ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವರ ಆರಾಧ್ಯ ಮಂದಿರ

Last Updated 14 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ನೂರಾರು ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ದೇವಾಲಯ ಪ್ರಕೃತಿಯ  ಹಸಿರ ನಡುವೆ  ಮರೆಯಾಗಿ ಹೋಗಿದ್ದು ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದೆ.

ಕಳೆದ ವಾರ ಯಜ್ಞಪುರುಷಭಟ್ ಬಿದಿರೆ ಗ್ರಾಮಕ್ಕೆ ಹೋಗಿ ಬಂದವರು `ಅಲ್ಲೊಂದು ಸಕತ್ ಆಗಿರೋ ಗುಹಾಂತರ ದೇವಸ್ಥಾನ ಇದೆ. ಪಕ್ಕದಲ್ಲೆ ಮತ್ತೊಂದು ಗುಹೆ ಕೂಡ ನೋಡೋಕೆ ಬಾರೀ ಚಂದ ಇದೆ~ ಎಂದು ಆಸೆ  ಹುಟ್ಟಿಸಿದ್ದರು. ಸರಿ ಭಟ್ರೆ ನಾವೂ ಆ ಜಾಗ ನೋಡಬೇಕು  ಅಂತಾ ಹೇಳಿದ್ದೆ  ತಡ ತಕ್ಷಣ ಬಿದಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪೋನಾಯಿಸಿ ನಾವು ಬರ‌್ತಿವಿ ಸ್ವಲ್ಪ ಗೈಡ್ ಮಾಡ್ತಿರಾ ಅಂತ ಕೇಳಿ ಜಾಗ ನೋಡೋಕೆ ದಿನ ನಿಗದಿ ಪಡಿಸಿದರು.

ಪಟ್ಟಣಕ್ಕೆ ಬಂದಾಗ ನಿಗದಿಯಂತೆ ನಮ್ಮಂದಿಗೆ ಕ್ಯಾಮೆರಾಮನ್ ಎಲ್.ಪಿ.ಜಗದೀಶ್ ಸೇರಿಕೊಂಡರು. ಅಷ್ಟರಲ್ಲಿ ಅಲ್ಲಿಯೇ ಇದ್ದ ಉಪನ್ಯಾಸಕ ಪುಟ್ಟರಾಜು ಸಹ ನಮ್ಮಂದಿಗೆ ಬರುವುದಾಗಿ ಹೇಳಿ ಜೀಪನ್ನೇರಿದರು.
ಅಲ್ಲಿಂದ ಸೀದಾ ಹೊರಟಿದ್ದು ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆ ಗ್ರಾಮ ಪಂಚಾಯಿತಿ ಅಂಗಳಕ್ಕೆ. ಅಲ್ಲಿ ನಮಗಾಗಿ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುರೇಶ್, ಸದಸ್ಯೆ ಲೋಲಾಕ್ಷಿ, ಸುರೇಶ್ ಸೇರಿದಂತೆ ಹಲವರು ನಮ್ಮನ್ನು ಸೇರಿಕೊಂಡರು.

ಬಿದಿರೆ ಗ್ರಾಮ ಪಂಚಾಯಿತಿ ಅಂಗಳದಿಂದ ಸುಮಾರು 3 ಕಿ.ಮೀ ಕಡಿದಾದ ರಸ್ತೆಯಲ್ಲಿ ಸಾಗಿದಾಗ ಸಿಗುವುದೇ ಮನಮೋಹಕ ಕಾರಣಿಕ ಸಿಂಧೂರ ವೀರಭದ್ರೇಶ್ವರ ದೇವಾಲಯ. ರಸ್ತೆಯಿಂದ  ಹತ್ತಾರು ಮೆಟ್ಟಿಲುಗಳನ್ನು ಇಳಿದು ಸಾಗಿ ಗುಹಾ ದೇವಾಲಯ ತಲುಪಬಹುದು. ನಾವು ಅಲ್ಲಿಗೆ ತಲುಪುವ ವೇಳೆಗೆ ಗ್ರಾಮದ ಹತ್ತಾರು ಜನ ಅಲ್ಲಿ ಸೇರಿ ದೇವಸ್ಥಾನದ ಬಗ್ಗೆ ತಮ್ಮಲ್ಲಿರುವ ಮಾಹಿತಿ ನೀಡಿದರು.

ಸುಮಾರು 500 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿದ ದೇವಸ್ಥಾನ ಸಂಪೂರ್ಣ ಶಿಥಿಲಗೊಂಡಿದೆ. ಬೃಹತ್ ಬಂಡೆಯ ಒಳಭಾಗದಲ್ಲಿ ಕಮಂಡಲ, ಗದೆ, ಡಮರುಗ, ಹೊಂದಿದ  ಆಕರ್ಷಕ ಸಿಂಧೂರ ವೀರಭದ್ರ ಮೂರ್ತಿ ವಿರಾಜಮಾನವಾಗಿ ನಿಂತ ಭಂಗಿಯಲ್ಲಿದೆ. ಎದುರಿನಲ್ಲಿ ಕಪ್ಪು ಶಿಲೆಯ ನಂದಿ ವಿಗ್ರಹ ಆಕರ್ಷಕವಾಗಿದೆ.

ದೇವಾಲಯದ ಮೇಲ್ಭಾಗದಲ್ಲಿ ಶಿಖರ ಇದ್ದ ಕುರುಹುಗಳಾಗಿ ಈಗ ಹಲವು ಕಲ್ಲುಗಳು ಮಾತ್ರ ಗೋಚರಿಸುತ್ತಿವೆ. ದೇವಾಲಯದ ಮುಂಭಾಗದಲ್ಲಿ ಮುಖಮಂಟಪ ಕುಸಿದಿರುವುದಕ್ಕೆ ಅಲ್ಲಲ್ಲಿ ನೆಲಕ್ಕುರುಳಿರುವ  ಕಂಬಗಳೇ ಸಾಕ್ಷಿ. ಒಳಭಾಗದಲ್ಲಿ ವೀರಭದ್ರಸ್ವಾಮಿಯ ಪಕ್ಕದ ಪುಟ್ಟ ಬಾವಿಯಲ್ಲಿ ವರ್ಷಪೂರ್ಣ ನೀರಿನ ಸೆಲೆ ಇದ್ದು ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ತುಂಬಿ ನಿಂತಿರುತ್ತದೆ.

ದ್ವಾರದಲ್ಲಿರುವ  ಕೆಂಚರಾಯ ಸ್ವಾಮಿ ಮತ್ತು ನಾಗ ದೇವತೆಗಳು ಎಂಬ ಎರಡು ದೇವರುಗಳು ವೀರಭದ್ರಸ್ವಾಮಿಗೆ ದ್ವಾರಪಾಲಕರಾಗಿವೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ದೇವಾಲಯದ ಮುಖ್ಯದ್ವಾರ ದಕ್ಷಿಣಕ್ಕೆ ಇರುವುದು. ಇಂತಹ ದೇವಾಲಯಗಳಲ್ಲಿ ಅತಿ ಹೆಚ್ಚು ದೈವಿಕಶಕ್ತಿ, ಕಾರಣಿಕ ಇರುತ್ತದೆ. ಅಲ್ಲದೆ ವೀರಭದ್ರಸ್ವಾಮಿ ದೇವರಿಗೆ ಸೇರಿದ 96 ಕಿಲೋ ತೂಕದ ಕಂಚಿನ ಎರಕ ಹೊಯ್ದ ಪುರಾತನ ಪ್ರಭಾವಳಿ ಸಮೀಪದ ಪರದೇಶಪ್ಪನ ಮಠದಲ್ಲಿದೆ. ವೀರಭದ್ರ ದೇವರು ವೀರಶೈವರ ಆರಾಧ್ಯ ಎನ್ನುತ್ತಾರೆ ವಿಶೇಷ ದಿನಗಳಲ್ಲಿ ಅರ್ಚನೆ  ಮಾಡುವ  ಮಧುಕುಮಾರ್ .

ಬಹಳ ಹಿಂದೆ ಇಲ್ಲಿ ಜಾತ್ರೆ, ಸುಗ್ಗಿಹಬ್ಬ, ಕೆಂಡದಾರ್ಚನೆ ಕಾರ್ಯಕ್ರಮಗಳು ನಡೆಯುತ್ತಿತ್ತಂತೆ. ಈಗ ಎಲ್ಲಾ ಹಾಳು ಬಿದ್ದಿವೆ. ದೇವಾಲಯ ಜೀರ್ಣೋದ್ಧಾರ ಆದ್ರೆ ಇಡೀ ಊರಿಗೆ ಶ್ರೇಯಸ್ಸು ಆಗ್ತದೆ. ಸಚಿವ ಡಿ.ಎನ್.ಜೀವರಾಜ್ ಮೂಲಕ ದೇವಾಲಯ ಪುನರ್ ನಿರ್ಮಾಣ ಮಾಡುವಂತೆ ಕೋರಿ ಮುಜರಾಯಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ ದೇವಾಲಯದ ಹೆಸರಿನಲ್ಲಿ ಇದ್ದ ನಾಲ್ಕು ಎಕರೆ ಜಮೀನು ಡಿಕ್ಲರೇಶನ್  ಮೂಲಕ ಬೇರೆಯವರ ಪಾಲಾಗಿದೆ.

ಹಿಂದೆ ಹೇಗಿತ್ತೋ ಗೊತ್ತಿಲ್ಲ. ಆದ್ರೆ ಇದನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲೇಬೇಕು ಅಂತಾ ಹೊರಟಿದ್ದೇವೆ ಎಂದು ಹುಮ್ಮಸ್ಸಿನಿಂದ ಹೇಳುತ್ತಾರೆ ಬಿದಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುರೇಶ್. 
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪಟೇಲ್ ವಂಶಸ್ಥ ನಾಗೇಶ್, ದೇವಾಲಯದ ಪಕ್ಕದಲ್ಲೇ ಇರುವ ಪಂಚರಂಗಿ ಗುಹೆ ನೋಡಿಕೊಂಡೆ ಹೋಗಿ ಅಂತಾ ಸಲಹೆ ನೀಡಿದರು. ದೇವಾಲಯದಿಂದ ಕೇವಲ 300 ಅಡಿಗಳಷ್ಟು ದೂರದಲ್ಲಿರುವ ಪಂಚರಂಗಿ ಗುಹೆ ಆಕರ್ಷಕವಾಗಿದ್ದು, ಇತಿಹಾಸ ತಜ್ಞರಿಗೆ ಸಂಶೋಧನೆಗೆ ಹೇಳಿ ಮಾಡಿಸಿದಂತಿದೆ.

ಬೃಹತ್ ಬಂಡೆಯ ಅಡಿಯಲ್ಲಿ ಎರಡು ಸ್ತರಗಳಲ್ಲಿ ಗುಹೆಯನ್ನು ರಚಿಸಲಾಗಿದೆ. ಕೆಳಭಾಗದಲ್ಲಿ ಕಲ್ಲುಗಳಿಂದ ಗೋಡೆ ಕಟ್ಟಲಾಗಿದ್ದು ನೂರಾರು ವರ್ಷಗಳ ಹಿಂದೆ ಗೋಡೆಗೆ ಸುಣ್ಣ ಬಳಿದ ಕುರುಹು ಇನ್ನೂ ಅಚ್ಚಳಿಯದೆ ಉಳಿದಿದೆ. ಒಳಭಾಗದ ಮೇಲಿನ ಸ್ತರದಲ್ಲಿ ಮನುಷ್ಯರು ಉಳಿದುಕೊಳ್ಳಲು ಅನುಕೂಲವಾಗುವಂತೆ ಬೃಹತ್ ಹಾಸು ಕಲ್ಲನ್ನು ಬಳಸಲಾಗಿದೆ.

ಹಿಂದೆ ಋಷಿಗಳು ಇಲ್ಲಿ ತಪಸ್ಸು ಮಾಡಿ ವೀರಭದ್ರ ದೇವರ ಪೂಜೆ ನಡೆಸುತ್ತಿದ್ದರು ಎಂಬ ಐತಿಹ್ಯವಿದೆ. ಗುಹೆಯ ಎದುರಿನ ಮೇಲ್ಭಾಗದಲ್ಲಿ ಒಬ್ಬರು ಕುಳಿತುಕೊಳ್ಳುಷ್ಟು ಪೀಠ ನಿರ್ಮಾಣಗೊಂಡಿದೆ. ಕೆಳಭಾಗದಲ್ಲಿ ಹತ್ತಾರು ಜನ ಕುಳಿತುಕೊಳ್ಳಬಹುದಾದ ದಿಣ್ಣೆ ನಿರ್ಮಿಸಲಾಗಿದೆ. ಇಲ್ಲಿ ಹಿಂದೆ ಋಷಿಗಳು ಉಪದೇಶ ನೀಡುತ್ತಿದ್ದ ಜಾಗ ಎನ್ನುತ್ತಾರೆ ಸ್ಥಳೀಯರು. ಆದರೆ ಈಗ ಎಲ್ಲಾ ಕಡೆಗಳಲ್ಲಿ ಗಿಡಗಂಟಿಗಳು ಕೂಡಿದ್ದು, ಅಲ್ಲಿಗೆ ತಲುಪಲು ಪ್ರಯಾಸಪಡಬೇಕಾಗಿದೆ.

ಎಲ್ಲವನ್ನೂ ನೋಡಿ ವಾಪಾಸಾಗುವ ವೇಳೆ `ನೋಡಿ ನಮ್ಮ ಇತಿಹಾಸ ಹೇಗೆ ಮಣ್ಣುಪಾಲಾಗ್ತಿದೆ. ಇದು ನಮ್ಮ ದುರ್ದೈವ~ ಎಂದು ಉಪನ್ಯಾಸಕ ಪುಟ್ಟರಾಜು ಹೇಳಿದ ಮಾತು ಪರಿಸ್ಥಿತಿಯನ್ನು ಅಣಕಿಸುವಂತಿತ್ತು.
ಎಚ್.ಎನ್.ಸತೀಶ್‌ಜೈನ್, ಬಾಳೆಹೊನ್ನೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT