ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಳ್ಯದೆಲೆ ಎಂಬ ಹಸಿರು ಬಂಗಾರ

Last Updated 30 ಜುಲೈ 2012, 19:30 IST
ಅಕ್ಷರ ಗಾತ್ರ

ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.

ಆದ್ದರಿಂದ ಮನೆ ಮುಂದಿನ ಸ್ವಲ್ಪ ಜಾಗದಲ್ಲಿಯೇ ಹೆಚ್ಚು ಖರ್ಚಿಲ್ಲದೆ ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ತಿಮ್ಮಪ್ಪ ಗೌಡರು.

ಇವರು ಸುಮಾರು ಹತ್ತು ವರ್ಷದಿಂದ ತಮ್ಮ ಮನೆಯ ಮುಂದಿನ ಸ್ವಲ್ಪ ಜಾಗದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ವೀಳ್ಯದೆಲೆಯ ಬೇಸಾಯ ಮಾಡುತ್ತಿದ್ದಾರೆ. ಮೊದಲಿಗೆ ಹತ್ತು ವೀಳ್ಯದ ಬಳ್ಳಿಗಳನ್ನು ನಾಟಿ ಮಾಡಿದ್ದರು. ಇವು ಚೆನ್ನಾಗಿ ಹಬ್ಬಿದಾಗ ಇಳಿಬಿದ್ದ ಬಳ್ಳಿಗಳನ್ನು ನಾಲ್ಕು ಗೆಣ್ಣುಗಳಿರುವಂತೆ ಕತ್ತರಿಸಿ ಅವನ್ನೇ ನಾಟಿ ಮಾಡಿ ಸುಮಾರು ಎಂಬತ್ತು ಬಳ್ಳಿಗಳಿರುವಂತೆ ನೋಡಿಕೊಂಡಿದ್ದಾರೆ.

ಬಳ್ಳಿ ಹಬ್ಬಲು ಆಧಾರವಾಗಿ ಕೊಡುವ ಗೂಟಗಳು ಉತ್ತಮ ಜಾತಿಯ ಮರವಾಗಿದ್ದರೆ ಒಳ್ಳೆಯದು. ಬಳ್ಳಿ ಚೆನ್ನಾಗಿ ಹಬ್ಬಿ ಹಲವಾರು ವರ್ಷ ಬಾಳುತ್ತದೆ. ಒಮ್ಮೆ ನಾಟಿ ಮಾಡಿದ ವೀಳ್ಯದ ಬಳ್ಳಿಗೆ ಸರಿಯಾದ ಆರೈಕೆ ಹಾಗು ಬಲವಾದ ಗೂಟದ ಆಧಾರ ಕೊಟ್ಟರೆ ಎಂಟರಿಂದ ಹತ್ತು ವರ್ಷ ಇಳುವರಿ ಪಡೆಯಬಹುದು ಎನ್ನುತ್ತಾರೆ ಇವರು.

ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಮಣ್ಣಿನ ಏರಿ ಕಟ್ಟಿ ಒಂದೂವರೆ ಅಡಿ ಅಂತರದಲ್ಲಿ ವೀಳ್ಯದೆಲೆ ಬಳ್ಳಿಗಳನ್ನು ನಾಟಿ ಮಾಡಬೇಕು. ನಂತರ ಉತ್ತಮ ಮಣ್ಣು ಹಾಗು ಹಸಿರು ಸೊಪ್ಪನ್ನು ಬುಡಕ್ಕೆ ಹಾಕಿ ಬಳ್ಳಿ ಹಬ್ಬಲು ಆಧಾರ ಕೊಡಬೇಕು. ಬಳ್ಳಿಗಳು ಚಿಗುರಿ ಹಬ್ಬಲು ಪ್ರಾರಂಭವಾದ ಕೂಡಲೇ ಕೊಟ್ಟಿಗೆ ಗೊಬ್ಬರ ನೀಡಬೇಕು ಎನ್ನುವುದು ಅವರ ಸಲಹೆ.

ಹೈನುಗಾರಿಕೆಯನ್ನು ಹೊಂದಿರುವ ಇವರು ಇಪ್ಪತ್ತು ದಿವಸಗಳಿಗೊಮ್ಮೆ ಸೆಗಣಿ ನೀರು, ಕಟ್ಟಿಗೆ ಬೂದಿ ಇತ್ಯಾದಿಗಳನ್ನು ಬಳ್ಳಿಗಳಿಗೆ ನೀಡುತ್ತಾರೆ. ಇದರಿಂದ ಎಲೆಗಳು ಚೆನ್ನಾಗಿ ಚಿಗುರಿ ರೋಗಮುಕ್ತವಾಗುತ್ತವೆ. ಹರಳು ಅಥವಾ ಶೇಂಗಾ ಹಿಂಡಿಯನ್ನು ನೆನೆಸಿ ತೆಳ್ಳಗೆ ನೀರು ಮಾಡಿ ಹದಿನೈದು ದಿವಸಕ್ಕೊಮ್ಮೆ ನೀಡುವುದರಿಂದಲೂ ಎಲೆಗಳು ಸಮದ್ಧವಾಗಿ ಬೆಳೆಯಲು ಸಹಕಾರಿ. ಹಳ್ಳಿಯಲ್ಲಿ ಸಿಗುವ ಕುಂಟಾಲ ಮರದ ಹಸಿರು ಸೊಪ್ಪನ್ನು ಬುಡಕ್ಕೆ ಹಾಕುವುದರಿಂದ ಉತ್ತಮ ಫಸಲು ಪಡೆಯಬಹುದು ಎನ್ನುತ್ತಾರೆ.

ಯಾವುದೇ ರಾಸಾಯನಿಕ ಬಳಸದೇ ಬೆಳೆಸಿದ ಇವರ ವೀಳ್ಯದೆಲೆಯು ಬಹಳ ರುಚಿಯಾಗಿದ್ದು ಉತ್ತಮ ಬೇಡಿಕೆ ಮತ್ತು ಧಾರಣೆಯನ್ನು ಹೊಂದಿದೆ. ಸಾವಯವ ಪದ್ಧತಿಯನ್ನು ಅನುಸರಿಸುವುದರಿಂದ ರೋಗ - ಕೀಟಗಳ ಬಾಧೆ ಕಡಿಮೆ.

ಅಲ್ಲದೆ ಬಳ್ಳಿಗಳು ಸೊಂಪಾಗಿ ಬೆಳೆದು ಅಗಲವಾದ ಎಲೆಗಳನ್ನು ಬಿಟ್ಟು ನಾಟಿ ಮಾಡಿದ ನಾಲ್ಕು ತಿಂಗಳಲ್ಲೆೀ ಕೊಯ್ಲಿಗೆ ಸಿಗುತ್ತದೆ. ವೀಳ್ಯದೆಲೆಗಳನ್ನು ಹದಿನೈದು ದಿವಸಕ್ಕೊಮ್ಮೆ ಕೀಳಬಹುದು. ಬಳ್ಳಿಗಳಿಗೆ ಬಿಸಿಲು ಜಾಸ್ತಿ ಆಗಬಾರದು. ಬಿಸಿಲು ಜಾಸ್ತಿ ಆದರೆ ಚಪ್ಪರ ಕೊಡಬೇಕಾಗುತ್ತದೆ. ಮಳೆಗಾಲದಲ್ಲಿ ಬಳ್ಳಿಯ ಬುಡದಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು.

ಮಳೆಗಾಲದಲ್ಲಿ ವೀಳ್ಯದೆಲೆಯ ಒಂದು ಸೂಡಿ ಅಂದರೆ ಎಂಬತ್ತು ಎಲೆಗಳಿಗೆ ಸುಮಾರು ಹತ್ತು ರೂಪಾಯಿ ದರ ಸಿಕ್ಕಿದರೆ ಬೇಸಿಗೆ ಕಾಲದಲ್ಲಿ ಹಾಗು ಹಬ್ಬಹರಿದಿನಗಳಲ್ಲಿ ಇಪ್ಪತೈದರಿಂದ ಮೂವತ್ತು ರೂಪಾಯಿವರೆಗೂ ಧಾರಣೆ ಇರುತ್ತದೆ. ಸಾವಯವದಲ್ಲಿ ಬೆಳೆಸಿರುವುದರಿಂದ ಸ್ಥಳೀಯರು ಮನೆಗೇ ಬಂದು ಖರೀದಿಸುವುದೂ ಇದೆ.
 
ಇವರು ವೀಳ್ಯದ ಕೃಷಿಯ ಜೊತೆ ಅಲಸಂದೆ, ಸೋರೆಕಾಯಿ ಇತ್ಯಾದಿ ತರಕಾರಿಗಳನ್ನು ಬೆಳೆಸುತ್ತ್ದ್ದಿದಾರೆ. ಆಸಕ್ತಿ ಹಾಗು ಉತ್ಸಾಹ ಇದ್ದರೆ ಎಷ್ಟು ಚಿಕ್ಕ ಜಾಗದಲ್ಲೂ ವೈವಿಧ್ಯಮಯ ಬೆಳೆ ಬೆಳೆಸಿ ಸ್ವಾವಲಂಬಿ ಬದುಕನ್ನು ನಡೆಸಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT