ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೇಂದ್ರ ಸೆಹ್ವಾಗ್: ಪಂದ್ಯದ ಸ್ವರೂಪ ಬದಲಿಸಬಲ್ಲ ಬ್ಯಾಟ್ಸ್‌ಮನ್

Last Updated 1 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೀರೇಂದ್ರ ಸೆಹ್ವಾಗ್ ಪಂದ್ಯದ ಸ್ವರೂಪವನ್ನೇ ಬದಲಿಸಬಲ್ಲ ಸಾಮರ್ಥ್ಯವುಳ್ಳ ಬ್ಯಾಟ್ಸ್‌ಮನ್ ಎಂದು ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್‌ನಲ್ಲಿ ಈಗ ಇಬ್ಬರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಭಾರತದ ಸೆಹ್ವಾಗ್ ಹಾಗೂ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಎದುರಾಳಿಗಳ ಕೈಯಲ್ಲಿರುವ ಗೆಲುವಿನ ಆಸೆಯ ಮುತ್ತನ್ನು ಕಿತ್ತುಕೊಳ್ಳಬಲ್ಲ ಸತ್ವಯುತವಾದ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಖಾಸಗಿ ಕಂಪೆನಿಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪೀಟರ್ಸನ್ ‘ವೀರೂ ರೀತಿಯಲ್ಲಿಯೇ ಪಂದ್ಯಕ್ಕೆ ಅಚ್ಚರಿಯ ತಿರುವು ನೀಡುವಂಥ ಆಟವಾಡುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್‌ಮನ್ ಎಂದರೆ ಗೇಲ್. ಹತ್ತು ಹದಿನೈದು ಓವರುಗಳಲ್ಲಿ ಎದುರಾಳಿಗಳ ಲೆಕ್ಕಾಚಾರ ತಪ್ಪಿಸುವ ಶಕ್ತಿ ಇವರಿಬ್ಬರಿಗೂ ಇದೆ’ ಎಂದು ಮೆಚ್ಚುಗೆ ಸೂಚಿಸಿದರು.

‘ಇಬ್ಬರ ಆಟವನ್ನು ನೋಡುವುದು ಇಷ್ಟ. ಇವರ ಎದುರು ಆಡಿದ ಎಲ್ಲ ಪಂದ್ಯಗಳು ಅದ್ಭುತ ಅನುಭವ ನೀಡಿವೆ’ ಎಂದ ಅವರು ‘ಪಂದ್ಯ ಸ್ವರೂಪ ಬದಲಿಸುವುದು ಎನ್ನುವುದನ್ನು ನಾನು ವಿವರಿಸುವುದು ಹೀಗೆ: ವಿಶಿಷ್ಟವಾದ ಆಟದಿಂದ ಎದುರಾಳಿಗಳು ನಿರೀಕ್ಷೆಗೆ ಪೆಟ್ಟು ನೀಡುವುದು. ಆ ಹಂತದಲ್ಲಿ ಈ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿ ಸಲು ಎದುರಾಳಿ ತಂಡದ ನಾಯಕ ಮಾಡುವ ಎಲ್ಲ ಬೌಲಿಂಗ್ ಪ್ರಯೋಗಗಳು ವ್ಯರ್ಥವಾಗು ತ್ತವೆ. ಅದು ನಿಜವಾದ ಕೆಚ್ಚಿನ ಆಟ’ ಎಂದು ವಿವರಿಸಿದರು.

‘ಕ್ರಿಕೆಟ್‌ನಲ್ಲಿ ಸದಾ ಹೊಸತನ ನೋಡಲು ಸಿಗುತ್ತದೆ. ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಆಟಗಾರರು ಇರುತ್ತಾರೆ. ಒಮ್ಮೆ ಅಂಗಳಕ್ಕೆ ಇಳಿದಾಗ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಪ್ರಯೋಗಿಸುವ ಅವಕಾಶವೂ ಸಿಗುತ್ತದೆ. ಇದರಿಂದ ಆಡುವವರಿಗೂ ಸಂತಸ; ಜೊತೆಗೆ ನೋಡುವವರಿಗೂ ರಂಜನೆ ಸಿಗುತ್ತದೆ’ ಎಂದ ಕೆವಿನ್ ‘ನಾನು ಹೊಸದೊಂದು ರೀತಿಯ ಶಾಟ್ ಕುರಿತು ಯೋಚನೆ ಮಾಡಿದಾಗ ಅದನ್ನು ನೆಟ್ಸ್‌ನಲ್ಲಿ ಅನೇಕ ಬಾರಿ ಬಳಸಲು ಪ್ರಯ ತ್ನಿಸುತ್ತೇನೆ. ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಪಂದ್ಯದಲ್ಲಿ ಆಡುವಾಗ ಆಕಸ್ಮಿಕವಾಗಿ ಅಂಥದೊಂದು ಹೊಡೆತವು ಸಹಜವಾಗಿಯೇ ಸಾಧ್ಯವಾಗುತ್ತದೆ. ೀಗೆ ಈ ಆಟದಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಯಶಸ್ವಿ ತಂತ್ರವನ್ನು ಅನೇಕರು ಅನುಕರಣೆ ಮಾಡಿಕೊಂಡು ರೂಢಿಸಿಕೊಳ್ಳುತ್ತಾರೆ’ ಎಂದರು.

‘ಕೆಲವು ವರ್ಷಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧ ಆಡುತ್ತಿದ್ದ ಸಂದರ್ಭದಲ್ಲಿ ಸ್ಕಾಟ್ ಸ್ಟೈರಿಸ್ ಬೌಲಿಂಗ್ ದಾಳಿ ನಡೆಸಿದ್ದರು. ಆಗ ಲೆಗ್‌ಸೈಡ್‌ನಲ್ಲಿ ಬಲವಾದ ಕ್ಷೇತ್ರ ರಕ್ಷಣೆ ಇತ್ತು. ಆಫ್‌ಸೈಡ್‌ನಲ್ಲಿ ಆಡುವುದಕ್ಕೂ ಅವಕಾಶ ಇರಲಿಲ್ಲ. ಏಕೆಂದರೆ ಬೌಲರ್ ಆಫ್‌ಕಟರ್ ಪ್ರಯೋಗಿಸುತ್ತಿದ್ದ. ಆಗ ನೇರವಾಗಿ ಇಲ್ಲವೆ, ಫೀಲ್ಡರ್ ಮೇಲಿಂದಲೇ ಚೆಂಡು ಹೋಗುವಂತೆ ಆಡುವಂಥ ಅನಿವಾರ್ಯ ಸ್ಥಿತಿ. ಆದರೆ ನಾನು ‘ಸ್ವಿಚ್-ಹಿಟ್’ಗೆ ಮೊರೆಹೋಗಬೇಕು ಎಂದು ಕೊಂಡೆ. ಒಮ್ಮೆ ಪ್ರಯತ್ನ ಮಾಡಿ ಯಶಸ್ವಿಯಾದೆ. ನಂತರದ ಎಸೆತದಲ್ಲಿ ಬುದ್ಧಿವಂತ ಬೌಲರ್ ಬೇಕೆಂದೇ ತುಂಬಾ ನಿಧಾನವಾಗಿ ಎಸೆದ. ಆದರೆ ನಾನು ಮಾನಸಿಕವಾಗಿ ಸಜ್ಜಾಗಿದ್ದೆ. ಮತ್ತೊಮ್ಮೆ ‘ಸ್ವಿಚ್-ಹಿಟ್’ ಅನ್ನು ಹಿಂದಿನದಕ್ಕಿಂತ ಹೆಚ್ಚು ಬಲವಾಗಿ ಪ್ರಯೋಗಿಸಿದೆ. ಅದು ಆ ಕ್ಷಣದಲ್ಲಿ ಹೊರಹೊಮ್ಮಿದ ಅದ್ಭುತವಾದ ಹಾಗೂ ಹೊಸತನದ ಬ್ಯಾಟಿಂಗ್ ತಂತ್ರ’ ಎಂದು ಸ್ಮರಿಸಿದರು.

ವಿಶ್ವಕಪ್ ಫೆವರೀಟ್ ತಂಡಗಳ ಕುರಿತು ಕೇಳಿದರೆ ಪೀಟರ್ಸನ್ ನೀಡುವುದು ಹಾರಿಕೆ ಉತ್ತರ. ‘ಈ ಬಾರಿಯ ವಿಶ್ವಕಪ್‌ನಲ್ಲಿ ಹಾಗೆ ಸ್ಪಷ್ಟವಾಗಿ ಹೇಳುವುದ ಕಷ್ಟ. ಇಂಗ್ಲೆಂಡ್ ತಂಡವೂ ಇತ್ತೀಚೆಗೆ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದೆ.
ಭಾರತದವರೂ ಚೆನ್ನಾಗಿ ಆಡುತ್ತಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇ ಲಿಯಾ ಬಗ್ಗೆಯೂ ಅನುಮಾನ ಪಡುವುದಕ್ಕೆ ಅವಕಾಶವಿಲ್ಲ. ದಕ್ಷಿಣ ಆಫ್ರಿಕಾದವರು ರ್ಯಾಂಕಿಂಗ್ ನಲ್ಲಿ ಉತ್ತಮ ಸ್ಥಾನವನ್ನು ಕಾಯ್ದುಕೊಂಡು ಸಾಗಿದ್ದಾರೆ. ಶ್ರೀಲಂಕಾದವರು ಏಷ್ಯಾದಲ್ಲಿ ಆಡುವಾಗ ಪ್ರಭಾವಿಗಳು. ಬಾಂಗ್ಲಾದೇಶದಂಥ ತಂಡವೂ ಯಾವುದೇ ಎದುರಾಳಿಗೆ ಅಪಾಯಕಾರಿ ಆಗಬಲ್ಲದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT