ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಳ್ಯದೆಲೆ ಊರಿಗೆ ಬೇಕು ಅಭಿವೃದ್ಧಿಯ ಕವಳ

Last Updated 8 ಜನವರಿ 2011, 10:40 IST
ಅಕ್ಷರ ಗಾತ್ರ

ಎಲ್ಲ ಊರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಬೇಕು ಎನ್ನುತ್ತಿರುವಾಗ ಈ ಊರಿನ ಮಂದಿ ಮಾತ್ರ ನಕಲಿ ವೈದ್ಯರೇ ಬೇಕು ಎನ್ನುತ್ತಾರೆ!. ರಾಜ್ಯ ಹೆದ್ದಾರಿಯಿಂದ ಊರಿಗೆ ಪ್ರವೇಶಿಸುವಾಗಲೇ ಬಾರು ಸ್ವಾಗತಿಸುತ್ತದೆ. ಸ್ವಲ್ಪ ದೂರ ಮಣ್ಣಿನ ದಾರಿಯಲ್ಲಿ ಜೋಳದ ಹೊಲಗಳ ಮಧ್ಯೆ ಸಾಗಿದರೆ ಮತ್ತೆ ಕಾಂಕ್ರಿಟ್ ರಸ್ತೆ ಸಿಗುತ್ತದೆ. ಊರಿನಲ್ಲಿ ಇದೇ ರಸ್ತೆ.

ಆಪೆ ಆಟೋಗಳ ದಡಬಡ ದರ್ಬಾರು ನಡುವೆ ಗ್ರಾಮದೇವತೆ ಆಂಜನೇಯ ತಣ್ಣಗೆ ಕುಳಿತಿದ್ದಾನೆ. ಕಟ್ಟೆಯ ಮೇಲೆ ಕುಳಿತ ಅಜ್ಜ ಗತ ದಿನಗಳನ್ನು ಮೆಲುಕು ಹಾಕುತ್ತಿದ್ದರೆ, ಆಂಜನೇಯನ ಹೆಸರಿನಲ್ಲಿ ವೈಭವದ ಕಂಡಿದ್ದ ನೆಲಮಾಳಿಗೆಯಂಥ ಗರಡಿಮನೆ ಹಾಳು ಸುರಿಯುತ್ತಿದೆ. ಒಂದೆಡೆ ಆಧುನಿಕತೆಗೆ ಬಹುತೇಕ ತೆರೆದುಕೊಂಡುಬಿಟ್ಟಿದೆ. ಮತ್ತೊಂದೆಡೆ ಗತ ಇತಿಹಾಸವನ್ನು ಮರೆಯುತ್ತಿದೆ...

-ಇದು ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದ ಚಿತ್ರಣ. ಹರಿಹರದಿಂದ ಸುಮಾರು 8 ಕಿ.ಮೀ. ಹೋಗುತ್ತಿದ್ದಂತೆಯೇ ರಾಜ್ಯ ಹೆದ್ದಾರಿಯಿಂದ ಸ್ವಲ್ಪ ಒಳಭಾಗದಲ್ಲಿ ತಣ್ಣಗೆ ಕುಳಿತಿದೆ ಬೆಳ್ಳೂಡಿ. ಬುದ್ಧಿವಂತ ಜನ, ಅಭಿವೃದ್ಧಿಯತ್ತ ಹೆಜ್ಜೆ. ಊರಿಗೆ ಏನು ಬೇಕಾದರೂ ಪಕ್ಷಭೇದ ಮರೆತು ಆಳುವ ಮಂದಿಯನ್ನು ಒತ್ತಾಯಿಸುವ ಜನ. ಕುರುಬರು, ಲಿಂಗಾಯತರು, ಪರಿಶಿಷ್ಟ ಜಾತಿ, ಪಂಗಡದವರು, ಬೆಸ್ತರು, ಮುಸ್ಲಿಮರು ಒಟ್ಟಾಗಿ ಬಾಳುವ ಸುಂದರ ಊರು.

ಹೆಸರಿನ ಮಹಿಮೆ: ಮೊದಲು ಈ ಊರಿಗೆ ಬೆಳವಡಿ ಎಂಬ ಹೆಸರಿತ್ತು. ಬಳಿಕ ಅದು ಬೆಲ್ಲೂಡಿ ಆಗಿ ಈಗ ಬೆಳ್ಳೂಡಿ ಆಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. 12 ಸಾವಿರ ಜನಸಂಖ್ಯೆಯಿದೆ. 2 ಕಿರಿಯ 1 ಹಿರಿಯ ಪ್ರಾಥಮಿಕ ಶಾಲೆಯಿದೆ. 2 ಕಾನ್ವೆಂಟ್, ಒಂದು ಖಾಸಗಿ ಪ್ರೌಢಶಾಲೆಯಿದೆ. ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿಯಿದೆ. ಆದರೆ, ಹಿರಿಯ ಪ್ರಾಥಮಿಕ ಶಾಲೆಯ ಛಾವಣಿ ಕಿತ್ತುಹೋಗಿದೆ. ಹೆಚ್ಚುವರಿ ಕೊಠಡಿ, ಆಟದ ಮೈದಾನ ಬೇಕಿದೆ.

ಆಂಜನೇಯ, ಬೀರೇಶ್ವರ, ಉಡಸಲಾಂಬಿಕೆ, ಚಂದ್ರಗುತ್ತೆಮ್ಮ ಸೇರಿದಂತೆ 13 ವಿವಿಧ ದೇವಸ್ಥಾನಗಳ ದೇವರುಗಳಿಗೆ ಜನ ತಮ್ಮನ್ನು ಕಾಯುವ ಹೊಣೆ ಬಿಟ್ಟಿದ್ದಾರೆ. ಬೆಳ್ಳೂಡಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಕ್ಷೇತ್ರವೂ ಹೌದು. ಊರು ವೀಳ್ಯದೆಲೆಗೆ ಭಾರೀ ಖ್ಯಾತಿ ಹೊಂದಿದೆ. ದೇಶ -ವಿದೇಶಗಳಿಗೆ ವೀಳ್ಯದೆಲೆ ಇಲ್ಲಿಂದಲೇ ರಫ್ತಾಗುತ್ತದೆ. ಇಲ್ಲಿನ ಎಲೆ ಒಂದೆರಡು ದಿನ ಹೆಚ್ಚಿಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ ಬಿಲ್ ಕಲೆಕ್ಟರ್ ರಾಜಪ್ಪ.

ಜತೆಗೆ, ಹತ್ತಿಬೆಳೆಗೂ ಖ್ಯಾತಿ. ಮನೆಯಂಗಳದಲ್ಲಿ ಹತ್ತಿ ರಾಶಿ ಹರಡಿಕೊಂಡು ಆಯುವ ಮಂದಿ ಕಾಣಸಿಗುತ್ತಾರೆ. ಉಳಿದಂತೆ ಮೆಕ್ಕೆಜೋಳ, ಭತ್ತ ಬೆಳೆಯಿದೆ. ಕೂಲಿ ಕಾರ್ಮಿಕರ ಕೊರತೆ ಬೇಸಾಯ ಕ್ಷೇತ್ರವನ್ನು ಕಾಡುತ್ತಿದೆ ಎಂದರು ಎಪಿಎಂಸಿ ನಿರ್ದೇಶಕ ಕೆ.ವಿ. ರುದ್ರೇಶ್

ನೀರಾವರಿ: ಸೂಳೆಕೆರೆ ಹಾಗೂ ದೇವರಬೆಳಕೆರೆ ಪಿಕಪ್‌ನ ನೀರು ಇಲ್ಲಿನ ರೈತರಿಗೆ ಆಸರೆ. ಆದರೆ, ಪಿಕಪ್‌ನಲ್ಲಿ ಈಗಾಗಲೇ ನೂರಾರು ಅಕ್ರಮ ಪಂಪ್‌ಸೆಟ್ ಇರುವುದರಿಂದ ಇಲ್ಲಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಇರುವ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ತುಂಬಿದೆ. ಇದರಿಂದ ಜನತೆ ಗಂಟು ನೊವು, ಹಲ್ಲು ಹಳದಿಕಟ್ಟುವುದು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಬೇಕು ಎಂದು ಮನವಿ ಮಾಡಿದರು ಗ್ರಾ.ಪಂ. ಸದಸ್ಯ ಬಿ. ರೇವಣಸಿದ್ದಪ್ಪ. ಸದ್ಯ ಹನಗವಾಡಿ ಮತ್ತು ಕೆಂಗಲಸರ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತಿದೆ.

ಪಂಚಾಯ್ತಿ: ಬೆಳ್ಳೂಡಿ ಗ್ರಾ.ಪಂ.ಗೆ ಬೆಳ್ಳೂಡಿ, ಎಕ್ಕೆಗೊಂದಿ, ಬ್ಯಾಲದಹಳ್ಳಿ ಗ್ರಾಮಗಳು ಬರುತ್ತವೆ. ಬೆಳ್ಳೂಡಿಗೆ 17 ಜನ ಗ್ರಾ.ಪಂ. ಸದಸ್ಯರಿದ್ದಾರೆ. ಹೊಸ ಆಡಳಿತ ಬಂದ ಮೇಲೆ ಉದ್ಯೋಗ ಖಾತ್ರಿ, ಶಾಸನಬದ್ಧ ಅನುದಾನ ಬಿಟ್ಟರೆ ಬೇರೆ ಯಾವುದೇ ಹಣ ಬಂದಿಲ್ಲ. ರಾಜೀವ ಗಾಂಧಿ ಸಬ್‌ಮಿಷನ್ ಯೋಜನೆ ಕಾಮಗಾರಿ ಅರ್ಧಕ್ಕೇ ನಿಂತಿದೆ. ಗ್ರಾ.ಪಂ.ಗೆ ಪ್ರತಿ ವರ್ಷ ` 3 ಲಕ್ಷ  ಕಂದಾಯ ಬರಬೇಕು. ಆದರೆ, ಹತ್ತಾರು ವರ್ಷಗಳಿಂದ ಕಂದಾಯ ವಸೂಲಾತಿ ಬಾಕಿಯೇ ಉಳಿದಿದೆ ಎಂದು ಪಂಚಾಯ್ತಿ ಕಾರ್ಯದರ್ಶಿ ಮಮತಾ ಮಾಹಿತಿ ನೀಡಿದರು.

ಊರಿನಲ್ಲಿ ಪ್ರಾಥಮಿಕ ಆರೋಗ್ಯ ಘಟಕವಿದೆ. ಅದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದೆ. ಆದರೆ, ಸೂಕ್ತ ಕಟ್ಟಡ, ಸಿಬ್ಬಂದಿ ಮೂಲ ಸೌಲಭ್ಯ ಕೊರತೆಯಿದೆ. ಹಾಗಾಗಿ, ಈ ಕೇಂದ್ರ 24 ಗಂಟೆ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಪಂಚಾಯ್ತಿ ಜಮೀನು ಒದಗಿಸಿದರೆ ಶೀಘ್ರವೇ ಎಲ್ಲ ಸೇವೆ ಒದಗಿಸಬಹುದು ಎಂದು ವೈದ್ಯಾಧಿಕಾರಿ ಸಂಧ್ಯಾರಾಣಿ ತಿಳಿಸಿದರು.

ಆರೋಗ್ಯ ಘಟಕದ ಸೇವೆ ಸರಿಯಾಗಿಲ್ಲದ ಕಾರಣ ಇಲ್ಲಿ ನಕಲಿ ವೈದ್ಯರದ್ದೇ ದರ್ಬಾರು. ಅವರನ್ನು ತೆರವುಗೊಳಿಸಲು ಹೋದರೆ, ನಮಗೆ ಆ ವೈದ್ಯರೇ ಆಪತ್ಬಾಂಧವ. ಹಾಗಾಗಿ, ಅವರನ್ನು ತೆರವುಗೊಳಿಸಬಾರದು ಎಂದು ಗ್ರಾಮಸ್ಥರು, ಕೂಲಿ ಕಾರ್ಮಿಕರೇ ತಡೆದಿದ್ದಾರೆ. ಮಿತಿಮೀರಿದ ಸ್ಟಿರಾಯ್ಡಿ, ಅನಾವಶ್ಯಕ ಔಷಧಿ ನೀಡಿದರೆ ರೋಗಿಗಳ ಗತಿಯೇನು ಎಂದು ಪ್ರಶ್ನಿಸುತ್ತಾರೆ ಔಷಧಿ ಪ್ರತಿನಿಧಿ ರಘು. ಆರೋಗ್ಯ ಇಲಾಖೆಯೂ ಈ ವಿಷಯದಲ್ಲಿ ಅಸಹಾಯಕವಾಗಿದೆ. ಆ ‘ವೈದ್ಯರೂ’ ಬೆಂಗಳೂರು, ಕೋಲ್ಕತಾ ಕಾಲೇಜುಗಳ ವಿಳಾಸದ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಯಾವ ವಿವಿ ಪ್ರಮಾಣಪತ್ರವೂ ಅವರಲ್ಲಿಲ್ಲ.


ಸಂಸ್ಕೃತಿ: ಪ್ರತಿ ವರ್ಷಕ್ಕೊಮ್ಮೆ ಮೂರು ದಿನಗಳ ಕಾಲ ನಡೆಯುವ ಆಂಜನೇಯನ ಉತ್ಸವ ಇಲ್ಲಿಯ ವಿಶೇಷ. ಪ್ರತಿ ವರ್ಷ ರಾಮನವಮಿಯಂದು ಈ ಉತ್ಸವ ನಡೆಯುತ್ತದೆ. ಇದಕ್ಕೂ ಮುನ್ನ ಮುಳ್ಳುಗದ್ದಿಗೆ ಉತ್ಸವ, ಭೂತಗಳಿಗೆ ಅರಿ ಸೇವೆ ಮಾಡುವುದು ನಡೆಯುತ್ತದೆ. ಕಾರ್ತೀಕ ದೀಪೋತ್ಸವವೂ ವಿಶೇಷವಾಗಿದೆ. ಆಂಜನೇಯನ ಉತ್ಸವಕ್ಕೆ 5 ಅಂತಸ್ತಿನ ದೊಡ್ಡ ರಥವೂ ಇದೆ. ಒಟ್ಟಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವ ಬೆಳ್ಳೂಡಿಗೆ ಇನ್ನಷ್ಟು ನೆರವಿನ ಬೆಳಕು ಬೇಕು. ಆಳುವ ಮಂದಿ ಕಣ್ತೆರೆಯಬೇಕು ಎಂದು ಊರವರು ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT