮುಖ್ಯಮಂತ್ರಿ. ಯಾವುದೋ ಒಂದು ಪಕ್ಷದ ಶಾಸಕರಿಗೆ ಮುಖ್ಯಮಂತ್ರಿಯಲ್ಲ. ಎಲ್ಲ ಶಾಸಕರು ನನ್ನ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಕೇವಲ ಜೆಡಿಎಸ್‌ನವರು ಬರುತ್ತಾರೆನ್ನುವುದು ಶುದ್ಧ ಸುಳ್ಳು~ ಎಂದು ಹೇಳಿದರು.

`ಎಲ್ಲ ಶಾಸಕರು, ಎಲ್ಲ ಜನರು ಒಬ್ಬ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುವುದರಿಂದ ಆ ವ್ಯಕ್ತಿ ಪ್ರತಿನಿಧಿಸುವ ಪಕ್ಷಕ್ಕೂ ಗೌರವ ಬರುತ್ತದೆ. ಒಬ್ಬ ಮುಖ್ಯಮಂತ್ರಿ ಎಲ್ಲರ ಸಮಸ್ಯೆಗಳನ್ನೂ ಆಲಿಸಬೇಕಾಗುತ್ತದೆ. ಆಗಲೇ ಅವರು ಸಮರ್ಥ ಮುಖ್ಯಮಂತ್ರಿಯಾಗಲು ಸಾಧ್ಯ~ ಎಂದು ವಿವರಿಸಿದರು.

ಇತ್ತೀಚೆಗೆ ಯಡಿಯೂರಪ್ಪ ನೀಡುತ್ತಿರುವ ಮೂದಲಿಕೆಯ ಮಾತುಗಳ ಕುರಿತು ಕೇಳಿದ್ದಕ್ಕೆ `ನನಗೆ ಆ ಬಗ್ಗೆ ಏನೂ ತಿಳಿದಿಲ್ಲ. ಹೆಚ್ಚಿನ ಮಾಹಿತಿಗೆ ಅವರನ್ನೇ ಕೇಳಿ~ ಎಂದರು.

ಆಪ್ತರ ಸಭೆ ನಾಳೆ

ಹುಬ್ಬಳ್ಳಿ ವರದಿ: `ಇದೇ 24ರಂದು ಬೆಂಗಳೂರಿಗೆ ಬರಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಗುವುದು. ಇದಕ್ಕೂ ಮೊದಲು ಗುರುವಾರ) ಬೆಂಬಲಿಗ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತೇನೆ~ ಎಂದು ಯಡಿಯೂರಪ್ಪ ಹೇಳಿದರು. ಗದಗ ಜಿಲ್ಲೆಗೆ ತೆರಳಲು ಇಲ್ಲಿಗೆ ವಿಶೇಷ ವಿಮಾನದಲ್ಲಿ ಮಂಗಳವಾರ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT